Raichur: ಸಿಂಧನೂರಿನ 30ಕ್ಕೂ ಅಧಿಕ ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ!
ರಾಯಚೂರು ಏಪ್ರಿಲ್ 27: ಸಿಂಧನೂರು ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರ ಬಾಲಕಿಯರ ಪದವಿ ವಸತಿ ನಿಲಯದ 30ಕ್ಕೂ ಅಧಿಕ ವಿದ್ಯಾರ್ಥಿನಿಯರು ಹಾಸ್ಟೆಲ್ ಆಹಾರ ಸೇವಿಸಿ ವಾಂತಿ-ಬೇಧಿಯಿಂದ ಬಳಲಿ ಅಸ್ವಸ್ಥಗೊಂಡಿದ್ದಾರೆ.
ಈ ವಸತಿ ನಿಲಯದಲ್ಲಿ ಒಟ್ಟು 350 ವಿದ್ಯಾರ್ಥಿನಿಯರು ಇದ್ದು, ಪರೀಕ್ಷೆ ಮುಗಿದ ಕಾರಣ ಬಹಳಷ್ಟು ವಿದ್ಯಾರ್ಥಿನಿಯರು ತಮ್ಮ ಊರುಗಳಿಗೆ ತೆರಳಿದ್ದಾರೆ. ಶುಕ್ರವಾರದಂದು 120 ವಿದ್ಯಾರ್ಥಿನಿಯರು ಮಾತ್ರ ಹಾಸ್ಟೆಲ್‍ನಲ್ಲಿದ್ದರು. ಮಧ್ಯಾಹ್ನ 2.30ರ ಸುಮಾರಿಗೆ ಅನ್ನ, ಸಾಂಬಾರು, ರೊಟ್ಟಿ, ಹುರಳಿ ಕಾಳು ಊಟ ಮಾಡಿದ್ದಾರೆ. ಮೂರ್ನಾಲ್ಕು ವಿದ್ಯಾರ್ಥಿನಿಯರು ಸುಸ್ತಾಗುತ್ತಿದೆಂದು ಸಂಜೆ 6.30ರ ಸುಮಾರಿಗೆ ಸಾರ್ವಜನಿಕ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದರು.

ತದನಂತರ ಹಾಸ್ಟೆಲ್‍ನಲ್ಲಿ 20ಕ್ಕೂ ಅಧಿಕ ವಿದ್ಯಾರ್ಥಿನಿಯರಿಗೆ ತಲೆನೋವು, ವಾಂತಿ-ಬೇಧಿ, ಹೊಟ್ಟೆನೋವು ಕಾಣಿಸಿಕೊಂಡಿದೆ. ಆಟೋಗಳಲ್ಲಿ ರಾತ್ರಿ 8 ಗಂಟೆಗೆ ಸುಮಾರಿಗೆ ಸರ್ಕಾರಿ ಆಸ್ಪತ್ರೆಗೆ ಬಂದು ದಾಖಲಾದರು. ಪ್ರಾರಂಭದಲ್ಲಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ, ಚಿಕಿತ್ಸೆ ಸಿಗದೆ ವಿದ್ಯಾರ್ಥಿನಿಯರು ಪರದಾಟ ನಡೆಸಿದರು.
ಈ ವಿಷಯ ತಿಳಿದಾಗ್ಯೂ ಸಹ ಹಾಸ್ಟೆಲ್ ಮೇಲ್ವಿಚಾರಕಿ ರಶ್ಮಿ ಆಸ್ಪತ್ರೆಗೆ ಬಂದಿರಲಿಲ್ಲ. ಮೊಬೈಲ್ ಕರೆ ಮಾಡಿದರೆ ಬೇರೆ ಊರಿನಲ್ಲಿ ಇದ್ದೇನೆಂದು ತಮ್ಮ ಸಿಬ್ಬಂದಿಗೆ ಹೇಳಿದ್ದರು. ಹೀಗಾಗಿ ಕಿರಿಯ ವಾರ್ಡನ್ ಚಂದ್ರಕಲಾ ಹಾಗೂ ಅಡುಗೆ ಸಿಬ್ಬಂದಿ ಆಸ್ಪತ್ರೆಗೆ ಬಂದು ವಿದ್ಯಾರ್ಥಿನಿಯರ ಜೊತೆಗಿದ್ದರು.

ಈ ವಿಷಯ ತಿಳಿದು ಸಹಾಯಕ ಚುನಾವಣಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಮಹೇಶ ಪೋತೆದಾರ್ ಆಸ್ಪತ್ರೆಗೆ ಆಗಮಿಸಿ ಮುಖ್ಯವೈದ್ಯಾಧಿಕಾರಿ ಡಾ.ನಾಗರಾಜ ಕಾಟ್ವಾ ಅವರಿಗೆ ವಿಷಯ ತಿಳಿಸಿದರು. ಆಗ ಡಾ.ಕಾಟ್ವಾ ಅವರು ವಿದ್ಯಾರ್ಥಿನಿಯರ ಆರೋಗ್ಯ ತಪಾಸಣೆ ನಡೆಸಿ, ತಮ್ಮ ಸಿಬ್ಬಂದಿಯೊಂದಿಗೆ ಕಾರ್ಯಪ್ರವೃತ್ತರಾಗಿ ಐವರಿಗೆ ಓಆರ್‍ಎಸ್ ಕುಡಿಸಿ, 16 ವಿದ್ಯಾರ್ಥಿನಿಯರಿಗೆ ಗುಲ್ಕೋಸ್ ಹಚ್ಚಿ ಚಿಕಿತ್ಸೆ ನೀಡಿದರು.
'ಫುಡ್ ಪಾಯಿಸನ್‍ನಿಂದ ವಿದ್ಯಾರ್ಥಿನಿಯರ ಆರೋಗ್ಯದಲ್ಲಿ ಏರುಪೇರಾಗಿದೆ. ಸೂಕ್ತ ಚಿಕಿತ್ಸೆ ನೀಡಲಾಗಿದ್ದು, ಯಾವುದೇ ತೊಂದರೆ ಇಲ್ಲ' ಎಂದು ಮುಖ್ಯ ವೈದ್ಯಾಧಿಕಾರಿ ಡಾ.ನಾಗರಾಜ ಕಾಟ್ವಾ ಅವರು ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಾ ಅವರು ತಡವಾಗಿ ಆಸ್ಪತ್ರೆಗೆ ಬಂದಿದ್ದಕ್ಕೆ ಕೆಲ ಸಂಘಟನೆಗಳ ಮುಖಂಡರು ತರಾಟೆಗೆ ತೆಗೆದುಕೊಂಡರು. ಇದೇ ವೇಳೆ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ನಾಡಗೌಡ ಆಸ್ಪತ್ರೆಗೆ ಬಂದು ಅಸ್ವಸ್ಥರಾಗಿದ್ದ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದರು. ನಂತರ ಮಹೇಶ ಪೋತೆದಾರ್ ಅವರು ಎಲ್ಲ ವಿದ್ಯಾರ್ಥಿನಿಯರಿಗೆ ಎಳೆನೀರು ತರಿಸಿಕೊಟ್ಟರು.
ಆರೋಗ್ಯದಲ್ಲಿ ಚೇತರಿಕೆ ಕಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರನ್ನು ಹಾಸ್ಟೆಲ್‍ಗೆ ಕಳುಹಿಸಲಾಯಿತು. ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿ ವಿದ್ಯಾರ್ಥಿನಿಯರನ್ನು ಗುಣಮುಖರನ್ನಾಗಿ ಮಾಡಿದ ಮುಖ್ಯವೈದ್ಯಾಧಿಕಾರಿ ಡಾ.ನಾಗರಾಜ ಕಾಟ್ವಾ ಹಾಗೂ ಅವರ ಸಿಬ್ಬಂದಿ ಕಾರ್ಯಕ್ಕೆ ಸಂಘಟಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಶನಿವಾರ ಬೆಳಿಗ್ಗೆ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಮಹೇಶ ಪೋತೆದಾರ್ ಅವರು ಹಾಸ್ಟೆಲ್‍ಗೆ ತೆರಳಿ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿ ಅವರೊಂದಿಗೆ ಪಲಾವ್ ಸೇವಿಸಿದರು. ಪಲಾವ್ ತಿನ್ನದ ಕೆಲ ವಿದ್ಯಾರ್ಥಿನಿಯರಿಗೆ ಇಡ್ಲಿ, ಸಾಂಬಾರ್ ತರಿಸಿಕೊಟ್ಟರು.
ಡಿಎಚ್‍ಓ ಭೇಟಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸುರೇಂದ್ರಬಾಬು ಅವರು ಶನಿವಾರ ಸಿಂಧನೂರಿನ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರ ಬಾಲಕಿಯರ ಪದವಿ ವಸತಿ ನಿಲಯ ಹಾಗೂ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿ ಮಾಹಿತಿ ಪಡೆದುಕೊಂಡರು.












Click it and Unblock the Notifications