Bengaluru-Mysuru Expressway: ಜಯಪುರ ಗೇಟ್ ಬಳಿ ಭೀಕರ ರಸ್ತೆ ಅಪಘಾತ, ಬೈಕ್‌ನಲ್ಲಿ ತೆರಳುತ್ತಿದ್ದ ಇಬ್ಬರು ಸಾವು
ರಾಮನಗರ, ಮೇ, 01: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಆದಾಗಿನಿಂದ ಇಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಅಪಘಾತಗಳು ಸಂಭವಿಸುತ್ತಲೇ ಇವೆ. ಹೀಗೆ ಸರಣಿ ಅಪಘಾತಗಳು ಸಂಭವಿಸಿದರೂ ಕೂಡ ಇದಕ್ಕೆ ಬ್ರೇಕ್ ಬೀಳದಂತಾಗಿದೆ. ಇದೀಗ ಮತ್ತೆ ರಾಮನಗರ ತಾಲೂಕಿನ ಜಯಪುರ ಗೇಟ್ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಒಬ್ಬರು ಗಂಭೀರ ಗಾಯಗೊಂಡಿದ್ದಾರೆ.
ರೆಹಮನ್ (18), ಯಾಸೀನ್ (22) ಅಪಘಾತದಲ್ಲಿ ಮೃತಪಟ್ಟವರಾಗಿದ್ದಾರೆ. ಗಾಯಗೊಂಡ ಮತ್ತೊರ್ವ ಯವಕನಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ಶಿಪ್ಟ್ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈ ಮೂವರು ಬೆಂಗಳೂರಿನಿಂದ ಮೈಸೂರಿಗೆ ಒಂದೇ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು. ಈ ವೇಳೆ ಬೈಕ್ ಸವಾರ ಮುಂಭಾಗದಲ್ಲಿ ಕೆಟ್ಟು ನಿಂತಿದ್ದ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ರಸ್ತೆಗೆ ಅಪ್ಪಳಿಸಿದ್ದಾರೆ. ಇದೇ ವೇಳೆ ಮತ್ತೊಂದು ಕಾರು ಬಂದು ಡಿಕ್ಕಿ ಹೊಡೆದ ಪರಿಣಾಮ ಹೆದ್ದಾರಿಗೆ ಬಿದ್ದು ಇಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಮಾಹಿತಿ ತಿಳಿದ ನಂತರ ಸ್ಥಳಕ್ಕೆ ಆಗಮಿಸಿದ ರಾಮನಗರ ಸಂಚಾರಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಹಾಗೆಯೆ ಇತ್ತೀಚೆಗಷ್ಟೆ ಚನ್ನಪಟ್ಟಣ ತಾಲೂಕಿನ ಲಂಬಾಣಿ ತಾಂಡಾ ಬಳಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಅಪಘಾತ ಸಂಭವಿಸಿದ್ದು, ಪರಿಣಾಮ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದರು. ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಆಲ್ಟೊ ಕಾರು ಟೈರ್ ಸ್ಫೋಟಗೊಂಡು ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ಪಕ್ಕದ ರಸ್ತೆಯಲ್ಲಿ ಬರುತ್ತಿದ್ದ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿತ್ತು.
ಡಿಕ್ಕಿಯಾದ ರಭಸಕ್ಕೆ ಆಲ್ಟೋ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ಘಟನೆ ಚನ್ನಪಟ್ಟಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಬೆಂಗಳೂರಿನ ಕೆಂಗೇರಿಯಲ್ಲಿ ನೆಲೆಸಿದ್ದ ರವಿ ಪೂಜಾರ್ ಕುಟುಂಬಸ್ಥರು ಬೆಂಗಳೂರಿನಿಂದ ಟಿ.ನರಸೀಪುರಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿತ್ತು.
ಇಷ್ಟೆಲ್ಲ ಸರಣಿ ಅಪಘಾತಗಳು ಸಂಭವಿಸುತ್ತಿದ್ದರೂ ಕೂಡ ಇಲ್ಲಿನ ಸಂಬಂಧಪಟ್ಟ ಅಧಿಕಾರಗಳು ಮಾತ್ರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವ ಆರೋಪಗಳು ದಟ್ಟವಾಗಿ ಕೇಳಿಬರುತ್ತಿವೆ.
ವಾಹನಗಳಿಗೆ ವೇಗ ಮಿತಿ ಜಾರಿ
ಇನ್ನು ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇ ಆದಾಗಿನಿಂದ ಇಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಲೇ ಇವೆ. ಮತ್ತೊಂದೆಡೆ ಇತ್ತೀಚೆಗಷ್ಟೇ ಮಳೆ ಸುರಿದ ಕಾರಣ ಕೆಲವೆಡೆ ಹೆದ್ದಾರಿ ಚರಂಡಿಯಂತೆ ಆಗಿತ್ತು. ಇದರಿಂದ ಪ್ರತಿಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ಧ ಟೀಕಾಪ್ರಹಾರವನ್ನೇ ನಡೆಸಿದ್ದವು. ಇದೀಗ ಅಪಘಾತಗಳನ್ನು ತಡೆಯುವ ಉದ್ದೇಶದಿಂದ ವೇಗ ಮಿತಿಯನ್ನು ಜಾರಿ ಮಾಡಿದ್ದಾರೆ. ಹಾಗಾರೆ ಈ ನಿಯಮದ ಬಗ್ಗೆ ಇರುವ ಅಂಶಗಳನ್ನು ಇಲ್ಲಿ ಗಮನಿಸಿ.
ಬೆಂಗಳೂರು - ಮೈಸೂರು ಹೆದ್ದಾರಿಗೆ ವೇಗ ಮಿತಿಯನ್ನು ಜಾರಿ ಮಾಡಲಾಗಿದೆ. ಇಷ್ಟು ದಿನ ವಾಹನ ಸವಾರರು ಈ ನಿಯಮವನ್ನು ಉಲ್ಲಂಘಿಸಿರುವುದು ಮತ್ತು ಲೇನ್‌ಗಳನ್ನು ತಮಗಿಷ್ಟ ಬಂದಂತೆ ಬದಲಿಸುತ್ತಿದ್ದು, ಇದು ಅಪಘಾತ ಸಂಭವಿಸುವುದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಮೂಲಗಳು ಹೇಳುತ್ತಿವೆ.
ಏಕಮುಖ ಸಂಚಾರಕ್ಕೆ 3 ಪಥದ ರಸ್ತೆಯಲ್ಲಿ ಪ್ರತಿ ಪಥಕ್ಕೂ ಒಂದೊಂದು ವೇಗ ಮಿತಿಯನ್ನು ಜಾರಿ ಮಾಡಲಾಗಿದೆ. ಎಡಭಾಗದ ರಸ್ತೆಗೆ ಪ್ರತಿ ಗಂಟೆಗೆ 60 ಕಿಲೋ ಮೀಟರ್, ಮಧ್ಯದ ಪಥಕ್ಕೆ 80 ಕಿಲೋ ಮೀಟರ್, ಬಲ ಭಾಗದ ರಸ್ತೆಗೆ 100 ಕಿಲೋ ಮೀಟರ್ ವೇಗ ಮಿತಿಯನ್ನು ಜಾರಿಗೊಳಿಸಲಾಗಿದೆ.
ಆದರೆ ಪ್ರತಿ ಪಥಕ್ಕೆ 20 ಕಿ.ಮೀ. ಹೆಚ್ಚುವರಿಯಾಗಿ ವೇಗ ಮಿತಿ ಮಾಡಲಾಗಿದೆ ಎಂದು ಹೆದ್ದಾರಿ ಪ್ರಾಧಿಕಾರ ತಪ್ಪಾಗಿ ಸೂಚನಾ ಫಲಕಗಳನ್ನು ಅಳವಡಿಸಿದೆ. ಇನ್ನೆರಡು ದಿನಗಳಲ್ಲಿಗರಿಷ್ಠ ವೇಗ ಮಿತಿಯನ್ನು 100 ಕಿಲೋ ಮೀಟರ್‌ಗಳಿಗೆ ನಿಗದಿಪಡಿಸಿ ಸೂಚನಾ ಫಲಕಗಳನ್ನು ಅಳವಡಿಕೆ ಮಾಡಲಿದೆ.












Click it and Unblock the Notifications