Bengaluru-Mysuru expressway: ಕಳೆದ 6 ತಿಂಗಳಲ್ಲಿ ಸಂಭವಿಸಿದ ಸಾವು, ನೋವುಗಳ ಅಂಕಿಅಂಶ, ಯಾವ ಭಾಗದಲ್ಲಿ ಎಷ್ಟು ಸಾವು?
ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ 6 ತಿಂಗಳಲ್ಲಿ ಅಪಘಾತದಲ್ಲಿ ಸಂಭವಿಸಿದ ಸಾವು, ನೋವುಗಳ ಅಂಕಿ ಅಂಶಗಳು, ಹಾಗೆಯೇ ಯಾವ ಭಾಗದಲ್ಲಿ ಎಷ್ಟು ಸಾವು, ನೋವುಗಳು ಸಂಭವಿಸಿವೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ರಾಮನಗರ, ಮಾರ್ಚ್, 09: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇ ವಾಹನ ಸವಾರರಿಗೆ ಹೇಳಿ ಮಾಡಿಸಿದ ಹೆದ್ದಾರಿಯಾಗಿದೆ. ಹಾಗೆಯೇ ಉದ್ಘಾಟನೆಗೂ ಮುನ್ನವೇ ಈ ಹೆದ್ದಾರಿಯಲ್ಲಿ ಹಲವು ಅಪಘಾತಗಳು ಸಂಭವಿಸಿರುವ ಬಗ್ಗೆ ವರದಿಯಾಗಿವೆ. ಅಪಘಾತದಲ್ಲಿ ಸಾವು, ನೋವುಗಳು ಸಂಭವಿಸಿರುವ ಪ್ರಕರಣಗಳು ವರದಿಯಾಗಿವೆ. ಹಾಗಾದರೆ ಯಾವ ಭಾರದಲ್ಲಿ ಎಷ್ಟು ಸಾವು, ಎಷ್ಟು ಮಂದಿ ಗಾಯಾಳುಗಳಾಗಿದ್ಧಾರೆ ಎನ್ನುವ ಅಂಕಿಅಂಶಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಪ್ರಜಾವಾಣಿ ವರದಿ ಮಾಡಿದ ಅಂಕಿಅಂಶಗಳ ಮೇರೆಗೆ ಈ ಸುದ್ದಿಯನ್ನು ಪ್ರಕಟಿಸಲಾಗಿದೆ.
ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ವಾಹನ ಸಂಚಾರ ಆರಂಭವಾಗಿ ಆರು ತಿಂಗಳಿನೊಳಗೆ ಅಪಘಾತಗಳ ಸಂಖ್ಯೆ ಏರಿಕೆ ಆಗಿದೆ. ಒಟ್ಟು 84ಕ್ಕೂ ಹೆಚ್ಚು ಮಂದಿ ಸಾವನ್ನಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. 2022ರ ಸೆಪ್ಟೆಂಬರ್‌ನಿಂದ ನೂತನ ಹೆದ್ದಾರಿಯಲ್ಲಿ ವಾಹನ ಸಂಚಾರ ಆರಂಭವಾಗಿದ್ದು, ಅಲ್ಲಿಂದ ಇಲ್ಲಿಯವರೆಗೂ 335ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ. ಎಕ್ಸ್‌ಪ್ರೆಸ್ ವೇ ಕಾಮಗಾರಿ ಅಂತಿಮ ಹಂತದ ಡಿಸೆಂಬರ್ ಮತ್ತು ಜನವರಿ ತಿಂಗಳಿನಲ್ಲಿ ಹೆಚ್ಚು ಅಪಘಾತಗಳು ಸಂಭವಿಸಿವೆ ಎನ್ನುವ ಮಾಹಿತಿ ದೊರೆತಿದೆ.
ಕಂಬಳಗೋಡಿನಿಂದ ನಿಡಘಟ್ಟದವರೆಗಿನ ರಾಮನಗರ ಜಿಲ್ಲೆ ವ್ಯಾಪ್ತಿಯ ಹೆದ್ದಾರಿಯಲ್ಲಿ ಕಳೆದ ಆರು ತಿಂಗಳ ಅವಧಿಯಲ್ಲಿ 110ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, 41ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಹಾಗೆಯೇ 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 51 ಕಿಲೋ ಮೀಟರ್‌ನಷ್ಟು ಈ ಹೆದ್ದಾರಿ ಹಾದುಹೋಗುತ್ತದೆ. ಬಿಡದಿ, ರಾಮನಗರ-ಚನ್ನಪಟ್ಟಣ ಬೈಪಾಸ್‌ಗಳಲ್ಲಿ ವಾಹನಗಳ ಸಂಚಾರ ತುಂಬಾ ವೇಗವಾಗಿರುತ್ತದೆ.
|
ದಶಪಥ ಹೆದ್ದಾರಿಯಲ್ಲಿ ವಾಹನಗಳ ವೇಗ ಎಷ್ಟು?
ಗಂಟೆಗೆ 120ರಿಂದ 140 ಕಿಲೋ ಮೀಟರ್ ವೇಗದಲ್ಲಿ ವಾಹನಗಳು ಸಂಚರಿಸುತ್ತವೆ. ಅಲ್ಲದೇ ಸರ್ವೀಸ್ ರಸ್ತೆಗಳಲ್ಲೂ ಸಹ ವಾಹನಗಳ ಸಂಚಾರ ಹೆಚ್ಚಾಗುತ್ತದೆ ಇದೆ. ಇನ್ನು ಸಕ್ಕರೆ ನಾಡು ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ 225 ಅಪಘಾತ ಸಂಭವಿಸಿದ್ದು, 43 ಮಂದಿ ಸಾವನ್ನಪ್ಪಿದ್ದಾರೆ. ಮೈಸೂರು ಜಿಲ್ಲಾ ವ್ಯಾಪ್ತಿಯ ಲಕ್ಷ್ಮೀಪುರ ಗೇಟ್‌ನಿಂದ ಮಣಿಪಾಲ್ ಆಸ್ಪತ್ರೆವರೆಗೆ 5 ಕಿಲೋ ಮೀಟರ್ ವ್ಯಾಪ್ತಿಯ ಹೆದ್ದಾರಿಯಲ್ಲಿ 6 ತಿಂಗಳಿಂದ 30 ಅಪಘಾತ ಪ್ರಕರಣಗಳು ವರದಿಯಾಗಿವೆ. ಹಾಗೆಯೇ 8 ಜನ ಮೃತಪಟ್ಟಿದ್ದಾರೆ.

ಗಾಯಾಳುಗಳು ಮತ್ತು ಮೃತಪಟ್ಟವರ ವಿವರ
ಡಿಸೆಂಬರ್ ತಿಂಗಳಿನಲ್ಲಿ ಸಂಭವಿಸಿದ 40 ಅಪಘಾತಗಳಲ್ಲಿ 9 ಮಂದಿ ಮೃತಪಟ್ಟಿದ್ದರೆ, ಜನವರಿ ತಿಂಗಳಿನಲ್ಲಿ ನಡೆದ 55 ಅಪಘಾತಗಳಲ್ಲಿ 10 ಜನರನ್ನು ಜವರಾಯ ಬಲಿ ತೆಗೆದುಕೊಂಡಿದ್ದಾನೆ. ಇನ್ನು ಎರಡು ತಿಂಗಳಿನಿಂದ ಈಚೆಗೆ 150ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮೈಸೂರಿನವರೆಗೆ ಕಾಮಗಾರಿ ಪ್ರಗತಿಯಲ್ಲಿದೆ
ಬೆಂಗಳೂರಿನಿಂದ ಮಂಡ್ಯ ಜಿಲ್ಲೆಯ ಗಡಿ ನಿಡಘಟ್ಟದವರೆಗೂ ಕಾಮಗಾರಿ ಪೂರ್ಣವಾಗಿದೆ. ಆದರೆ ನಿಡಘಟ್ಟದಿಂದ ಮೈಸೂರಿನವರೆಗೆ ಕಾಮಗಾರಿ ಪ್ರಗತಿಯಲ್ಲಿದೆ. ವಾಹನ ಓಡಾಟಕ್ಕೆ ಮಾತ್ರ ಹೆದ್ದಾರಿ ಸಿದ್ಧವಾಗಿದೆ. ಆದರೆ ವಾಹನ ಸಂಚಾರಕ್ಕೆ ಅಗತ್ಯ ವ್ಯವಸ್ಥೆ ಇನ್ನು ಆಗಿಲ್ಲ. ಕಾಮಗಾರಿ ಪೂರ್ಣಗೊಂಡಿಲ್ಲದಿದ್ದರೂ ಕೂಡ 80 ನಿಮಿಷಗಳಲ್ಲಿ ಬೆಂಗಳೂರು-ಮೈಸೂರು ತಲುಪಬೇಕು ಎನ್ನುವ ಅವರಸರೂ ಕೂಡ ಅಪಘಾತಕ್ಕೆ ಮುಖ್ಯ ಕಾರಣವಾಗಿದೆ ಅಂತಲೂ ಹೇಳಬಹುದಾಗಿದೆ.

ವೇಗದ ಮಿತಿ ಸೂಚಿಸುವ ವ್ಯವಸ್ಥೆಯೂ ಇಲ್ಲ
ಹೆದ್ದಾರಿಯಲ್ಲಿ ಎಲ್ಲೂ ಸೂಕ್ತವಾದ ಸೂಚನಾ ಫಲಕಗಳು ಇಲ್ಲ. ವೇಗದ ಮಿತಿ ಸೂಚಿಸುವ ವ್ಯವಸ್ಥೆಯೂ ಇಲ್ಲದಂತಾಗಿದೆ. ಆದ್ದರಿಂದ ಅಪಘಾತಗಳ ಸಂಖ್ಯೆ ಏರುತ್ತಲೇ ಇದೆ. ಮಂಡ್ಯ ಮತ್ತು ಮೈಸೂರು ಜಿಲ್ಲಾ ವ್ಯಪ್ತಿಯಲ್ಲಿ ಹೆಚ್ಚು ಸೇತುವೆ, ಮೇಲ್ಸೇತುವೆ, ಕೆಳಸೇತುವೆಗಳು ಹೆಚ್ಚು ತಿರುವುಗಳಿಂದ ಕೂಡಿದೆ. ಸೇತುವೆ ಮಾರ್ಗದಿಂದ ರಸ್ತೆಗೆ ಸ್ಪರ್ಶಿಸುವ ಸ್ಥಳದಲ್ಲಿ ವಾಹನಗಳಿಗೆ ಸರಿಯಾಗಿ ಗ್ರಿಫ್ ಇಲ್ಲದಂತಾಗಿದೆ. ಇದರಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಆದ್ದರಿಂದ ಸರ್ಕಾರ ಎಚ್ಚೆತ್ತುಕೊಂಡು ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆನ್ನುವುದು ವಾಹನ ಸವಾರರ ಆಗ್ರಹವಾಗಿದೆ.

ವಾಹನ ಸವಾರರು ಹೇಳುವುದೇನು?
ಹೆದ್ದಾರಿಯಲ್ಲಿ ವಾಹನಗಳ ವೇಗಕ್ಕೆ ಮಿತಿ ಇಲ್ಲದಿರುವುದು ಅಪಘಾತಗಳ ಹೆಚ್ಚಳಕ್ಕೆ ಮುಖ್ಯ ಕಾರಣವಾಗಿದೆ. ಮಿತಿ ಮೀರಿದ ವೇಗದಿಂದ ವಾಹನಗಳ ನಡುವೆ ಅಪಘಾತ ಸಂಭವಿಸುತ್ತಿದ್ದು, ಇದರಿಂದಾಗಿ ಸವಾರರು ವಾವನ್ನಪ್ಪುತ್ತಿದ್ದಾರೆ. ಬೈಪಾಸ್ ರಸ್ತೆಗಳಲ್ಲಿ ಸುರಕ್ಷತೆ ಕೊರತೆ ಇದ್ದು, ವೈದ್ಯಕೀಯ ಸೇವೆಯೂ ಸಹ ಲಭ್ಯವಿಲ್ಲ. ಇದರ ನಡುವೆ ಟೋಲ್ ವಸೂಲಿಗೆ ಮುಂದಾಗಿರುವುದು ಕೂಡ ಸಾರ್ವಜನಿಕರ ಕೆಂಗಣ್ಣಿಗೆ ಗುರಿ ಮಾಡಿದಂತಿದೆ.












Click it and Unblock the Notifications