ರಾಯಚೂರು: ವಿಕಲ ಚೇತನರ ಜೀವನ ನಿರ್ವಹಣೆಗೆ ನೆರವಾದ ನರೇಗಾ ಯೋಜನೆ
ರಾಯಚೂರು, ಜುಲೈ 31: ನರೇಗಾ ಯೋಜನೆಯಡಿ ರಾಯಚೂರು ತಾಲೂಕಿನ ಜಂಬಲದಿನ್ನಿ ಗ್ರಾಮ ಪಂಚಾಯಿತಿಯು ವಿಕಲ ಚೇತನರ ಉದ್ಯೋಗ ಚೀಟಿ ವಿತರಿಸುವ ಮೂಲಕ ದುಡಿಯುವ ಕೈಗಳಿಗೆ ಉದ್ಯೋಗ ನೀಡಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದೆ.
ಪಂಚಾಯಿತಿ ವ್ಯಾಪ್ತಿಯಲ್ಲಿ ನಲ್ಲಾರೆಡ್ಡಿ, ಟಿ.ಈರೇಶ, ಗೋಕರ್ ಬಾಷಾ, ಯು.ಈರೇಶ, ಸುರೇಶ, ಭೀಮರಾವ, ಉರುಕುಂದಪ್ಪ, ತಿಮ್ಮಪ್ಪ ಹಾಗೂ ಕೊತ್ತದೊಡ್ಡಿ ಗ್ರಾಮದ ನಿವಾಸಿ ಪಲ್ಲಯ್ಯ ಸೇರಿ 8 ಜನ ವಿಕಲ ಚೇತನರು ಕೆಲಸ ನಿರ್ವಹಿಸುತ್ತಿದ್ದಾರೆ.

ಅವರನ್ನು ಯಾರೂ ಹೊಲಗಳ ಕೆಲಸಕ್ಕೆ ಕರೆಯುವುದಿಲ್ಲ. 'ನನಗೆ ಓದಲು ಬರೆಯಲು ಬರುವುದಿಲ್ಲ. ಎಂಟನೇ ವಯಸ್ಸಿನಲ್ಲಿ ನಾನು ಗೆಳೆಯರ ಜೊತೆ ಆಟವಾಡುವಾಗ ಬಿದ್ದು ನನ್ನ ಎಡಗೈ ಕಳೆದುಕೊಂಡಿದ್ದೇನೆ. ಆದರೆ ನನ್ನ ಜೀವನಕ್ಕೆ ನರೇಗಾ ಆಸರೆಯಾಗಿದೆ' ಎಂದು ಪಲ್ಲಯ್ಯ ಭಾವನಾತ್ಮಕವಾಗಿ ಮಾತನಾಡಿದ್ದಾರೆ.
ಇವರಿಗೆ ಮೂವರು ಹೆಣ್ಣು, ಇಬ್ಬರು ಗಂಡು ಮಕ್ಕಳಿದ್ದಾರೆ. ಕೈ ಕಳೆದುಕೊಂಡ ಪಲ್ಲಯ್ಯ ಕಳೆದ 5 ವರ್ಷಗಳಿಂದ ತಮ್ಮ ಗ್ರಾಮದಲ್ಲಿಯೇ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಕೈ ಕಳೆದುಕೊಂಡಿದ್ದರಿಂದ ಕುಟುಂಬ ನಿರ್ವಹಣೆಗೆ ಅರ್ಥಿಕ ಮೂಲ ಇರದ ಕಾರಣ ಇಡೀ ಕುಟುಂಬವು ಕೂಲಿ ಕೆಲಸ ನೆಚ್ಚಿಕೊಂಡಿದೆ.
ಗ್ರಾಮೀಣ ಭಾಗದಲ್ಲಿ ಕೆಲಸವಿಲ್ಲದೆ ಇರುವ ದುರ್ಬಲ ಕುಟುಂಬಕ್ಕೆ ನರೇಗಾ ಯೋಜನೆಯ ಮುಖಾಂತರ ಕೂಲಿ ಕೆಲಸ ನೀಡುವ ಕಾರ್ಯ ಮಾಡಲಾಗುತ್ತಿದೆ ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಪವಾರ ಹೇಳಿದ್ದಾರೆ.
ನರೇಗಾ ಯೋಜನೆಯಡಿ 100 ದಿನಗಳ ಕೆಲಸ ಪಡೆಯಲು ಅವಕಾಶವಿದ್ದು, ಹಲವಾರು ವರ್ಷಗಳಿಂದ ಪಲ್ಲಯ್ಯನ ಕುಟುಂಬವು ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡುತ್ತಿದೆ. ಬದು ನಿರ್ಮಾಣ ಮಾಡುವುದು, ನಾಲಾ, ಹಳ್ಳ ಮತ್ತು ಕೆರೆ ಹೊಳೆತ್ತುವ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸಿರುತ್ತಾರೆ.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಂಗವಿಕಲರಿಗೂ ಕೆಲಸ ಮಾಡಲು ಅವಕಾಶಗಳು ಕಲ್ಪಿಸಿದ್ದು, ಕೆಲಸದ ಪರಿಮಾಣದಲ್ಲಿ ಶೇ 50ರಷ್ಟು ರಿಯಾಯಿತಿ ನೀಡುವುದರ ಜೊತೆಗೆ ಪೂರ್ಣ ಪ್ರಮಾಣದ ಕೂಲಿ ನೀಡಲಾಗುತ್ತದೆ. ಪಲ್ಲಯ್ಯ ರವರಂತಹ ದುರ್ಬಲ ಕುಟುಂಬಕ್ಕೆ ನರೇಗಾ ಯೋಜನೆಯ ಅವಕಾಶ ವರದಾನವಾಗಿದೆ.
ಪ್ರಸಕ್ತ ವರ್ಷ ಏಪ್ರಿಲ್‌ನಿಂದ ಜೂನ್‌ವರೆಗೆ 78 ದಿನ ಕೆಲಸ ಮಾಡಿ ಕೂಲಿ ಹಣ ಪಡೆದು ತಮ್ಮ ಕುಟುಂಬದ ದೈನಂದಿನ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.












Click it and Unblock the Notifications