ನನ್ನ ಹೆಸರೇ ಇವರಿಗೆ ಅನುದಾನ ಕೊಡಿಸುತ್ತಿದೆ, ಆದರೂ ಚನ್ನಪಟ್ಟಣ ಅಭಿವೃದ್ಧಿಯಾಗಿಲ್ಲ: ಸಿ.ಪಿ.ವೈಗೆ HDK ಟಾಂಗ್
ರಾಮನಗರ, ಏಪ್ರಿಲ್, 03: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕೀಯ ನಾಯಕರ ನಡುವೆ ವಾಗ್ವಾದಗಳು ಕೂಡ ಹೆಚ್ಚುತ್ತಲೇ ಇವೆ. ಇದೀಗ ರಾಮನಗರದಲ್ಲಿ ಸಿ.ಪಿ.ಯೋಗೇಶರ್ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಸಿ.ಪಿ.ಯೋಗೇಶ್ವರ್‌ಗೆ ಎಚ್.ಡಿ.ಕೆ ಯಾವ ರೀತಿ ಟಾಂಗ್ ಕೊಟ್ಟಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯೋಣ ಬನ್ನಿ.
ಸಿ.ಪಿ.ಯೋಗೇಶ್ವರ್ ಮತ್ತು ಎಚ್.ಡಿ.ಕುಮಾರಸ್ವಾಮಿ ನಡುವೆ ಮೊದಲಿನಿಂದಲೂ ವಾರ್‌ಗಳು ನಡೆಯುತ್ತಲೇ ಇವೆ. ಅದರಲ್ಲೂ ಕ್ಷೇತ್ರ ಅಭಿವೃದ್ಧಿ ವಿಚಾರವನ್ನು ಇಟ್ಟುಕೊಂಡು ಎಚ್.ಡಿ.ಕುಮಾರಸ್ವಾಮಿ ಸಿ.ಪಿ.ವೈಗೆ ಆಗಾಗ ತರಾಟೆ ತೆಗೆದುಕೊಳ್ಳುತ್ತಲೇ ಬಂದಿದ್ದಾರೆ. ಇದಕ್ಕೆ ಸಿ.ಪಿ.ವೈ ಕೂಡ ನಾನೇನು ಕಡಿಮೆಯಿಲ್ಲವೆಂಬಂತೆ ಕೌಂಟರ್ ಕೊಡುತ್ತಲೇ ಬಂದಿದ್ದಾರೆ. ಆದರೆ ಇದೀಗ ಕುಮಾರಸ್ವಾಮಿಯರು ಬೇರೊಂದು ದಾಟಿಯಲ್ಲೇ ಮತ್ತೆ ಕೆಣಕಿದ್ದಾರೆ. ಹಾಗಾದರೆ ಆ ವಿಚಾರ ಏನೆಂದು ಇಲ್ಲಿ ತಿಳಿಯಿರಿ.

ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ದೊಡ್ಡ ದೊಡ್ಡ ಸವಾಲುಗಳಿದ್ದರೂ ರೈತರ ಸಾಲ ಮನ್ನಾ ಮಾಡಿದ್ದೆ. ಕಾಂಗ್ರೆಸ್ ಒತ್ತಡದ ನಡುವೆಯೂ ಉತ್ತಮ ಆಡಳಿತ ಕೊಟ್ಟಿದ್ದೇನೆ. ಆದರೂ ವಿರೋಧಿಗಳು ಚನ್ನಪಟ್ಟಣದ ಕಡೆ ಗಮನಕೊಡುತ್ತಿಲ್ಲ ಎಂಬ ಅಪಪ್ರಚಾರ ಮಾಡಿದರು. ಕ್ರಿಕೆಟ್ ಬೆಟ್ಟಿಂಗ್ ದಂಧೆ ಮಾಡುವವರೇ ಸರ್ಕಾರ ತೆಗೆದರು ಎಂದು ಆರೋಪಿಸಿದರು.
ಸಿ.ಪಿ.ಯೋಗೇಶ್ವರ್ ವಿರುದ್ಧ ಎಚ್.ಡಿ.ಕೆ ಆಕ್ರೋಶ
ಕ್ಷೇತ್ರದ ಮಾಜಿ ಶಾಸಕ ಕಳೆದ 20 ವರ್ಷದಿಂದ ಏನು ಸಾಧನೆ ಮಾಡದೇ, ಇದೀಗ ಚನ್ನಪಟ್ಟಣದಲ್ಲಿ ಅಭಿವೃದ್ಧಿಯಾಗಿಲ್ಲ ಎಂದು ಹಳ್ಳಿಹಳ್ಳಿ ತಿರುಗುತ್ತಿದ್ದಾರೆ. ಅವರು ತಮ್ಮ ಅಧಿಕಾರವದಿಯಲ್ಲಿ ಅಭಿವೃದ್ಧಿ ಮಾಡಿದ್ದರೆ ನನಗೆ ಮಾಡಲು ಏನು ಕೆಲಸ ಇರುತ್ತಿರಲಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಇವರು ಜನರ ಮುಂದೆ ಬರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನನಗೆ ಇನ್ನೊಂದು ವರ್ಷ ಅಧಿಕಾರ ಇದ್ದಿದ್ದರೆ, ಎಲ್ಲಾ ಸಮಸ್ಯೆ ಬಗೆಹರಿಸುತ್ತಿದ್ದೆ. ಅದರೆ ನನ್ನ ಅಧಿಕಾರ ತೆಗೆದಿದ್ದು ಇವರೇ ಆಗಿದ್ದಾರೆ. ಈಗ ಕೆಲಸ ಮಾಡಿಲ್ಲ ಅಂತಾ ಹೇಳುತ್ತಿರೋರು ಇವರೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಕಿಡಿಕಾರಿದರು.

ನನ್ನ ಹೆಸರೇ ಇವರಿಗೆ ಅನುದಾನ ಕೊಡಿಸುತ್ತಿದೆ
ಈಗ ಕ್ಷೇತ್ರಕ್ಕೆ ಹೆಚ್ವು ಅನುದಾನ ತಂದಿದ್ದೇನೆ ಅಂತಾ ಕೆಲವರು ಓಡಾಡುತ್ತಿದ್ದಾರೆ. ಆದರೆ ನನ್ನ ಹೆಸರು ಹೇಳಿಕೊಂಡೇ ಅನುದಾನ ತರಬೇಕು. ಇಲ್ಲಿ ಕುಮಾರಸ್ವಾಮಿಯವರನ್ನ ಸೋಲಿಸುತ್ತೇನೆ ಎಂದು ಹಣ ತರುತ್ತಿರುತ್ತಾರೆ ಅಷ್ಟೇ. ಇವರ ಮುಖ ನೋಡಿ ಯಾವುದೇ ಅನುದಾನ ಕೊಡುವುದಿಲ್ಲ. ಅಲ್ಲೂ ನನ್ನ ಹೆಸರೇ ಇವರಿಗೆ ಅನುದಾನ ಕೊಡಿಸುತ್ತಿದೆ.
ಇನ್ನು ಮಹಾಮಾರಿ ಕೋವಿಡ್, ರಾಸುಗಳ ಕಾಲುಬಾಯಿ ಜ್ವರ, ಬೆಳೆ ನಾಶವಾಗಿದ್ದ ವೇಳೆ ಎಲ್ಲಾ ಎಲ್ಲಿದ್ದರು. ಮಾಜಿ ಶಾಸಕ ಹಾಗೂ ಸಂಸದರು ಆಂದು ಹೋದ ಪುಟ್ಟ, ಬಂದ ಪುಟ್ಟ ಎಂಬಂತೆ ಇದ್ದರು ಎಂದು ಮಾಜಿ ಸಿ.ಎಂ. ಕುಮಾರಸ್ವಾಮಿ ವ್ಯಂಗ್ಯವಾಡಿದರು.
ನೀವೇ ನಮ್ಮ ಜೊತೆ ನಿಲ್ಲಬೇಕು
ಬೊಂಬೆನಾಡು ಚನ್ನಪಟ್ಟಣ ಕ್ಷೇತ್ರದ ಕಾರ್ಯಕರ್ತರು ಕಳೆದ 2018ರ ಚುನಾವಣೆ ರೀತಿಯಲ್ಲೇ ಈ ಬಾರಿಯೂ ನೀವೇ ನಮ್ಮ ಜೊತೆ ನಿಲ್ಲಬೇಕು. ನನ್ನನ್ನ ನೀವು ರಕ್ಷಣೆ ಮಾಡಿದರೆ, ರಾಜ್ಯದ ಬಡವರನ್ನು ನಾನು ರಕ್ಷಣೆ ಮಾಡುತ್ತೇನೆ ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಚುನಾವಣಾ ಜವಾಬ್ದಾರಿಯನ್ನು ಕ್ಷೇತ್ರದ ಕಾರ್ಯಕರ್ತರಿಗೆ ವಹಿಸಿದರು.
ಸೋಮವಾರ (ಏಪ್ರಿಲ್ 03) ಚನ್ನಪಟ್ಟಣ ತಾಲೂಕಿನ ಸುಣಘಟ್ಟ ಗ್ರಾಮದಲ್ಲಿ ಅನ್ಯ ಪಕ್ಷದ ಮುಖಂಡರ ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಬಿಜೆಪಿ ಹಾಗೂ ಕಾಂಗ್ರಸ್ ಪಕ್ಷಗಳನ್ನು ತೊರೆದ ನೂರಾರು ಮುಖಂಡರು ಹಾಗೂ ಕಾರ್ಯಕರ್ತರಿಗೆ ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿದರು.
ಈ ಬಾರಿ ನನಗೆ ಶಕ್ತಿ ನೀಡಿ, ಇದೇ ತಿಂಗಳ 19ರಂದು ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದೇನೆ. ಏಪ್ರಿಲ್ 20 ಹಾಗೂ ಏಪ್ರಿಲ್ 21 ಎರಡು ದಿನಗಳ ಕಾಲ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತೇನೆ. ಚನ್ನಪಟ್ಟಣದ ಜನತೆ ಮೇಲೆ ನನಗೆ ಸಂಪೂರ್ಣ ವಿಶ್ವಾಸ ಇದೆ ಎಂದರು.
ಮನೆ ಮಗನ ರೀತಿಯಲ್ಲಿ ನನಗೆ ಆಶೀರ್ವಾದ ಮಾಡಿ. ರಾಮನಗರ ಜಿಲ್ಲೆಯ ಮೂರು ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಈ ಬಾರಿ ನಿಮ್ಮ ಮನೆ ಮಗನನ್ನು ಬಿಟ್ಟು ಬೇರೆ ಯಾರೂ ಸಿಎಂ ಆಗಲು ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದರು.












Click it and Unblock the Notifications