Bengaluru-Mysuru Expressway: ಟೋಲ್ ಸಿಬ್ಬಂದಿ ಹತ್ಯೆಗೈದ ಕಾರಿನಲ್ಲಿ ಬಂದಿದ್ದ ಯುವಕರ ತಂಡ
Bengaluru - Mysuru Expressway Murder: ರಾಮನಗರ, ಜೂನ್, 05: ಮೈಸೂರು-ಎಕ್ಸ್‌ಪ್ರೆಸ್ ವೇ ಆದಾಗಿನಿಂದ ಟೋಲ್ ವಿಚಾರವಾಗಿ ವಾಹನ ಸವಾರರು ಮತ್ತು ಟೋಲ್ ಸಿಬ್ಬಂದಿಗಳ ನಡುವೆ ಗಲಾಟೆಗಳು ಆಗುತ್ತಿದ್ದವು. ನಿನ್ನೆ ರಾತ್ರಿ ಮತ್ತೆ ಟೋಲ್ ಕಟ್ಟುವ ವಿಚಾರಕ್ಕೆ ಟೋಲ್ ಸಿಬ್ಬಂದಿ ಹಾಗೂ ಕಾರಿನಲ್ಲಿ ಬಂದಿದ್ದ ಬೆಂಗಳೂರು ಮೂಲದ ಯುವಕರ ನಡುವೆ ಮಾರಾಮಾರಿ ನಡೆದಿದೆ. ಈ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರಾಮನಗರ ತಾಲೂಕಿನ ಶೇಷಗಿರಿಹಳ್ಳಿಯ ಟೋಲ್ ಫ್ಲಾಜಾ ಬಳಿ ಟೋಲ್ ಪಡೆಯುವ ವಿಚಾರಕ್ಕೆ ಸಿಬ್ಬಂದಿ ಹಾಗೂ ಕಾರಿನಲ್ಲಿ ಬಂದಿದ್ದ ಯುವಕರ ನಡುವೆ ಮಾರಾಮಾರಿ ನಡೆದಿದೆ. ಇದೇ ವೇಳೆ ಕಾರಿನಲ್ಲಿದ್ದ ಯುವಕರು ಟೋಲ್‌ನಲ್ಲಿ ಕೆಲಸ ಮಾಡುತ್ತಿದ್ದ ಪವನ್ ಕುಮಾರ್(26) ಎಂಬಾತನನ್ನು ಕೊಲೆ ಮಾಡಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಹತ್ಯೆಯಾದ ಪವನ್ ಕುಮಾರ್ ಅವರು ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಸಿಕ್ಕೆಪಾಳ್ಯದ ನಿವಾಸಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಟೋಲ್‌ನಲ್ಲಿ ಕೆಲಸ ಮುಗಿಸಿ ಊಟಕ್ಕೆ ಹೋದ ಸಂದರ್ಭದಲ್ಲಿ ಕಾರಿನಲ್ಲಿ ಬಂದಿದ್ದ ಯುವಕರ ತಂಡವೊಂದು ಪವನ್ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಟೋಲ್ನಿಂದಲೂ ಹಿಂಬಾಲಿಸಿಕೊಂಡು ಬಂದ ದುಷ್ಕರ್ಮಿಗಳು ಪವನ್ ಕುಮಾರ್ ಅವರನ್ನು ಹತ್ಯೆ ಮಾಡಿದ್ದಾರೆ. ಭಾನುವಾರ ರಾತ್ರಿ ಟೋಲ್ ಬಳಿ ಗಲಾಟೆ ನಡೆದಿತ್ತು. ನಂತರ ರಾತ್ರಿ 12 ಗಂಟೆಗೆ ಕೆಲಸ ಮುಗಿಸಿಕೊಂಡು ಊಟಕ್ಕೆ ಪವನ್ ಅವರು ಹೊರಟ್ಟಿದ್ದರು.
ಈ ವೇಳೆ ಹಿಂಬಾಲಿಸಿದ ಯುವಕರು ಆತನ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಈ ಘಟನೆ ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇನ್ನು ಹತ್ಯೆ ಮಾಡಿದ ಆರೋಪಿಗಳಿಗಾಗಿ ಇದೀಗ ಬಿಡದಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications