ಸಿ.ಪಿ.ಯೋಗೇಶ್ವರ್ ದೇವೇಗೌಡರ ನಾಯಕತ್ವದ ಬಗ್ಗೆ ಹೀಗಂದ್ಬಿಟ್ರು
ಚನ್ನಪಟ್ಟಣ, ನವೆಂಬರ್, 25: ಕರ್ನಾಟಕದಲ್ಲಿ ಸಂಡೂರು, ಶಿಗ್ಗಂವಿ, ಚನ್ನಪಟ್ಟಣ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿದ್ದು, ಫಲಿತಾಂಶ ಕೂಡ ಹೊರಬಿದ್ದಿದೆ. ಈ ಮೂರರಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಿದೆ. ಇನ್ನು ಚನ್ನಪಟ್ಣಣದಿಂದ ಸ್ಪರ್ಧಿಸಿ ಸೋಲನುಭವಿಸಿದ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿಚಾರವಾಗಿ ಸಿ.ಪಿ.ಯೋಗೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ಒಕ್ಕಲಿಗರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ನಾಯಕತ್ವವನ್ನು ಬಿಡಬೇಕು. ಒಕ್ಕಲಿಗರ ಶಕ್ತಿಯನ್ನು ಅವರು ಸ್ವಂತಕ್ಕೆ ಬಳಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ. ಈಗಾಲಾದರೂ ರಾಜಕೀಯದಿಂದ ನಿವೃತ್ತಿ ಆಗಿ ಬೇರೆಯವರಿಗೆ ಅವಕಾಶ ಕೊಡಬೇಕು. ಯೋಗ ಮತ್ತು ಯೋಗ್ಯತೆ ಇರುವವರು ಸಮುದಾಯದ ನಾಯಕತ್ವ ವಹಿಸಿಕೊಳ್ಳಲಿ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ಹೇಳಿದರು.

ಚನ್ನಪಟ್ಟಣದಲ್ಲಿ ಇಂದು (ನವೆಂಬರ್ 25) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೌಡರ ಕುಟುಂಬದಲ್ಲಿ ಎಷ್ಟು ಜನ ಶಾಸಕರಿದ್ದಾರೆ ಎಂಬುದನ್ನು ಸಮುದಾಯದವರು ಗಮನಿಸಬೇಕು. ಸಾರ್ವಜನಿಕ ಜೀವನದಲ್ಲಿ ಅವರ ರಾಜಕಾರಣವು ಸ್ವಂತ ಹಾಗೂ ಸ್ವಾರ್ಥದಿಂದ ಕೂಡಿದೆ. ಸಮುದಾಯ ಈಗಾಲಾದರೂ ಅವರ ಕುಟುಂಬವನ್ನು ಬಿಟ್ಟು ಪರ್ಯಾಯ ಒಕ್ಕಲಿಗ ನಾಯಕತ್ವ ಬಗ್ಗೆ ಯೋಚನೆ ಮಾಡಬೇಕು ಎಂದರು.
ಉಪ ಚುನಾವಣೆಯಲ್ಲಿ ತಮ್ಮ ಮೊಮ್ಮಗನನ್ನು ದೇವೇಗೌಡರನ್ನು ಜನ ತಿರಸ್ಕರಿಸಿದ್ದಾರೆ. ಪ್ರಾದೇಶಿಕ ಪಕ್ಷದ ಹೆಸರಿನಲ್ಲಿ ಕುಟುಂಬ ರಾಜಕಾರಣ ಮಾಡಿಕೊಂಡು ಬಂದಿರುವ ಅವರು, ಸಮಾಜವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. ದೇವೇಗೌಡರನ್ನು ಹಳೇ ಮೈಸೂರು ಭಾಗದ ಜನ ಒಪ್ಪುತ್ತಿಲ್ಲ ಎಂಬುದು ಉಪ ಚುನಾವಣೆಯಲ್ಲಿ ಸಾಬೀತಾಗಿದೆ ಎಂದರು.
ಮಗನನ್ನು ಯುದ್ಧ ಭೂಮಿಗೆ ಕಳಿಸಿದ ನೀನು ರಣಹೇಡಿ ಆಗಿಬಿಟ್ಟೆ ಎಂದು ಬಬ್ರುವಾಹನ ಅರ್ಜುನನಿಗೆ ಹೇಳುತ್ತಾನೆ. ಉಪ ಚುನಾವಣೆಯಲ್ಲೂ ಇದೇ ಸ್ಥಿತಿ ಬಂದೊದಗಿದೆ. ತನ್ನ ಮಗನನ್ನೇ ಗೆಲ್ಲಿಸಿಕೊಳ್ಳಲಾಗದ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿದ್ದು, ಏನು ಪ್ರಯೋಜನ?. ಇದ್ರೆ ಈ ಊರು, ಬಿಟ್ಟರೆ ಇನ್ನೊಂದೂರು ಎಂಬಂತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಚನ್ನಪಟ್ಟಣ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು 25,413 ಮತಗಳಿಂದ ಸೋಲಿಸಿ, ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಗೆಲುವು ಸಾಧಿಸಿದ್ದಾರೆ. ಸಿ.ಪಿ.ಯೋಗೇಶ್ವರ್ 1,12,642 ಮತ ಪಡೆದು ಗಲುವು ಸಾಧಿಸಿದರೆ, ನಿಖಿಲ್ ಕುಮಾರಸ್ವಾಮಿ 87,229 ಮತಗಳನ್ನು ಪಡೆಯುವ ಮೂಲಕ ಸೋಲನುಭವವಿಸಿದ್ದಾರೆ.
ರಾಜ್ಯದ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆದರೂ, ಚನ್ನಪಟ್ಟಣದಲ್ಲಿ ಈ ಬಾರಿ ಜಿದ್ದಾಜಿದ್ದಿ ಜೋರಾಗಿಯೇ ನಡೆದಿತ್ತು. 2018ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ, 2023ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ರಾಮನಗರದಲ್ಲಿ ಎರಡು ಸೋಲು ಕಂಡಿದ್ದದ್ದರು. ಆದರೂ ನಿಖಿಲ್ ಕುಮಾರಸ್ವಾಮಿ ಈ ಬಾರಿಯೂ ಕೂಡ ಚನ್ನಪಟ್ಟಣದಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗಿಳಿದು ಮುಗ್ಗರಿಸಿದ್ದಾರೆ.












Click it and Unblock the Notifications