ಅಸ್ತಿತ್ವ ಉಳಿಸಿಕೊಳ್ಳಲು ರಾಹುಲ್ ಗಾಂಧಿಯಿಂದ ಭಾರತ್ ಜೋಡೋ ಯಾತ್ರೆ: ಬೊಮ್ಮಾಯಿ ವ್ಯಂಗ್ಯ
ರಾಯಚೂರು, ಅಕ್ಟೋಬರ್ 11: ರಾಹುಲ್ ಗಾಂಧಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದಾರೆ, ಅವರ ಯಾತ್ರೆಗೂ ಬಿಜೆಪಿಯ ಜನ ಸಂಕಲ್ಪ ಯಾತ್ರೆಗೂ ಯಾವುದೇ ಸಂಬಂಧವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಯಚೂರಿನಲ್ಲಿ ತಿಳಿಸಿದ್ದಾರೆ.
ಮಂಗಳವಾರ ರಾಯಚೂರಿನ ಜನಸಂಪರ್ಕ ಯಾತ್ರೆಯಲ್ಲಿ ಭಾಗವಹಿಸುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿ " ಕಾಂಗ್ರೆಸ್ನ ರಾಹುಲ್ ಗಾಂಧಿ ತಮ್ಮ ಆಸ್ತಿತ್ವಕ್ಕಾಗಿ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ರಾಹುಲ್ ಗಾಂಧಿಗೆ ತಮ್ಮ ಅಸ್ತಿತ್ವ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಹೀಗಾಗಿ ಭಾರತ್ ಜೋಡೋ ಪಾದಯಾತ್ರೆ ಮಾಡುತ್ತಿದ್ದಾರೆ. ಬಿಜೆಪಿಯಿಂದ ನಡೆಯುತ್ತಿರುವ ಜನಸಂಕಲ್ಪ ಯಾತ್ರೆಗೂ, ಜೋಡೋ ಯಾತ್ರೆಗೂ ಸಂಬಂಧವಿಲ್ಲ. ಅವರು ಏನು ಮಾಡುತ್ತಿದ್ದಾರೆ ನಮ್ಮಗೆ ಗೊತ್ತಿಲ್ಲ. ನಾವು ನೇರವಾಗಿ ಜನರ ಬಳಿ ಹೋಗುತ್ತಿದ್ದೇವೆ ಎಂದರು.
ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದಾಗ ಏನೂ ಮಾಡಲಿಲ್ಲ. ಈಗ ಮೀಸಲಾತಿ ಹೆಚ್ಚಳದ ಬಗ್ಗೆ ಕಾಂಗ್ರೆಸ್ ಟೀಕೆ ಮಾಡಿದೆ. ಕಾಂಗ್ರೆಸ್ ಗೆ ಸೋಲಿನ ಭಯ ಮೂಡಿದೆ. ಮೀಸಲಾತಿ ಹೆಚ್ಚಳದಿಂದ ಓಟು ಕೈತಪ್ಪುವ ಆತಂಕ ಕಾಂಗ್ರೆಸ್ ಪಾಳಯಕ್ಕೆ ಎದುರಾಗಿದೆ. ಹೀಗಾಗಿ ಕಾಂಗ್ರೆಸ್ ಮೀಸಲಾತಿ ಹೆಚ್ಚಳವನ್ನು ಟೀಕೆ ಮಾಡುತ್ತಿದೆ ಎಂದು ವ್ಯಂಗ್ಯವಾಡಿದರು.

ಮೀಸಲಾತಿ ಹೆಚ್ಚಳದ ಬಗ್ಗೆ ಯಾರೂ ಕೂಡಾ ಅಪಸ್ವರ ಎತ್ತಬಾರದು. ಎತ್ತಿದರೆ ಅವರು ಎಸ್ಸಿ, ಎಸ್ಟಿ ಮೀಸಲು ಹೆಚ್ಚಳ ವಿರೋಧಿಗಳು ಎನಿಸಿಕೊಳ್ತಾರೆ. ಹಲವಾರು ಸಮಾಜದವರು ಮೀಸಲು ಸೌಲಭ್ಯಕ್ಕೆ ಬೇಡಿಕೆ ಇಡುತ್ತಿದ್ದಾರೆ. ಸಂಬಂಧಿಸಿದಂತೆ ರಚನೆಯಾಗಿರುವ ಆಯೋಗಗಳ ವರದಿ ಆಧರಿಸಿ ಕಾನೂನಿನಂತೆ ಏನು ಮಾಡಬೇಕೆಂದು ನಿರ್ಧಾರ ಮಾಡಲಾಗುತ್ತದೆ ಎಂದು ಹೇಳಿದರು.
ಜನಸಂಕಲ್ಪ ಯಾತ್ರೆ ಬಗ್ಗೆ ಮಾತನಾಡಿ, ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದಿಂದ ಜನಸಂಕಲ್ಪ ಯಾತ್ರೆಯನ್ನು ಮಂಗಳವಾರದಿಂದ ಆರಂಭಿಸಲಾಗುತ್ತಿದ್ದು, 50ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಯಾತ್ರೆ ಮಾಡಲಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಜಾರಿಗೆ ತಂದಿರುವ ಯೋಜನೆಗಳನ್ನು ಜನರಿಗೆ ತಿಳಿಸುತ್ತೇವೆ. ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳನ್ನು ಇಟ್ಟು ಜನಾದೇಶವನ್ನು ಪಡೆಯುತ್ತೇವೆ. ಅಲ್ಲದೇ ಬಿಜೆಪಿ ಮತ್ತೆ ರಾಜ್ಯ ಅಧಿಕಾರ ಚುಕ್ಕಾಣಿ ಹಿಡಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸುವ ವಿಚಾರಕ್ಕೆ ಈಗಾಗಲೇ ಕೇಂದ್ರ ಆರೋಗ್ಯ ಸಚಿವರೊಂದಿಗೆ ಮಾತನಾಡಿದ್ದೇನೆ. ದೆಹಲಿಗೆ ಹೋಗಿ ಈ ಬಗ್ಗೆ ಪುನಃ ಮಾತನಾಡಿ, ಈ ಭಾಗಕ್ಕೆ ಏಮ್ಸ್ ಕೊಡಿಸುವಲ್ಲಿ ಯಶ್ವಸಿಯಾಗುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.












Click it and Unblock the Notifications