ಕುಮಾರಸ್ವಾಮಿ ವಿರುದ್ಧ ಶಿವನಗೌಡ ನಾಯಕ್ ಏಕವಚನದ ವಾಗ್ದಾಳಿ
ರಾಯಚೂರು, ಜೂನ್ 26: ತಮ್ಮ ಪಾದಯಾತ್ರೆಯ ಕುರಿತು ಟೀಕಿಸಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ದೇವದುರ್ಗದ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಏಕವಚನದ ವಾಗ್ದಾಳಿ ನಡೆಸಿದರು.
ಯಡಿಯೂರಪ್ಪ ನೇತತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಏಕೆ ಇವರು ಮಾತನಾಡಲಿಲ್ಲ ಎಂದು ಪ್ರಶ್ನಿಸಿದ್ದ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದ ಅವರು, 'ನಿಮ್ಮ ಸರ್ಕಾರ ಇದ್ದಾಗ ಅಭಿವೃದ್ಧಿ ಮಾಡಿಕೊಳ್ಳಿ ಎನ್ನುವ ಮುಖ್ಯಮಂತ್ರಿಗೆ ಜ್ಞಾನ ಇದೆಯೇ? ಇವನೆಂತ ಮುಖ್ಯಮಂತ್ರಿ?' ಎಂದು ಏಕವಚನದಲ್ಲಿ ಕಿಡಿಕಾರಿದರು.
ರಾಜ್ಯದ ಅಭಿವೃದ್ಧಿ ಮಾಡುವುದು ಮುಖ್ಯಮಂತ್ರಿಯ ಕರ್ತವ್ಯ. ಆದರೆ, ನಾವು ಅದಕ್ಕಾಗಿ ಮನವಿ ಸಲ್ಲಿಸಿದರೆ, ನಿಮ್ಮ ಸರ್ಕಾರ ಇದ್ದಾಗ ಅಭಿವೃದ್ಧಿ ಮಾಡಿಕೊಳ್ಳಬೇಕಿತ್ತು ಎಂದು ಬೇಜವಾಬ್ದಾರಿಯಿಂದ ಹೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕುಮಾರಸ್ವಾಮಿ ಅವರ ಸಮ್ಮಿಶ್ರ ಸರ್ಕಾರದಲ್ಲಿ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಅನುದಾನ ಕೊಡುತ್ತಿಲ್ಲ. ಇದರಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ನಮ್ಮ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಘೋಷಣೆಯಾಗಿದ್ದ ಅಭಿವೃದ್ಧಿ ಯೋಜನೆಗಳಿಗೆ ಸಂಪುಟದಲ್ಲಿ ಅನುಮೋದನೆ ದೊರೆತರೂ ಅವುಗಳಿಗೆ ಅನುದಾನ ಸಿಗದೆ ಅರ್ಧದಲ್ಲಿಯೇ ಕೆಲಸಗಳು ನಿಂತಿವೆ. ಇದರಿಂದ ಜನಸಾಮಾನ್ಯರಿಗೆ ಅನ್ಯಾಯ ಆಗುತ್ತಿದ ಎಂದು ಆರೋಪಿಸಿದರು.
ಅನುದಾನ ಸಿಗದ ಕಾರಣ ಬೇಸೆತ್ತು ಪಾದಯಾತ್ರೆ ಮಾಡುತ್ತಿದ್ದೇವೆ. ವಿರೋಧ ಪಕ್ಷವಾಗಿ ಈ ರೀತಿಯ ಹೋರಾಟ ಮಾಡುವುದು ನಮ್ಮ ಕರ್ತವ್ಯ. ಆದರೆ, ನಮ್ಮ ಕೂಗನ್ನು ಕೇಳಿಸಿಕೊಳ್ಳಲು ಮುಖ್ಯಮಂತ್ರಿ ಮುಂದಾಗುತ್ತಿಲ್ಲ. ಬದಲಾಗಿ ನಮ್ಮ ವಿರುದ್ಧವೇ ಕಿಡಿಕಾರುತ್ತಿದ್ದಾರೆ. ಇಡೀ ದೇಶದಲ್ಲಿ ಇಂತಹ ಹೀನಾಯ ಮುಖ್ಯಮಂತ್ರಿಯನ್ನು ನೋಡಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications