Valentines Day 2023: ರಾಯಚೂರಿನಲ್ಲಿ ಗುಲಾಬಿ ಬಲು ದುಬಾರಿ
ಫೆಬ್ರವರಿ ತಿಂಗಳಲ್ಲಿ ಗುಲಾಬಿಗೆ ಎಲ್ಲಿಲ್ಲದ ಬೇಡಿಕೆ ಆರಂಭವಾಗುತ್ತದೆ. ಪ್ರೇಮಿಗಳ ದಿನದಂದು ವ್ಯಾಪಾರಿಗಳ ನಿರೀಕ್ಷೆಗೂ ಮೀರಿ ಗುಲಾಬಿ ಮಾರಾಟವಾಗುತ್ತವೆ. ಅದಕ್ಕಾಗಿಯೇ ರಾಯಚೂರು ನಗರದೆಲ್ಲೆಡೆ ಗುಲಾಬಿ ಹೂವುಗಳ ಮಾರಾಟದ ಅಬ್ಬರ ಜೋರಾಗಿದೆ. ಈ ಬಗ್ಗೆ ಇಲ್ಲಿದೆ ಮಾಹಿತಿ
ರಾಯಚೂರು, ಫೆಬ್ರವರಿ 14: ಫೆಬ್ರವರಿ 14, ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ ಪ್ರೀತಿಯ ಸಂಕೇತವಾದ ಗುಲಾಬಿಯ ಬೆಲೆ ರಾಯಚೂರು ನಗರದಲ್ಲಿ ತುಸು ಏರಿಕೆ ಆಗಿದೆ. ಸಾಮಾನ್ಯ ದಿನಗಳಲ್ಲಿ 3 ರಿಂದ 5 ರೂಪಾಯಿ ರವರೆಗೆ ಮಾರಾಟವಾಗುತ್ತಿದ್ದ ಗುಲಾಬಿ ದರ ಮಂಗಳವಾರ 15 ರಿಂದ 20 ರೂಪಾಯಿಗೆ ದಿಢೀರನೆ ಏರಿಕೆಯಾಗಿದೆ.
ಫೆಬ್ರವರಿ ತಿಂಗಳಲ್ಲಿ ಗುಲಾಬಿಗೆ ಎಲ್ಲಿಲ್ಲದ ಬೇಡಿಕೆ ಆರಂಭವಾಗುತ್ತದೆ. ಪ್ರೇಮಿಗಳ ದಿನದಂದು ವ್ಯಾಪಾರಿಗಳ ನಿರೀಕ್ಷೆಗೂ ಮೀರಿ ಗುಲಾಬಿ ಮಾರಾಟವಾಗುತ್ತವೆ. ಅದಕ್ಕಾಗಿಯೇ ರಾಯಚೂರು ನಗರದೆಲ್ಲೆಡೆ ಗುಲಾಬಿ ಹೂವುಗಳ ಮಾರಾಟದ ಅಬ್ಬರ ಜೋರಾಗಿದೆ. ಈ ಬಾರಿ ಗುಲಾಬಿ ಸ್ವಲ್ಪ ದುಬಾರಿಯಾಗಿದೆ. ಪ್ರೇಮಿಗಳಿಗೆ ಕೊಂಚ ಬಿಸಿಯಾದರೂ ವ್ಯಾಪಾರಕ್ಕೆ ಧಕ್ಕೆಯಾಗುವುದಿಲ್ಲ ಎಂಬ ವಿಶ್ವಾಸ ವ್ಯಾಪರಿಗಳಲ್ಲಿದೆ. ಬೆಲೆ ಏರಿಕೆ ಪ್ರೇಮಿಗಳಲ್ಲಿ ಸ್ವಲ್ಪ ನಿರಾಸೆ ಉಂಟು ಮಾಡಿದೆ. ಆದರೆ ಪ್ರೀತಿಗೆ ಅಷ್ಟೊಂದು ಬೆಲೆ ಕೊಡುವಾಗ ಪ್ರೀತಿಯ ಸಂಕೇತವಾದ ಗುಲಾಬಿಗೆ ಎಷ್ಟು ಬೆಲೆ ಕೊಟ್ಟರೂ ಕಡಿಮೆಯೇ ಎನ್ನುವುದು ಯುವ ಪ್ರೇಮಿಗಳ ಅಭಿಪ್ರಾಯವಾಗಿದೆ.
ಹೀಗಾಗಿ ಪ್ರೇಮಿಗಳ ದಿನದಂದು ಗುಲಾಬಿ ಬೆಲೆ ದುಪ್ಪಟ್ಟು ಇರುತ್ತದೆ. ಫೆಬ್ರವರಿ 14ರಂದು ಒಂದು ಗುಲಾಬಿ ಹೂವು 20 ರಿಂದ 30 ರೂಪಾಯಿರವರೆಗೆ ಮಾರಾಟವಾಗುವ ಸಾಧ್ಯತೆ ಇದೆ. ಪ್ರೇಮಿಗಳ ದಿನ ಗುಲಾಬಿಯ ಖರೀದಿ ಹೆಚ್ಚಿರುತ್ತದೆ. ದರ ಹೆಚ್ಚಿದ್ದರೂ ಕೂಡ ಪ್ರೇಮಿಗಳು ಪ್ರೀತಿಯ ನಿವೇದನೆಗೆ ಅನಿವಾರ್ಯವಾಗಿ ಖರೀದಿಸುತ್ತಾರೆ. ಅದರಲ್ಲೂ ಕಾಲೇಜು ವಿದ್ಯಾರ್ಥಿಗಳೇ ಹೆಚ್ಚಾಗಿ ಅವುಗಳನ್ನು ಕೊಂಡೊಯ್ಯುತ್ತಾರೆ ಎಂದು ರಾಯಚೂರಿನ ಹೂವಿನ ವ್ಯಾಪಾರಿ ಮೌಲಾಲಿ ಹೇಳಿದ್ದಾರೆ.

'ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಗುಲಾಬಿ ಕೇವಲ ಅದರ ಸಂಕೇರವಷ್ಟೇ. ದುಬಾರಿಯಾದರೂ ಒಂದು ದಿನದ ಮಟ್ಟಿಗೆ ಪ್ರೇಯಸಿಗಾಗಿ ಖರೀದಿಸಿದರೆ ತಪ್ಪೇನಿಲ್ಲ ಬಿಡಿ. ಪ್ರೀತಿಯಿಂದ ಹೂ ನೀಡುವುದರಲ್ಲಿಯೇ ತುಂಬಾ ಖುಷಿ ಸಿಗುತ್ತದೆ. ಹೂವಿನ ಮೂಲಕ ಪ್ರೀತಿ ವ್ಯಕ್ತಪಡಿಸುವುದು ಚೆಂದ' ಎಂದು ನವ ವಿವಾಹಿತ ರಾಯಚೂರಿನ ನಿವಾಸಿ ಶಿವರಾಜ್ ಖುಷಿ ವ್ಯಕ್ತಪಡಿಸಿದ್ದಾರೆ.
ಪ್ರೇಮಿಗಳ ದಿನದಂದು ಗುಲಾಬಿ ಮಾಲೆಯ ದರದಲ್ಲಿ ಅಷ್ಟೇನು ಏರಿಕೆಯಾಗುವುದಿಲ್ಲ. ಆದರೆ ಬಿಡಿ ಹೂವು ಮಾರುವ ವ್ಯಾಪಾರಿಗಳು ಮಾತ್ರ ದುಬಾರಿ ದರದಲ್ಲಿ ಹೂವನ್ನು ಮಾರುತ್ತಾರೆ ಎಂದು ಜಿಲ್ಲೆಯ ಕೆಲ ಹೂವಿನ ವ್ಯಾಪಾರಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications