South Central Railway: ಸರಕು ಸಾಗಣೆಯಲ್ಲಿ ದಕ್ಷಿಣ ಮಧ್ಯೆ ರೈಲ್ವೆ ಹೊಸ ಮೈಲಿಗಲ್ಲು
ರಾಯಚೂರು ಫೆಬ್ರವರಿ 8: ದಕ್ಷಿಣ ಮಧ್ಯ ರೈಲ್ವೆ ಪ್ರಸಕ್ತ ಆರ್ಥಿಕ ವರ್ಷದ ಡಿಸೆಂಬರ್ ಅಂತ್ಯದೊಳಗೆ 100 ದಶಲಕ್ಷ ಮೆಟ್ರಿಕ್ ಟನ್ ಸರಕು ಸಾಗಣೆ ಮಾಡುವ ಮೂಲಕ ಹೊಸ ಮೈಲುಗಲ್ಲು ಸಾಧಿಸಿದೆ. ಸರಕು ಸಾಗಣೆಗೆ ಅಗತ್ಯವಿರುವ ವ್ಯಾಗನ್ ಗಳನ್ನು ಸಮಯಕ್ಕೆ ಸರಿಯಾಗಿ ಒದಗಿಸುವ ಜತೆಗೆ ಸಮಯಕ್ಕೆ ಸರಿಯಾಗಿ ಸರಕು ಸಾಗಿಸಲು ಹೆಚ್ಚಿನ ಒತ್ತು ನೀಡಿರುವುದರಿಂದ ಈ ಸಾಧನೆ ಹೊಸ ಮೈಲಿಗಲ್ಲು ಸೃಷ್ಟಿಸಿದೆ.
ಕಳೆದ ಆರ್ಥಿಕ ವರ್ಷ 284 ದಿನಗಳಲ್ಲಿ 100 ದಶಲಕ್ಷ ಮೆಟ್ರಿಕ್ ಟನ್ ಸರಕು ಸಾಗಣೆ ಗುರಿ ತಲುಪಿತ್ತು. ಆದರೆ ಈ ಬಾರಿ 270 ದಿನಗಳಲ್ಲಿ 100 ದಶಲಕ್ಷ ಮೆಟ್ರಿಕ್ ಟನ್ ಸರಕು ಸಾಗಣೆ ಮೂಲಕ ದಕ್ಷಿಣ ಮಧ್ಯ ರೈಲ್ವೆ ಇತರ ರೈಲ್ವೆ ವಲಯಗಳಲ್ಲೇ ಮುಂಚೂಣಿಯಲ್ಲಿದೆ.

100 ದಶಲಕ್ಷ ಮೆಟ್ರಿಕ್ ಟನ್ ಸರಕು ಸಾಗಣೆಯಲ್ಲಿ 50.63 ದಶಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು, 25.22 ದಶಲಕ್ಷ ಮೆಟ್ರಿಕ್ ಟನ್ ಸಿಮೆಂಟ್, 5.96 ದಶಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ, 5.16 ದಶಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ, 3.39 ದಶಲಕ್ಷ ಮೆಟ್ರಿಕ್ ಟನ್ ಸ್ಟೀಲ್, 2.72 ದಶಲಕ್ಷ ಮೆಟ್ರಿಕ್ ಟನ್ ಕಬ್ಬಿಣದ ಆದಿರು ಸಾಗಣೆ ಮಾಡಲಾಗಿದೆ.
ಪ್ರಮುಖವಾಗಿ ವಲಯ ವ್ಯಾಪ್ತಿಯ ಹೈದರಬಾದ್ ಕರ್ನಾಟಕದ ರಾಯಚೂರು, ಬಳ್ಳಾರಿ, ಯಾದಗಿರಿ ಜಿಲ್ಲೆಗಳು ಸರಕು ಸಾಗಣೆಯಲ್ಲಿ ಗಣನೀಯ ಸಾಧನೆಗೆ ಹೆಚ್ಚಿನ ಕೊಡುಗೆ ನೀಡಿವೆ. ಜತೆಗೆ ವಲಯದ ಬಹುತೇಕ ರೈಲ್ವೆ ಮಾರ್ಗ ವಿದ್ಯುದ್ವೀಕರಣ ಮತ್ತು ದ್ವಿಪಥ ಹೊಂದಿರುವುದು ಸರಕು ಸಾಗಣೆಗೆ ಹೆಚ್ಚಿನ ಅನುಕೂಲವಾಗಿದೆ.

ರಾಯಚೂರು ಜಿಲ್ಲೆಯಲ್ಲಿರುವ ಆರ್‌ಟಿಪಿಎಸ್, ವೈಟಿಪಿಎಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಮತ್ತು ಬಳ್ಳಾರಿ ಜಿಲ್ಲೆಯಲ್ಲಿರುವ ಬಿಟಿಪಿಎಸ್ ವಿದ್ಯುತ್ ಕೇಂದ್ರಕ್ಕೆ ದಕ್ಷಿಣ ಮಧ್ಯ ರೈಲ್ವೆ ಹೆಚ್ಚಿನ ಪ್ರಮಾಣದಲ್ಲಿ ಕಲ್ಲಿದ್ದಲು ಪೂರೈಕೆ ಮಾಡಿರುವುದು ವಲಯದ ಈ ಸಾಧನೆಗಳಲ್ಲಿ ಗಮನಾರ್ಹ ಪಾಲು ಹೊಂದಿದೆ. ಈ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಗೆ ನಿತ್ಯ ರೈಲುಗಳ ಮೂಲಕ ೮ ರಿಂದ ೧೦ ರೇಕ್ ಗಳ ಕಲ್ಲಿದ್ದಲು ಪೂರೈಕೆಯಾಗುತ್ತಿದೆ.
ಸರಕು ಸಾಗಣೆಯಲ್ಲಿ ದಕ್ಷಿಣ ಮಧ್ಯ ರೈಲ್ವೆಯು ಹೊಸ ದಾಖಲೆ ಬರೆದಿದೆ. ವಲಯದ ಅಧಿಕಾರಿಗಳು, ಸಿಬ್ಬಂದಿ ಈ ಸಾಧನೆ ಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಸೂ ಚಿಸಲಾಗಿದೆ ಎಂದು ಸಿಕಂದರಾಬಾದ್ ದಕ್ಷಿಣ ಮಧ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅರುಣ್ ಕುಮಾರ್ ಜೈನ್ ಹೇಳಿದರು.












Click it and Unblock the Notifications