SSLC Results 2026: ರಾಜ್ಯಕ್ಕೆ ಪ್ರಥಮ ಸ್ಥಾನ ಬಂದ ಬೆಳಗಾವಿಯ ಸರ್ಕಾರಿ ಶಾಲೆ ವಿದ್ಯಾರ್ಥಿನಿ ಪ್ರಾರ್ಥನಾ ಪಾಟೀಲ್

ಬೆಳಗಾವಿ: ಪ್ರಸಕ್ತ ಸಾಲಿನ ಕರ್ನಾಟಕ ಎಸ್ಎಸ್ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಟಿಗೇರಿ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಪ್ರಾರ್ಥನಾ ಪಾಟೀಲ್ 625ಕ್ಕೆ 625 ಅಂಕಗಳನ್ನು ಪಡೆದು ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಗ್ರಾಮೀಣ ಭಾಗದ, ಅದರಲ್ಲೂ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಈ ಸಾಧನೆ ಮಾಡಿರುವುದು ಇಡೀ ಜಿಲ್ಲೆಗೆ ಮತ್ತು ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ. ಈ ಮೂಲಕ ಸರ್ಕಾರಿ ಶಾಲೆ ಮಕ್ಕಳಿಗೇನು ಕಡಿಮೆ ಇಲ್ಲ ಎಂಬುದನ್ನು ಪ್ರಾರ್ಥನಾ ಸಾಬೀತು ಮಾಡಿದ್ದಾಳೆ.

ಸಾಧಕಿಯ ಹಿನ್ನೆಲೆ

ಪ್ರಾರ್ಥನಾ ಪಾಟೀಲ್ ಅವರ ತಂದೆ ತಾನು ಓದುತ್ತಿರುವ ಕಟಿಗೇರಿ ಸರ್ಕಾರಿ ಶಾಲೆಯಲ್ಲೇ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಾಯಿ ಗೃಹಿಣಿಯಾಗಿದ್ದಾರೆ. ಯಾವುದೇ ದುಬಾರಿ ಟ್ಯೂಷನ್ ಅಥವಾ ಕೋಚಿಂಗ್ ಕ್ಲಾಸ್ ಮೊರೆ ಹೋಗದೆ, ಶಾಲೆಯಲ್ಲಿ ಶಿಕ್ಷಕರು ಮಾಡುವ ಪಾಠವನ್ನು ಶ್ರದ್ಧೆಯಿಂದ ಕೇಳಿ ಈ ಸಾಧನೆ ಮಾಡಿದ್ದೇನೆ ಎಂದು ಪ್ರಾರ್ಥನಾ ಸಂತಸ ಹಂಚಿಕೊಂಡಿದ್ದಾಳೆ. ಶಾಲೆಯ ಶಿಕ್ಷಕರ ಮಾರ್ಗದರ್ಶನ ಹಾಗೂ ಪೋಷಕರ ನಿರಂತರ ಬೆಂಬಲ ತನ್ನ ಯಶಸ್ಸಿಗೆ ಕಾರಣ ಎಂದು ಆಕೆ ಹೇಳುತ್ತಾಳೆ.

SSLC Results

ತನ್ನ ಯಶಸ್ಸಿನ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿರುವ ಪ್ರಾರ್ಥನಾ, "ಕಠಿಣ ಪರಿಶ್ರಮದ ಜೊತೆಗೆ ಸ್ಮಾರ್ಟ್ ವರ್ಕ್ ಕೂಡ ಬಹಳ ಮುಖ್ಯ. ತರಗತಿಯಲ್ಲಿ ಶಿಕ್ಷಕರು ಪಾಠ ಮಾಡುವಾಗ ಸಂಪೂರ್ಣ ಏಕಾಗ್ರತೆಯಿಂದ ಕೇಳಬೇಕು. ಶೇ.80ರಷ್ಟು ಪಾಠ ಅಲ್ಲಿಯೇ ಅರ್ಥವಾಗುತ್ತದೆ. ಮನೆಗೆ ಬಂದ ನಂತರ ಅಂದೇ ಆ ಪಾಠವನ್ನು ರಿವಿಷನ್ ಮಾಡಬೇಕು. ಇದರಿಂದ ವಿಷಯ ಮನದಟ್ಟಾಗುತ್ತದೆ" ಎನ್ನುತ್ತಾರೆ. ಪ್ರತಿದಿನದ ಓದಿನ ಜೊತೆಗೆ, ವಾರಕ್ಕೊಮ್ಮೆ ಇಡೀ ವಾರದ ಪಾಠಗಳನ್ನು ರಿವಿಷನ್ ಮಾಡುತ್ತಿದ್ದದ್ದಾಗಿ ಆಕೆ ಹೇಳಿದ್ದಾಳೆ.

ಎಲ್ಲಾ ವಿಷಯಗಳಿಗೂ ಒಂದೇ ರೀತಿಯ ಓದಿನ ಶೈಲಿ ಹೊಂದುವುದಿಲ್ಲ. ಉದಾಹರಣೆಗೆ, ಗಣಿತವನ್ನು ಕೇವಲ ಓದುವಂತಿಲ್ಲ, ಅದನ್ನು ಬಿಡಿಸಿ ಕಲಿಯಬೇಕು. ಯಾವ ವಿಷಯ ಕಷ್ಟ, ಯಾವುದು ಸುಲಭ ಎಂಬ ತಾರತಮ್ಯ ಮಾಡದೆ ಎಲ್ಲಾ ಭಾಷೆಗಳಿಗೂ ಮತ್ತು ವಿಷಯಗಳಿಗೂ ಸಮಾನ ಆದ್ಯತೆ ನೀಡುವುದು ಬಹುಮುಖ್ಯ ಎನ್ನುತ್ತಾಳೆ ಪ್ರಾರ್ಥನಾ. ಪರೀಕ್ಷಾ ಮಂಡಳಿ ನೀಡಿದ್ದ ಮಾದರಿ ಪ್ರಶ್ನೆಪತ್ರಿಕೆಗಳು ಹಾಗೂ ಮೂರು ಪೂರ್ವ ಸಿದ್ಧತಾ ಪರೀಕ್ಷೆಗಳು ಪರೀಕ್ಷೆಯ ಮಾದರಿಯನ್ನು ಅರ್ಥಮಾಡಿಕೊಳ್ಳಲು ಬಹಳ ಸಹಾಯ ಮಾಡಿದವು ಎಂದು ಪ್ರಾರ್ಥನಾ ತಿಳಿಸಿದ್ದಾಳೆ. ಇವೆಲ್ಲದರ ಜೊತೆಗೆ ಮನೆಯಲ್ಲಿ ತಾಯಿಗೆ ಸಹಾಯ ಮಾಡುವುದು, ಹಾಡುಗಾರಿಕೆ, ಸಿನಿಮಾ ನೋಡುವುದು ಹಾಗೂ ಇತರ ಹವ್ಯಾಸಗಳಿಗೂ ಆಕೆ ಸಾಕಷ್ಟು ಸಮಯ ಮೀಸಲಿಡುತ್ತಿದ್ದಳು.

"ಸರ್ಕಾರಿ ಶಾಲೆಗಳು ಇಂದು ಬಹಳ ಅಭಿವೃದ್ಧಿ ಹೊಂದುತ್ತಿವೆ. ಕಲಿಯುವ ಮನಸ್ಸು ವಿದ್ಯಾರ್ಥಿಯಲ್ಲಿದ್ದರೆ, ಎಲ್ಲೇ ಇದ್ದರೂ ಸಾಧನೆ ಮಾಡಬಹುದು. ಕೇವಲ ಕಾನ್ವೆಂಟ್ ಅಥವಾ ಖಾಸಗಿ ಶಾಲೆಗೆ ಹೋದರಷ್ಟೇ ಸಾಧನೆ ಸಾಧ್ಯ ಎಂಬ ಭ್ರಮೆಯನ್ನು ಬಿಡಬೇಕು" ಎಂಬುದು ಪ್ರಾರ್ಥನಾ ಮಾತು.

ಮುಂದಿನ ಗುರಿ

ಎಸ್ಎಸ್ಎಲ್‌ಸಿ ಟಾಪರ್ ಪ್ರಾರ್ಥನಾ ಮುಂದಿನ ದಿನಗಳಲ್ಲಿ ಪಿಯುಸಿಯಲ್ಲಿ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡು, ನೀಟ್ ಪರೀಕ್ಷೆ ಬರೆಯುವ ಗುರಿ ಹೊಂದಿದ್ದಾಳೆ. ಅದರ ಜೊತೆಗೆ, ಇಸ್ರೋ ಸೇರಿ ಗಗನಯಾನದಲ್ಲಿ ಪಾಲ್ಗೊಳ್ಳುವಂತಹ ದೊಡ್ಡ ಕನಸನ್ನೂ ಆಕೆ ಹೊತ್ತಿದ್ದಾಳೆ.

ಒಟ್ಟಾರೆ, ಪ್ರಾರ್ಥನಾ ಅವರ ಈ ಸಾಧನೆ ಗ್ರಾಮೀಣ ಭಾಗದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಚಿಲುಮೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+