ಸ್ಥಳೀಯರಿಗೆ ಬಿಟ್ಟು ನೆರೆಯ ಜಿಲ್ಲೆಯವರಿಗೆ ಉಸ್ತುವಾರಿ ಪಟ್ಟ ಕಟ್ಟಿದ್ದಾರೆ: ರಾಯಚೂರಿನಲ್ಲಿ ಜನಾಕ್ರೋಶ
ರಾಯಚೂರು, ಜೂನ್, 11: ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಎಲ್ಲ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡಿತ್ತು. ಹಾಗೆಯೆ ರಾಯಚೂರಿಗೆ ನೆರೆಯ ಕಲಬುರಗಿ ಜಿಲ್ಲೆಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರನ್ನು ನಿಯುಕ್ತಿಗೊಳಿಸಿದೆ. ಆದ್ದರಿಂದ ಸ್ಥಳೀಯರಿಗೆ ಉಸ್ತುವಾರಿ ಪಟ್ಟ ಕಲ್ಪಿಸಬೇಕು ಎನ್ನುವ ಬೇಡಿಕೆಗೆ ಮನ್ನಣೆ ಸಿಗದ ಕಾರಣ ಜಿಲ್ಲೆಯ ಜನರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ 15 ವರ್ಷಗಳಿಂದ ಜಿಲ್ಲೆಗೆ ಸಚಿವ ಸ್ಥಾನ ಒದಗಿ ಬಂದಿರಲಿಲ್ಲ. ಆದರೆ ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜುಗೆ ಈ ಬಾರಿ ಸಚಿವ ಸ್ಥಾನ ನೀಡಿದ್ದಾರೆ ಎನ್ನುವ ಖುಷಿ ಮಾಸುವ ಮುನ್ನವೇ, ಬೇರೆ ಜಿಲ್ಲೆಯವರಿವರಿ ಉಸ್ತುವಾರಿ ಜವಾಬ್ದಾರಿ ವಹಿಸಿಕೊಟ್ಟಿರುವುದು ಇಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.

2013ರಲ್ಲಿ ಆಡಳಿತ ನಡೆಸಿದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಇದೇ ಡಾ.ಶರಣಪ್ರಕಾಶ್ ಪಾಟೀಲ್ ಅವರು ರಾಯಚೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು. ಆರಂಭದಲ್ಲಿ ಜಿಲ್ಲೆಯ ಅಭಿವೃದ್ಧಿ ಮಾಡುವ ಭರವಸೆ ಹುಟ್ಟಿಸಿದ್ದ ಶರಣಪ್ರಕಾಶ್ ಪಾಟೀಲ್ ಇಲ್ಲಿನ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದೆ ನಿರಾಸೆ ಮೂಡಿಸಿದ್ದರು. ಹಿಂದೆ ಅವರ ಉಸ್ತುವಾರಿ ಕಾರ್ಯವನ್ನು ಕಣ್ಣಾರೆ ಕಂಡ ಜಿಲ್ಲೆಯ ಜನರು ಇದೀಗ ಮತ್ತೆ ಅವರನ್ನೇ ಉಸ್ತುವಾರಿಯನ್ನಾಗಿ ಮಾಡಿದ್ದಕ್ಕೆ ಕಿಡಿಕಾರಿದ್ದಾರೆ.
ಇತ್ತೀಚೆಗೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಕಲಬುರಗಿಗೆ ಏಮ್ಸ್ ಪಡೆಯುವ ಪ್ರಯತ್ನ ಮಾಡುವುದಾಗಿ ಹೇಳಿಕೆ ನೀಡಿದ್ದರು. ಇದಕ್ಕೆ ರಾಯಚೂರು ಜಿಲ್ಲೆಯಲ್ಲಿ ವ್ಯಾಪಕ ವಿರೋಧ ವ್ಯಕ್ತಗೊಂಡಿರುವ ಬೆನ್ನಲ್ಲೇ ಅವರನ್ನೇ ಮತ್ತೆ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ. ಏಮ್ಸ್‌ಗಾಗಿ ಕಳೆದ 393 ದಿನಗಳಿಂದ ನಿರಂತರ ಧರಣಿ ನಡೆಯುತ್ತಿರುವ ಸಮಯದಲ್ಲಿಯೇ ಏಮ್ಸ್ ಪಡೆಯುವ ಹುನ್ನಾರ ಹೂಡಿರುವವರನ್ನೇ ಉಸ್ತುವಾರಿ ಸಚಿವರನ್ನಾಗಿ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಖಂಡನೆ ವ್ಯಕ್ತವಾಗತ್ತಿದೆ.
ಉಸ್ತುವಾರಿ ಸಚಿವರ ಪಟ್ಟಿ ಬಿಡುಗಡೆ ಆಗುತ್ತಿದ್ದಂತೆ ಜಿಲ್ಲೆಯಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ರಾಯಚೂರು ಏಮ್ಸ್ ಮಂಜೂರು ಮಾಡುವಂತೆ ಹೋರಾಟ ಸಮಿತಿ ನೇತೃತ್ವದಲ್ಲಿ ಕರವೇ (ಶಿವರಾಮೇಗೌಡ ಬಣ), ಡಾ.ರಾಜಕುಮಾರ ಅಭಿಮಾನಿಗಳ ಸಂಘ, ಅಖಿಲ ಕರ್ನಾಟಕ ರಕ್ಷಣಾ ಸಮಿತಿ, ಕನ್ನಡಿಗರ ರಕ್ಷಣಾ ಸಮಿತಿ, ಕನ್ನಡ ರಣಧೀರರ ಪಡೆ ಹಾಗೂ ವಿವಿಧ ಸಂಘಟನೆಗಳು ಸೇರಿಕೊಂಡು ಪ್ರತಿಭಟನೆ ನಡೆಸಿದರು.
ಈ ವೇಳೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರ ಭಾವಚಿತ್ರವನ್ನು ಸುಟ್ಟ ಸಮಿತಿಯ ಮುಖಂಡರು, ಶರಣಪ್ರಕಾಶ್ ಪಾಟೀಲ್‌ಗೆ ಉಸ್ತುವಾರಿ ಪಟ್ಟ ಬೇಡವೇ ಬೇಡ ಎನ್ನುವ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹಿಂದಿನ ಎರಡ್ಮೂರು ಸರ್ಕಾರಗಳಲ್ಲಿ (ವೆಂಕಟರಾವ್ ನಾಡಗೌಡರನ್ನು ಬಿಟ್ಟು) ಬೇರೆ ಜಿಲ್ಲೆಗಳ ಉಸ್ತುವಾರಿ ಸಚಿವರನ್ನೇ ನೇಮಕ ಮಾಡಿದ್ದಾರೆ. ಆದರೆ ಅವರೆಲ್ಲರೂ ರಾಷ್ಟ್ರೀಯ ದಿನಾಚರಣೆಗಳಲ್ಲಿ ಪಾಲ್ಗೊಳ್ಳಲು ಮಾತ್ರ ಆಗಮಿತ್ತಾರೆ ಅಷ್ಟೇ.
ಉಳಿದ ವೇಳೆ ಜಿಲ್ಲೆ ಅಭಿವೃದ್ಧಿ ಕಡೆಗೆ ಗಮನ ಹರಿಸದಿರುವುದೇ ಇಲ್ಲ ಎಂದು ಜಿಲ್ಲೆಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಜಿಲ್ಲೆಯವರೇ ಸಚಿವರಾಗಿರುವಾಗ ಬೇರೆ ಜಿಲ್ಲೆಯ ಡಾ.ಶರಣಪ್ರಕಾಶ್ ಪಾಟೀಲ್‌ಗೆ ಉಸ್ತುವಾರಿ ವಹಿಸಿಕೊಟ್ಟಿರುವ ಸರ್ಕಾರದ ನಿರ್ಧಾರವನ್ನು ನಾವು ಒಪ್ಪುವುದಿಲ್ಲ. ಕೂಡಲೇ ಜಿಲ್ಲೆಯ ಎನ್.ಎಸ್.ಬೋಸರಾಜ್‌ಗೆ ಉಸ್ತುವಾರಿ ಜವಾಬ್ದಾರಿ ನೀಡಬೇಕು. ಇಲ್ಲವಾದಲ್ಲಿ ಡಾ.ಶರಣಪ್ರಕಾಶ್ ಪಾಟೀಲ್ ಜಿಲ್ಲೆಗೆ ಬಂದರೆ ಗೋ ಬ್ಯಾಕ್ ಚಳವಳಿಯನ್ನು ನಡೆಸಲಾಗುವುದು ಎಂದು ಕರವೇ ಜಿಲ್ಲಾಧ್ಯಕ್ಷ ಅಶೋಕಕುಮಾರ್ ಜೈನ್ ಎಚ್ಚರಿಕೆ ನೀಡಿದರು.












Click it and Unblock the Notifications