ಬೀಗರ ಊಟಕ್ಕೆ ಹೊರಟಿದ್ದವರ ಕಾರು ಅಪಘಾತ: 3 ಸಾವು
ರಾಮನಗರ, ಆಗಸ್ಟ್ 22: ಕಾರು ಟೈರ್ ಸ್ಫೋಟಗೊಂಡು ಸಂಭವಿಸಿದ ಭೀಕರ ಅಪಘಾತದಲ್ಲಿ ಬೆಂಗಳೂರಿನ ಮೂವರು ಮೃತಪಟ್ಟು 7 ಮಂದಿ ತೀವ್ರವಾಗಿ ಗಾಯಗೊಂಡ ಘಟನೆ ಮಾಗಡಿ ತಾಲ್ಲೂಕಿನ ತಿಗಳರಪಾಳ್ಯ ಗ್ರಾಮದಲ್ಲಿ ನಡೆದಿದೆ.
ರಾಮನಗರ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಹೃದಯ ವಿದ್ರಾವಕ ಅಪಘಾತ ಸಂಭವಿಸಿದೆ. ಮೃತರನ್ನು ರಕ್ಷನ್, ಉಜ್ವಲ್ ಮತ್ತು ಹರೀಶ್ ಎಂದು ಗುರುತಿಸಲಾಗಿದ್ದು, ಮೃತರೆಲ್ಲರೂ 22 ವರ್ಷದವರಾಗಿದ್ದಾರೆ.

ಸ್ಕಾರ್ಪಿಯೋ ಕಾರಿನಲ್ಲಿ ಒಟ್ಟು 13 ಮಂದಿ ಪ್ರಯಾಣಿಸುತ್ತಿದ್ದರು. ಬೆಂಗಳೂರಿನ ಹೊಸಕೆರೆಹಳ್ಳಿ ನಿವಾಸಿಗಳಾಗಿದ್ದ ಇವರು, ಬೀಗರ ಊಟಕ್ಕಾಗಿ ನಾಗಮಂಗಲಕ್ಕೆ ತೆರಳುತ್ತಿದ್ದರು. ಇವರೆಲ್ಲರೂ ಬೆಂಗಳೂರಿನ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಗಳಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿನ ಟೈರ್ ಸ್ಫೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಗಾಯಾಳುಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.












Click it and Unblock the Notifications