ನಾರಾಯಣಪುರ ಬಲದಂಡೆ ಕಾಲುವೆ ಅಪೂರ್ಣ ಕಾಮಗಾರಿ: ಸಗಮಕುಂಟ ರೈತರಿಗೆ ಸಂಕಷ್ಟ
ರಾಯಚೂರು ಆಗಸ್ಟ್ 1: ನಾರಾಯಣಪುರ ಬಲದಂಡೆ ಕಾಲುವೆ ಆಧುನೀಕರಣ ಕಾಮಗಾರಿ ನಿಗದಿತ ಅವಧಿಯಲ್ಲಿ ನಿಯಮಾನುಸಾರ ಪೂರ್ಣಗೊಳಿಸುತ್ತಿಲ್ಲ. ಬಹುತೇಕ ಕಡೆಗಳಲ್ಲಿ ಅಲ್ಲಲ್ಲಿ ಕಾಮಗಾರಿ ಅಪೂರ್ಣವಸ್ಥೆಯಲ್ಲಿದ್ದು ಬಿಟ್ಟಿದ್ದು ಜಮೀನಿಗೆ ನೀರು ಹರಿಸಿಕೊಳ್ಳಲಾಗದೆ ಸಂಕಷ್ಟ ತಂದಿದೆ ಎನ್ನುವುದು ರೈತರ ಸಾಮೂಹಿಕ ಆರೋಪವಾಗಿದೆ.
ನಾರಾಯಣಪುರ ಬಲದಂಡೆ ಕಾಲುವೆ ವಿಭಾಗದ ಸಂಖ್ಯೆ 6 ಕಾಲುವೆ ಕಾಮಗಾರಿ 2019ರಿಂದ ದೇವದುರ್ಗ ತಾಲೂಕಿನ ಚಿಕ್ಕವಣ್ಣು ಕುಣಿದಿಂದ ರಾಯಚೂರು ತಾಲೂಕಿನ ಸಗಮಕುಂಟ ಗ್ರಾಮದ ಸರ್ವೆ ನಂಬರ್ 63/3 ರವರೆಗೆ ಕಾಲುವೆ ನಿರ್ಮಿಸಲಾಗಿದೆ. ಸುಮಾರು 200 ಮೀಟರ್ ವರೆಗಿನ ಕಾಲುವೆ ಕಾಮಗಾರಿ ಆರಂಭದ ದಿನಗಳಿಂದ ಒಂದಿಲ್ಲೊಂದು ಸಮಸ್ಯೆಗಳ ಸುಳಿಯಲ್ಲಿ ಸಿಲಕುತ್ತ ಸಾಗಿದೆ. ಹಲವು ವರ್ಷಗಳಿಂದ ಕಾಲುವೆ ಕಾಮಗಾರಿ ನಿಲ್ಲಿಸಿದ್ದಾರೆ.

ಇದರಿಂದಾಗಿ 2019 ರಿಂದ ಪ್ರತಿ ವರ್ಷವೂ ಮಳೆ ಬಂದು ರೈತರ ಜಮೀನುಗಳಲ್ಲಿ ಕಾಲುವೆ ಒಡೆದು ಬಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿರುವ ಪರಿಣಾಮ, ರೈತರು ಜಮೀನುಗಳಲ್ಲಿ ಬೆಳೆಯುತ್ತಿರುವ ಬೆಳೆಗಳು ಸಂಪೂರ್ಣವಾಗಿ ನಾಶವಾಗುತ್ತಿವೆ. ಸುತ್ತಮುತ್ತ ರೈತರ ಜಮೀನು ಬೆಳೆ ಹಾಳಾಗಿದ್ದರೂ ಕೂಡ ಇಂದಿಗೂ ದುರಸ್ತಿಗೊಳಿಸಿಲ್ಲ.
ರೈತರಿಗೆ ಪರಿಹಾರ ನೀಡುವವರಾರು ಎಂಬ ಗೊಂದಲದಲ್ಲಿ ರೈತರು ಪರದಾಡುತ್ತಿದ್ದಾರೆ. ಇದಕ್ಕೆ ಕಾಲುವೆಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಯಾವುದೇ ಪರಿಹಾರ ನೀಡುತ್ತಿಲ್ಲ ಎಂದು ರೈತರಾದ ಸುರೇಶ ಬಡಿಗೇರ ಹಾಗೂ ರಂಗಪ್ಪ ಆರೋಪಿಸಿದರು.
ಕಾಮಗಾರಿ ಗುಣಮಟ್ಟ ಬಗ್ಗೆ ತಮಗೆ ಏನೂ ತಿಳಿಯದು. ಕೆಲವಡೆ ಕಾಮಗಾರಿ ಪೂರ್ಣಗೊಳಿಸದೆ ಹೋಗಿದ್ದಾರೆ. ಆಧುನೀಕರಣ ಕಾಮಗಾರಿ ಪೂರ್ಣಗೊಳ್ಳುವ ಅವಧಿಗೆ ಮುಂಚೆಯೇ ಕೆಲವಡೆ ಹೂಳು ತುಂಬಿದೆ. ಮುಳ್ಳುಕಂಟಿ ಬೆಳೆದು ಕಾಲುವೆ ಮುಚ್ಚಿ ಹೋಗಿವೆ. ಪ್ರತಿವರ್ಷ ಬೆಳೆ ಬೆಳೆದು ಕಾಲುವೆ ನೀರಿನ ಕಾರಣದಿಂದ ಬೆಳೆ ನಾಶ ಮಾಡಿಕೊಳ್ಳುತ್ತಿದ್ದೇವೆ. ಮಣ್ಣು ಕೊಚ್ಚಿಕೊಂಡು ಹೋಗಿ ಜಮೀನುಗಳು ಹಾಳಾಗುತ್ತಿದೆ.

ಈ ಕುರಿತು ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಪತ್ರ ಮೂಲಕ ಗಮನಕ್ಕೆ ತಂದರೂ ಕಾಲುವೆ ದುರಸ್ತಿಗೆ ಮುಂದಾಗುತ್ತಿಲ್ಲ. ಸಗಮಕುಂಟ ಗ್ರಾಮದಲ್ಲಿ ನಿರ್ಮಾಣ ಹಂತದ ಕಾಲುವೆ ಒಡೆದು ರೈತರು ಜಮೀನುಗಳಲ್ಲಿ ಬೆಳೆದ ಬೆಳೆಗಳು ಹಾಳಾಗಿವೆ. ನಷ್ಟದ ಪರಿಹಾರ ಮತ್ತು ಅಲ್ಲಲ್ಲಿ ಕಾಮಗಾರಿ ಅಪೂರ್ಣವಸ್ಥೆಯಲ್ಲಿದ್ದು ಕಾಲುವೆ ಕಾಮಗಾರಿ ಪೂರ್ಣಗೊಳಿಸುವಂತೆ ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದು ರೈತರಾದ ಈರೇಶ , ರುಕ್ಕಮ್ಮ, ರಾಮಪ್ಪ ನಾಯಕ, ಕೃಷ್ಣಪ್ಪ ಯಾದವ ಅವರು ಅಳಲು ತೋಡಿಕೊಂಡಿದ್ದಾರೆ.












Click it and Unblock the Notifications