Channapatna: ಚನ್ನಪಟ್ಟಣ ಎನ್‌ಡಿಎ ಅಭ್ಯರ್ಥಿ ಅಂತಿಮ, ಒಂದು ಷರತ್ತಿನ ಮೇಲೆ ಸೋಮವಾರ ಘೋಷಣೆ!
ರಾಮನಗರ, ಅಕ್ಟೋಬರ್ 20: ಕರ್ನಾಟಕದ ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕುತೂಹಲ ಮೂಡಿಸಿರುವುದು ರಾಮನಗರ ಜಿಲ್ಲೆಯ ಚನ್ನಪಟ್ಟಣ. ಈಗಾಗಲೇ ಬಿಜೆಪಿಗೆ ಎರಡು ಕ್ಷೇತ್ರಗಳನ್ನು ಬಿಟ್ಟುಕೊಟ್ಟಾಗಿದೆ. ಸಂಡೂರು, ಶಿಗ್ಗಾವಿ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಘೋಷಣೆಯಾಗಿದೆ. ಆದರೆ ನವೆಂಬರ್ 13ರಂದು ನಡೆಯುವ ಉಪ ಚುನಾವಣೆಗೆ ಚನ್ನಪಟ್ಟಣದ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಯಾರು?. ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್ 25 ಕೊನೆಯ ದಿನವಾಗಿದೆ. ಆದರೆ ಇನ್ನೂ ಅಭ್ಯರ್ಥಿ ಘೋಷಣೆ ಮಾಡಿಲ್ಲ.
ಭಾನುವಾರ ಮಧ್ಯಾಹ್ನದ ಮಾಹಿತಿಯಂತೆ ಚನ್ನಪಟ್ಟಣದ ಅಭ್ಯರ್ಥಿ ಕುರಿತು ಬಿಜೆಪಿ-ಜೆಡಿಎಸ್ ಒಮ್ಮತಕ್ಕೆ ಬಂದಿವೆ. ಸೋಮವಾರ ಬೆಳಗ್ಗೆ ಚನ್ನಪಟ್ಟಣದ ಮೈತ್ರಿ ಅಭ್ಯರ್ಥಿ ಘೋಷಣೆಯಾಗಲಿದೆ. ಮೈತ್ರಿ ಧರ್ಮದ ಆಧಾರದಲ್ಲಿ 2+1 ಸೀಟು ಹಂಚಿಕೆ ಸೂತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಚನ್ನಪಟ್ಟಣ ಕ್ಷೇತ್ರ ಸಿಗಲಿದೆ.

ಕೇಂದ್ರ ಸಚಿವ, ಮಂಡ್ಯದ ಸಂಸದ ಎಚ್. ಡಿ. ಕುಮಾರಸ್ವಾಮಿ ಸಹ ಬಿಜೆಪಿ ನಾಯಕರ ಸೂತ್ರಕ್ಕೆ ಒಪ್ಪಿಕೊಂಡಿದ್ದಾರೆ. ಅಭ್ಯರ್ಥಿಯ ಹೆಸರಿಗೆ ಅವರು ಸಹ ಅನುಮೋದನೆ ನೀಡಿದ್ದಾರೆ. ಆದರೆ ಅವರು ಹಾಕಿರುವ ಒಂದು ಷರತ್ತಿಗೊಳಪಟ್ಟು ಸೋಮವಾರ ಬೆಳಗ್ಗೆ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗುತ್ತದೆ.
ಯಾರಾಗಲಿದ್ದಾರೆ ಅಭ್ಯರ್ಥಿ?; ಚನ್ನಪಟ್ಟಣದ ಟಿಕೆಟ್‌ಗಾಗಿ ಸಿ. ಪಿ. ಯೋಗೇಶ್ವರ ಪ್ರಯತ್ನ ನಡೆಸಿದ್ದಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಈಗ ಬಿಜೆಪಿ ಮತ್ತು ಜೆಡಿಎಸ್ ಕೇಂದ್ರ ನಾಯಕರನ್ನು ಸಂಪರ್ಕಿಸಿ ಸಿ. ಪಿ. ಯೋಗೇಶ್ವರ ಕಣಕ್ಕಿಳಿಸಲು ಒಪ್ಪಿಗೆಯನ್ನು ಪಡೆದಿವೆ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಸಿ. ಪಿ. ಯೋಗೇಶ್ವರ ಹಾಲಿ ಬಿಜೆಪಿಯಲ್ಲಿದ್ದಾರೆ. ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಆದರೆ ಎಚ್. ಡಿ. ಕುಮಾರಸ್ವಾಮಿ ಅವರ ಷರತ್ತು, ಮೈತ್ರಿ ಧರ್ಮದ ಮಾತಿನಂತೆ ಸಿ. ಪಿ. ಯೋಗೇಶ್ವರ ಜೆಡಿಎಸ್ ಪಕ್ಷದ ಚಿಹ್ನೆಯಿಂದ ಚನ್ನಪಟ್ಟಣದ ಉಪ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ. ಚುನಾವಣೆಯಲ್ಲಿ ಅವರು ಗೆದ್ದರೆ ವಿಧಾನಸಭೆಯಲ್ಲಿ ಜೆಡಿಎಸ್‌ನ ಸಂಖ್ಯಾಬಲ 19ಕ್ಕೆ ಏರಿಕೆಯಾಗಲಿದೆ. 2023ರಲ್ಲಿ ಪಕ್ಷ 19 ಸ್ಥಾನದಲ್ಲಿ ಜಯಗಳಿಸಿತ್ತು. ಕುಮಾರಸ್ವಾಮಿ ರಾಜೀನಾಮೆ ಬಳಿಕ ಶಾಸಕರ ಸಂಖ್ಯೆ 18ಕ್ಕೆ ಇಳಿಕೆಯಾಗಿದೆ.
ಮೊದಲಿನಿಂದಲೂ ಎಚ್. ಡಿ. ಕುಮಾರಸ್ವಾಮಿ ಚನ್ನಪಟ್ಟಣದ ಅಭ್ಯರ್ಥಿ ಜೆಡಿಎಸ್ ಪಕ್ಷದ ಚಿಹ್ನೆಯಿಂದ ಕಣಕ್ಕಿಳಿಯಬೇಕು ಎಂದು ಬೇಡಿಕೆ ಇಟ್ಟಿದ್ದರು. ಮೈತ್ರಿ ಧರ್ಮದ ಸೀಟು ಹಂಚಿಕೆಯಂತೆಯೂ ಶಿಗ್ಗಾವಿ, ಸಂಡೂರು ಬಿಜೆಪಿಗೆ, ಚನ್ನಪಟ್ಟಣ ಜೆಡಿಎಸ್‌ಗೆ ಎಂಬುದು ಅಂತಿಮವಾಗಿದೆ.
ಸಿ. ಪಿ. ಯೋಗೇಶ್ವರ ಸಹ ಜೆಡಿಎಸ್ ಪಕ್ಷದ ಚಿಹ್ನೆಯಿಂದ ಕಣಕ್ಕಿಳಿಯಲು ಒಪ್ಪಿಗೆ ನೀಡಿದ್ದಾರೆ ಎಂಬ ಮಾಹಿತಿ ಇದೆ. ಸೋಮವಾರ ಬೆಳಗ್ಗೆ ಬಿಜೆಪಿ & ಜೆಡಿಎಸ್ ನಾಯಕರು ಒಟ್ಟಾಗಿ ಅಭ್ಯರ್ಥಿ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.
ಚನ್ನಪಟ್ಟಣದಲ್ಲಿ ಸಿ. ಪಿ. ಯೋಗೇಶ್ವರ ಪಕ್ಷಕ್ಕಿಂತ ಹೆಚ್ಚಾಗಿ ವೈಯಕ್ತಿಕ ವರ್ಚಸ್ಸು ಹೊಂದಿದ್ದಾರೆ. ಆದ್ದರಿಂದ ಉಪ ಚುನಾವಣೆಯಲ್ಲಿ ಅವರು ಪಕ್ಷೇತರ ಅಭ್ಯರ್ಥಿಯಾದರೆ ಮೂರು ಪಕ್ಷದ ಗೆಲುವಿನ ಲೆಕ್ಕಾಚಾರ ಬುಡಮೇಲು ಆಗಲಿದೆ. ಆದ್ದರಿಂದ ಜೆಡಿಎಸ್‌ನ ಷರತ್ತಿಗೆ ಬಿಜೆಪಿಯೂ ಒಪ್ಪಿಗೆ ನೀಡಿದೆ. ಆದ್ದರಿಂದ ಜೆಡಿಎಸ್ ಚಿಹ್ನೆಗೆ ಜೈ ಎಂದಿದೆ.
ಬಿಜೆಪಿಯಲ್ಲಿರುವ ಸಿ. ಪಿ. ಯೋಗೇಶ್ವರ ಪ್ರಸ್ತುತ ವಿಧಾನ ಪರಿಷತ್ ಸದಸ್ಯರು. ಅವರ ಸದಸ್ಯತ್ವದ ಅವಧಿ 2026ರ ತನಕ ಇದೆ. ಚನ್ನಪಟ್ಟಣ ಉಪ ಚುನಾವಣೆಗೆ ಜೆಡಿಎಸ್‌ನಿಂದ ಸ್ಪರ್ಧಿಸಬೇಕಾದರೆ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಶಾಸಕರಾಗಿ ಆಯ್ಕೆಯಾದರೆ ವಿಧಾನಸಭೆ ಪ್ರವೇಶ ಮಾಡುತ್ತಾರೆ. ಆದರೆ ಸೋತರೆ ಮುಂದಿನ ರಾಜಕೀಯ ನಡೆ ಏನು? ಎಂಬುದು ಚರ್ಚೆಯ ವಿಚಾರ.
ಚನ್ನಪಟ್ಟಣ ಉಪ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿ ಘೋಷಣೆ ಮಾಡಿದೆ. ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ನವೆಂಬರ್ 13ರಂದು ಮತದಾನ ಮತ್ತು ನವೆಂಬರ್ 23ರಂದು ಮತಎಣಿಕೆ ನಡೆಯಲಿದೆ.
ಅಕ್ಟೋಬರ್ 18ರ ಶುಕ್ರವಾರ ಉಪ ಚುನಾವಣೆಯ ಅಧಿಸೂಚನೆಯೂ ಪ್ರಕಟವಾಗಿದೆ. ನಾಮಪತ್ರ ಸಲ್ಲಿಸಲು ಅಕ್ಟೋಬರ್ 25ರ ಶುಕ್ರವಾರ ಕೊನೆಯ ದಿನ. ಅಕ್ಟೋಬರ್ 28ರ ಸೋಮವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಅಕ್ಟೋಬರ್ 30 ಬುಧವಾರ ನಾಮಪತ್ರಗಳನ್ನು ವಾಪಸ್ ಪಡೆಯಲು ಕೊನೆಯ ದಿನವಾಗಿದೆ.












Click it and Unblock the Notifications