ಅಧಿಕಾರಿಗಳ ನಿರ್ಲಕ್ಷ್ಯ; ಲಿಂಗಸೂಗೂರು ತಾಲೂಕಿನಲ್ಲಿ ಹಳ್ಳ ಹಿಡಿದ ಕಸ ಸಂಗ್ರಹಿಸುವ ಆಟೋಗಳು
ರಾಯಚೂರು, ಡಿಸೆಂಬರ್, 19; ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲ್ಲೂಕಿನ ಮುದಗಲ್ ಪಟ್ಟಣದ ಸುತ್ತಲಿನ ವಿವಿಧ ಗ್ರಾಮ ಪಂಚಾಯಿತಿಯಲ್ಲಿ ಕಸ ಎತ್ತಲು ಆಟೋಗಳನ್ನು ಖರೀದಿಸಲಾಗಿತ್ತು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಖರೀದಿಸಿದ ಲಗೇಜ್ ಆಟೋಗಳು ಇದೀಗ ಉಪಯೋಗಕ್ಕೆ ಬಾರದೆ ಹಳ್ಳ ಹಿಡಿಯುತ್ತವೆ.
ಗ್ರಾಮ ಪಂಚಾಯಿತಿಗಳಲ್ಲಿರುವ ಲಗೇಜ್ ಆಟೋಗಳು ಕಸ ಎತ್ತಲು ಮನೆ ಮನೆಗೆ ಹೋಗುತ್ತಿಲ್ಲ. ಒಂದು ಆಟೋದ ಬೆಲೆ ಅಂದಾಜು 6.5 ಲಕ್ಷ ರೂಪಾಯಿ ಇದೆ. ನಾಗರಾಳ, ಹೂನೂರು, ಬನ್ನಿಗೋಳ, ನಾಗಲಾಪುರ, ಕಾಚಾಪುರ, ಆಮದಿಹಾಳ, ಉಪ್ಪಾರ ನಂದಿಹಾಳ, ಬಯ್ಯಾಪುರ, ಆನೆಹೊಸೂರು, ಹಲ್ಕಾವಟಗಿ ಸೇರಿದಂತೆ ಮುದಗಲ್ ಹೋಬಳಿಯ 15ಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳಲ್ಲಿ ಆಟೋಗಳ ಬಳಕೆ ಆಗುತ್ತಿಲ್ಲ.

ಹಳ್ಳ ಹಿಡಿದ ಆಟೋಗಳು
"ಲಿಂಗಸುಗೂರು ತಾಲೂಕಿನ 30 ಗ್ರಾಮ ಪಂಚಾಯತಿಗಳಲ್ಲಿ ಆಟೋಗಳು ಉಪಯೋಗ ಆಗುತ್ತಿಲ್ಲ. ಕೆಲ ಕಡೆ ಅಧ್ಯಕ್ಷರು ತಮ್ಮ ಮನೆ ಮುಂದೆ ನಿಲ್ಲಿಸಿಕೊಂಡಿದ್ದಾರೆ" ಎಂದು ಅಲ್ಲಿನ ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಶೇಕಡಾ 70 ರಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಕಸ ವಿಲೇವಾರಿ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ. ಗ್ರಾಮ ಪಂಚಾಯಿತಿಯಿಂದ ಕಸ ವಿಲೇವಾರಿ ಮಾಡಲು ನಿರ್ದಿಷ್ಟ ಸ್ಥಳವಿಲ್ಲ. ಅಲ್ಲದೇ ಕಸ ವಿಲೇವಾರಿ ಘಟಕವೂ ಇಲ್ಲದಂತಾಗಿದೆ.
ಕಸ ವಿಲೇವಾರಿ ಘಟಕ ಸ್ಥಾಪಿಸಲು ಒತ್ತಾಯ
ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಕಸ ವಿಲೇವಾರಿ ಘಟಕವನ್ನು ಸ್ಥಾಪಿಸಬೇಕು ಎಂಬ ಸರ್ಕಾರದ ಆದೇಶವಿದೆ. ಗ್ರಾಮ ಪಂಚಾಯಿತಿಯೇ ಜನರ ತೆರಿಗೆ ಹಣ ಹಾಗೂ ನರೇಗಾ ಯೋಜನೆಯ ಹಣವನ್ನು ವಿನಿಯೋಗಿಸಿ ಕಸ ವಿಲೇವಾರಿ ಘಟಕ ಸ್ಥಾಪಿಸಬೇಕಾಗಿದೆ. ಈ ವಿಷಯದಲ್ಲಿ ಪಂಚಾಯಿತಿ ಆಡಳಿತ ಹಾಗೂ ಸಿಬ್ಬಂದಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಉಪ್ಪಾರ ನಂದಿಹಾಳ ಗ್ರಾಮಸ್ಥರ ಆರೋಪವಾಗಿದೆ.

ಕಸ ವಿಲೇವಾರಿಗೆ ಬಳಕೆ ಆಗದ ಬಕೆಟ್‌ಗಳು
ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಮಿಷನ್ ಯೋಜನೆ ಹಳ್ಳ ಹಿಡಿಯುತ್ತಿದೆ. ಸರ್ಕಾರ ಗ್ರಾಮಗಳಿಗೆ ಮೂಲ ಸೌಕರ್ಯ ಒದಗಿಸಲು ಮೀನಮೇಷ ಎಣಿಸುತ್ತಿದೆ. ಇಂತಹ ಯೋಜನೆಗಳಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಾರ್ವಜನಿಕರ ತೆರಿಗೆ ಹಣವನ್ನು ಹಾಳು ಮಾಡಲಾಗುತ್ತಿದೆ. ಸ್ವಚ್ಛ ಭಾರತ್‌ನಿಂದ ರೂಪಿಸಿದ ಯೋಜನೆಯು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಫಲವಾಗಿಲ್ಲ ಎಂದು ಹನುಮೇಶ್ ಅವರು ಆರೋಪಿಸಿದರು. ಮನೆ ಮನೆಗೂ ಹಸಿ ಕಸ ಮತ್ತು ಒಣ ಕಸಕ್ಕಾಗಿ ವಿತರಿಸಲಾಗಿದ್ದ ಬಕೆಟ್‌ಗಳು ನೀರು ತುಂಬಲು, ಬಟ್ಟೆ, ಪಾತ್ರೆ ತೊಳೆಯಲು ಉಪಯೋಗಿಸುತ್ತಿದ್ದಾರೆ. ಬಕೆಟ್‌ಗಳು ಕಸ ವಿಲೇವಾರಿಗೆ ಬಳಕೆ ಆಗುತ್ತಿಲ್ಲ ಎಂದು ಸಾರ್ವಜನಿಕರಾದ ರಾಜಶೇಖರ್ ದಾವೂದ್ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications