ಬಹುವರ್ಷಗಳ ಬೇಡಿಕೆ ಈಡೇರಿಕೆ; 2024ರಲ್ಲಿ ಸಿಂಧನೂರಿಗೆ ಬರಲಿದೆ ರೈಲು
ರಾಯಚೂರು, ಸೆಪ್ಟೆಂಬರ್ 26; ಮುನಿರಾಬಾದ್-ಮೆಹಬೂಬ ನಗರ ರೈಲು ಯೋಜನೆಯಡಿ ಸಿಂಧನೂರಿಗೆ ರೈಲು ಬರಲಿದೆ. ಕಾರಟಗಿ-ಸಿಂಧನೂರು ನಡುವಿನ ಕಾಮಗಾರಿ ಪ್ರಗತಿಯಲ್ಲಿದ್ದು, 2024ರಲ್ಲಿ ಸಿಂಧನೂರಿಗೆ ರೈಲು ಬರಲಿದೆ ಎಂದು ಅಂದಾಜಿಸಲಾಗಿದೆ.
1997ರಲ್ಲಿ 165 ಕಿ. ಮೀ. ಉದ್ದದ ಮುನಿರಾಬಾದ್-ಮೆಹಬೂಬ ನಗರ ರೈಲು ಯೋಜನೆ ಪ್ರಾರಂಭವಾಯಿತು. ಆದರೆ ಕಾಮಗಾರಿ ನಿರೀಕ್ಷಿತ ವೇಗದಲ್ಲಿ ಸಾಗದ ಕಾರಣ ಇಷ್ಟು ವರ್ಷಗಳು ಕಳೆದರೂ ಪೂರ್ಣಗೊಂಡಿಲ್ಲ.

ಗಿಣಿಗೇರಾ-ಚಿಕ್ಕಬೆಣಕಲ್ ನಡುವೆ ರೈಲು ಸಂಚಾರ ಆರಂಭವಾಯಿತು. ಬಳಿಕ ಚಿಕ್ಕಬೆಣಕಲ್-ಗಂಗಾವತಿ ತನಕ 13 ಕಿ. ಮೀ. ಉದ್ದದ ಮಾರ್ಗದಲ್ಲಿ ರೈಲು ಓಡಿಸಲಾಯಿತು. ಬಳಿಕ ಕಾರಟಗಿ ತನಕ ರೈಲು ಸಂಚಾರ ಆರಂಭಗೊಂಡಿತು. ಈಗ ಕಾರಟಗಿ-ಸಿಂಧನೂರು ನಡುವೆ ರೈಲು ಮಾರ್ಗದ ಕಾಮಗಾರಿ ನಡೆಯುತ್ತಿದೆ.
ರೈಲಿನಲ್ಲೇ ಬಂದ ಕಾಮಗಾರಿ ವಸ್ತುಗಳು; ಸಿಂಧನೂರು ತಾಲೂಕಿನ ಬಂಗಾರಿಕ್ಯಾಂಪಿನ ತನಕ ಸದ್ಯ ರೈಲು ಮಾರ್ಗ ನಿರ್ಮಾಣಗೊಂಡಿದೆ. ಬಂಗಾರಿಕ್ಯಾಂಪಿನಿಂದ ಸಿಂಧನೂರು ತನಕ ಸುಮಾರು 10 ಕಿ. ಮೀ. ಮಾರ್ಗದ ಕಾಮಗಾರಿ ಬಾಕಿ ಇದೆ.
ಕಾಮಗಾರಿಗೆ ಬೇಕಾಗಿರುವ ವಸ್ತುಗಳನ್ನು ಗೂಡ್ಸ್ ರೈಲಿನ ಮೂಲಕವೇ ತಂದು ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಬಂಗಾರಿಕ್ಯಾಂಪಿಗೆ ಗೂಡ್ಸ್ ರೈಲು ಬಂದಾಗ ಜನರು ತಂಡೋಪತಂಡವಾಗಿ ರೈಲು ನೋಡಲು ಆಗಮಿಸಿದರು. ವಸ್ತುಗಳನ್ನು ಕೆಳಗಿಳಿಸುವ ಮುನ್ನ ಅಧಿಕಾರಿಗಳು ರೈಲಿಗೆ ಪೂಜೆ ಸಲ್ಲಿಕೆ ಮಾಡಿದರು.
ಬಂಗಾರಿಕ್ಯಾಂಪಿ ಸಿಂಧನೂರು ನಡುವಿನ ಮಾರ್ಗದಲ್ಲಿ ಬಂಡ್ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಹಳಿ ಜೋಡಿಸುವ ಕೆಲಸಗಳು ನಡೆಯುತ್ತಿವೆ. ಶ್ರೀಪುರಂ ಜಂಕ್ಷನ್ ಬಳಿ ರಾಷ್ಟ್ರೀಯ ಹೆದ್ದಾರಿಗೆ ಸೇತುವೆ ಜೋಡಿಸುವ ಕೆಲಸಗಳು ಬಾಕಿ ಇದೆ. ಹೈದರಾಬಾದ್‌ನಲ್ಲಿ ಇದನ್ನು ಜೋಡಿಸಿ ತರಲಾಗುತ್ತದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನ ಹಂಚಿಕೆ ಅಡಿ ಈ ರೈಲು ಮಾರ್ಗದ ಕಾಮಗಾರಿ ನಡೆಯುತ್ತಿದೆ. ಕೇಂದ್ರದ ಪಾಲಿನ ಅನುದಾನ ಸಂಪೂರ್ಣವಾಗಿ ಬಿಡುಗಡೆಯಾಗಿದೆ. ರಾಜ್ಯ ಸರ್ಕಾರದ ಪಾಲಿನ 330 ಕೋಟಿ ರೂ. ಅನುದಾನ ಇನ್ನೂ ಬರಬೇಕಿದೆ. ಸಿಂಧನೂರು ತಾಲೂಕಿನಲ್ಲಿ ಯೋಜನೆಗೆ ಭೂಸ್ವಾಧೀನ ಕಾರ್ಯ ಪೂರ್ಣಗೊಂಡಿದೆ.
ಮಾನ್ವಿ, ರಾಯಚೂರು ತಾಲೂಕಿನಲ್ಲಿ ಭೂ ಸ್ವಾಧೀನ ಕಾರ್ಯ ಬಾಕಿ ಇದೆ. ಈ ಕಾರ್ಯ ಪೂರ್ಣಗೊಂಡು ಕಾಮಗಾರಿ ನವೆಂಬರ್‌ನಲ್ಲಿ ಪೂರ್ಣಗೊಳ್ಳುವ ವಿಶ್ವಾಸವಿದೆ. ಡಿಸೆಂಬರ್‌ನಲ್ಲಿ ರೈಲಿನ ಪ್ರಾಯೋಗಿಕ ಸಂಚಾರ ನಡೆದರೆ, 2024ರಲ್ಲಿ ಸಿಂಧನೂರಿಗೆ ರೈಲು ಬರಲಿದೆ ಎಂದು ಅಂದಾಜಿಸಲಾಗಿದೆ.
ಕೊಪ್ಪಳ ಸಂಸದ ಸಂಗಣ್ಣ ಕರಡಿ ಸಿಂಧನೂರಿಗೆ ರೈಲು ಸೇವೆ ಆರಂಭವಾಗುವ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. "ಸಿಂಧನೂರು ಮತಕ್ಷೇತ್ರದ ಜನರು ನನಗೆ ರಾಜಕೀಯ ಪುರ್ನಜನ್ಮ ನೀಡಿದ್ದಾರೆ. ರೈಲ್ವೆ ಕಾಮಗಾರಿ ಪ್ರಗತಿಗೆ ವಿಶೇಷ ಕಾಳಜಿ ವಹಿಸಿದ್ದೇನೆ. ನಿರಂತರವಾಗಿ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಲೇ ಬಂದಿದ್ದೇನೆ. ಹೊಸ ವರ್ಷಕ್ಕೆ ಸಿಂಧನೂರಿನ ಜನರಿಗೆ ರೈಲು ಗಿಫ್ಟ್ ನೀಡುವೆ" ಎಂದು ಹೇಳಿದ್ದಾರೆ.
ಮುನಿರಾಬಾದ್-ಮೆಹಬೂಬ ನಗರ ರೈಲು ಯೋಜನೆ 2008ರ ತನಕ ಯಾವುದೇ ಪ್ರಗತಿ ಕಾಣಲಿಲ್ಲ. 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಯೋಜನೆಗೆ ಕಾಯಕಲ್ಪ ನೀಡಲಾಯಿತು. 165 ಕಿ. ಮೀ. ಉದ್ದದ ಈ ಯೋಜನೆಯನ್ನು 3034.98 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ.
ರೈಲು ಸ್ವಾಗತಿಸಲು ಸಿಂಧನೂರು ಸಹ ಸಿದ್ಧವಾಗುತ್ತಿದೆ. ಹೊಸ ರೈಲು ನಿಲ್ದಾಣದ ಕಟ್ಟಡ ಕಾಮಗಾರಿಯೂ ನಡೆಯುತ್ತಿದೆ. ಮಾರ್ಚ್ 2024ರ ಹೊತ್ತಿಗೆ ಕಾಮಗಾರಿಗಳು ಪೂರ್ಣಗೊಂಡು ರೈಲು ಸೇವೆ ಆರಂಭಿಸಬಹುದು ಎಂದು ಅಂದಾಜಿಸಲಾಗಿದೆ.












Click it and Unblock the Notifications