ಮಿರ್ಚಿ ಬಜ್ಜಿ, ಗಿರ್ಮಿಟ್ ಚಪ್ಪರಿಸಿ ತಿಂದ ರಾಹುಲ್ ಗಾಂಧಿ
Recommended Video

ರಾಯಚೂರು, ಫೆಬ್ರವರಿ 12: ರಾಯಚೂರಿನಲ್ಲಿ ರೋಡ್ ಶೋ ನಡೆಸುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಉತ್ತರ ಕರ್ನಾಟಕದ ಜನಪ್ರಿಯ ಖಾದ್ಯ ಮಿರ್ಚಿ ಬಜ್ಜಿ, ಗಿರ್ಮಿಟ್ ತಿಂದು ಖುಷಿಪಟ್ಟಿದ್ದಾರೆ.
ರಾಯಚೂರು ಪಟ್ಟಣದಲ್ಲಿ ರೋಡ್ ಶೋ ಬಳಿಕ ಕಲ್ಮಲಾ ಗ್ರಾಮದಲ್ಲಿ ರೋಡ್ ಶೋ ಸಾಗುತ್ತಿದ್ದಾಗ ಗ್ರಾಮದ ಸಣ್ಣ ಹೊಟೆಲ್ ಒಂದಕ್ಕೆ ತೆರಳಿದ ರಾಹುಲ್ ಗಾಂಧಿ ಉತ್ತರ ಕರ್ನಾಟಕದ ಜನಪ್ರಿಯ ಖಾದ್ಯ ಮಿರ್ಚಿ ಬಜ್ಜಿ, ಗಿರ್ಮಿಟ್ ತಿಂದು, ಚಾ ಕುಡಿದು ತೃಪ್ತರಾದರು.
ಚಿತ್ರಗಳು : ಮಿರ್ಚಿ ಬಜ್ಜಿ ಗಿರ್ ಮಿಟ್ ತಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್
ತಮ್ಮ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಇಂಧನ ಸಚಿವ ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ನಾಯಕರುಗಳಾದ ವೀರಪ್ಪ ಮೋಯ್ಲಿ ಮತ್ತಿತರನ್ನೂ ಕರೆದುಕೊಂಡು ಹೋಗಿದ್ದ ರಾಹುಲ್ ಎಲ್ಲರಿಗೂ ತಾವೇ ಬಜ್ಜಿ ಹಂಚಿದರು.

ರುಚಿಗಷ್ಟೆ ಒತ್ತು
ಕಲ್ಮಲಾ ಗ್ರಾಮದಲ್ಲಿ ಸಣ್ಣ ಹೊಟೆಲ್ ಹೊಕ್ಕ ರಾಹುಲ್ ಅಲ್ಲಿನ ಮುರುಕು ಟೇಬಲ್ ಮೇಲೆ, ದಿನಪತ್ರಿಕೆಯಲ್ಲಿ ಸುತ್ತಿ ತಂದಿಟ್ಟ ಮಿರ್ಚಿ ಬಜ್ಜಿಯನ್ನು ಬಯಸಿ ಬಯಸಿ ತಿಂದರು, ಸ್ಥಳಾವಕಾಶ ಕಡಿಮೆ ಇದ್ದರೂ ಇಕ್ಕಟ್ಟಿನಲ್ಲೇ ಕೂತು ಹಿರಿಯ ನಾಯಕರೂ ಕೂರುವಂತೆ ಅನುವು ಮಾಡಿಕೊಟ್ಟರು. ಪೇಪರ್‌ನಲ್ಲಿ ಸುತ್ತಿ ತಂದಿಟ್ಟ ಬಜ್ಜಿಯ ಶುಚಿಯ ಕಡೆ ಗಮನ ಕೊಡದೆ ರುಚಿಯನ್ನು ಮಾತ್ರವೇ ನೆನೆಸಿ ಸವಿದರು.

ಹೋಟೆಲ್ ಮಾಲಕಿಯೊಂದಿಗೆ ಮಾತುಕತೆ
ಮಿರ್ಚಿ ಬಜ್ಜಿ, ಗಿರ್ಮಿಟ್ ತಿಂದು ಟೀ ಕುಡಿದು ಖುಷಿಪಟ್ಟ ಸಿದ್ದರಾಮಯ್ಯ ಅವರು ಹೋಟೆಲ್ ಮಾಲಕಿಯನ್ನು ಕರೆದು ದಿನಕ್ಕೆ ಎಷ್ಟು ವ್ಯಾಪಾರ ಆಗುತ್ತದೆ ಎಂದೆಲ್ಲಾ ವಿಚಾರಿಸಿದರು. ಆಕೆ, ದೋ ತೀನ್ ಹಜಾರ್ ಎಂದಾಗ, ತಮ್ಮ ಕಿಸೆಯಿಂದ 4000 ಹಣ ನೀಡಿ ಕೈಮುಗಿದರು.

ಇವರು ಯಾರು ಗೊತ್ತಾ?
ರಾಹುಲ್ ಗಾಂಧಿ ಅವರು ಮಿರ್ಚಿ ಬಜ್ಜಿ ತಿನ್ನುವ ಹೊತ್ತಿಗೆ ಹೋಟೆಲ್ ಒಳಗೆ ಕೆಲವರು ವಯಸ್ಸಾದ ಮಹಿಳೆಯರು ಬಂದರು. ಅವರನ್ನು ಮಾತನಾಡಿಸಿದ ಸಿದ್ದರಾಮಯ್ಯ ಅವರು 'ನಾನು ಯಾರು ಗೊತ್ತಾ?, ನನ್ನ ಹೆಸರು ಗೊತ್ತಾ?' ಎಂದು ಪ್ರಶ್ನೆ ಮಾಡಿದರು. ಅವರು ಏನು ಉತ್ತರಿಸಲಿಲ್ಲ. ರಾಹುಲ್ ಗಾಂಧಿ ಅವರು ಮಹಿಳೆಯರಿಗೂ ಮಿರ್ಚಿ ಬಜ್ಜಿ ತಿನ್ನಲು ನೀಡಿದರು.

ಮಾಧ್ಯಮದವರಿಗೂ ಬಜ್ಜಿ ಕೊಟ್ರು
ಹೋಟೆಲ್‌ನವರು ಬಜ್ಜಿ ತಂದು ರಾಹುಲ್ ಗಾಂಧಿ ಅವರು ಕೂತಿದ್ದ ಟೇಬಲ್ ಮುಂದೆ ಇಡುತ್ತಿದ್ದರು. ಅದನ್ನು ರಾಹುಲ್ ಅವರೇ ತಮ್ಮ ಸುತ್ತಲೂ ಇದ್ದವರಿಗೆ ತಿನ್ನಲು ನೀಡಿದರು. ಮಾಧ್ಯಮದವರಿಗೂ ರಾಹುಲ್ ಅವರು ಮಿರ್ಚಿ ಬಜ್ಜಿ ತಿನ್ನಲು ಕೊಟ್ಟರು. ಅಲ್ಲಿಗೆ ಆಗಮಿಸಿದ ವೃದ್ಧೆಯರಿಗೂ ರಾಹುಲ್ ಬಜ್ಜಿ ತಿನ್ನಲು ಕೊಟ್ಟರು.

ಮಾತಾಡದೆ ಉತ್ತರಿಸಿದ ರಾಹುಲ್
ಯುವ ಕಾಂಗ್ರೆಸ್ ಇತ್ತೀಚೆಗಷ್ಟೆ ಪಕೋಡಾ ಮಾರಿ ಮೋದಿ ಅವರು 'ಪಕೋಡಾ' ಹೇಳಿಕೆ ವಿರುದ್ಧ ಪ್ರತಿಭಟನೆ ಮಾಡಿದ ಬೆನ್ನಲ್ಲೆ ಬಿಜೆಪಿಗರು 'ಕಾಂಗ್ರೆಸ್ ಪಕೋಡಾ ಮಾರುವವರಿಗೆ ಅವಮಾನ ಮಾಡುತ್ತಿದೆ' ಎಂದು ವಾಗ್ದಾಳಿ ನಡೆಸಿದ್ದರು. ರಾಹುಲ್ ಇಂದು ಅದೇ ಬೀದಿ ಬದಿ ಸಣ್ಣ ಬಜ್ಜಿ, ಪಕೋಡಾ ಮಾಡುವ ಅಂಗಡಿಗೆ ಭೇಟಿ ನೀಡಿ ಬಿಜೆಪಿ ಅವರ ಟೀಕೆಗಳಿಗೆ ಟಾಂಗ್ ನೀಡಿದ್ದಾರೆ.

ಸಾಮಾನ್ಯ ಜನರ ನಾಯಕನಾಗುವ ಸ್ಟಂಟ್?
ಯುವರಾಜ ರಾಹುಲ್ ಆಗಿದ್ದವರು ಎಐಸಿಸಿ ಅಧ್ಯಕ್ಷರಾದ ನಂತರ ಮಹಾರಾಜ ರಾಹುಲ್ ಎಂದು ಕರೆಸಿಕೊಳ್ಳುತ್ತಿರುವ ರಾಹುಲ್ ಗಾಂಧಿ. ತಮ್ಮ ಈ ಸಿರಿವಂತ ಎಂಬ ಇಮೇಜು ಕಳೆದುಕೊಳ್ಳಲು ಮಾಡುತ್ತಿರುವ ಪ್ರಯತ್ನ ಭಾಗವಾಗಿದೆ ಎಂದು ಅಂದಾಜಿಸಬಹುದು. ಅವರು ಸಾಮಾನ್ಯ ಜನರ ನಾಯಕನಾಗುವ ಪ್ರಯತ್ನದ ಭಾಗವಾಗಿಯೂ ಇದನ್ನು ನೋಡಬಹುದು.












Click it and Unblock the Notifications