Channapatna: ಚನ್ನಪಟ್ಟಣ ಉಪಚುನಾವಣೆ ಮುನ್ನವೇ ಕಾಂಗ್ರೆಸ್‌ನಲ್ಲಿದೆ ರಾಶಿ ರಾಶಿ ಗೊಂದಲಗಳು!
ಬೆಂಗಳೂರು, ಜುಲೈ. 08: ಸದ್ಯ ರಾಜ್ಯದಲ್ಲಿ ಲೋಕಸಭಾ ಚುನಾವಣೆ ಬಳಿಕ ಮುಖ್ಯವಾಗಿರುವುದು ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ. ಚನ್ನಪಟ್ಟಣವನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಷ್ಠೆಯ ಕಣವಾಗಿಸಿಕೊಂಡಿದ್ದಾರೆ. ಆದರೆ, ಚನ್ನಪಟ್ಟಣ ಗೆಲ್ಲಲು ಕಾಂಗ್ರೆಸ್‌ಗೆ ಸಮಸ್ಯೆಯಾಗಿರುವುದು ಪಕ್ಷದೊಳಗಿನ ಸಮಸ್ಯೆಗಳು!.
ಹೌದು.. ಕರ್ನಾಟಕ ಕಾಂಗ್ರೆಸ್ ಒಳಗೆ ಮುಖ್ಯಮಂತ್ರಿ ಬದಲಾವಣೆ ವಿಚಾರ, ಮತ್ತಷ್ಟು ಡಿಸಿಎಂ ಹುದ್ದೆಗಳ ಸೃಷ್ಠಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರಗಳು ದೊಡ್ಡ ಸಮಸ್ಯೆಯಾಗಿವೆ. ಸದ್ಯ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಗೊಂದಲಗಳು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮೇಲೆ ಕರಿನೆರಳು ಬೀಳುವ ಸಾಧ್ಯತೆ ಇದೆ.

ಸಿಎಂ, ಡಿಸಿಎಂ ನಡುವೆ ಬೆಂಕಿ ಹಚ್ಚುತ್ತಿದ್ದಾರೆ ಆರ್. ಅಶೋಕ್!
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಶಿವಕುಮಾರ್ ನಡುವಿನ ಭಿನ್ನಾಭಿಪ್ರಾಯವನ್ನು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಲಾಭ ಮಾಡಿಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಇಬ್ಬರ ನಡುವೆ ಎಷ್ಟು ಭಿನ್ನಾಭಿಪ್ರಾಯ ಸೃಷ್ಟಿಸಬೇಕೋ ಅಷ್ಟನ್ನು ಮಾಡಲು ಬಿಜೆಪಿ, ಜೆಡಿಎಸ್ ನಾಯಕರು ಸಜ್ಜಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸೋಲಿನಲ್ಲಿ ಸಿದ್ದರಾಮಯ್ಯ ಹೆಸರನ್ನು ಎಳೆ ತಂದಿದ್ದಾರೆ ವಿಪಕ್ಷ ನಾಯಕ ಆರ. ಅಶೋಕ್.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಶಿವಕುಮಾರ್ ಅವರ ಸಹೋದರ ಡಿಕೆ ಸುರೇಶ್ ಅವರನ್ನು ಸೋಲಿಸುವಲ್ಲಿ ಸಿಎಂ ಸಿದ್ದರಾಮಯ್ಯ ಪಾತ್ರವಿದೆ ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರು ಈಗಾಗಲೇ ಆರೋಪಿಸಿದ್ದಾರೆ. ಹೀಗಾಗಿ ಮೊದಲ ಬಾಣ ಎಸೆದಾಗಿದೆ ಬಿಜೆಪಿ.
''ಡಿಕೆ ಸುರೇಶ್ ಸೋಲಿನಿಂದಾಗಿ ಕಾಂಗ್ರೆಸ್ ಕಾರ್ಯಕರ್ತರು ಈಗಾಗಲೇ ಹತಾಶರಾಗಿದ್ದಾರೆ. ಇದೀಗ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಪಾಳಯದಲ್ಲಿ ಜಟಾಪಟಿ ಏರ್ಪಟ್ಟಿರುವುದರಿಂದ ಪಕ್ಷದೊಳಗೆ ಗೊಂದಲ ಉಂಟಾಗಿದೆ. ಇದು ಅವರ ಮನೋಸ್ಥೈರ್ಯವನ್ನು ಮತ್ತಷ್ಟು ಕುಗ್ಗಿಸುತ್ತದೆ" ಎಂದು ಕಾಂಗ್ರೆಸ್ ಮುಖಂಡರೊಬ್ಬರು ಭವಿಷ್ಯ ನುಡಿದಿದ್ದಾರೆ.
ಇನ್ನು, ಉಪಮುಖ್ಯಮಂತ್ರಿ ಶಿವಕುಮಾರ್ ತಾವು ಚನ್ನಪಟ್ಟಣದಿಂದ ಸ್ಪರ್ಧಿಸಲು ಸಿದ್ಧ ಎಂದು ಈಗಾಗಲೇ ಘೋಷಿಸಿದ್ದಾರೆ. ಆದರೆ, ಪ್ಲ್ಯಾನಿಂಗ್ ಬೇರೆಯೇ ಇದೆ ಎಂದು ಕಾಂಗ್ರೆಸ್ ನಾಯಕರು ಒಪ್ಪಿಕೊಂಡಿದ್ದಾರೆ. ಡಿಕೆ ಶಿವಕುಮಾರ್ ಅಥವಾ ಡಿಕೆ ಸುರೇಶ್ ಅವರನ್ನು ಅಭ್ಯರ್ಥಿಗಳಾಗಿ ಘೋಷಿಸಿದರೆ ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರು ಚನ್ನಪಟ್ಟಣ ಉಪಚುನಾವಣೆಯಲ್ಲಿ ಮನಃಪೂರ್ವಕವಾಗಿ ತೊಡಗಿಸಿಕೊಳ್ಳುವುದಿಲ್ಲ ಎಂಬ ಮಾತು ಕೇಳಿಬರುತ್ತಿದೆ.

ಶಿಗ್ಗಾಂವಿ ಕಾಂಗ್ರೆಸ್ ಟಿಕೆಟ್‌ಗೆ ಭಾರಿ ಪೈಪೋಟಿ
ಕಾಂಗ್ರೆಸ್ ಟಿಕೆಟ್ಗಾಗಿ ತೀವ್ರ ಪೈಪೋಟಿ ನಡೆಯುತ್ತಿರುವ ಶಿಗ್ಗಾಂವಿ ಉಪಚುನಾವಣೆ ಮೇಲೂ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಉಪಚುನಾವಣೆಯಲ್ಲಿ ಈಗಾಗಲೇ ಆಕಾಂಕ್ಷಿಗಳ ದಂಡೇ ಇದೆ.
ಮಂಗಳೂರು-ಉಡುಪಿ ಸ್ಥಳೀಯ ಸಂಸ್ಥೆಗಳಿಂದ ಎಂಎಲ್‌ಸಿ ಸ್ಥಾನಕ್ಕೆ ನಡೆದ ಉಪಚುನಾವಣೆಗೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ಅವರು ಯಾವುದೇ ಅಲ್ಪಸಂಖ್ಯಾತ ಮುಖಂಡರನ್ನು ಸಮಿತಿಗೆ ಸೇರಿಸಿಕೊಳ್ಳದ ಕಾರಣ, ಶಿವಕುಮಾರ್ ಬಗ್ಗೆ ಅಲ್ಪಸಂಖ್ಯಾತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತ್ತ , ಶಿಗ್ಗಾಂವಿ ಉಪಚುನಾವಣೆಗೆ ಕಾಂಗ್ರೆಸ್ ಟಿಕೆಟ್‌ಗಾಗಿ ಮಾಜಿ ಸಚಿವ ಮತ್ತು ಶಾಸಕ ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾ, ಮಾಜಿ ಸಚಿವ ಆರ್.ಶಂಕರ್, ಸಂಜೀವಕುಮಾರ ನೀರಲಗಿ, ಸೋಮಣ್ಣ ಬೇವಿನಮರದ್, ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಸೇರಿದಂತೆ ಅನೇಕ ಮಂದಿ ಆಕಾಂಕ್ಷಿಗಳಲ್ಲಿ ಪ್ರಮುಖರಾಗಿದ್ದಾರೆ












Click it and Unblock the Notifications