ರಾಯಚೂರು; ಆರ್‌ಟಿಪಿಎಸ್ ಚಿಮಣಿ ಏರಿ ಕಾರ್ಮಿಕನಿಂದ ಆತ್ಮಹತ್ಯೆ ಬೆದರಿಕೆ
ರಾಯಚೂರು, ಅಕ್ಟೋಬರ್, 17; ಗುತ್ತಿಗೆ ಕಾರ್ಮಿಕರಿಗೆ ನ್ಯಾಯಬದ್ಧವಾಗಿ ದೊರೆಯಬೇಕಾದ ಸೌಲಭ್ಯಗಳನ್ನು ಒದಗಿಸಬೇಕು ಎಂದು ರಾಯಚೂರು ಗುತ್ತಿಗೆ ಕಾರ್ಮಿಕ ಒತ್ತಾಯಿಸಿದ್ದಾರೆ. ಸೌಲಭ್ಯಗಳನ್ನು ಒದಗಿಸುವಂತೆ ಆರ್‌ಟಿಪಿಎಸ್ ಅಧಿಕಾರಿಗಳಿಗೆ ಗುತ್ತಿಗೆ ಕಾರ್ಮಿಕ ಸುನೀಲ್ ಅಲಿಯಾಸ್ ಸೂಗಪ್ಪ ಎನ್ನುವವರು ಶಕ್ತಿನಗರದ ಚಿಮಣಿಯ 8ನೇ ಘಟಕದ ಮೇಲೆ ಏರಿ ಆತ್ಮಹತ್ಯೆಗೆ ಯತ್ನಿಸಿದ್ದರು.
ಅಲ್ಲದೇ ಆರ್‌ಟಿಪಿಎಸ್ ಚಿಮಣಿಯ 8ನೇ ಘಟಕದ ಮೇಲೆ ಏರಿ ಸೂಗಪ್ಪ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾರೆ. ಹಾಗೂ ಉಳಿದ ಕಾರ್ಮಿಕರು ಕೂಡ ವೇತನವನ್ನು ನೀಡುವಂತೆ ಪ್ರತಿಭಟನೆ ನಡೆಸಿದ್ದಾರೆ. ಬೆಳಗ್ಗೆ 9 ಗಂಟೆಗೆ ಕಾರ್ಮಿಕ ಚಿಮಣಿ ಮೇಲೆ ಏರಿ ವೇತನ ಹಾಗೂ ಸಂಬಳ ಹೆಚ್ಚಳಕ್ಕೆ ಆಗ್ರಹಿಸಿದ್ದಾರೆ. ಬೇಡಿಕೆ ಈಡೇರಿಸುವವರೆಗೂ ಕೆಳಗೆ ಇಳಿಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಬೇಡಿಕೆ ಈಡೇರಿಸಲು ವಿಫಲವಾದಲ್ಲಿ ಆತ್ಮಹತ್ಯೆ ಮಾಡಿಕೊಳ್ಳವುದಾಗಿ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ.
ರಾಯಚೂರು: ಮೂಳೆ ಮುರಿತಕ್ಕೆ ಉಚಿತ ಚಿಕಿತ್ಸೆ ನೀಡುವ ನಾಟಿ ವೈದ್ಯ
ಚಿಮಣಿ ಏರುವ ಮೊದಲು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಸೂಗಪ್ಪ ಎಂಟು ನಿಮಿಷದ ವಿಡಿಯೋವನ್ನು ಹರಿಬಿಟ್ಟಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಉಳಿದ ಕಾರ್ಮಿಕರು ಮತ್ತು ಅಧಿಕಾರಿಗಳು ಚಿಮಣಿ ಕೆಳಭಾಗದಲ್ಲಿ ನೆರೆದಿದ್ದರು. ಅಲ್ಲಿದ್ದ ಅಧಿಕಾರಿಗಳು ಚಿಮಣಿ ಮೇಲೆ ಹತ್ತಿದ್ದ ಕಾರ್ಮಿಕನ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಆರ್‌ಟಿಪಿಎಸ್ ನಿರ್ಮಾಣಕ್ಕೆ ಭೂಮಿ ನೀಡಿದವರನ್ನು ಗುತ್ತಿಗೆ ಆಧಾರದ ಮೇಲೆ ಕಾರ್ಮಿಕರನ್ನು ನೇಮಿಸಿಕೊಂಡಿದ್ದಾರೆ. ಆದರೆ ಸರಿಯಾದ ಸಮಯಕ್ಕೆ ವೇತನವನ್ನು ಕೊಡುತ್ತಿಲ್ಲ ಎಂದು ವಿಡಿಯೋದಲ್ಲಿ ಸುನೀಲ್ ಅಳಲು ತೋಡಿಕೊಂಡಿದ್ದಾರೆ. ಅಧಿಕಾರಿಗಳು ಸರಿಯಾಗಿ ಸ್ಪಂದಿಸಬೇಕು. ಆರ್‌ಟಿಪಿಎಸ್ ವಿದ್ಯುತ್ ಸ್ಥಾವರದಲ್ಲಿ ಕೆಲಸ ಮಾಡುವವರು ಎಲ್ಲ ಒಂದು ಕುಟುಂಬದ ಸದಸ್ಯರಿದ್ದಂತೆ. ಮನೆಯಲ್ಲಿ ಸಿಹಿ ಮಾಡಿದಾಗ ಎಲ್ಲರೂ ಹಂಚಿಕೊಂಡು ತಿನ್ನುತ್ತಾರೆ. ಆರ್‌ಟಿಪಿಎಸ್‌ನಲ್ಲಿ ಅಧಿಕಾರಿಗಳು ಗುತ್ತಿಗೆ ಕಾರ್ಮಿಕರಿಗೆ ನ್ಯಾಯಬದ್ಧವಾಗಿ ವೇತನ ನೀಡಬೇಕು ಎಂದು ಗೋಳು ತೋಡಿಕೊಂಡಿದ್ದಾರೆ.
COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ SAHAIHELPLINE@GMAIL.COM
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ ಸ್ನೇಹಾ ಫೌಂಡೇಷನ್ ಸಹಾಯವಾಣಿ ಇಂತಿದೆ: 04424640050, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ 02225521111ಗೆ ಕರೆ ಮಾಡಬಹುದು.

ಮಿಲ್ ನಿರ್ವಹಣೆಯಲ್ಲಿ ನಮ್ಮ ಶ್ರಮ
ಮಿಲ್ ನಿರ್ವಹಣೆ ವಿಭಾಗದಲ್ಲಿ ಪ್ರತಿಯೊಂದನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದೇವೆ. ಆದರೆ ಕೆಪಿಸಿಎಲ್ ಅಧಿಕಾರಿಗಳು ಈ ಕೆಲಸಗಳನ್ನು ಬೇರೆಯವರಿಗೆ ಗುತ್ತಿಗೆ ಕೊಟ್ಟು ತಿರುಗಿಯೂ ನೋಡುವುದಿಲ್ಲ. ಗುತ್ತಿಗೆದಾರ ಕಂಪೆನಿಗಳು ಸೌಲಭ್ಯ ಕೊಡದೆ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಿವೆ ಎಂದು ಮುಖ್ಯ ದ್ವಾರದ ಮುಂದೆ ಗುತ್ತಿಗೆ ಕಾರ್ಮಿಕರು ಮತ್ತು ಇತರೆ ಕಾರ್ಮಿಕರ ಸಂಬಂಧಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ವಿಷಯ ತಿಳಿದ ಅಧಿಕಾರಿಗಳು ಮತ್ತು ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಮಲ್ಲಪ್ಪ ಧಣಿ ನೇತೃತ್ವದಲ್ಲಿ ಸಭೆ ನಡೆಸಿದ್ದಾರೆ. ವೇತನದಲ್ಲಿ ಗುತ್ತಿಗೆ ಕಾರ್ಮಿಕರಿಗೂ ಸಂಬಳ ಹೆಚ್ಚಳ ಸೇರಿದಂತೆ ನ್ಯಾಯಬದ್ಧವಾಗಿ ದೊರೆಯಬೇಕಾದ ಸೌಲಭ್ಯಗಳನ್ನು ಈಡೇರಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

2 ವರ್ಷಗಳಿಂದ ಸಂಬಳವನ್ನು ಹೆಚ್ಚಳ ಇಲ್ಲ
ಭವಾನಿ ಎಲೆಕ್ಟ್ರಿಕ್ ಕಂಪನಿಯೂ ಕಾರ್ಮಿಕರ ಟೆಂಡರ್ ಪಡೆದುಕೊಂಡಿದೆ. ಆದರೆ 2 ವರ್ಷಗಳಿಂದ ಸಂಬಳವನ್ನು ಹೆಚ್ಚಳ ಮಾಡಿಲ್ಲ. ಹಾಗೂ ಒಂದು ತಿಂಗಳಿನಿಂದ ವೇತನವಿಲ್ಲ. ಜೀವನ ನಿರ್ವಹಿಸುವುದಾದರೂ ಹೇಗೆ ಎನ್ನುವುದು ಕಾರ್ಮಿಕನ ಪ್ರಶ್ನೆ ಆಗಿದೆ. ಕನಿಷ್ಟ ವೇತನವಿಲ್ಲದೆ ಕುಟುಂಬ ನಿರ್ವಹಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಕಾರ್ಮಿಕರು ಕಾಲ ಕಳೆಯುವಂತಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ವೇತನ ಹೆಚ್ಚಳ ಮಾಡುವ ಬಗ್ಗೆ ಕೆಪಿಸಿಯ ವ್ಯವಸ್ಥಾಪಕ ನಿರ್ದೇಶಕರು ಗಮನಹರಿಸಬೇಕು. ಇಲ್ಲದಿದ್ದರೆ ಇಲ್ಲಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದ್ದಾನೆ.

ಕಾರ್ಮಿಕನನ್ನು ಕೆಳಗಿಳಿಸಲು ಹರಸಾಹಸ
ಕಾರ್ಮಿಕನನ್ನು ಕೆಳಗೆ ಕರೆತರುವ ಪ್ರಯತ್ನಗಳು ನಡೆದಿವೆ. ಆದರೂ ಮಧ್ಯಾಹ್ನದವರೆಗೂ ಕಾರ್ಮಿಕ ಕೆಳಗೆ ಬಂದಿರಲಿಲ್ಲ. ಸುಮಾರು 50 ಅಡಿಗೂ ಅಧಿಕ ಎತ್ತರದಲ್ಲಿ ಕುಳಿತಿರುವ ಸುನೀಲ್‌ನನ್ನು ಕರೆತರುವುದು ಮತ್ತು ಮತ್ತೊಂದೆಡೆ ಉದ್ರಿಕ್ತಗೊಂಡಿದ್ದ ಕಾರ್ಮಿಕರನ್ನು ನಿಯಂತ್ರಿಸುವುದು ಆರ್‌ಟಿಪಿಎಸ್ ಅಧಿಕಾರಿಗಳಿಗೆ ಸವಾಲಾಗಿತ್ತು. ಆತ್ಮಹತ್ಯೆಗೆ ಯತ್ನಿಸಿದ್ದ ಕಾರ್ಮಿಕನನ್ನು ಕೊನೆಗೂ ಮನವೊಲಿಸಿ ಮಧ್ಯಾಹ್ನ 2:30ರ ವೇಳೆಗೆ ಕೆಳಗೆ ಇಳಿಸಲಾಗಿದೆ.

ತಿಂಗಳ ಸಂಬಳ ಪಾವತಿ ಭರವಸೆ
ಕಾರ್ಮಿಕರ ಪ್ರಸ್ತುತ ಚಾಲ್ತಿಯಲ್ಲಿರುವ ಸಮಸ್ಯೆಗಳನ್ನು ಮತ್ತು ತಿಂಗಳ ಸಂಬಳ ಸೂಕ್ತವಾಗಿ ಪಾವತಿಸಲಾಗುವುದು. ಇದೇ ತಿಂಗಳು 27ರಂದು ಸಭೆ ನಡೆಸಿ ಕಾರ್ಮಿಕರ ಹಿತ ಚಿಂತನೆಯ ಸಭೆಯ ನಡಾವಳಿಗಳನ್ನು ಹೊರಡಿಸಲಾಗುವುದು ಎಂದು ಲಿಖಿತ ಹೇಳಿಕೆ ಮೂಲಕ ಆರ್‌ಟಿಪಿಎಸ್ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಸಿ.ಎಂ.ದಿವಾಕರ್ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಅಧಿಕಾರಿಗಳು ಮತ್ತು ಕಾರ್ಮಿಕ ಮುಖಂಡರು ಮನವೊಲಿಸಿದ್ದರಿಂದ ಕಾರ್ಮಿಕ ಸೂಗಪ್ಪ ಸುರಕ್ಷಿತವಾಗಿ ಕೆಳಗೆ ಬಂದಿದ್ದಾರೆ ಎನ್ನಲಾಗಿದೆ.