2nd PUC Exam: ಪೋಷಕರಿಂದಲೇ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಕಾಪಿ ಚೀಟಿ ವಿತರಣೆ
ರಾಯಚೂರು ಮಾರ್ಚ್ 5: ರಾಜ್ಯದಲ್ಲಿ ಶನಿವಾರದಿಂದ (ಮಾರ್ಚ್ 1) ದ್ವಿತೀಯ ಪಿಯುಸಿ ಪರೀಕ್ಷೆಗಳು ಪ್ರಾರಂಭವಾಗಿವೆ. ಆದರೆ ರಾಯಚೂರಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳ ಆನ್ಸರ್‌ಗಳು ವೈರಲ್ ಆಗಿವೆ. ಕೆಲವರು 35 ಅಂಕದ ಮೈಕ್ರೋ ಝೆರಾಕ್ಸ್ ಹಿಡಿದು ಸೆಂಟರ್ ಬಳಿ ಸುತ್ತಾಡುತ್ತಿರುವುದು ಕಂಡು ಬಂದಿದೆ. ಪ್ರಶ್ನೆ ಪತ್ರಿಕೆ ಕೊಟ್ಟ ಒಂದು ಗಂಟೆಯಲ್ಲೇ ಆನ್ಸರ್ ಶೀಟ್ ತಯಾರಿಯಾಗಿದ್ದು ಬೆಳಕಿಗೆ ಬಂದಿದೆ.
ಹೌದು... ರಾಯಚೂರಿನ ಲಿಂಗಸೂರಿನ ಪಿಯುಸಿ ಪರೀಕ್ಷಾ ಕೇಂದ್ರದ ಬಳಿ ಉತ್ತರದ ಚೀಟಿಗಳು ಹರಿದಾಡಿವೆ. ಶನಿವಾರದಿಂದ (ಮಾರ್ಚ್ 1) ದ್ವಿತೀಯ ಪಿಯುಸಿ ಪರೀಕ್ಷೆಗಳು ಪ್ರಾರಂಭವಾಗಿವೆ. ಎಲ್ಲಾ ಪತ್ರಿಕೆಗಳ ಅವಧಿ ಬೆಳಗ್ಗೆ 10ರಿಂದ 1ಗಂಟೆಯ ತನಕ ಇರುತ್ತದೆ. ಮಾರ್ಚ್ 1 ಶನಿವಾರದಂದು ಕನ್ನಡ/ಅರೇಬಿಕ್ ವಿಷಯದ ಪರೀಕ್ಷೆ ನಡೆದರೆ, ಮಾರ್ಚ್ 3 ಸೋಮವಾರದಂದು ಗಣಿತ/ಶಿಕ್ಷಣ ಶಾಸ್ತ್ರ/ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ ವಿಷಯದ ಪರೀಕ್ಷೆ ಪೂರ್ಣಗೊಂಡಿದೆ. ಮಾರ್ಚ್ 4ರಂದು ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫೆಂಚ್ ವಿಷಯ ಹಾಗೂ ಮಾರ್ಚ್ 5 ಅಂದರೆ ಇಂದು ರಾಜ್ಯಶಾಸ್ತ್ರ/ಸಂಖ್ಯಾಶಾಸ್ತ್ರ ವಿಷಯದ ಪರೀಕ್ಷೆ ಪೂರ್ಣಗೊಂಡಿದೆ.

ಮಾರ್ಚ್ 3 ಸೋಮವಾರದಂದು ಗಣಿತ ವಿಷಯದ ದಿನ ರಾಯಚೂರಿನ ಲಿಂಗಸೂರಿನ ಪಿಯುಸಿ ಪರೀಕ್ಷಾ ಕೇಂದ್ರದ ಬಳಿ ಉತ್ತರದ ಝೆರಕ್ಸ್ ಪ್ರತಿಗಳು ಹರಿದಾಡಿವೆ. ಗಣಿತ ಪ್ರಶ್ನೆ ಪತ್ರಿಕೆಯ ಉತ್ತರಗಳು ವಾಟ್ಸಾಪ್‌ನಲ್ಲಿ ವೈರಲ್ ಆಗಿವೆ. ಲಿಂಗಸೂರು ತಾಲೂಕಿನಾದ್ಯಂತ ವಾಟ್ಸಾಪ್‌ಗಳಲ್ಲಿ ಆನ್ಸರ್ ವೈರಲ್ ಆಗಿವೆ. ಸರಿ ಸುಮಾರು 73 ಅಂಕದ ಉತ್ತರಗಳು ಎಲ್ಲೆಡೆ ಹರಿದಾಡಿವೆ. ಪರೀಕ್ಷಾ ಕೇಂದ್ರದ ಬಳಿ ಕಾಪಿ ಚೀಟಿ ಹಿಡಿದು ಪೋಷಕರು ಓಡಾಟ ಮಾಡುತ್ತಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.
ಪೋಷಕರ ಕೈಯಲ್ಲಿ ಮಕ್ಕಳಿಗಾಗಿ ಕಾಪಿ ಚೀಟಿ
ಮತ್ತೊಂದು ವಿಚಾರ ಅಂದರೆ ಇಲ್ಲಿನ ಪೋಷಕರ ಕೈಯಲ್ಲಿ ಕಾಪಿ ಚೀಟಿಗಳು ಕಂಡು ಬಂದಿವೆ. ಹೇಗಾದರೂ ಮಾಡಿ ನಮ್ಮ ಮಕ್ಕಳು ಪಾಸ್ ಆಗಲಿ ಅನ್ನೋ ಕಾರಣಕ್ಕೆ ಪೋಷಕರೇ ಕಾಪಿ ಚೀಟಿ ಹಿಡಿದು ಓಡಾಡುತ್ತಿರುವ ದೃಶ್ಯಗಳು ಕಂಡು ಬಂದಿದೆ. ಪ್ರಶ್ನೆ ಪತ್ರಿಕೆ ಕೊಟ್ಟು ಒಂದು ಗಂಟೆಯ ನಂತರ ವಾಟ್ಸಾಪ್ ಮುಖಾಂತರ ಉತ್ತರಗಳು ವೈರಲ್ ಆಗಿವೆ. ಇದನ್ನೇ ಕೆಲ ಪೋಷಕರು ಝೆರಾಕ್ಸ್ ಸೆಂಟರ್‌ಗಳಿಗೆ ಹೋಗಿ ಅಲ್ಲಿ ಮೈಕ್ರೋ ಝೆರಾಕ್ಸ್ ಅನ್ನು ತೆಗೆದುಕೊಂಡು ವಿದ್ಯಾರ್ಥಿಗಳಿಗೆ ಕೊಡುವುದು ಕಂಡು ಬಂದಿದೆ.
ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದು ಹೇಗೆ?
ಹಾಗಾದರೆ ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದು ಹೇಗೆ? ಯಾರಿಂದ ಪ್ರಶ್ನೆ ಪತ್ರಿಕೆ ಲೀಕ್ ಆಯ್ತು ಅನ್ನೋ ಪ್ರಶ್ನೆ ಮೂಡಿದೆ. ಇಲ್ಲಿ ಎರಡು ಹಂತದಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆಗುವ ಸಾಧ್ಯತೆ ಇದೆ. ಒಂದು ಅಲ್ಲಿರುವ ಸಿಬ್ಬಂದಿಗಳಿಂದ ಪ್ರಶ್ನೆ ಪತ್ರಿಕೆ ಲೀಕ್ ಆಗಿರಬಹುದು ಅಥವಾ ವಿದ್ಯಾರ್ಥಿಗಳು ಮೊಬೈಲ್ ಅನ್ನು ಪರೀಕ್ಷಾ ಕೇಂದ್ರಕ್ಕೆ ತೆಗೆದುಕೊಂಡು ಹೋಗಿ ಅದರ ಫೋಟೋ ತೆಗೆದು ಹೊರಗಡೆ ಇರುವ ಸ್ನೇಹಿತರಿಗೆ ಅಥವಾ ಸಂಬಂಧಿಕರಿಗೆ ಕಳುಹಿಸಿರುವ ಸಾಧ್ಯತೆ ಇದೆ.
ಬಳಿಕ ಉತ್ತರವನ್ನು ತಯಾರಿಸಿ ವೈರಲ್ ಮಾಡಲಾಗಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಇಲ್ಲಿ ಯಾವ ರೀತಿ ಪ್ರಶ್ನೆ ಪತ್ರಿಕೆ ಲೀಕ್ ಆಯ್ತು, ಯಾರು ಮಾಡಿದರು ಎನ್ನುವುದಕ್ಕೆ ಖಚಿತತೆ ಇಲ್ಲ. ಈಗಾಗಲೇ ಈ ಒಂದು ಮಾಹಿತಿಯನ್ನು ಇಲ್ಲಿನ ಡಿಡಿಪಿಯವರಿಗೆ ಮಾಹಿತಿ ನೀಡಲಾಗಿದೆ. ಈ ಬಗ್ಗೆ ಅವರು ಪರಿಶೀಲನೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅವರು ಯಾವ ಕ್ರಮ ಕೈಗೊಳ್ಳುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.












Click it and Unblock the Notifications