ಸಾವಿರಾರು ವರ್ಷಗಳ ಬಳಿಕ ಬಯಲಾಯ್ತು ಚಿನ್ನದ ನಿಧಿ; ಸೌದಿಯಲ್ಲಿ ಪತ್ತೆಯಾದ 100ಕ್ಕೂ ಹೆಚ್ಚು ಅಪರೂಪದ ಆಭರಣಗಳು!
ಸಾವಿರ ವರ್ಷಗಳ ಹೆಚ್ಚು ಕಾಲ ಮರಳುಗಾಡಿನ ಮಣ್ಣಿನ ಅಡಿಯಲ್ಲಿ ಹೂತುಹೋಗಿದ್ದ ಅಪರೂಪದ ಚಿನ್ನದ ಆಭರಣಗಳ ಒಂದು ದೊಡ್ಡ ಖಜಾನೆ ಇದೀಗ ಇತಿಹಾಸ ಸಂಶೋಧಕರನ್ನು ಅಚ್ಚರಿಗೊಳಿಸಿದೆ. ಸೌದಿ ಅರೇಬಿಯಾದಲ್ಲಿ ನಡೆದ ಸಾಮಾನ್ಯ ಉತ್ಖನನದ ಸಮಯದಲ್ಲಿ ಪತ್ತೆಯಾದ ಈ ಖಜಾನೆ, ಮಧ್ಯಯುಗದ ಇಸ್ಲಾಮಿಕ್ ವ್ಯಾಪಾರ, ಸಂಸ್ಕೃತಿ ಮತ್ತು ಕಲಾ ಪರಂಪರೆಯ ಬಗ್ಗೆ ಹೊಸ ಬೆಳಕು ಚೆಲ್ಲುತ್ತಿದೆ.
ಈ ಆಭರಣಗಳು ಕ್ರಿ.ಶ. 8 ರಿಂದ 13ನೇ ಶತಮಾನಗಳ ನಡುವಿನ ಅಬ್ಬಾಸಿದ್ ಕಾಲಘಟ್ಟಕ್ಕೆ ಸೇರಿದವು ಎಂದು ಅಂದಾಜಿಸಲಾಗಿದೆ. ಈ ಪತ್ತೆ ಕೇವಲ ಚಿನ್ನದ ಸಂಗ್ರಹವಷ್ಟೇ ಅಲ್ಲ, ಅಂದಿನ ಕಾಲದ ವ್ಯಾಪಾರ ಮಾರ್ಗಗಳು ಮತ್ತು ಸಾಮಾಜಿಕ ಜೀವನದ ಚಿತ್ರಣವನ್ನೂ ನೀಡುತ್ತದೆ.

ಸೌದಿ ಮರಳುಗಾಡಿನಲ್ಲಿ ಪತ್ತೆಯಾಯ್ತು ಅಬ್ಬಾಸಿದ್ ಕಾಲದ ನೂರಕ್ಕೂ ಹೆಚ್ಚು ಚಿನ್ನದ ಆಭರಣಗಳು!
ಸೌದಿ ಅರೇಬಿಯಾದ ಅಲ್-ಖಾಸಿಂ ಪ್ರದೇಶದ ದರಿಯಾಹ್ (Dariyah) ಪುರಾತತ್ವ ಸ್ಥಳದಲ್ಲಿ ನಡೆಸಿದ ನಾಲ್ಕನೇ ಹಂತದ ಉತ್ಖನನದಲ್ಲಿ 1,100 ವರ್ಷಕ್ಕೂ ಹೆಚ್ಚು ಹಳೆಯದಾದ ಸುಮಾರು 100ಕ್ಕೂ ಹೆಚ್ಚು ಚಿನ್ನದ ಆಭರಣಗಳು ಪತ್ತೆಯಾಗಿವೆ ಎಂದು ಸೌದಿ ಹೆರಿಟೇಜ್ ಕಮಿಷನ್ ಪ್ರಕಟಿಸಿದೆ. ಈ ಅಮೂಲ್ಯ ಆಭರಣಗಳು ಕ್ರಿ.ಶ. 8 ರಿಂದ 13ನೇ ಶತಮಾನದ ನಡುವಿನ 'ಅಬ್ಬಾಸಿದ್' ಕಾಲಘಟ್ಟಕ್ಕೆ ಸೇರಿದವು ಎಂದು ಸಂಶೋಧಕರು ಅಂದಾಜಿಸಿದ್ದಾರೆ. ಈ ಅಪರೂಪದ ಆವಿಷ್ಕಾರವು ಕೇವಲ ಪ್ರಾಚೀನ ಸಂಪತ್ತನ್ನು ಮಾತ್ರವಲ್ಲದೆ, ಆ ಕಾಲದ ಶ್ರೀಮಂತ ಸಾಮಾಜಿಕ ಜೀವನ ಹಾಗೂ ಅಂದಿನ ಪ್ರಮುಖ ವ್ಯಾಪಾರ ಮಾರ್ಗಗಳ ಇತಿಹಾಸವನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ.
ಪತ್ತೆಯಾದವು ರಾಜಮನೆತನದವರಂತಿದ್ದ ಅಪರೂಪದ ಚಿನ್ನದ ಆಭರಣಗಳು
ಪತ್ತೆಯಾದ ಆಭರಣಗಳು ಬಹುಶಃ ಅಂದಿನ ಕಾಲದ ಶ್ರೀಮಂತ ಉನ್ನತ ವರ್ಗದವರ ಬಳಕೆಗೆ ಸೇರಿದವು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಶೋಧನೆಯಲ್ಲಿ ಪೆಂಡೆಂಟ್‌ಗಳು, ಅಲಂಕಾರಿಕ ವೃತ್ತಾಕಾರದ ಚಿನ್ನದ ಭಾಗಗಳು, ಮುತ್ತುಗಳು ಹಾಗೂ ಹಾರ ತಯಾರಿಕೆಗೆ ಬಳಸುತ್ತಿದ್ದ ಅತ್ಯಂತ ಸೊಗಸಾದ ಸಣ್ಣ ಚಿನ್ನದ ತುಂಡುಗಳು ಸಿಕ್ಕಿವೆ. ವಿಶೇಷವೆಂದರೆ, ಈ ಆಭರಣಗಳಲ್ಲಿ ಹೂವಿನ ವಿನ್ಯಾಸಗಳ ಜೊತೆಗೆ ಜ್ಯಾಮಿತೀಯ ಆಕೃತಿಗಳು ಮೂಡಿಬಂದಿವೆ. ಅದರಲ್ಲೂ ಒಂದೊಂದು ವೃತ್ತಾಕಾರದ ಚಿನ್ನದ ಫಲಕದ ಮಧ್ಯಭಾಗದ ಸುತ್ತಲೂ ವರ್ಣರಂಜಿತ ಕಲ್ಲುಗಳನ್ನು ಸಮಮಟ್ಟದಲ್ಲಿ ಅಳವಡಿಸಿರುವ ಕಲಾ ಚಾತುರ್ಯವು ಎಲ್ಲರ ಗಮನ ಸೆಳೆಯುತ್ತಿದೆ.
ಕೈಗಾರಿಕ ಕೌಶಲ್ಯದ ಅದ್ಭುತ ಉದಾಹರಣೆ
ಅಬ್ಬಾಸಿದ್ ಕಾಲಘಟ್ಟದ ಚಿನ್ನದ ಕುಶಲಕರ್ಮಿಗಳು ಅತ್ಯಂತ ಸೂಕ್ಷ್ಮ ಶೈಲಿಯ ತಂತ್ರಗಳನ್ನು ಬಳಸುತ್ತಿದ್ದರು ಎಂದು ಸಂಶೋಧಕರು ಬಹಿರಂಗಪಡಿಸಿದ್ದಾರೆ. ಅವರು ತೆಳುವಾದ ಚಿನ್ನದ ಹಾಳೆಗಳನ್ನು ತಟ್ಟಿ ಆಕಾರ ನೀಡುವುದು, ವಿನ್ಯಾಸಗಳನ್ನು ಮುದ್ರಿಸುವುದು ಮತ್ತು ಅಮೂಲ್ಯವಾದ ಕಲ್ಲುಗಳನ್ನು ನಿಖರವಾಗಿ ಅಳವಡಿಸುವ ತಂತ್ರಗಳನ್ನು ಬಳಸುತ್ತಿದ್ದರು.
ಆ ಕಾಲದ ಆಭರಣಗಳು ಕೇವಲ ಅಲಂಕಾರಕ್ಕೆ ಮಾತ್ರವಲ್ಲ, ಸಮಾಜದಲ್ಲಿನ ಸ್ಥಾನಮಾನ ಮತ್ತು ಸಂಪತ್ತಿನ ಸಂಕೇತವಾಗಿದ್ದವು ಎಂದು ಕೂಡಾ ತಿಳಿದುಬರುತ್ತದೆ. ಈ ಆವಿಷ್ಕಾರವು ಅಂದಿನ ವ್ಯಾಪಾರ ಜಾಲಗಳು ಎಷ್ಟು ವಿಸ್ತಾರವಾಗಿದ್ದವು ಎಂಬುದಕ್ಕೂ ಸಾಕ್ಷಿಯಾಗಿದೆ.
ವಾಣಿಜ್ಯ ಮತ್ತು ಯಾತ್ರೆಯ ಪ್ರಮುಖ ಕೇಂದ್ರ: ದರಿಯಾಹ್
ಇರಾಕ್‌ನ ಬಾಸ್ರಾದಿಂದ ಮೆಕ್ಕಾಗೆ ಹೋಗುವ ಹಜ್ ಯಾತ್ರಾ ಮಾರ್ಗದಲ್ಲಿ ದರಿಯಾಹ್ ಅತ್ಯಂತ ಪ್ರಮುಖ ನಿಲುಗಡೆಯಾಗಿತ್ತು. ಈ ಮಾರ್ಗದ ಮೂಲಕ ಯಾತ್ರಾರ್ಥಿಗಳ ಜೊತೆಗೆ ಸಾಂಸ್ಕೃತಿಕ ವಿನಿಮಯ ಮತ್ತು ದೊಡ್ಡ ಮಟ್ಟದ ವ್ಯಾಪಾರ-ವಹಿವಾಟುಗಳೂ ನಡೆಯುತ್ತಿದ್ದವು. ಅರೇಬಿಯಾದ ಮರಳು ಹಾದಿಗಳು ಆ ಕಾಲದಲ್ಲೇ ಜಗತ್ತಿನ ಹಲವು ಪ್ರಮುಖ ರಾಷ್ಟ್ರಗಳನ್ನು ಜೋಡಿಸುವ ಸಕ್ರಿಯ ವಾಣಿಜ್ಯ ಮಾರ್ಗಗಳಾಗಿದ್ದವು ಎಂಬ ಸತ್ಯಕ್ಕೆ ಈ ಹೊಸ ಪತ್ತೆ ಹಚ್ಚುವಿಕೆ ಕೈಗನ್ನಡಿಯಾಗಿದೆ.
ಮರಳಿನಿಂದ ಹೊರಬಂದ ಇತಿಹಾಸದ ಪುಟಗಳು
ಇಲ್ಲಿ ನಡೆದಿರುವ ಸಂಶೋಧನೆಯಲ್ಲಿ ಚಿನ್ನದ ಆಭರಣಗಳ ಜೊತೆಗೆ ಮಣ್ಣಿನ ಪಾತ್ರೆಗಳು, ಗಾಜಿನ ಅವಶೇಷಗಳು ಮತ್ತು ಹಳೆಯ ಕಲ್ಲಿನ ಗೋಡೆಗಳ ಭಾಗಗಳು ಸಿಕ್ಕಿವೆ. ಈ ಪತ್ತೆಯಾದ ವಸ್ತುಗಳನ್ನು ಗಮನಿಸಿದರೆ, ದರಿಯಾಹ್ ಎಂಬುದು ಕೇವಲ ಬಂದು ಹೋಗುವ ನಿಲ್ದಾಣವಾಗಿರದೆ, ಜನರು ಶಾಶ್ವತವಾಗಿ ನೆಲೆಸಿದ್ದ ಒಂದು ಉತ್ತಮ ಸಮುದಾಯವಾಗಿತ್ತು ಎಂಬುದು ತಿಳಿಯುತ್ತದೆ.














Click it and Unblock the Notifications