ಸಿರಿಧ್ಯಾನಗಳಿಂದ ವಿವಿಧ ಖಾದ್ಯ ತಯಾರಿ&ಮಾರಾಟ: ಕಲಿಕೆಯೊಂದಿಗೆ ಗಳಿಕೆಯತ್ತ ಕೃಷಿ ವಿವಿಯ ವಿದ್ಯಾರ್ಥಿಗಳು
ರಾಯಚೂರು, ಜುಲೈ 14: ಕಲಿಕೆಯಿಂದ ಗಳಿಕೆ ಕಾರ್ಯಕ್ರಮ ಎಂಬ ಹೊಸ ಯೋಜನೆ ಅಡಿಯಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಿತ್ಯವೂ ತಾವೇ ಪೌಷ್ಟಿಕ ಆಹಾರ ಪದಾರ್ಥ ತಯಾರಿಸಿ ಗ್ರಾಹಕರಿಗೆ ಮಾರಾಟ ಮಾಡಿ ಇತರೆ ವಿವಿ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.
ಅಂತರಾಷ್ಟ್ರೀಯ ಸಿರಿಧಾನ್ಯಗಳ ವರ್ಷ 2023 ಎಂಬ ಯೋಜನೆಯಡಿ ಸಿರಿಧಾನ್ಯಗಳ ಮಹತ್ವವನ್ನು ಜಗತ್ತಿಗೆ ಪರಿಚಿಯಿಸಲು ಸಿರಿಧಾನ್ಯ ವರ್ಷದ ನಿಮಿತ್ತ ಸಿರಿಧಾನ್ಯ ಮೇಳ ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಸಂಸ್ಕರಣೆ ಮತ್ತು ಆಹಾರ ತಂತ್ರಜ್ಞಾನ ವಿಭಾಗದಲ್ಲಿ ನಡೆದಿದೆ. ಇದೇ ವೇಳೆ ಸಿರಿಧಾನ್ಯ ಆಧಾರಿತ ಬೇಕರಿ ಪದಾರ್ಥಗಳ ಉತ್ಪಾದನಾ ಘಟಕ ಸ್ಥಾಪಿಸಲಾಗಿದೆ.

ವಿದ್ಯಾರ್ಥಿಗಳು ಈ ಘಟಕದಿಂದ ವಿವಿಧ ಬೇಕರಿ ಪದಾರ್ಥ ತಯಾರಿಸಿ ಮಾರುಕಟ್ಟೆಗೆ ಒದಗಿಸುತ್ತಿದ್ದಾರೆ. ಉತ್ತಮ ಆಹಾರ ಕ್ರಮದಿಂದ ಆರೋಗ್ಯ ಬೆಳವಣಿಗೆಯ ಏರುಪೇರು ನಿಭಾಯಿಸಬಹುದು. ಇತ್ತೀಚಿನ ದಿನಗಳಲ್ಲಿ ಜನ ರುಚಿ ಪದಾರ್ಥಗಳ ಕಡೆ ಹೆಚ್ಚಿನ ಗಮನ ನೀಡುತ್ತಿದ್ದಾರೆ. ಆದರೆ ನಾಲಿಗೆಯ ರುಚಿಗೆ ತಕ್ಕಂತೆ ಆಹಾರ ಬಳಸಿದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ. ಆದ್ದರಿಂದ ಪೌಷ್ಟಿಕಾಂಶಗಳ ಅಗತ್ಯತೆ ನೀಗಿಸಲು ಸಿರಿಧಾನ್ಯಗಳ ಬಳಕೆಗೆ ಉತ್ತೇಜನ ನೀಡಲಾಗಿದೆ.
ನವಣೆ , ಕೊರಲು , ಉದಲು , ಹಾರಕ , ಸಾಮೆ ಮುಂತಾದ ಸಿರಿಧಾನ್ಯ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯೊಂದಿಗೆ ವಿವಿಧ ಉತ್ಪನಗಳನ್ನು ತಯಾರಿಸಲಾಗುತ್ತಿದೆ. ಪ್ರಮುಖವಾಗಿ ನವಣೆ ಹಾಗೂ ರಾಗಿಯಿಂದ ಬೇಕರಿ ಉತ್ಪನ್ನಗಳು ತಯಾರುಗುತ್ತಿವೆ. ಉತ್ಪನ್ನಗಳ ಮಾರಾಟಕ್ಕೆ ತಂತ್ರಜ್ಞಾನದ ಮೊರೆ ಹೋಗಲಾಗಿದೆ.

ಕೃಷಿ ವಿವಿಯ ಆವರಣದಲ್ಲಿ ನವಣೆ, ರೋರಲಿ , ಉದಲು, ಸಾಮೆ , ಹಾರಕ , ರಾಗಿ ಸೇರಿದಂತೆ ನವಧಾನ್ಯಗಳಿಂದ ತಯಾರಿಸಿದ ಸಿರಿದಾನ್ಯ ಪದಾರ್ಥವನ್ನು ಕಳೆದ ಒಂದು ತಿಂಗಳಿಂದ ವಾಯು ವಿಹಾರಕ್ಕೆ ಬರುವವರಿಗೆ ಮಾರುತ್ತಿದ್ದು, ಇಲ್ಲಿಯವರೆಗೆ ಲಕ್ಕಕ್ಕೂ ಹೆಚ್ಚು ಹಣ ಗಳಿಕೆಯಾಗಿವೆ. ಬರುವ ದಿನಗಳಲ್ಲಿ ಉತ್ಪನ್ನಗಳ ಮಾರಾಟ ನಾನಾ ಕಡೆ ವಿಸ್ತರಣೆಯಾಗಲಿದೆ.
ರಾಯಚೂರು ಕೃಷಿ ವಿವಿಯ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ.ಟೆಕ್ ವಿದ್ಯಾರ್ಥಿಗಳು ತಮ್ಮ ಕಲಿಕೆಯ ಅನುಭವ ವಿಷಯದಡಿ ವಿವಿಧ ಮೌಲ್ಯ ವರ್ಧಿತ ಪದಾರ್ಥ ತಯಾರಿಸುತ್ತಿದ್ದಾರೆ. ಮೌಲ್ಯ ವರ್ಧಿತ ಪದಾರ್ಥ ತಯಾರಿಸುವುದು ಹೇಗೆ? ಅವುಗಳಿಗೆ ಮಾರುಕಟ್ಟೆ ಬೇಡಿಕೆ ಸೃಷ್ಟಿಸುವುದು ಹೇಗೆ? ಕಲಿಕೆಯಿಂದ ಹಣ ಗಳಿಸುವುದು ಹೇಗೆ? ಇದರಿಂದ ಗ್ರಾಹಕರಿಗೆ ಉಪಯೋಗವೇನು? ಎಂಬ ಬಗ್ಗೆ ಪ್ರಾತ್ಯಕ್ಷಿಕೆ ರೂಪದಲ್ಲಿ ಒಟ್ಟು 12 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ. ಹೀಗಾಗಿ ರಾಯಚೂರು ಕೃಷಿ ವಿವಿಯ ಸಂಸ್ಕರಣೆ ಮತ್ತು ಆಹಾರ ತಂತ್ರಜ್ಞಾನ ವಿಭಾಗದಲ್ಲಿ ಪೌಷ್ಟಿಕ ಭರಿತ ಪದಾರ್ಥ ತಯಾರಿಸುವುದು ನಡೆದಿದೆ.
ಕಲಿಕೆಯಿಂದ ಗಳಿಕೆ ಕಾರ್ಯಕ್ರಮದಡಿ ಸಿರಿಧಾನ್ಯದಿಂದ ಬ್ರೇಡ್ , ಚಕ್ಕುಲಿ, ಬಿಸ್ಕತ್ , ಕೇಕ್ , ಪಪ್ಸ್ ಮುಂತಾದ ಪದಾರ್ಥ ತಯಾರಿಸಿ ರಾಯಚೂರು ಕೃಷಿ ವಿವಿಯ ವಿವಿಧ ವಿಭಾಗಗಳಿಗೆ ರವಾನೆ ಮತ್ತು ವಿವಿ ಆವರಣದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಉತ್ತಮ ಲಾಭ ಬರುತ್ತಿದೆ. ಸಿರಿಧಾನ್ಯ ಬಳಸಿ ತಯಾರಿಸುವ ಪದಾರ್ಥದಿಂದ ಜನರ ಆರೋಗ್ಯ ಸುಧಾರಣೆಯಾಗಲಿದೆ. ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ.ಟೆಕ್ ವಿದ್ಯಾರ್ಥಿಗಳು ತಮ್ಮ ಕಲಿಕೆಯ ಅನುಭವ ವಿಷಯದಡಿ ಸಿರಿಧಾನ್ಯಗಳಿಂದ ವಿವಿಧ ಮೌಲ್ಯವರ್ಧಿತ ಪದಾರ್ಥ ತಯಾರಿಸಿ ಮಾರಾಟ ಮಾಡುತ್ತಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರಿಂದ ಉತ್ತಮ ಲಾಭವು ಬಂದಿದೆ ಎಂದು ಕೃಷಿ ವಿವಿ ಬಿ.ಟೆಕ್ ವಿದ್ಯಾರ್ಥಿ ಮಹಾಂತೇಶ್ ಗಣಿಗ ಖುಷಿ ಹಂಚಿಕೊಂಡಿದ್ದಾರೆ.
ಸಿರಿಧಾನ್ಯ ಬಳಸಿ ತಯಾರಿಸಿದ ಉತ್ಪನ್ನಗಳು ಜನರ ಆರೋಗ್ಯ ಸುಧಾರಿಸಿವೆ. ನಾನಾ ಕಾಯಿಲೆಗಳ ನಿವಾರಣೆಗೆ ರಾಮಬಾಣವಾಗಿದೆ. ಒತ್ತಡದ ವೇಗದ ಬದುಕಿಗೆ ಸಿಲುಕಿ ಆರೋಗ್ಯ ಹಾಳು ಮಾಡಿಕೊಳ್ಳುವವರ ಹಿತದೃಷ್ಟಿ ಕಾಯಲಾಗುವುದು. ವಿವಿಯ ಅಂತಿಮ ವರ್ಷದ ಬಿ.ಟೆಕ್ ವಿದ್ಯಾರ್ಥಿಗಳು ಸಿರಿಧಾನ್ಯಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಕಡಿಮೆ ದರದಲ್ಲಿ ಮಾರುತ್ತಿದ್ದಾರೆ. ನಮ್ಮ ಸಂಸ್ಥೆ ವಿದ್ಯಾರ್ಥಿಗಳ ಬೆನ್ನಿಗೆ ನಿಂತಿದೆ ಎಂದು ಕೃಷಿ ವಿವಿ ಕುಲಪತಿ ಪ್ರೊ. ಹನುಮಂತಪ್ಪ ಹೇಳಿದ್ದಾರೆ.












Click it and Unblock the Notifications