Tamannaah Bhatia: ಸೌತ್ ಇಂಡಸ್ಟ್ರಿಯಲ್ಲಿ ನಟಿಯನ್ನ ಆ ದೃಷ್ಟಿಯಲ್ಲೇ ನೋಡ್ತಾರೆ: ಶಾಕಿಂಗ್ ಹೇಳಿಕೆ ಕೊಟ್ಟ ಮಿಲ್ಕಿ ಬ್ಯೂಟಿ
ಖ್ಯಾತ ಬಹುಭಾಷಾ ನಟಿ ತಮನ್ನಾ ಭಾಟಿಯಾ ಇತ್ತೀಚೆಗೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಹಿಳಾ ನಟಿಯರನ್ನು ಬಿಂಬಿಸುವ ವಿಧಾನ ಹಾಗೂ ಅಲ್ಲಿನ ಪುರುಷ ಪ್ರಧಾನ ಧೋರಣೆಯ ಬಗ್ಗೆ ತಮ್ಮದೇ ಅನುಭವಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಯರನ್ನು ನೋಡುವ ದೃಷ್ಟಿಕೋನವು ಯಾವಾಗಲೂ ಗೌರವಯುತವಾಗಿ ಅಥವಾ ಮೆಚ್ಚುಗೆಯಿಂದ ಕೂಡಿರುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪುರುಷ ಪ್ರಧಾನ ನೋಟ
ಫೋರ್ಬ್ಸ್ ಇಂಡಿಯಾ (Forbes India) ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ತಮನ್ನಾ, ಚಿತ್ರರಂಗದಲ್ಲಿನ ಕೆಲವು ಕಹಿ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ದಕ್ಷಿಣದ ಸಿನಿಮಾಗಳಲ್ಲಿ ಕಮರ್ಷಿಯಲ್ ಅಂಶಗಳಿಗೆ ನೀಡುವ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದ ತಮನ್ನಾ, ಅಲ್ಲಿನ ಮೇಕಿಂಗ್ ಶೈಲಿಯನ್ನು ವಿಶ್ಲೇಷಿಸಿದ್ದಾರೆ. "ದಕ್ಷಿಣದ ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಯರನ್ನು ತೋರಿಸುವ ಒಂದು ನಿರ್ದಿಷ್ಟ ನೋಟವಿದೆ. ಅದು ತುಂಬಾ ಪುರುಷ ಪ್ರಧಾನವಾದ ವಾತಾವರಣವನ್ನು ಬಿಂಬಿಸುತ್ತದೆ. ಈ ರೀತಿಯ ಚಿತ್ರಣವು ಮಹಿಳಾ ನಟಿಯರಿಗೆ ಅಷ್ಟೇನೂ ಪೂರಕವಾಗಿ ಅಥವಾ ಗೌರವಯುತವಾಗಿ ಕಾಣಿಸುವುದಿಲ್ಲ" ಎಂದಿದ್ದಾರೆ.

ಹಾಡುಗಳ ವೈಭವೀಕರಣ
ಸಿನಿಮಾದಲ್ಲಿನ ಹಾಡುಗಳ ಸಂಗೀತದ ಶ್ರೀಮಂತಿಕೆಯನ್ನು ಅರ್ಥಮಾಡಿಕೊಂಡಿರುವುದಾಗಿ ಹೇಳಿದ ಅವರು, ಕಮರ್ಷಿಯಲ್ ಸಿನಿಮಾಗಳ ಚೌಕಟ್ಟು ಹೆಚ್ಚು ಕಟ್ಟುನಿಟ್ಟಾಗಿರುತ್ತದೆ ಮತ್ತು ಆ ಮಿತಿಯಲ್ಲೇ ನಟಿಯರು ನಟಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಬಾಲಿವುಡ್‌ನಲ್ಲಿ ನಟಿಯರಿಗೆ ಕಲಾತ್ಮಕ ಪಾತ್ರಗಳು ಅಥವಾ ಗ್ಲಾಮರಸ್ ಪಾತ್ರಗಳು-ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಮುಕ್ತ ಅವಕಾಶವಿರುತ್ತದೆ. ಆದರೆ ಯಾರು ಈ ಎರಡೂ ಶೈಲಿಗಳನ್ನು ಸಮರ್ಥವಾಗಿ ನಿಭಾಯಿಸುತ್ತಾರೋ, ಅವರೇ ಅಲ್ಲಿ ಸೂಪರ್ ಸ್ಟಾರ್‌ಗಳಾಗಿ ಹೊರಹೊಮ್ಮುತ್ತಾರೆ ಎಂದೂ ತಮನ್ನಾ ಅವರು ಅಭಿಪ್ರಾಯಪಟ್ಟಿದ್ದಾರೆ.
ಇದು ಕೇವಲ ನನ್ನ ವೈಯಕ್ತಿಕ ಅನುಭವಗಳನ್ನು ಆಧರಿಸಿ ನಾನು ಹೇಳುತ್ತಿರುವ ಮಾತುಗಳು. ಚಿತ್ರರಂಗದಲ್ಲಿ ದಶಕಗಳ ಕಾಲ ಯಶಸ್ವಿಯಾಗಿ ಮುನ್ನಡೆಯುವ ನಟಿಯರು ಗ್ಲಾಮರ್ ಮತ್ತು ಅಭಿನಯ ಪ್ರಧಾನ ಪಾತ್ರಗಳೆರಡರ ನಡುವೆ ಸಮತೋಲನ ಕಾಯ್ದುಕೊಂಡಿರುತ್ತಾರೆ ಎಂದಿದ್ದಾರೆ. ಸಿನಿಮಾಗಳಲ್ಲಿನ ಗ್ಲಾಮರ್ ಆಚೆಗೂ ನಟಿಯರ ನಟನಾ ಸಾಮರ್ಥ್ಯಕ್ಕೆ ಸೂಕ್ತ ಗೌರವ ಸಿಗಬೇಕು ಎಂಬ ತಮನ್ನಾ ಅವರ ಈ ಹೇಳಿಕೆ ಇದೀಗ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ.
ತಮಿಳು, ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ತಮನ್ನಾ ಭಾಟಿಯಾ ಇದುವರೆಗೆ ಸುಮಾರು 90 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಬಾಹುಬಲಿ' ಸೇರಿದಂತೆ ಹಾರರ್ ಕಾಮಿಡಿ ಸಿನಿಮಾ 'ಅರಣ್ಮನೈ 4' ಸಿನಿಮಾಗಳಲ್ಲಿ ನಟಿಸಿರುವ ಇವರು ಭಾರತ ಚಿತ್ರರಂಗದಲ್ಲಿ ಮಿಲ್ಕಿ ಬ್ಯೂಟಿ ಎಂದೇ ಕರೆಸಿಕೊಂಡಿದ್ದಾರೆ. ಬೆಳ್ಳಿ ತೆರೆಯಷ್ಟೇ ಅಲ್ಲದೆ, ಒಟಿಟಿ (OTT) ಲೋಕದಲ್ಲೂ ಹೆಜ್ಜೆ ಇಟ್ಟಿರುವ ಇವರು 'ಜೀ ಕರ್ದಾ' (Jee Karda), 'ಆಖಿರಿ ಸಚ್' (Aakhiri Sach) ನಂತಹ ಸರಣಿಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಸಿದ್ದಾರ್ಥ್ ಮಲ್ಹೋತ್ರಾ ಅವರೊಂದಿಗೆ 'ವ್ವಾನ್ - ಫೋರ್ಸ್ ಆಫ್ ದಿ ಫಾರೆಸ್ಟ್' (Vvan - Force of the Forest) ಚಿತ್ರದಲ್ಲಿ ತಮನ್ನಾ ಕಾಣಿಸಿಕೊಳ್ಳಲಿದ್ದಾರೆ.
ದಕ್ಷಿಣ ಭಾರತ ಮತ್ತು ಬಾಲಿವುಡ್‌ನಲ್ಲಿ ಮಾತ್ರವಲ್ಲದೆ, ಕನ್ನಡ ಚಿತ್ರರಂಗದೊಂದಿಗೂ ತಮನ್ನಾ ಅವರಿಗೆ ವಿಶೇಷ ನಂಟಿದೆ. ರಾಕಿಂಗ್ ಸ್ಟಾರ್ ಯಶ್ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ ಭಾರತೀಯ ಚಿತ್ರರಂಗದ ಹೆಮ್ಮೆಯ ಚಿತ್ರ 'ಕೆಜಿಎಫ್: ಚಾಪ್ಟರ್ 1' (KGF: Chapter 1) ಸಿನಿಮಾದಲ್ಲಿ ತಮನ್ನಾ ಭರ್ಜರಿ ಹೆಜ್ಜೆ ಹಾಕಿದ್ದರು. ರೆಟ್ರೋ ಶೈಲಿಯ ಸೂಪರ್ ಹಿಟ್ ಹಾಡಾದ 'ಜೋಕೆ ನಾನು ಬಳ್ಳಿಯ ಮಿಂಚು...' ಹಾಡಿನ ರೀಮಿಕ್ಸ್ ಆವೃತ್ತಿಯಲ್ಲಿ ತಮನ್ನಾ ತಮ್ಮ ನೃತ್ಯದ ಮೂಲಕ ಕನ್ನಡಿಗರ ಮನ ಗೆದ್ದಿದ್ದರು. ರಾಕಿ ಭಾಯ್ ಎದುರು ಅವರು ಹಾಕಿದ ಸ್ಟೆಪ್ಸ್ ಚಿತ್ರಮಂದಿರಗಳಲ್ಲಿ ಸಿಳ್ಳೆ-ಚಪ್ಪಾಳೆ ಗಿಟ್ಟಿಸಿತ್ತು.
ಡೇಟಿಂಗ್ ಮತ್ತು ಬ್ರೇಕಪ್
ಕೇವಲ ಸಿನಿಮಾಗಳಷ್ಟೇ ಅಲ್ಲದೆ, ತಮನ್ನಾ ಭಾಟಿಯಾ ಅವರ ವೈಯಕ್ತಿಕ ಜೀವನ, ಪ್ರೀತಿ ಮತ್ತು ಡೇಟಿಂಗ್ ವಿಚಾರಗಳು ಸದಾ ಸದ್ದು ಮಾಡುತ್ತಿರುತ್ತವೆ. ಬಾಲಿವುಡ್‌ನ ಪ್ರತಿಭಾವಂತ ನಟ ವಿಜಯ್ ವರ್ಮಾ ಅವರೊಂದಿಗೆ ತಮನ್ನಾ ಡೇಟಿಂಗ್‌ನಲ್ಲಿದ್ದರು. 'ಲಸ್ಟ್ ಸ್ಟೋರೀಸ್ 2' ಸರಣಿಯ ಚಿತ್ರೀಕರಣದ ವೇಳೆ ಇವರಿಬ್ಬರ ನಡುವೆ ಪ್ರೀತಿ ಶುರುವಾಗಿ ನಂತರ ದಿಢೀರ್ ಪರಸ್ಪರ ದೂರವಾಗಿದ್ದರು. ಇವರ ಡೇಟಿಂಗ್ ವಿಚಾರ ಸಿನಿರಂಗದಲ್ಲಿ ಸದಾ ಹಾಟ್ ಟಾಪಿಕ್ ಆಗಿತ್ತು.













Click it and Unblock the Notifications