ರಾಯಚೂರಿನಲ್ಲಿ ದೇವಸ್ಥಾನ ಕಳುವು: ಬಿರಿಯಾನಿ ತಿಂದು ನಕಲಿ ನೋಟು ಕೊಟ್ಟು ಮೋಸ
ರಾಯಚೂರು ಮಾರ್ಚ್ 20: ರಾಯಚೂರಿನ ಐತಿಹಾಸಿಕ ದೇವಸ್ಥಾನಕ್ಕೆ ಖದೀಮರು ಕನ್ನ ಹಾಕಿದ್ದಾರೆ. ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಕಲ್ಲೂರಿನ ಮಹಾಲಕ್ಷ್ಮೀ ದೇವಸ್ಥಾನದ ದೇವರ ಮೈಮೇಲಿದ್ದ ಒಡವೆ ಆಭರಣಗಳನ್ನೆಲ್ಲಾ ದೋಚಿ ಒಂದೇ ಒಂದು ಸುಳಿವು ಸಿಗದಂತೆ ಎಸ್ಕೇಪ್ ಆಗಿದ್ದಾರೆ ಪಾಪಿಗಳು.
ಬುಧವಾರ (ಮಾರ್ಚ್ 19) ತಡರಾತ್ರಿ ಸಿರವಾರ ತಾಲೂಕಿನ ಕಲ್ಲೂರು ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ಇಂದು ಬೆಳಗ್ಗೆ ಅರ್ಚಕರು ದೇವಸ್ಥಾನಕ್ಕೆ ಆಗಮಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ದೇವರ ಮೈಮೇಲೆ ಇದ್ದ ಸುಮಾರು 25 ಲಕ್ಷ್ಮೂ ಹೆಚ್ಚು ಮೌಲ್ಯದ ಚಿನ್ನದ ಆಭರಣಗಳನ್ನು ಕಳವು ಮಾಡಲಾಗಿದೆ. ಕಳೆದ ದಿನ ರಾತ್ರಿ ಎಂದಿನಂತೆ ದೇವಸ್ಥಾನದ ಬಾಗಿಲನ್ನು ಹಾಕಿ ಅರ್ಚಕರು ಮನೆಗೆ ತೆರಳಿದ್ದರು. ತಡರಾತ್ರಿ ಬಂದ ಕಳ್ಳರು ದೇವರ ಒಡವೆ ಕದ್ದು ಪರಾರಿಯಾಗಿದ್ದಾರೆ.

ಬೆಳಗ್ಗೆ ದೇವಸ್ಥಾನದ ಬಾಗಿಲು ತೆರೆದು ನೋಡಿದಾಗ ಕಳ್ಳರ ಕೈಚಳಕದ ವಿಷಯ ಗೊತ್ತಾಗಿದೆ. ತಡ ಮಾಡದೇ ಸ್ಥಳೀಯ ಪೊಲೀಸರಿಗೆ ದೇವಸ್ಥಾನ ಆಡಳಿತ ಮಂಡಳಿ ಮಾಹಿತಿ ನೀಡಿದೆ. ದೇವಸ್ಥಾನದಲ್ಲಿ ಪರಿಶೀಲನೆ ನಡೆಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.
ಮಹಾಲಕ್ಷ್ಮಿ ದೇವಸ್ಥಾನದಲ್ಲಿ 80 ಗ್ರಾಂ ತೂಕದ ವೆಂಕಟೇಶ್ವರ ಸ್ವಾಮಿ ಕಿರೀಟ, 30 ಗ್ರಾಂ ತೂಕದ ಲಕ್ಷ್ಮೀ ಕಿರೀಟ, 140 ಗ್ರಾಂ ಪಾದಗಳು, 40 ಗ್ರಾಂ ಪದಕ ಸೇರಿ 290 ಗ್ರಾಂ ಚಿನ್ನದ ಆಭರಣಗಳೊಂದಿಗೆ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ದುರಾದೃಷ್ಟ ಅಂದರೆ ಈ ದೇವಸ್ಥಾನದಲ್ಲಿ ಯಾವುದೇ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿಲ್ಲ. ಹೀಗಾಗಿ ಕಳ್ಳರು ಸುಲಭವಾಗಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಹರೀಶ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭರ್ಜರಿ ಮೋಜನ ಮಾಡಿ ನಕಲಿ ನೋಟು ಕೊಟ್ಟ ಗ್ರಾಹಕರು
ರಾಯಚೂರಿನಲ್ಲಿ ವ್ಯಕ್ತಿಗಳಿಬ್ಬರು ಭರ್ಜರಿ ಬಾಡೂಟ ತಿಂದು ನಕಲಿ ನೋಟು ಕೊಟ್ಟು ಪೊಲೀಸರ ಅತಿಥಿಯಾಗಿದ್ದಾರೆ. ಮಂಜುನಾಥ್ ಹಾಗೂ ರಮೇಶ್ ನಗರದ ಬಿರಿಯಾನಿ ಹೋಟೆಲ್‌ನಲ್ಲಿ ತಿಂದು ತೇಗಿ ನಕಲಿ ನೋಟು ಕೊಟ್ಟು ಯಾಮಾರಿಸಲು ನೋಡಿದ್ದಾರೆ.
ಆದರೆ ಮಾಲೀಕನಿಗೆ ನಕಲಿ ನೋಟು ಗೊತ್ತಾಗಿ ಇಬ್ಬರನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಮಾರ್ಕೆಟ್ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.












Click it and Unblock the Notifications