ರಾಯಚೂರಿನಲ್ಲಿ ಕಲುಷಿತ ನೀರು ಸೇವಿಸಿ 70 ಮಂದಿ ಅಸ್ವಸ್ಥ
ರಾಯಚೂರು, ಆಗಸ್ಟ್ 11: ಬಿಸಿಲೂರು ರಾಯಚೂರು ಜಿಲ್ಲೆಯಲ್ಲಿ ಕಲುಷಿತ ನೀರು ಸೇವಿಸಿ 70ಕ್ಕೂ ಅಧಿಕ ಜನರು ವಾಂತಿ-ಭೇದಿಯಿಂದ ಅಸ್ವಸ್ಥಗೊಂಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಕುಡಿವ ನೀರಿನ ಪೈಪ್ ಒಡೆದು ಅದಕ್ಕೆ ಚರಂಡಿ ನೀರು ಸೇರಿ ಈ ಅವಘಡ ಸಂಭವಿಸಿರಬೇಕು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ. ಆದರೆ ಈವರೆಗೆ ಘಟನೆಗೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ.
ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಚಿತ್ತಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದಲ್ಲಿನ ಅಂದಾಜು 70ಕ್ಕೂ ಅಧಿಕ ಜನರು ಅಸ್ವಸ್ಥಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಜುಲೈ 31ರಂದು ಕಲುಷಿತ ನೀರು ಸೇವಿಸಿ ಸ್ವಲ್ಪ ಜನರು ಲಿಂಗಸೂಗೂರು ಸರ್ಕಾರಿ ಆಸ್ಪತ್ರೆ ಚಿಕಿತ್ಸೆಗೆ ದಾಖಲಾಗಿದ್ದರೆ, ಇದಾದ ನಂತರದಲ್ಲಿ ದಿನ ದಿನೇ ಜನ ಅಸ್ವಸ್ಥಗೊಳ್ಳುತ್ತಿದ್ದು, ಈವರೆಗೆ 70ಕ್ಕೂ ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅದೃಷ್ಟವಶಾತ್ ಘಟನೆಯಲ್ಲಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎಲ್ಲರೂ ಅಸ್ವಸ್ಥಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ ಆರೋಗ್ಯ ಇಲಾಖೆಯಿಂದ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಚಿತ್ತಾಪುರ ಗ್ರಾಮದಲ್ಲಿ ಪೂರೈಕೆ ಮಾಡುವ ಪೈಪ್‌ನಲ್ಲಿ ಚರಂಡಿ ನೀರು ಸೇರಿರುವುದ್ದರಿಂದ ಈ ಘಟನೆ ಎಂದು ಗ್ರಾಮಸ್ಥರು ದೂರಿದ್ದಾರೆ. ಅಲ್ಲದೇ ಈ ಘಟನೆಗೆ ಗ್ರಾಮದಲ್ಲಿ ಸ್ವಚ್ಛತೆಯಿಲ್ಲದೆ, ಚರಂಡಿ ಸ್ವಚ್ಛತೆ ಸರಿಯಾಗಿ ನಿರ್ವಹಿಸದ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ನಡೆದಿದ್ದ ಕಲುಷಿತ ನೀರು ಸೇವಿಸಿ ಸಾವಿಗೀಡಾಗಿದ್ದ ಘಟನೆ ಮಾಸುವ ಮುನ್ನವೇ ಇಂತಹ ಘಟನೆ ನಡೆದಿರುವುದು ಸ್ಥಳೀಯ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ.
ಇನ್ನು ಇತ್ತೀಚಿಗೆ ಚಿತ್ರದುರ್ಗ ಜಿಲ್ಲೆಯ ಕವಾಡಿಗರ ಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಗರ್ಭಪಾತದಲ್ಲಿ ಮಗು ಸೇರಿದಂತೆ ಒಟ್ಟು ಆರು ಮಂದಿ ಸಾವನ್ನಪ್ಪಿದ್ದರು. ಅಲ್ಲದೇ ಘಟನೆಯಲ್ಲಿ 180ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಈ ಘಟನೆ ರಾಜ್ಯಾದ್ಯಂತ ತೀವ್ರ ಸುದ್ದಿ ಮಾಡಿತ್ತು. ರಾಜ್ಯದಲ್ಲಿ ಇತ್ತೀಚಿಗೆ ಕಲುಷಿತ ನೀರು ಸೇವಿಸಿ ಜನರು ಅಸ್ವಸ್ಥಗೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಜ್ಯ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕಿದೆ.












Click it and Unblock the Notifications