Chennapatna By Election: ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲುವು, ಪೋಸ್ಟ್ ವೈರಲ್
ರಾಮನಗರ, ನವೆಂಬರ್ 09: ರಾಮನಗರ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆ ಕಾವು ಏರತೊಡಗಿದೆ. ನವೆಂಬರ್ 13ರಂದು ಮತದಾನ ನಡೆಯಲಿದ್ದು, ನವೆಂಬರ್ 23ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಉಪ ಚುನಾವಣೆಯಲ್ಲಿ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮತ್ತು ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಪ್ರತಿಷ್ಠೆ ಅಡಗಿದೆ. ಚನ್ನಪಟ್ಟಣದಲ್ಲಿ ಯಾರಿಗೆ ಗೆಲುವು? ಎಂದು ಚರ್ಚೆಗಳು ಸಾಗಿವೆ. ಜನರು ತಮ್ಮ ತೀರ್ಪು ನೀಡುವುದು ಬಾಕಿ ಇದೆ.
ಲೋಕಸಭೆ ಚುನಾವಣೆಯಲ್ಲಿ ಗೆದ್ದ ಬಳಿಕ ಚನ್ನಪಟ್ಟಣದ ಶಾಸಕ ಸ್ಥಾನಕ್ಕೆ ಎಚ್. ಡಿ. ಕುಮಾರಸ್ವಾಮಿ ರಾಜೀನಾಮೆ ನೀಡಿದರು. ಆದ್ದರಿಂದ ಉಪ ಚುನಾವಣೆ ಎದುರಾಗಿದೆ. ಬಿಜೆಪಿ-ಜೆಡಿಎಸ್‌ನಿಂದ ಎಚ್. ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ. ಪುತ್ರನನ್ನ ಗೆಲ್ಲಿಸಬೇಕು ಎಂದು ಕುಮಾರಸ್ವಾಮಿ ಪಣತೊಟ್ಟು ಹಳ್ಳಿಹಳ್ಳಿಗಳಲ್ಲಿ ಪ್ರಚಾರವನ್ನು ಕೈಗೊಂಡಿದ್ದಾರೆ.

ಬಿಜೆಪಿ ನಾಯಕರಾಗಿದ್ದ ಸಿ. ಪಿ. ಯೋಗೇಶ್ವರ ಉಪ ಚುನಾವಣೆ ಘೋಷಣೆಯಾದ ಬಳಿಕ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ. ಕಾಂಗ್ರೆಸ್‌ನಿಂದ ಅವರೇ ಅಭ್ಯರ್ಥಿ. ತವರು ಜಿಲ್ಲೆಯಲ್ಲಿ ಸಿ. ಪಿ. ಯೋಗೇಶ್ವರ ಗೆಲ್ಲಿಸಬೇಕು ಎಂದು ಡಿ. ಕೆ. ಶಿವಕುಮಾರ್, ಡಿ. ಕೆ. ಸುರೇಶ್ ಅಬ್ಬರದ ಪ್ರಚಾರವನ್ನು ನಡೆಸುತ್ತಿದ್ದಾರೆ.
ಜ್ಯೋತಿಷಿ ಪೋಸ್ಟ್ ವೈರಲ್: ಚನ್ನಪಟ್ಟಣ ಉಪ ಚುನಾವಣೆ ಫಲಿತಾಂಶದ ಬಗ್ಗೆ ಜನರ ಲೆಕ್ಕಾಚಾರವೇ ಬೇರೆ, ರಾಜಕೀಯ ನಾಯಕರ ಲೆಕ್ಕಾಚಾರವೇ ಬೇರೆ. ಆದರೆ ಈಗ ಜ್ಯೋತಿಷಿಯೊಬ್ಬರು ಉಪ ಚುನಾವಣೆ ಬಗ್ಗೆ ಹಾಕಿರುವ ಪೋಸ್ಟ್ ವೈರಲ್ ಆಗಿದೆ. 50 ಸಾವಿರಕ್ಕೂ ಅಧಿಕ ಜನರು ಪೋಸ್ಟ್ ವೀಕ್ಷಣೆ ಮಾಡಿದ್ದಾರೆ. ಹಲವಾರು ಜನರು ಕಮೆಂಟ್‌ಗಳನ್ನು ಮಾಡಿದ್ದಾರೆ.
Prashanth Kini ಎಂಬುವವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಚನ್ನಪಟ್ಟಣ ಉಪ ಚುನಾವಣೆ ಬಗ್ಗೆ ಪೋಸ್ಟ್ ಹಾಕಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವು ಸಾಧಿಸಲಿದ್ದಾರೆ ಎಂದು ಅಂದಾಜಿಸಿದ್ದಾರೆ. ಯಾವ ಆಧಾರದ ಮೇಲೆ ಈ ಫಲಿತಾಂಶ ಉಹಿಸಿದ್ದಾರೆ ಎಂದು ಅವರು ವಿವರ ನೀಡಿಲ್ಲ.
Nikhil Kumarswamy (JDS) will Register Victory against
— Prashanth Kini (@AstroPrashanth9) November 7, 2024
CP Yogeshwar (Congress) in Channapatna By Elections✅️ pic.twitter.com/ujcuFxDuZK
ಬಿಜೆಪಿ-ಜೆಡಿಎಸ್ ಮೈತ್ರಿಕೂಟ ನಾಮಪತ್ರ ಸಲ್ಲಿಕೆಯ ಕೊನೆ ಕ್ಷಣದಲ್ಲಿ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿ ಎಂದು ಘೋಷಣೆ ಮಾಡಿತು. ಬಿಜೆಪಿ, ಜೆಡಿಎಸ್ ನಾಯಕರು ನಿಖಿಲ್ ಗೆಲುವಿಗಾಗಿ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ನಿಖಿಲ್ ಪರ ಪ್ರಚಾರಕ್ಕಾಗಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ, ನಿಖಿಲ್ ಪತ್ನಿ ರೇವತಿ ಸಹ ಆಗಮಿಸಿದ್ದಾರೆ.
2023ರಲ್ಲಿ ಗೆದ್ದ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು. ನಿಖಿಲ್ ಕುಮಾರಸ್ವಾಮಿ ಗೆಲ್ಲಿಸಬೇಕು ಎಂದು ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಬಿರುಸಿನ ಪ್ರಚಾರವನ್ನು ಕೈಗೊಂಡಿದ್ದಾರೆ. ಎರಡು ಬಾರಿ ಚುನಾವಣೆಯಲ್ಲಿ ಸೋಲು ಕಂಡಿರುವ ನಿಖಿಲ್ ಈ ಬಾರಿ ಅನುಕಂಪದಲ್ಲಿ ಗೆದ್ದು ಬರಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ, 2023ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರದಲ್ಲಿ ಸೋತ ನಿಖಿಲ್ ಕುಮಾರಸ್ವಾಮಿ 2024ರ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ತಂದೆಯ ಭಾರೀ ಪ್ರಭಾವ ಇರುವ ಕ್ಷೇತ್ರದಲ್ಲಿ ನಿಖಿಲ್ ಈ ಬಾರಿ ಗೆಲುವು ಸಾಧಿಸಲಿದ್ದಾರೆ ಎಂದು ಸಹ ವಿಶ್ಲೇಷಿಸಲಾಗುತ್ತಿದೆ.
ಚನ್ನಪಟ್ಟಣದಲ್ಲಿ ಬೇರೆ ಯಾರೇ ಅಭ್ಯರ್ಥಿಯಾಗಿದ್ದರೂ ನಿಖಿಲ್ ಕುಮಾರಸ್ವಾಮಿ ಗೆಲುವು ಸುಲಭ ಎಂದು ಹೇಳಬಹುದಿತ್ತು. ಆದರೆ ಸಿ. ಪಿ. ಯೋಗೇಶ್ವರ ಅವರನ್ನು ಅಷ್ಟು ಸುಲಭವಾಗಿ ಪರಿಗಣಿಸುವಂತಿಲ್ಲ. ಪಕ್ಷಾತೀತವಾಗಿ ಕ್ಷೇತ್ರದಲ್ಲಿ ಮತ ಬ್ಯಾಂಕ್ ಹೊಂದಿದ್ದಾರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ, ಡಿ. ಕೆ. ಶಿವಕುಮಾರ್ ಬೆಂಬಲಕ್ಕೆ ನಿಂತಿದ್ದಾರೆ. ಆದ್ದರಿಂದ ನೇರ ಪೈಪೋಟಿ ನಡೆಯುವುದು ಖಚಿತವಾಗಿದೆ.
ಸದ್ಯದ ಮಾಹಿತಿ ಪ್ರಕಾರ ಸಿ. ಪಿ. ಯೋಗೇಶ್ವರ, ನಿಖಿಲ್ ಕುಮಾರಸ್ವಾಮಿ ಯಾರೇ ಗೆದ್ದರೂ ಸಹ ಗೆಲುವಿನ ಅಂತರ ಕಡಿಮೆ ಇರಲಿದೆ. ಇಬ್ಬರ ನಡುವೆ ನೇರ ಪೈಪೋಟಿ ನಡೆಯಲಿದೆ. ಚನ್ನಪಟ್ಟಣದ ಜನರು ಯಾರನ್ನು ಬೆಂಬಲಿಸುತ್ತಾರೆ? ಎಂದು ಕಾದು ನೋಡಬೇಕಿದೆ.












Click it and Unblock the Notifications