Bengaluru Rain Alert: ಬೆಂಗಳೂರು ನಗರಾದ್ಯಂತ ಗುಡುಗು ಸಹಿತ ವ್ಯಾಪಕ ಮಳೆ ಎಚ್ಚರಿಕೆ, ಇಲ್ಲಿದೆ ವರದಿ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಪೂರ್ವ ಮುಂಗಾರು ಮಳೆ ಸಕ್ರಿಯವಾಗಿದೆ. ನಗರಾದ್ಯಂತ ವಿವಿಧ ಬಡಾವಣೆಗಳಲ್ಲಿ ಆಗಾಗ ಮಳೆ ಆಗುತ್ತಿದ್ದು, ಬಿಸಿಲಿನ ವಾತಾವರಣ ಮರೆಯಾಗಿದೆ. ನಿತ್ಯ ಸಂಜೆ ನಂತರ ತಂಪು ಗಾಳಿ ಬೀಸುತ್ತಿದೆ. ಇಂದು ಸೋಮವಾರವು ಮಳೆ ಮುಂದುವರಿದಿದ್ದು ಅರಕೆರೆ, ದೊರೆಸಾನಿಪಾಳ್ಯ ಸೇರಿದಂತೆ ಅನೇಕ ಕಡೆಗಳಲ್ಲಿ ಜಿಟಿ ಜಿಟಿ ಮಳೆ ಆಗಿದೆ. ಮುಂದಿನ ಮೂರು ದಿನ (ಮೇ 28ರವರೆಗೆ) ವ್ಯಾಪಕ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸೋಮವಾರ ರಾತ್ರಿ ಕೋರಮಂಗಲ, ಮಾರತ್ತಹಳ್ಳಿ, ಮಹಾದೇವಪುರ, ಎಚ್‌ಎಸ್‌ಅರ್ ಬಡಾವಣೆಗಳಲ್ಲಿ ತುಂತುರು ಮಳೆ ಆಗಿದೆ. ಅರಕೆರೆಯಲ್ಲಿ 21.5 ಮಿಲಿ ಮೀಟರ್ ಮಳೆ, ದೊರೆಸಾನಿಪಾಳ್ಯದಲ್ಲಿ 19, ಬಸವೇಶ್ವರ ನಗರ 15, ಗೊಟ್ಟಿಗೆರೆ 10 ಮಿಲಿ ಮೀಟರ್ ಮಳೆ ಆಗಿದೆ. ಇನ್ನುಳಿದ ಕಡೆಗಳಲ್ಲಿ ಕೆಲವು ನಿಮಿಷಗಳ ಮಳೆಯ ಸಿಂಚನವಾಗಿದ್ದು, ಎಲ್ಲಿಯೋ ಜೋರು ಮಳೆ ಆಗಿಲ್ಲ.

ಇಂದಿನ ಹವಾಮಾನ ಮುನ್ಸೂಚನಾ ವರದಿ ಪ್ರಕಾರ ನೋಡುವುದಾದರೆ ಮೇ 28ರವರೆಗೆ ನಗರಾದ್ಯಂತ ಗುಡುಗು ಮಿಂಚು ಸಹಿತ ವ್ಯಾಪಕ ಮಳೆ ಆಗಲಿದೆ. ಈ ವೇಳೆ ಪ್ರತಿ ಗಂಟೆಗೆ 40-50 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ. ಗರಿಷ್ಠ ತಾಪಮಾನದಲ್ಲಿ ಸದ್ಯಕ್ಕೆ ಯಾವುದೇ ತೀವ್ರ ಸ್ವರೂಪದ ಬದಲಾವಣೆಗಳು ಇಲ್ಲ.
ನಗರದ ತಾಪಮಾನದಲ್ಲಿ ಇಳಿಕೆ, ಕೋಲ್ ಕೋಲ್..
ಮುಂದಿನ ಒಂದು ವಾರದ ನಗರದಲ್ಲಿ ಗರಿಷ್ಠ 31 ರಿಂದ 33 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದ್ದು, ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ಇರಲಿದೆ. ವಾರದ ಹಿಂದೆ 35ರಷ್ಟಿದ್ದ ಗರಿಷ್ಠ ಬಿಸಿಲು ಇದೀಗ 31ರ ಆಸುಪಾಸಿಗೆ ಇಳಿಕೆ ಆಗಿದೆ. ಈ ಮೂಲಕ ನಗರವು ತಂಪು ವಾತಾವರಣಕ್ಕೆ ಸಾಕ್ಷಿ ಆಗುತ್ತಿದೆ. ಜೂನ್ ಮೊದಲ ವಾರದ ಹೊತ್ತಿಗೆ ನಗರದಲ್ಲಿ ಬೇಸಿಗೆ ಕಳೆದು ಸಂಪೂರ್ಣ ಮಳೆಗಾಲದ ವಾತಾವರಣ ಕಂಡು ಬರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮೇ 29ರಿಂದ ಬೆಂಗಳೂರಿನಲ್ಲಿ ಸಹಜ ವಾತಾವರಣ ಇರಲಿದ್ದು, ಅಲ್ಲಲ್ಲಿ ಹಗುರ ಮಳೆ ನಿರೀಕ್ಷೆ ಇದೆ. ಆ ಹೊತ್ತಿಗೆ ಮುಂಗಾರು ಮಳೆ ಪ್ರವೇಶವಾಗಿ ಆರಂಭದಲ್ಲೇ ತೀವ್ರಗೊಂಡಲ್ಲಿ ನಗರದ ವಾತಾವರಣ ಸಂಪೂರ್ಣ ಬದಲಾಗಲಿದೆ. ಸಾಧಾರಣದಿಂದ ಭಾರೀ ಮಳೆ ಆಗಲೂಬಹುದು. ಇದೆಲ್ಲವು ಬಂಗಾಳಕೊಲ್ಲಿ, ಅರಬ್ಬಿ ಸಮುದ್ರ ಭಾಗದಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯಗಳ ತೀವ್ರತೆಯ ಮೇಲೆ ಅವಲಂಬಿತವಾಗಿದೆ. ಅಲ್ಲಿ ವಾಯು ಚಂಡಮಾರುತ ಕುಸಿತದ ಪ್ರಭಾವವು ಹೆಚ್ಚಾದಲ್ಲೂ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಅನೇಕ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ.












Click it and Unblock the Notifications