Channapatna: ಚನ್ನಪಟ್ಟಣ ಉಪ ಚುನಾವಣೆಗೆ ಪ್ಯಾರಾ ಮಿಲಿಟರಿ ಪಡೆ ಕಣ್ಗಾವಲು
ರಾಮನಗರ, ಅಕ್ಟೋಬರ್ 21: ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳ ಪೈಕಿ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಉಪ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಈ ಉಪ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ, ನಾಯಕರ ಪ್ರತಿಷ್ಠೆಯೂ ಅಡಗಿದೆ. ಈಗಾಗಲೇ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಅಕ್ಟೋಬರ್ 18ರ ಶುಕ್ರವಾರ ಉಪ ಚುನಾವಣೆಯ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಈ ಉಪ ಚುನಾವಣೆಗೆ ಭಾರೀ ಭದ್ರತೆ ಕೈಗೊಳ್ಳಲಾಗಿದೆ.
ನವೆಂಬರ್ 13ರಂದು ನಡೆಯುವ ಚನ್ನಪಟ್ಟಣದ ಉಪ ಚುನಾವಣೆಗೆ ರಾಮನಗರ ಜಿಲ್ಲಾಡಳಿತ ಸಕಲ ರೀತಿಯಲ್ಲಿ ತಯಾರಿ ನಡೆಸಿದೆ. ರಾಮನಗರ ಜಿಲ್ಲಾ ಪೊಲೀಸರು ಭದ್ರತೆ, ಚುನಾವಣಾ ಮಾದರಿ ನೀತಿ ಸಂಹಿತೆ ಪಾಲನೆಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಿದ್ದಾರೆ. ಚನ್ನಪಟ್ಟಣಕ್ಕೆ ಕಾಂಗ್ರೆಸ್, ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳು ಯಾರು? ಎಂಬುದು ಇನ್ನೂ ಘೋಷಣೆಯಾಗಿಲ್ಲ. ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್ 25 ಕೊನೆಯ ದಿನವಾಗಿದೆ.

ಪ್ಯಾರಾ ಮಿಲಿಟರಿ ಪಡೆ ಕಣ್ಗಾವಲು: ಚನ್ನಪಟ್ಟಣದ ಉಪ ಚುನಾವಣೆಗೆ ಭಾರೀ ಭದ್ರತೆ ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ಸ್ಥಳೀಯ ಪೊಲೀಸರ ಜೊತೆ ಪ್ಯಾರಾ ಮಿಲಿಟರಿ ಪಡೆ ಚುನಾವಣಾ ಭದ್ರತೆಯ ಉಸ್ತುವಾರಿಯನ್ನು ನೋಡಿಕೊಳ್ಳಲಿದೆ. 2023ರ ವಿಧಾನಸಭೆ ಚುನಾವಣೆಗಿಂತ 10 ಪಟ್ಟು ಹೆಚ್ಚು ಭದ್ರತೆಯನ್ನು ಉಪ ಚುನಾವಣೆಗೆ ಒದಗಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಉಪ ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಅಕ್ಟೋಬರ್ 25 ಕೊನೆಯ ದಿನ. ಅಕ್ಟೋಬರ್ 28ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಅಕ್ಟೋಬರ್ 30 ನಾಮಪತ್ರಗಳನ್ನು ವಾಪಸ್ ಪಡೆಯಲು ಕೊನೆಯ ದಿನ. ನವೆಂಬರ್ 13ರ ಬುಧವಾರ ಮತದಾನ ನಡೆಯಲಿದ್ದು, ನವೆಂಬರ್ 23ರ ಶನಿವಾರ ಮತ ಎಣಿಕೆ ನಡೆಯಲಿದೆ.
ರಾಮನಗರ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ತವರು ಜಿಲ್ಲೆ. ಇಬ್ಬರು ನಾಯಕರು ಈಗ ಪ್ರಭಾವಿ ಹುದ್ದೆಯಲ್ಲಿದ್ದಾರೆ. ಆದ್ದರಿಂದ ಚನ್ನಪಟ್ಟಣ ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಜಿದ್ದಾಜಿದ್ದಿನ ಅಖಾಡದ ಹಿನ್ನಲೆಯಲ್ಲಿ ಪೊಲೀಸರು ಸಹ ವಿಶೇಷ ಭದ್ರತೆಯನ್ನು ಕೈಗೊಂಡಿದ್ದಾರೆ.
ಚನ್ನಪಟ್ಟಣದ ಉಪ ಚುನಾವಣೆಗೆ 10 ತುಕಡಿ ಪ್ಯಾರಾ ಮಿಲಿಟರಿ ಪಡೆಯನ್ನು ನಿಯೋಜನೆ ಮಾಡುವಂತೆ ರಾಮನಗರ ಜಿಲ್ಲಾ ಪೊಲೀಸರು ಬೇಡಿಕೆ ಇಟ್ಟಿದ್ದಾರೆ. 2023ರ ಚುನಾವಣೆಯಲ್ಲಿ ಒಂದು ವಿಧಾನಸಭಾ ಕ್ಷೇತ್ರಕ್ಕೆ ಒಂದು ಪ್ಯಾರಾ ಮಿಲಿಟರಿ ಪಡೆ ನಿಯೋಜನೆ ಮಾಡಲಾಗಿತ್ತು. ಆದರೆ ಈಗ ಕೇವಲ ಚನ್ನಪಟ್ಟಣ ಒಂದೇ ಕ್ಷೇತ್ರಕ್ಕೆ 10 ಪಡೆ ನಿಯೋಜನೆಗೆ ಬೇಡಿಕೆ ಸಲ್ಲಿಸಲಾಗಿದೆ.
ಈ ಕುರಿತು ರಾಮನಗರ ಎಸ್ಪಿ ಕಾರ್ತಿಕ್ ರೆಡ್ಡಿ ಮಾತನಾಡಿ, "ಉಪ ಚುನಾವಣೆಯಲ್ಲಿ ಶಾಂತಿ ಸುವ್ಯಸ್ಥೆಗೆ ಧಕ್ಕೆಯಾಗಬಾರದು. 650 ಮಂದಿ ಪೊಲೀಸರನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗುತ್ತದೆ. ಇದರೊಂದಿಗೆ 10 ತುಕಡಿ ಅರೆಸೇನಾ ಪಡೆ ಸಿಬ್ಬಂದಿಯನ್ನು ಕಳುಹಿಸಿಕೊಂಡುವಂತೆ ಮನವಿ ಮಾಡಲಾಗಿದೆ" ಎಂದು ಹೇಳಿದರು.
ಪ್ಯಾರಾ ಮಿಲಿಟರಿಯ ಒಂದು ತುಕಡಿಯಲ್ಲಿ 90 ಶಸ್ತ್ರ ಸಜ್ಜಿತ ಸಿಬ್ಬಂದಿ ಇರಲಿದ್ದಾರೆ. ರಾಮನಗರ ಜಿಲ್ಲಾಡಳಿತ ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶಗಳನ್ನು ಗಮನದಲ್ಲಿಟ್ಟುಕೊಂಡು ಯಾವ ಪ್ರದೇಶಕ್ಕೆ ಯಾರ ನಿಯೋಜನೆ ಮಾಡಬೇಕು ಎಂದು ತೀರ್ಮಾನಿಸಲಿದೆ.
ಕರ್ನಾಟಕದ ಪೊಲೀಸರು ಸಹ ಚನ್ನಪಟ್ಟಣಕ್ಕೆ ಹೆಚ್ಚಿನ ಭದ್ರತೆಯನ್ನು ನೀಡಲಿದ್ದಾರೆ. ಜಿಲ್ಲಾ ಎಸ್ಪಿ ನೇತೃತ್ವದಲ್ಲಿ 2 ಎಎಸ್ಪಿ, 4 ಡಿವೈಎಸ್‌ಪಿ, 15 ಇನ್ಸ್‌ಪೆಕ್ಟರ್, 50 ಪಿಎಸ್‌ಐ ಸೇರಿದಂತೆ 650 ಮಂದಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ. ಇದರ ಜೊತೆಗೆ ಕೆಎಸ್ಆರ್‌ಪಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸಹ ಭದ್ರತೆಯನ್ನು ನೋಡಿಕೊಳ್ಳಲಿದೆ.












Click it and Unblock the Notifications