ಮೋದಿ ಕಾಲದಲ್ಲಿ ಇಳೀತು ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ಹಣ! ಆದ್ರೂ ₹36 ಸಾವಿರ ಕೋಟಿ ಜಮೆ!

ಸ್ವಿಟ್ಜರ್ಲ್ಯಾಂಡ್‌ನ ಬ್ಯಾಂಕ್‌ಗಳಲ್ಲಿ ಭಾರತೀಯರು ಇಟ್ಟಿರುವ ಕೋಟಿ ಕೋಟಿ ಹಣದ ಬಗ್ಗೆ ಚರ್ಚೆ ವರ್ಷಗಳಿಂದ ನಡೆಯುತ್ತಲೇ ಇದೆ. ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರು ಸಾಕಷ್ಟು ಕಪ್ಪುಹಣ ಬಚ್ಚಿಟ್ಟಿರುವುದೂ ನಿಜ. ಇದೀಗ ಸ್ವಿಟ್ಜರ್ಲ್ಯಾಂಡ್‌ನ ಕೇಂದ್ರ ಬ್ಯಾಂಕ್ ಬಿಡುಗಡೆ ಮಾಡಿದ 2025ರ ಅಂಕಿಅಂಶಗಳು ಈ ವಿಷಯವನ್ನು ಮತ್ತೊಮ್ಮೆ ಚರ್ಚೆಗೆ ತಂದಿವೆ. ಆದರೆ ಈ ಅಂಕಿಅಂಶಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ಸ್ವಿಸ್ ಬ್ಯಾಂಕ್‌ಗಳಲ್ಲಿ ಇರುವ ಭಾರತೀಯರ ಹಣ ಎಂದರೆ ಅದು ಸಂಪೂರ್ಣವಾಗಿ ಕಪ್ಪುಹಣ ಎಂದು ಅರ್ಥವಲ್ಲ.

ಭಾರತೀಯರ ಹಣ ಕಡಿಮೆಯಾಗಿದೆ

2025ರ ಅಂತ್ಯದ ವೇಳೆಗೆ ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರಿಗೆ ಸಂಬಂಧಿಸಿದ ಒಟ್ಟು ಹಣ 3.25 ಬಿಲಿಯನ್ ಸ್ವಿಸ್ ಫ್ರಾಂಕ್‌ಗಳಿಗೆ (ಸುಮಾರು ₹36,793 ಕೋಟಿ) ಇಳಿದಿದೆ. ಇದು 2024ಕ್ಕಿಂತ ಸುಮಾರು 8% ಕಡಿಮೆ. 2024ರಲ್ಲಿ ಈ ಮೊತ್ತ 3.5 ಬಿಲಿಯನ್ ಸ್ವಿಸ್ ಫ್ರಾಂಕ್‌ಗಳಷ್ಟಿತ್ತು. ಆ ವರ್ಷದಲ್ಲಿ ದೊಡ್ಡ ಪ್ರಮಾಣದ ಏರಿಕೆ ಕಂಡುಬಂದಿತ್ತು. ಆದರೆ 2025ರಲ್ಲಿ ಮತ್ತೆ ಇಳಿಕೆಯಾಗಿದೆ.

Indian Money

ಗ್ರಾಹಕರ ಠೇವಣಿ ಏರಿಕೆ

ಒಟ್ಟು ಹಣ ಕಡಿಮೆಯಾದರೂ, ಭಾರತೀಯ ವ್ಯಕ್ತಿಗಳು ಮತ್ತು ಸಂಸ್ಥೆಗಳ ನೇರ ಬ್ಯಾಂಕ್ ಖಾತೆಗಳಲ್ಲಿದ್ದ ಹಣದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. 2025ರಲ್ಲಿ ಗ್ರಾಹಕರ ಠೇವಣಿಗಳು 50%ಕ್ಕಿಂತ ಹೆಚ್ಚು ಏರಿಕೆಯಾಗಿ 524 ಮಿಲಿಯನ್ ಸ್ವಿಸ್ ಫ್ರಾಂಕ್‌ಗಳಿಗೆ (ಸುಮಾರು ₹6,000 ಕೋಟಿ) ತಲುಪಿವೆ. ಇದು ಒಟ್ಟು ಮೊತ್ತದ ಕೇವಲ 16% ಮಾತ್ರವಾದರೂ, ವೈಯಕ್ತಿಕ ಮತ್ತು ಸಂಸ್ಥೆಗಳ ಖಾತೆಗಳಲ್ಲಿನ ಹಣ ಹೆಚ್ಚಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.

ಹಾಗಾದರೆ ಉಳಿದ ಹಣ ಎಲ್ಲಿದೆ?

ಸ್ವಿಸ್ ಬ್ಯಾಂಕ್‌ಗಳ ಅಂಕಿಅಂಶಗಳ ಪ್ರಕಾರ, ಭಾರತೀಯರಿಗೆ ಸಂಬಂಧಿಸಿದ ಹೆಚ್ಚಿನ ಹಣ ನೇರ ಖಾತೆಗಳಲ್ಲಿ ಇಲ್ಲ. ಒಟ್ಟು 3.25 ಬಿಲಿಯನ್ ಸ್ವಿಸ್ ಫ್ರಾಂಕ್‌ಗಳಲ್ಲಿ 2.6 ಬಿಲಿಯನ್ ಫ್ರಾಂಕ್‌ಗಳು ಇತರ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳ ಮೂಲಕ ಇಡಲಾಗಿರುವ ಹಣ. 524 ಮಿಲಿಯನ್ ಫ್ರಾಂಕ್‌ಗಳು ಗ್ರಾಹಕರ ಠೇವಣಿಗಳು. 18.6 ಮಿಲಿಯನ್ ಫ್ರಾಂಕ್ ಟ್ರಸ್ಟ್‌ಗಳು ಮತ್ತು ಫಿಡುಶಿಯರಿ ವ್ಯವಸ್ಥೆಗಳ ಮೂಲಕ ಇಡಲಾಗಿರುವ ಹಣ. 105.7 ಮಿಲಿಯನ್ ಫ್ರಾಂಕ್ ಬಾಂಡ್‌ಗಳು, ಸೆಕ್ಯುರಿಟಿಗಳು ಹಾಗೂ ಇತರೆ ಹಣಕಾಸು ಸಾಧನಗಳ ರೂಪದಲ್ಲಿರುವ ಹಣ. ಅಂದರೆ, ಹೆಚ್ಚಿನ ಹಣವು ಸಾಮಾನ್ಯ ಉಳಿತಾಯ ಖಾತೆಗಳಲ್ಲಿ ಇಲ್ಲ. ಬದಲು ಹಣಕಾಸು ಸಂಸ್ಥೆಗಳ ಮೂಲಕ ಹೂಡಿಕೆ ರೂಪದಲ್ಲಿ ಇರುವುದು ಸ್ಪಷ್ಟವಾಗುತ್ತದೆ.

ನಿಮ್ಮ ಬ್ಯಾಂಕ್ ಖಾತೆ ಫ್ರೀಜ್ ಆಯ್ತಾ? ಗಾಬರಿಯಾಗಬೇಡಿ, ಹೀಗ್ ಮಾಡಿ
ನಿಮ್ಮ ಬ್ಯಾಂಕ್ ಖಾತೆ ಫ್ರೀಜ್ ಆಯ್ತಾ? ಗಾಬರಿಯಾಗಬೇಡಿ, ಹೀಗ್ ಮಾಡಿ

ಇದೆಲ್ಲ ಕಪ್ಪು ಹಣವೇ?

ಇದೆಲ್ಲ ಕಪ್ಪು ಹಣವಲ್ಲ. ಸ್ವಿಸ್ ನ್ಯಾಷನಲ್ ಬ್ಯಾಂಕ್ ಬಿಡುಗಡೆ ಮಾಡುವ ಅಂಕಿಅಂಶಗಳು ಭಾರತೀಯರಿಗೆ ಸಂಬಂಧಿಸಿದ ಎಲ್ಲ ರೀತಿಯ ಹಣವನ್ನು ಒಳಗೊಂಡಿರುತ್ತವೆ. ಇದರಲ್ಲಿ ವ್ಯಕ್ತಿಗಳ ಖಾತೆಗಳು, ಕಂಪನಿಗಳ ಹಣ, ಬ್ಯಾಂಕ್‌ಗಳ ಮೂಲಕ ಹೂಡಿಕೆಗೊಂಡ ಹಣ, ಹಣಕಾಸು ಸಂಸ್ಥೆಗಳ ವ್ಯವಹಾರಗಳು ಎಲ್ಲವೂ ಸೇರಿರುತ್ತವೆ. ಹೀಗಾಗಿ ಈ ಅಂಕಿಅಂಶಗಳನ್ನು ಭಾರತೀಯರ ಕಪ್ಪುಹಣ ಎಂದು ಕರೆಯುವುದು ಸರಿಯಲ್ಲ. ಇದಲ್ಲದೆ, ಬೇರೆ ದೇಶಗಳ ಕಂಪನಿಗಳ ಹೆಸರಿನಲ್ಲಿ ಇರಬಹುದಾದ ಭಾರತೀಯರ ಹಣ ಈ ಲೆಕ್ಕದಲ್ಲಿ ಸೇರಿರುವುದಿಲ್ಲ.

2006ರಲ್ಲಿ ಎಷ್ಟು ಹಣ ಇತ್ತು?

ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರಿಗೆ ಸಂಬಂಧಿಸಿದ ಹಣದ ಪ್ರಮಾಣ 2006ರಲ್ಲಿ ದಾಖಲೆ ಮಟ್ಟದಲ್ಲಿತ್ತು. ಆಗ ಸುಮಾರು 6.5 ಬಿಲಿಯನ್ ಸ್ವಿಸ್ ಫ್ರಾಂಕ್‌ಗಳಷ್ಟು ಹಣ ಇತ್ತು. ಆ ಬಳಿಕ ಹೆಚ್ಚಿನ ವರ್ಷಗಳಲ್ಲಿ ಈ ಮೊತ್ತ ಕುಸಿಯುತ್ತಲೇ ಬಂದಿದೆ. ಮಧ್ಯೆ ಕೆಲ ವರ್ಷಗಳಲ್ಲಿ ಏರಿಕೆ ಕಂಡರೂ, ಒಟ್ಟಾರೆ ಪ್ರವೃತ್ತಿ ಇಳಿಮುಖವಾಗಿಯೇ ಇದೆ. 2021ರಲ್ಲಿ ಈ ಮೊತ್ತ 3.83 ಬಿಲಿಯನ್ ಫ್ರಾಂಕ್‌ಗೆ ಏರಿಕೆಯಾಗಿದ್ದು, ಅದು 14 ವರ್ಷಗಳ ಗರಿಷ್ಠ ಮಟ್ಟವಾಗಿತ್ತು.

''ಕರ್ನಾಟಕದ ಈ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್, ಸಾಲ ವಿತರಣೆಯಲ್ಲಿ ಶೇ 107ರಷ್ಟು ಪ್ರಗತಿ''
''ಕರ್ನಾಟಕದ ಈ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್, ಸಾಲ ವಿತರಣೆಯಲ್ಲಿ ಶೇ 107ರಷ್ಟು ಪ್ರಗತಿ''

ವೈಯಕ್ತಿಕ ಠೇವಣಿಗಳ ನಿಜವಾದ ಚಿತ್ರ ಏನು?

ಅಂತರರಾಷ್ಟ್ರೀಯ ಸೆಟಲ್‌ಮೆಂಟ್ಸ್ ಬ್ಯಾಂಕ್ ಅಂಕಿಅಂಶಗಳನ್ನು ಅನೇಕ ತಜ್ಞರು ಹೆಚ್ಚು ವಿಶ್ವಾಸಾರ್ಹ ಎಂದು ಪರಿಗಣಿಸುತ್ತಾಾರೆ. ಈ ಅಂಕಿಅಂಶಗಳು ಮುಖ್ಯವಾಗಿ ಭಾರತೀಯ ವ್ಯಕ್ತಿಗಳು ಸ್ವಿಸ್ ಬ್ಯಾಂಕ್‌ಗಳಲ್ಲಿ ಇಟ್ಟಿರುವ ಠೇವಣಿಗಳ ಬಗ್ಗೆ ಮಾಹಿತಿ ನೀಡುತ್ತವೆ. 2025ರಲ್ಲಿ ಇಂತಹ ಠೇವಣಿಗಳು 20% ಏರಿಕೆಯಾಗಿ 89.73 ಮಿಲಿಯನ್ ಅಮೆರಿಕನ್ ಡಾಲರ್‌ಗಳಿಗೆ (ಸುಮಾರು ₹780 ಕೋಟಿ) ತಲುಪಿವೆ. ಇದು 2007ರಲ್ಲಿ ದಾಖಲಾಗಿದ್ದ 2.3 ಬಿಲಿಯನ್ ಡಾಲರ್‌ಗಳ ಗರಿಷ್ಠ ಮಟ್ಟಕ್ಕಿಂತ ಬಹಳ ಕಡಿಮೆ. ಅಂದರೆ, ಭಾರತೀಯ ವ್ಯಕ್ತಿಗಳ ನೇರ ಠೇವಣಿಗಳು ಈಗ ಹಿಂದೆ ಇದ್ದಷ್ಟು ದೊಡ್ಡ ಪ್ರಮಾಣದಲ್ಲಿಲ್ಲ.

ಭಾರತಕ್ಕೆ ಮಾಹಿತಿ ಸಿಗುತ್ತಿದೆಯೇ?

ಹೌದು. 2018ರಿಂದ ಭಾರತ ಮತ್ತು ಸ್ವಿಟ್ಜರ್ಲ್ಯಾಂಡ್ ನಡುವೆ ತೆರಿಗೆ ಸಂಬಂಧಿತ ಮಾಹಿತಿಯ ಸ್ವಯಂಚಾಲಿತ ವಿನಿಮಯ ವ್ಯವಸ್ಥೆ ಜಾರಿಯಲ್ಲಿದೆ. ಈ ಒಪ್ಪಂದದ ಪ್ರಕಾರ, ಸ್ವಿಸ್ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರುವ ಭಾರತೀಯ ನಿವಾಸಿಗಳ ಮಾಹಿತಿಯನ್ನು ಭಾರತಕ್ಕೆ ನೀಡಲಾಗುತ್ತದೆ. 2019ರಿಂದ ಪ್ರತಿವರ್ಷ ಈ ಮಾಹಿತಿ ಭಾರತೀಯ ತೆರಿಗೆ ಇಲಾಖೆಗೆ ತಲುಪುತ್ತಿದೆ. ತೆರಿಗೆ ವಂಚನೆ ಅಥವಾ ಹಣಕಾಸು ಅಕ್ರಮದ ಶಂಕೆ ಇದ್ದರೆ, ಹೆಚ್ಚಿನ ಮಾಹಿತಿಯನ್ನೂ ಸ್ವಿಸ್ ಅಧಿಕಾರಿಗಳು ಹಂಚಿಕೊಳ್ಳುತ್ತಿದ್ದಾರೆ. ಈ ವ್ಯವಸ್ಥೆಯಡಿ ಈಗಾಗಲೇ ನೂರಾರು ಪ್ರಕರಣಗಳಲ್ಲಿ ಮಾಹಿತಿ ವಿನಿಮಯ ನಡೆದಿದೆ.

ಇತರ ದೇಶಗಳೊಂದಿಗೆ ಹೋಲಿಸಿದರೆ...

2025ರ ಅಂಕಿಅಂಶಗಳ ಪ್ರಕಾರ ಸ್ವಿಸ್ ಬ್ಯಾಂಕ್‌ಗಳಲ್ಲಿ ವಿದೇಶಿ ಗ್ರಾಹಕರ ಹಣದ ಪಟ್ಟಿಯಲ್ಲಿ ಯುನೈಟೆಡ್ ಕಿಂಗ್ಡಮ್ 192 ಬಿಲಿಯನ್ ಫ್ರಾಂಕ್, ಅಮೆರಿಕ 75 ಬಿಲಿಯನ್ ಫ್ರಾಂಕ್, ಫ್ರಾನ್ಸ್ 63 ಬಿಲಿಯನ್ ಫ್ರಾಂಕ್ ಹೊಂದಿ ಮೊದಲ ಮೂರು ಸ್ಥಾನಗಳಲ್ಲಿವೆ. ಭಾರತ 46ನೇ ಸ್ಥಾನದಲ್ಲಿದೆ. 2024ರಲ್ಲಿ ಭಾರತ 48ನೇ ಸ್ಥಾನದಲ್ಲಿತ್ತು. ಹೀಗಾಗಿ ಭಾರತದ ಸ್ಥಾನ ಎರಡು ಹಂತಗಳಷ್ಟು ಸುಧಾರಿಸಿದೆ.

ಒಟ್ಟಾರೆಯಾಗಿ, ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರಿಗೆ ಸಂಬಂಧಿಸಿದ ಒಟ್ಟು ಹಣ 2025ರಲ್ಲಿ 8% ಇಳಿದು ಸುಮಾರು ₹36,793 ಕೋಟಿಗೆ ತಲುಪಿದೆ. ಆದರೆ ಭಾರತೀಯ ವ್ಯಕ್ತಿಗಳು ಮತ್ತು ಸಂಸ್ಥೆಗಳ ನೇರ ಬ್ಯಾಂಕ್ ಖಾತೆಗಳಲ್ಲಿನ ಹಣ 50%ಕ್ಕೂ ಹೆಚ್ಚು ಏರಿಕೆಯಾಗಿದೆ. ಇದರಲ್ಲಿ ಕಾನೂನುಬದ್ಧ ಠೇವಣಿಗಳು, ಕಂಪನಿಗಳ ಹಣ, ಬ್ಯಾಕ್‌ಗಳ ಮೂಲಕ ನಡೆದ ಹೂಡಿಕೆಗಳು ಹಾಗೂ ಇತರೆ ಹಣಕಾಸು ವ್ಯವಹಾರಗಳೂ ಸೇರಿವೆ.

ಭಾರತ ಮತ್ತು ಸ್ವಿಟ್ಜರ್ಲ್ಯಾಂಡ್‌ನ ನಡುವಿನ ಮಾಹಿತಿ ವಿನಿಮಯ ವ್ಯವಸ್ಥೆ ಜಾರಿಯಲ್ಲಿರುವುದರಿಂದ, ಸ್ವಿಸ್ ಬ್ಯಾಂಕ್ ಖಾತೆಗಳ ಸಂಪೂರ್ಣ ಗೌಪ್ಯತೆ ಎಂಬ ಹಳೆಯ ಕಲ್ಪನೆ ಈಗ ಬಹುತೇಕ ಬದಲಾಗಿದೆ. ಇಂದಿನ ದಿನಗಳಲ್ಲಿ ಸ್ವಿಸ್ ಬ್ಯಾಂಕ್‌ಗಳಲ್ಲಿ ಹಣ ಇಡುವುದು ಎಂದರೆ ಅದು ಕಪ್ಪುಹಣ ಎಂಬ ಅರ್ಥವಲ್ಲ ಎಂಬುದನ್ನು ಈ ಅಂಕಿಅಂಶಗಳು ಸ್ಪಷ್ಟಪಡಿಸುತ್ತವೆ.

(ಬರಹ: ಭವಾನಿ ಭಟ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+