India Weather: 315 ಜಿಲ್ಲೆಗಳಲ್ಲಿ ಮಳೆ ಕೊರತೆ, ಅಪಾಯಕಾರಿ ಜಿಲ್ಲೆಗಳೆಷ್ಟು? ಜುಲೈ 2ರವರೆಗಿನ ಮುನ್ಸೂಚನೆ ಇಲ್ಲಿದೆ
ನವದೆಹಲಿ: ಹಿಂದೂ ಮಹಾಸಾಗರದಲ್ಲಿನ 'ಎಲ್ ನಿನೋ' ಪ್ರಭಾವ ಈಗಾಗಲೇ ಭಾರತಕ್ಕೆ ಆಗಮಿಸಿ ಮುಂಗಾರಿನ ಮೇಲೆ ಉಂಟಾಗಿದೆ. ಇದರಿಂದಲೇ ಮುಂಗಾರು ದುರ್ಬಲಗೊಂಡಿದ್ದು, ಕರ್ನಾಟಕ ಸೇರಿದಂತೆ ದೇಶದ ಬರೋಬ್ಬರಿ 315 ಜಿಲ್ಲೆಗಳಲ್ಲಿ ಮಳೆ ಕೊರತೆ ಆಗಲಿದೆ. ಅದರಲ್ಲಿ ಕೆಲವು ಜಿಲ್ಲೆಗಳು ಅಪಾಯ ಪಟ್ಟಿಗೆ ಸೇರಿವೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಜುಲೈ 2ರವರೆಗೆ ದೇಶದಲ್ಲಿ ಹವಾಮಾನ ಪರಿಸ್ಥಿತಿ ಹೇಗಿರಲಿದೆ ಅಂತಲೂ ವಿವರಿಸಿದೆ.
ಜೂನ್ 4ರಂದು ಆರಂಭದಲ್ಲೇ ದುರ್ಬಲ ಮುಂಗಾರು ಮಳೆಯ ಆಗಮನವಾಗಿತ್ತು ಎಂದು ಹವಾಮಾನ ಇಲಾಖೆ ತಜ್ಞರು ಖಚಿತಪಡಿಸಿದ್ದರು. ಐಎಂಡಿ ಸೂಚನೆಯಂತೆ ಕರ್ನಾಟಕ ಸೇರಿದಂತೆ ದೇಶದ ನಾನಾ ರಾಜ್ಯಗಳಲ್ಲಿ ಬರಗಾಲ ಆವರಿಸುತ್ತಿದೆ. ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆ ಆಗುವ 315 ಜಿಲ್ಲೆಗಳ ಪೈಕಿ 111 ಜಿಲ್ಲೆಗಳನ್ನು ಅತ್ಯಂತ ಅಪಾಯಕಾರಿ ಹಂತದ ಜಿಲ್ಲೆಗಳೆಂದು ಗುರುತಿಸಲಾಗಿದೆ. ಅಲ್ಲಿ ನೀರಿಗೆ ತತ್ವಾರ ಎದುರಾಗಬಹುದು ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ತಿಳಿಸಿದ್ದಾರೆ.

ಮಂಗಳವಾರ ಮುಂಗಾರು ಪ್ರಗತಿ ಪರಿಶೀಲನೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ಒಡಿಶಾ ಸೇರಿದಂತೆ ವಿವಿಧ ರಾಜ್ಯಗಳ 315 ಜಿಲ್ಲೆಗಳ ಮಳೆ ಕೊರತೆ ಆಗಲಿದ್ದು, ಬರಗಾಲ ಆವರಿಸಲಿದೆ. ಇಲ್ಲಿ ನಿರೀಕ್ಷೆಯಷ್ಟು ಮಳೆ ಆಗುವುದಿಲ್ಲ. ಇದಕ್ಕೆ ಎಲ್‌ನಿನೋದಂತಹ ಹವಾಮಾನ ವೈಪರೀತ್ಯಗಳು ಕಾರಣವೆಂದು ಅವರು ವಿವರಿಸಿದ್ದಾರೆ.
ಜುಲೈ 2ರವರೆಗೂ ಇದೇ ಮುಂಗಾರು ಸ್ಥಿತಿ ಮುಂದುವರಿಕೆ
ಇಂದಿನ ಹವಾಮಾನ ಮುನ್ಸೂಚನೆ ಪ್ರಕಾರ, ಮುಂಗಾರು ಮಳೆ ದುರ್ಬಲಗೊಂಡಿದ್ದು, ಕೆಲವೆಡೆ ಮಾತ್ರವೇ ಹಗುರದಿಂದ ಸಾಧಾರಣ ಮಳೆ ಆಗುತ್ತಿದೆ. ಒಂದಷ್ಟು ಕಡೆಗಳಲ್ಲಿ ಮಾತ್ರವೇ ಭಾರೀ ಮಳೆ ಆಗುತ್ತಿದೆ. ಮುಂಗಾರಿನ ದುರ್ಬಲತೆ ಮುಂದಿನ ಜುಲೈ 2ರವೆರೆಗೂ ಹೀಗೇ ಮುಂದುವರಿಯುವ ಸಾಧ್ಯತೆ ಇದೆ ಎಂದು ಸಚಿವರು ತಿಳಿಸಿದರು.
ಅನ್ನದಾತರಿಗೆ ಕೇಂದ್ರ ಕೊಟ್ಟಿದ್ದ ಮಾಹಿತಿಯೇನು?
ಈ ವರ್ಷದ ಮುಂಗಾರಿನ ಕೊರತೆ ಮುನ್ನೆಚ್ಚರಿಕೆ ನೋಡಿಕೊಂಡು ಮುಂಗಾರು ಹಂಗಾಮಿನ ಖಾರಿಫ್ ಬಿತ್ತನೆಯ ರೈತರಿಗೆ ಕೇಂದ್ರ ಸರ್ಕಾರ ಒಂದಷ್ಟು ಸಲಹೆಗಳನ್ನು ನೀಡಿತ್ತು. ಕಡಿಮೆ ನೀರಿನ ಅಗತ್ಯವಿರುವ ಬೆಳೆಗಳನ್ನು ಈ ವರ್ಷ ಬೆಳೆಯುವಂತೆ ಸಲಹೆ ನೀಡಲಾಗಿತ್ತು. ಬೇಳೆಕಾಳುಗಳು, ಎಣ್ಣೆಕಾಳುಗಳು, ಸಿರಿಧಾನ್ಯಗಳನ್ನು ಮಾತ್ರವೇ ಬೆಳೆಯುವಂತೆ ತಿಳಿಸಲಾಗಿತ್ತು. ಏಕೆಂದರೆ ನೀರಿನ ಅಂಶ ಭೂಮಿಯಲ್ಲಿ ಕಡಿಮೆ ಇದ್ದರು ಇವುಗಳು ಫಲ ನೀಡುತ್ತವೆ. ಇದರಿಂದ ತಕ್ಕ ಮಟ್ಟಿನ ರೈತರ ಆರ್ಥಿಕತೆಯು ಚೇರಿಸಿಕೊಳ್ಳುತ್ತವೆ ಎಂಬುದು ಸರ್ಕಾರದ ಆಶಯವಾಗಿದೆ.
ಕರ್ನಾಟಕದ ಒಳನಾಡಿಗೆ ಆತಂಕ
ಕರ್ನಾಟಕದ ಮಟ್ಟಿಗೆ ಕರಾವಳಿ ಭಾಗದಲ್ಲಿ ಮಾತ್ರವೇ ಆಗಾಗ ಕಾಣಿಸಿಕೊಳ್ಳುತ್ತಿರುವ ಮುಂಗಾರು ಮಳೆ, ಉತ್ತರ ಕರ್ನಾಟಕ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳತ್ತ ಸುಳಿಯುತ್ತಲೇ ಇಲ್ಲ. ಎಲ್ಲೆಡೆ ಬೇಸಿಗೆಯ ಅನುಭವವಾಗುತ್ತಿದೆ. ಬಂಗಾಳಕೊಲ್ಲಿ, ಅರಬ್ಬಿ ಸಮುದ್ರ ಮಟ್ಟದಲ್ಲಿ ನಿರೀಕ್ಷಿತ ಬದಲಾವಣೆಗಳು ಕಾಣದ ಹಿನ್ನೆಲೆಯಲ್ಲಿ ಭಾರೀ ಮಳೆಗೆ ಪೂರಕ ವಾತಾವರಣ ಇಲ್ಲದಂತಾಗಿದೆ. ಮಳೆಗಾಲದಲ್ಲೂ ಬೇಸಿಗೆಯ ಅನುಭವವಾಗುತ್ತಿದೆ.













Click it and Unblock the Notifications