ಮಸ್ಕಿ: ವಟಗಲ್ ಸರ್ಕಾರಿ ಶಾಲೆಯ ಅವ್ಯವಸ್ಥೆ: ಶೌಚಾಲಯ ಇಲ್ಲದೆ ವಿದ್ಯಾರ್ಥಿಗಳ ಪರದಾಟ
ರಾಯಚೂರು, ನವೆಂಬರ್ 19: ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ವಟಗಲ್ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಈ ಶಾಲೆ 1ನೇ ತರಗತಿಯಿಂದ 8ನೇ ತರಗತಿಯವರೆಗೆ 102 ಬಾಲಕರು ಮತ್ತು 114 ಬಾಲಕಿಯರ ದಾಖಲಾತಿ ಹೊಂದಿದೆ.
ಈ ಶಾಲೆಯಲ್ಲಿ ಶೌಚಾಲಯ ವ್ಯವಸ್ಥೆ ಇದ್ದೂ, ಇಲ್ಲದಂತಾಗಿದ್ದು ಮಕ್ಕಳಿಗೆ ಬಯಲು ಶೌಚಾಲಯವೇ ಗತಿಯಾಗಿದೆ. ಗ್ರಾಮದ ಹಳೆ ಶಾಲಾ ಆವರಣದಲ್ಲಿನ 6 ಶೌಚಾಲಯಗಳ ಪೈಕಿ ಎರಡು ಶೌಚಾಲಯಗಳನ್ನು ಶಿಕ್ಷಕರು ಬಳಕೆ ಮಾಡುತ್ತಾರೆ. ಚುನಾವಣೆ ಸಂದರ್ಭ ತರಾತುರಿಯಲ್ಲಿ ನಿರ್ಮಿಸಿದ ಉಳಿದ ನಾಲ್ಕು ಶೌಚಾಲಯಗಳು ಹಾಳಾಗಿದ್ದು, ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.

ಶಿಕ್ಷಕರ ಕೊಠಡಿಯ ಕಿಟಕಿಯಲ್ಲಿ ಶೌಚಾಲಯದ ಬಾಗಿಲು ಕಾಣುವುದರಿಂದ ಮಕ್ಕಳು ಶೌಚಾಲಯ ಬಳಸಲು ನಾಚಿಕೆ ಪಡುತ್ತಿದ್ದಾರೆ. 1ರಿಂದ 3ನೇ ತರಗತಿವರೆಗೆ ಇಲ್ಲಿ ತರಗತಿಗಳು ನಡೆಯುತ್ತಿದ್ದು ಮಕ್ಕಳು ಮೂತ್ರ ವಿಸರ್ಜನೆಗೆ ಬಯಲು ಪ್ರದೇಶ ಅವಲಂಬಿಸಿದ್ದಾರೆ. ಬಹಿರ್ದೆಸೆಗೆ ಮನೆಗೆ ಹೋಗಬೇಕಿದೆ.
ಊರ ಹೊರಗಿನ ಹೊಸ ಶಾಲಾ ಕಟ್ಟಡದಲ್ಲಿ 4ನೇ ತರಗತಿಯಿಂದ 8ನೇ ತರಗತಿವರೆಗೆ ತರಗತಿಗಳು ನಡೆಯುತ್ತಿದ್ದು, ಅಲ್ಲಿ ನೀರು ಪೂರೈಕೆ ಹಾಗೂ ಶೌಚಾಲಯ ವ್ಯವಸ್ಥೆ ಇಲ್ಲದೆ ಮಕ್ಕಳು ಬಯಲಿನಲ್ಲಿ ನಿಸರ್ಗದ ಕರೆಗೆ ಓಗೊಡುವಂತಾಗಿದೆ.
ವಟಗಲ್ ಗ್ರಾಮದಲ್ಲಿನ ಹಳೆ ಶಾಲೆ ಆವರಣದಲ್ಲಿನ ಏಳು ಕೊಠಡಿಗಳಲ್ಲಿ ಮೂರು ಕೊಠಡಿಗಳು ಬಹುತೇಕ ಶಿಥಿಲಗೊಂಡಿವೆ. ಎರಡು ಕೊಠಡಿಗಳಲ್ಲಿ ತಗರತಿಗಳು, ಒಂದು ಶಿಕ್ಷಕರ ಬಳಕೆಗೆ ಹಾಗೂ ಮತ್ತೊಂದರಲ್ಲಿ ಬಿಸಿಯೂಟ ತಯಾರಿಸಲಾಗುತ್ತಿದೆ. ಗ್ರಾಮದಲ್ಲಿನ ಹಳೆ ಶಾಲೆಯಲ್ಲಿಯೇ ಬಿಸಿಯೂಟ ತಯಾರಿಸುವುದರಿಂದ ಊರ ಹೊರಗಿನ ಹೊಸ ಶಾಲೆಯಿಂದ ಮಕ್ಕಳು ಮುಖ್ಯರಸ್ತೆ ದಾಟಿಕೊಂಡು ಮಧ್ಯಾಹ್ನ ಬಿಸಿಯೂಟಕ್ಕೆ ಅಲ್ಲಿಗೆ ಹೋಗುತ್ತಾರೆ.

ಶೌಚಾಲಯ ವ್ಯವಸ್ಥೆ ಇಲ್ಲದ ಕಾರಣ ಬಾಲಕಿಯರು ಮುಜುಗರ ಪಡುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಪಾಲಕ ಭೀಮಣ್ಣ ನಾಯಕ ವಟಗಲ್ ಒತ್ತಾಯಿಸಿದರು. ಶೌಚಾಲಯಗಳು ಸರಿಯಿಲ್ಲದ ಕಾರಣ ಮಕ್ಕಳಿಗೆ ತೊಂದರೆಯಾಗುತ್ತಿದೆ. ಈ ಕುರಿತು ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಎಸ್‌ಡಿಎಂಸಿ ಮತ್ತು ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಮುಖ್ಯ ಶಿಕ್ಷಕಿ ಪುಷ್ಪಾ ಪತ್ತಾರ್ ಹೇಳಿದರು
ಶೌಚಾಲಯ ಸಮಸ್ಯೆ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಒ ಗಮನಕ್ಕೆ ತರಲಾಗಿದೆ. ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ನೇತಾಜಿ ಸುಭಾಶ್ಚಂದ್ರ ಭೋಸ್ ಯುವಕ ಸಂಘದ ಅಧ್ಯಕ್ಷ ಶಿವಕುಮಾರ್ ಪಾಟೀಲ ಹೇಳಿದರು.












Click it and Unblock the Notifications