Ramanagara: ಖಾಸಗಿ ಗೋದಾಮಿನಲ್ಲಿ 10,000ಕ್ಕೂ ಹೆಚ್ಚು ಸೀರೆಗಳು; ಪತ್ತೆ ಹಚ್ಚಿದ ಜೆಡಿಎಸ್
ರಾಮನಗರ, ಮಾರ್ಚ್ 20: ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ನಗರದ ದ್ಯಾವರಸೇಗೌಡನ ದೊಡ್ಡಿ ಬಳಿಯ ಗೋಡೌನ್ ಒಂದರಲ್ಲಿ ಲಕ್ಷಾಂತರ ಮೌಲ್ಯದ ಸೀರೆ ದಾಸ್ತಾನನ್ನು ಜೆಡಿಎಸ್ ಕಾರ್ಯಕರ್ತರು ತಡರಾತ್ರಿ ಪತ್ತೆ ಹಚ್ಚಿರುವ ಘಟನೆ ನಡೆದಿದೆ.
ತಡರಾತ್ರಿ ನಗರದ ದ್ಯಾವರಸೇಗೌನದೊಡ್ಡಿ ಗ್ರಾಮದ ಬಳಿಯ ಗೋಡೌನ್ ಒಂದರಿಂದ ಲಾರಿಗೆ ಸೀರೆ ತುಂಬುತ್ತಿದ್ದ ವೇಳೆ ಜೆಡಿಎಸ್ ಕಾರ್ಯಕರ್ತರು ದಾಳಿ ಮಾಡಿ ಅಕ್ರಮ ಪತ್ತೆ ಮಾಡಿದ್ದಾರೆ . ಜೆಡಿಎಸ್ ಕಾರ್ಯಕರ್ತರು ವಾಹನ ತಡೆಗಟ್ಟುತ್ತಿದಂತೆ ಗೋಡೌನ ಸಿಬ್ಬಂದಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

ಕಾಂಗ್ರೆಸ್‌ನಿಂದ ಸೀರೆ ಹಂಚಿಕೆ ಆರೋಪ
ಜೆಡಿಎಸ್ ಕಾರ್ಯಕರ್ತರು ಪತ್ತೆ ಹಚ್ಚಿದ ದಾಸ್ತಾನಿನಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಸೀರೆಗಳ ಸಂಗ್ರಹ ಪತ್ತೆಯಾಗಿದ್ದು, ಕಾಂಗ್ರೆಸ್ ನಾಯಕರಿಂದ ಮತದಾರರಿಗೆ ಹಂಚಲು ಸೀರೆ ಸಂಗ್ರಹ ಮಾಡಿದ್ದಾರೆ ಎಂದು ಜೆಡಿಎಸ್ ಕಾರ್ಯಕರ್ತರು ಆರೋಪಿಸಿದ್ದಾರೆ.
ಗೋಡೌನ್‌ನಿಂದ ಅನುಮಾಸ್ಪದವಾಗಿ ಬಂಡಲ್‌ಗಳನ್ನು ಲಾರಿ ತುಂಬುತ್ತಿದ್ದ ವೇಳೆ ಪ್ರಶ್ನೆ ಮಾಡಿದಾಗ ಸಮರ್ಪಕ ಉತ್ತರ ಬರಲ್ಲಿಲ್ಲ. ಹಾಗಾಗಿ ಪರಿಶೀಲನೆ ಮಾಡಿದ್ದಾಗ ಸೀರೆ ದಾಸ್ತಾನು ಪತ್ತೆಯಾಗಿದೆ. ಲಾರಿ ಸೀರೆ ಬಂಡಲ್ ತುಂಬುತ್ತಿದ್ದ ವೇಳೆ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅವರ ಅಪ್ತ ಸಹಾಯಕ ವಾಸಿಮ್ ಎಂಬುವರು ಇದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು ಎಂದು ಜೆಡಿಎಸ್ ಕಾರ್ಯಕರ್ತರು ಆರೋಪ ಮಾಡಿದ್ದಾರೆ.

ನಾವು ಪರಿಶೀಲನೆ ಮಾಡಿ ಸೀರೆ ದಾಸ್ತಾನು ಪತ್ತೆ ಮಾಡಿದ ತಕ್ಷಣ ಶಾಸಕ ಇಕ್ಬಾಲ್ ಹುಸೇನ್ ಅಪ್ತ ಸಹಾಯಕ ವಾಸಿಮ್ ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳದಲ್ಲಿರುವ ಸಿ.ಸಿ ಕ್ಯಾಮರಾ ತಪಾಸಣೆ ಮಾಡಿದರೆ ಸತ್ಯಾಂಶ ಹೊರಬೀಳುತ್ತವೆ. ಅಲ್ಲದೇ ನಾವು ಬರುವ ಮುನ್ನವೇ ನಾಲ್ಕು ಲಾರಿಗಳಷ್ಟು ಸೀರೆ ಇಲ್ಲಿಂದ ಹೊರಗೆ ಸಾಗಿಸಿದ್ದಾರೆ ಎಂಬ ಮಾಹಿತಿ ಇದೆ ಎಂದು ಜೆಡಿಎಸ್ ಕಾರ್ಯಕರ್ತರು ಆರೋಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ
ಲೋಕಸಭಾ ಚುನಾವಣೆ ನೀತಿ ಸಂಹಿತೆ ವೇಳೆಯೇ ಅಕ್ರಮ ಪತ್ತೆಯಾದ ಹಿನ್ನಲೆಯಲ್ಲಿ ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ದ್ಯಾವರಸೇಗೌಡನ ದೊಡ್ಡಿ ಬಳಿಯ ಗೋಡೌನ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಕ್ರಮವಾಗಿ ದಾಸ್ತಾನು ಮಾಡಿದ್ದ ಸೀರೆ ಮೂಟೆಗಳು ಯಾರಿಗೆ ಸೇರಿದ್ದು ಎಂಬುದರ ಕುರಿತು ತನಿಖೆ ಮುಂದುವರಿದಿದೆ.
ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ
ಅಕ್ರಮ ಸೀರೆ ದಾಸ್ತಾನು ಪತ್ತೆಯಾದ ಸ್ಥಳದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಹೈಡ್ರಾಮ ನಡೆದಿದೆ. ಜೆಡಿಎಸ್ ಕಾರ್ಯಕರ್ತರು, ಕಾಂಗ್ರೆಸ್ ಶಾಸಕನ ಇಕ್ಬಾಲ್ ಹುಸೇನ್ ಆಪ್ತ ವಾಸಿಮ್ ಸ್ಥಳದಲ್ಲಿ ಇದ್ದರು ಎಂದು ಆರೋಪಿಸಿದರು. ಸೀರೆ ಕವರ್ ಮೇಲೆ ಯಾವ ಸ್ಟಿಕ್ಕರ್ ಇಲ್ಲ, ಯಾರ ಹೆಸರೂ ಇಲ್ಲ. ಕೇವಲ ಗೋಡನ್‌ನಲ್ಲಿ ಇದ್ದ ಮಾತ್ರಕ್ಕೆ ಕಾಂಗ್ರೆಸ್ ಮೇಲೆ ಆರೋಪ ಮಾಡೋದು ಸರಿಯಲ್ಲ ಎಂದು ಕಾಂಗ್ರೆಸ್ ಮುಖಂಡರು ಕಿಡಿ ಕಾರಿದರು. ಈ ವೇಳೆ ಜೆಡಿಎಸ್- ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಮನಗಂಡ ಪೊಲೀಸರು ಮಧ್ಯ ಪ್ರವೇಶಿಸಿ ಎರಡೂ ಪಕ್ಷದ ಕಾರ್ಯಕರ್ತರನ್ನು ಸ್ಥಳದಿಂದ ಹೊರಗೆ ಕಳುಹಿಸಿದರು.












Click it and Unblock the Notifications