ರಾಯಚೂರಿನಲ್ಲಿ ವರ್ಗಾವಣೆಗೆ ಕಾಯುತ್ತಿರುವ ಶಿಕ್ಷಕರು!
ರಾಯಚೂರು, ಜು.12: ಒಂದೇ ಕಡೆ ಹತ್ತು ವರ್ಷ ಸೇವೆ ಸಲ್ಲಿಸಿದರೂ ಶಿಕ್ಷಕರ ಕೊರತೆ ನೆಪಯೊಡ್ಡಿ ಶಿಕ್ಷಣ ಇಲಾಖೆಯೂ ವರ್ಗಾವಣೆ ಭಾಗ್ಯ ನೀಡದ ಪರಿಣಾಮ ಮೂಲ ಜಿಲ್ಲೆಗೆ ವರ್ಗಾವಣೆ ಕೋರಿದ ಶಿಕ್ಷಕ ಸಮೂಹ ಕಣ್ಣೀರು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ದೂರದ ದಾವಣೆಗೆರೆ, ಧಾರವಾಡ ಸೇರಿ ನಾನಾ ಜಿಲ್ಲೆಗಳ ಶಿಕ್ಷಕರು ರಾಯಚೂರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ವಿವಾಹಿತರು 3 ವರ್ಷ ಹಾಗೂ ಅವಿವಾಹಿತರು 5 ವರ್ಷ ಒಂದೇ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ ನಂತರ ಸ್ವಂತ ಜಿಲ್ಲೆಗೆ ವರ್ಗಾವಣೆಗೊಳ್ಳಲು ಅವಕಾಶ ಇತ್ತು.
ಆದರೆ 15 ವರ್ಷಗಳಿಂದ ಒಂದೇ ಕಡೆ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಸಂಕಟ ಕೇಳೋರಿಲ್ಲದಂತಾಗಿದೆ. ಶಿಕ್ಷಣ ಇಲಾಖೆ ಈಗ ವರ್ಗಾವಣೆ ನಿಯಮಗಳಲ್ಲಿ ಬದಲಾವಣೆ ತಂದಿರುವುದರಿಂದ ಸಮಸ್ಯೆ ಉಂಟಾಗಿದೆ.
ಬೇರೆ ಜಿಲ್ಲೆಯ ಅಂದಾಜು 1500 ಶಿಕ್ಷಕರು ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದು, ಪ್ರತಿ ತಾಲೂಕಿನಲ್ಲಿ 200 ಜನರಂತೆ ಅಂದಾಜು 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕ್ಷಕ ವೃತ್ತಿಯನ್ನೇ ನಂಬಿಕೊಂಡು ಬಂದ ಶಿಕ್ಷಕರು ನಿತ್ಯ ಸಮಸ್ಯೆಗಳಲ್ಲೇ ಜೀವನ ಕಳೆಯುತ್ತಿದ್ದು, ತಂದೆ ಹಾಗೂ ತಾಯಿ ಬೇರೆ ಬೇರೆ ಊರಲ್ಲಿ ಇರುವುದರಿಂದ ಗೊಂದಲಗೊಂಡಿದ್ದಾರೆ. ಮಕ್ಕಳು , ಕುಟುಂಬಸ್ಥರನ್ನು ಭೇಟಿಯಾಗದಿರುವ ಆತಂಕದಲ್ಲೇ ಕಾಲ ಕಳೆಯುತ್ತಿದ್ದಾರೆ. ಇದರಿಂದ ಕುಟುಂಬದಲ್ಲಿ ಒಡಕು ಮೂಡಿ ಬೇರೆಯಾಗುವ ಪರಿಸ್ಥಿತಿ ಎದುರಾಗಿದೆ.

ಬೇಸರದಿಂದ ಶಿಕ್ಷಕಿಯರ ಕಣ್ಣೀರು
ನಮ್ಮ ನೌಕರಿಯಿಂದ ನಮ್ಮ ಕುಟುಂಬದವರಿಗೆ ಉಪಯೋಗವಾಗುತ್ತಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೆ ಗಮನ ನೀಡುತ್ತಿಲ್ಲ. ಅಲ್ಲದೆ ಅತ್ತೆ, ಮಾವ ಅವರಿಗೆ ಒಳ್ಳೆ ಸೊಸೆಯಾಗಲಿಲ್ಲ ಎಂದು ಬೇಸರದಿಂದ ಶಿಕ್ಷಕಿಯರು ಕಣ್ಣೀರು ಹಾಕುವಂತಾಗಿದೆ.
ನಮ್ಮ ಕುಟುಂಬದಲ್ಲಿ ಒಡಕು ಮೂಡಿದೆ ಎಂದು ಶಿಕ್ಷಕಿಯರು ವರ್ಗಾವಣೆ ಮಾಡದ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಪತಿ , ಮಕ್ಕಳು ಒಂದು ಕಡೆ, ಪತ್ನಿ ಮತ್ತೊಂದು ಕಡೆ ಕೆಲಸ ಮಾಡುತ್ತಾರೆ. ಸೂಕ್ತ ಸಮಯಕ್ಕೆ ವರ್ಗಾವಣೆ ಆಗದ ಹಿನ್ನೆಲೆ ಹಲವು ಶಿಕ್ಷಕರ ದಾಂಪತ್ಯ ಜೀವನದಲ್ಲಿ ಒಡಕು ಮಾಡಿ, ವಿಚ್ಚೇದನ ಘಟನೆಗಳ ಜಿಲ್ಲೆಯಲ್ಲಿ ನಡೆಯುತ್ತಿದೆ.
ಈಚೆಗೆ ಜಿಲ್ಲೆಗೆ ಆಗಮಿಸಿದ ಶಿಕ್ಷಣ ಸಚಿವರಿಗೆ ಪುಟಾಣಿ ಮಗು ಮಿನಿಸ್ಟರ್ ಅಂಕಲ್, ನಾನು ನನ್ನ ತಂದೆ, ಅಕ್ಕ ಫ್ಯಾಮಿಲಿ ಜತೆಗೆ ಇರಬೇಕು. ದಯವಿಟ್ಟು ನಮ್ಮ ಅಮ್ಮನನ್ನು ಬೇಗ ವರ್ಗಾವಣೆ ಮಾಡಿ ಕೊಡಿ ಎಂದು ಮನವಿ ಮಾಡಿದ ಘಟನೆ ನಡೆದಿತ್ತು. ಶಿಕ್ಷಕರು ಕಣ್ಣೀರು ಹಾಕುತ್ತಲೇ ಸಚಿವರಿಗೆ ಮನವಿ ಮಾಡಿದ ಘಟನೆಗಳು ಜರುಗಿವೆ.

ಇಂಗ್ಲಿಷ್ ಶಿಕ್ಷಕರ ಕೊರತೆ
ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಹಂತದಿಂದಲೇ ಆಂಗ್ಲ ಮಾಧ್ಯಮ ಶಿಕ್ಷಣ ಪ್ರಾರಂಭಿಸುವ ಉದ್ದೇಶದಿಂದ 2019ರಲ್ಲಿ ಜಿಲ್ಲೆಯ ಸುಮಾರು 30 ಶಾಲೆಗಳಲ್ಲಿ ಮೊದಲ ಹಂತದಲ್ಲಿ 1ನೇ ತರಗತಿಯಿಂದ ಇಂಗ್ಲೀಷ್ ಮಾಧ್ಯಮ ಶಿಕ್ಷಣ ಆರಂಭಿಸಲಾಗಿದೆ. ಆದರೆ, ಇಂಗ್ಲೀಷ್ ಶಿಕ್ಷಕರ ಕೊರತೆಯಿಂದ ಮಕ್ಕಳ ಕಲಿಕೆ ಶೂನ್ಯವಾಗಿದೆ ಎಂಬ ಆಪಾದನೆ ಕೇಳಿ ಬಂದಿದ್ದು, ಇದರಿಂದ ಜಿಲ್ಲೆಯ ಯಾವುದೇ ಶಾಲೆಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಪ್ರಾರಂಭಿಸದೇ ಇರುವುದು ಶೋಚನೀಯ ಸಂಗತಿಯಾಗಿದೆ.

ಮಕ್ಕಳಿಗೆ ಬೋಧನೆ ಮಾಡುವುದು ಕಷ್ಟ
ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ ವಿಭಾಗ ಯಾಕಾದರೂ ಆರಂಭಿಸಿದ್ದಾರೆ ಎನ್ನುವ ಸಂಕಷ್ಟ ಶಿಕ್ಷಕರಿಗೆ ಎದುರಾಗಿದೆ. ಅತ್ತ ಕನ್ನಡ ಮಾಧ್ಯಮ ಮಕ್ಕಳಿಗೆ, ಇತ್ತ ಆಂಗ್ಲ ಮಾಧ್ಯಮ ಮಕ್ಕಳಿಗೆ ಬೋಧನೆ ಮಾಡುವುದು ಕಷ್ಟದ ಕೆಲಸವಾಗಿದ್ದು, ಶಿಕ್ಷಕರು ಇಲಾಖೆ ಮತ್ತು ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಿರುವುದು ಒಳ್ಳೆಯ ಯೋಜನೆ. ಆದರೆ ಯೋಜನೆ ಜಾರಿಗೆ ತಂದ ಬಳಿಕ ಜಿಲ್ಲೆಯ ಕೆಲ ಶಾಲೆಗಳಲ್ಲಿ ಇಂಗ್ಲೀಷ್ ಬೋಧಿಸುವ ಕಾಯಂ ಶಿಕ್ಷಕರೇ ಇಲ್ಲ. ಅತಿಥಿ ಶಿಕ್ಷಕರೇ ಆಧಾರವಾಗಿದ್ದು, ಸಮರ್ಪಕ ಕೊಠಡಿಗಳಿಲ್ಲ. ತರಗತಿಗೊಬ್ಬ ಶಿಕ್ಷಕರಿಲ್ಲ. ಒಬ್ಬರೇ ಸದ್ಯ 1ನೇ ತರಗತಿಯಿಂದ 4ನೇ ತರಗತಿಯವರೆಗೆ ಎಲ್ಲ ವಿಷಯ ಬೋಧಿಸುವಂತಾಗಿದೆ.

ನಿಯಮಗಳಿಂದ ವರ್ಗಾವಣೆಗೆ ತೊಂದರೆ
ದಂಪತಿ ಪ್ರಕರಣದ ಸಮಸ್ಯೆ ಒಂದೆಡೆಯಾದರೆ ಮತ್ತೊಂದೆಡೆ ವೃದ್ಧ ತಂದೆ ತಾಯಿ ಅನಾರೋಗ್ಯವಿರುವ ಶಿಕ್ಷಕರದ್ದು ಮತ್ತೊಂದು ಸಮಸ್ಯೆ. ಅಲ್ಲದೇ ಸುಮಾರು ವರ್ಷಗಳಿಂದ ಕುಟುಂಬಗಳಿಂದ ದೂರವಿದ್ದು 15-20 ವರ್ಷ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರಾಗಿ ಸಏವೆ ಸಲ್ಲಿಸುತ್ತಿದ್ದೇವೆ. ಈಗಿರುವ ಶಿಕ್ಷಕರ ವರ್ಗಾವಣೆ ಕಾಯಿದೆಯ ಕೆಲ ನಿಯಮಗಳಿಂದ ವರ್ಗಾವಣೆ ಹೊಂದಲು ತೊಂದರೆಯಾಗುತ್ತಿದ್ದು, ಜತೆಗೆ ಶೇಕಡಾ 25 ಖಾಲಿ ಹುದ್ದೆಯ ಕಾರಣಗಳು ವರ್ಗಾವಣೆ ಹೊಂದಲು ಅಡ್ಡಿಯಾಗಿದೆ. ಒಂದು ಸಲ ಸ್ವಂತ ಜಿಲ್ಲೆಗೆ ವರ್ಗಾವಣೆ ಅವಕಾಶ ಹೊಂದಲು ಅಥವಾ ಶೇಕಡಾ 25ರಷ್ಟು ಮಿತಿ ಸಡಿಲ ಮಾಡಲು ಶಿಕ್ಷಣ ಸಚಿವರು ಮತ್ತು ಸರ್ಕಾರಕ್ಕೆ ಒತ್ತಾಯಿಸುತ್ತೇವೆ ಎಂದು ರಾಯಚೂರು ಜಿಲ್ಲೆ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಬಿರಾದಾರ ಹೇಳಿದ್ದಾರೆ.












Click it and Unblock the Notifications