1000 ಕೆಪಿಎಸ್ ಶಾಲೆಗಳ ಆರಂಭದ ಗುರಿ: ಜೂನ್ 1ಕ್ಕೆ ಸಿದ್ದರಾಮಯ್ಯ ಕಟ್ಟಡ ಶಂಕುಸ್ಥಾಪನೆ: ಮಧು ಬಂಗಾರಪ್ಪ
ಬೆಂಗಳೂರು: ಕರ್ನಾಟಕ ಸರ್ಕಾರಿ ಶಾಲೆಗಳ ಸಬಲೀಕರಣ ಮತ್ತು ಗುಣಮಟ್ಟದ ಶಿಕ್ಷಣದ ಗುರಿಯೊಂದಿಗೆ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಜೂನ್ 1 ರಂದು ಶಿವಮೊಗ್ಗದಲ್ಲಿ ನೂತನ 'ಕರ್ನಾಟಕ ಪಬ್ಲಿಕ್ ಶಾಲೆ'ಗಳ (KPS) ಕಟ್ಟಡಗಳಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಸೋಮವಾರ ಘೋಷಿಸಿದರು.
ಇಂದು ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು, ಪ್ರಾಂಶುಪಾಲರು, ಬಿ.ಇ.ಒ (BEO) ಹಾಗೂ ಎಸ್.ಡಿ.ಎಂ.ಸಿ (SDMC) ಸದಸ್ಯರೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ. ಜೂನ್ 1ರಂದು 'ಮಕ್ಕಳ ಹಬ್ಬ' ಮತ್ತು ಅದ್ದೂರಿ ಸ್ವಾಗತ ನಡೆಯಲಿದೆ. ಅಂದು ಹೊಸ ಶೈಕ್ಷಣಿಕ ವರ್ಷದ ಆರಂಭವನ್ನು ಹಬ್ಬದ ರೀತಿಯಲ್ಲಿ ಆಚರಿಸಲು ಸಚಿವರು ಕರೆ ನೀಡಿದ್ದಾರೆ. ಮೇ 29, 30 ಮತ್ತು 31 ರಂದು ಶಾಲಾ ಆವರಣವನ್ನು ಸ್ವಚ್ಛಗೊಳಿಸಿ, ಜೂನ್ 1 ರಂದು ಶಾಲೆಗೆ ಬರುವ ಮಕ್ಕಳನ್ನು ತಳಿರು ತೋರಣ ಕಟ್ಟಿ, ಹಬ್ಬದ ವಾತಾವರಣದಲ್ಲಿ (ಮಕ್ಕಳ ಹಬ್ಬ) ಸ್ವಾಗತಿಸಬೇಕು. ಎಸ್.ಡಿ.ಎಂ.ಸಿ ಹಾಗೂ ಹಳೆಯ ವಿದ್ಯಾರ್ಥಿಗಳು ಕೈಜೋಡಿಸಿ ಮಕ್ಕಳಿಗಾಗಿ ವಿಶೇಷ ಊಟದ ವ್ಯವಸ್ಥೆ ಮಾಡುವ ಮೂಲಕ ಅವರಲ್ಲಿ ಶಾಲೆಗೆ ಬರುವ ಉತ್ಸಾಹವನ್ನು ಹೆಚ್ಚಿಸಬೇಕು.

ರಾಜ್ಯಾದ್ಯಂತ ಒಟ್ಟು 1000 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (KPS) ಆರಂಭಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗದಲ್ಲಿ ಕೆಪಿಎಸ್ ಶಾಲೆಗಳ ಶಂಕುಸ್ಥಾಪನೆ ನೆರವೇರಲಿದೆ ಎಂದು ತಿಳಿಸಿದರು. ಈ ಮೂಲಕ ಕೆಪಿಎಸ್ ಶಾಲೆಗಳ ಆರಂಭಕ್ಕೆ ಸರ್ಕಾರ ವೇಗ ನೀಡಿದೆ ಎಂದು ಅವರು ಸುಳಿವು ನೀಡಿದರು.
ನಮ್ಮ ಶಾಲೆ ನಮ್ಮ ಜವಾಬ್ದಾರಿ: ದಾನಿಗಳಿಗೆ ಆಹ್ವಾನ
ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಕೇವಲ ಸರ್ಕಾರದ ಅನುದಾನವನ್ನೇ ಕಾಯದೆ, ಸಾರ್ವಜನಿಕರು ಕೈಜೋಡಿಸಬೇಕೆಂದು ಸಚಿವರು ಮನವಿ ಮಾಡಿದರು. ರಾಜ್ಯದಲ್ಲಿ 46,000 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿವೆ. ಹಳೆಯ ವಿದ್ಯಾರ್ಥಿಗಳು, ಉದ್ಯಮಿಗಳು ಹಾಗೂ ದಾನಿಗಳು 'ನಮ್ಮ ಶಾಲೆ ನಮ್ಮ ಜವಾಬ್ದಾರಿ' ಯೋಜನೆಯಡಿ ಆರ್ಥಿಕ ನೆರವು ನೀಡಬಹುದು ಎಂದು ಅವರು ಮುಕ್ತವಾಗಿ ಆಹ್ವಾನ ನೀಡಿದರು.
ದಾನಿಗಳು 500 ರೂಪಾಯಿಯಿಂದ ಹಿಡಿದು ಕೋಟ್ಯಂತರ ರೂಪಾಯಿವರೆಗೂ ದೇಣಿಗೆ ನೀಡುತ್ತಿದ್ದಾರೆ. ಈ ಅನುದಾನವನ್ನು ಶಾಲೆಗಳಿಗೆ ಸ್ಮಾರ್ಟ್ ಟಿವಿ, ಆರ್.ಓ (RO) ಪ್ಲಾಂಟ್, ಶೌಚಾಲಯ ನಿರ್ಮಾಣ, ಫ್ಯಾನ್ ಮತ್ತು ಲ್ಯಾಬ್ ಉಪಕರಣಗಳನ್ನು ಒದಗಿಸಲು ಬಳಸಿಕೊಳ್ಳಲಾಗುತ್ತಿದೆ.
ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ಕ್ರಮ
ಖಾಸಗಿ ಶಾಲೆಗಳಿಗಿಂತ ಅತ್ಯುತ್ತಮ ಹಾಗೂ ನುರಿತ ಶಿಕ್ಷಕರು ನಮ್ಮ ಸರ್ಕಾರಿ ಶಾಲೆಗಳಲ್ಲಿದ್ದಾರೆ ಎಂಬುದನ್ನು ಪೋಷಕರಿಗೆ ಮನವರಿಕೆ ಮಾಡಿ, ದಾಖಲಾತಿ (Admission Drive) ಹೆಚ್ಚಿಸಬೇಕು. ವಿದ್ಯಾರ್ಥಿಗಳು ಪೌಷ್ಟಿಕಾಂಶ ಹೆಚ್ಚಿಸಲು ಅಜೀಂ ಪ್ರೇಮ್‌ಜಿ ಫೌಂಡೇಶನ್ ನೆರವಿನೊಂದಿಗೆ ಪ್ರತಿದಿನ ಮೊಟ್ಟೆ ಅಥವಾ ಬಾಳೆಹಣ್ಣು ವಿತರಿಸಲಾಗುತ್ತಿದೆ. ಶಾಲೆಗಳಲ್ಲಿ ವಿಶೇಷ ತರಗತಿಗಳನ್ನು ನಡೆಸಲು ಅನುಕೂಲವಾಗುವಂತೆ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಅವರು ವಿವರಿಸಿದರು.
"ಶಿಕ್ಷಣ ಎಂಬುದು ಯಾರಿಂದಲೂ ಕದಿಯಲಾಗದ ಏಕೈಕ ಸಂಪತ್ತು. ನಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವ ಈ ಮಹತ್ಕಾರ್ಯದಲ್ಲಿ ಶಿಕ್ಷಕರು, ಪೋಷಕರು, ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಸಮುದಾಯ ಒಟ್ಟಾಗಿ ಶ್ರಮಿಸೋಣ" ಎಂದು ಹೇಳಿದರು.
ಕೆಪಿಎಸ್ ಅಗಲಿವೆ ಸರ್ಕಾರಿ ಶಾಲೆಗಳು
ಕರ್ನಾಟಕದ ಸರ್ಕಾರಿ ಶಾಲೆಗಳು ಮತ್ತು ಶಿಕ್ಷಣದ ಮಟ್ಟಿಗೆ ಪ್ರಸಕ್ತ ಶೈಕ್ಷಣಿಕ ವರ್ಷ 2026-27ನೇ ಸಾಲಿನಲ್ಲಿ ಮಹತ್ವದ ಬದಲಾವಣೆ ಆಗಲಿವೆ. ಐದಾರು ಕಿಲೋ ಮೀಟರ್ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲೆಗಳು ಕರ್ನಾಟಕ ಪಬ್ಲಿಕ್ ಶಾಲೆಗೆ (ಕೆಪಿಎಸ್) ಸೇರ್ಪಡೆಗೊಳ್ಳಲಿವೆ. ಈ ನಿಟ್ಟಿನಲ್ಲಿ ಚಿಕ್ಕಮಗಳೂರಿನಲ್ಲಿ 15 ಕೆಪಿಎಸ್ ಆರಂಭಿಸಲು ಅನುಮತಿ ಸಿಕ್ಕಿದೆ. ಒಟ್ಟಾರೆ ಈ ವರ್ಷ ಸುಮಾರು 80 ಕೆಪಿಎಸ್ ಶಾಲೆ ಸ್ಥಾಪನ ಮೂಲಕ ಸರ್ಕಾರಿ ಶಾಲೆಗಳನ್ನು ಮುಚ್ಚಲಿದ್ದಾರೆ. ರಾಜ್ಯಾದ್ಯಂತ ಒಟ್ಟು ಸುಮಾರು ಸುಮಾರು 600 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಪಿಎಸ್ ಶಾಲೆ ತೆರಯಲು ಸರ್ಕಾರ ಸಿದ್ಧತೆ ನಡೆಸಿದೆ.














Click it and Unblock the Notifications