ಬದಲಾವಣೆಯತ್ತ ರಾಯಚೂರು ರಾಜಕೀಯ: ಯಾರತ್ತ ಮತದಾರರ ಒಲವು?
ರಾಯಚೂರು, ಮೇ 05: ಜಿಲ್ಲೆಯು ಚಿನ್ನದ ನಾಡು, ವಿದ್ಯುತ್‌ಶಕ್ತಿಯ ಬೀಡು, ಭತ್ತದ ಬಟ್ಟಲು ಎನ್ನುವುದು ಹೊಗಳಿಕೆಗೆ ಸಿಮೀತ. ಮೂಲಸೌಕರ್ಯಗಳ ಸಮಸ್ಯೆ ಹಾಗೂ ಉದ್ಯೋಗಗಳ ಸೃಷ್ಟಿಯಿಲ್ಲದೆ ಜನರು ಗುಳೆ ಹೋಗುವುದು ಇಂದಿಗೂ ವಾಸ್ತವ. ಒಟ್ಟು ಏಳು ವಿಧಾನಸಭೆ ಕ್ಷೇತ್ರಗಳ ಪೈಕಿ ನಾಲ್ಕು ಪರಿಶಿಷ್ಟ ಪಂಗಡ, ಒಂದು ಪರಿಶಿಷ್ಟ ಜಾತಿ ಹಾಗೂ ಎರಡು ಸಾಮಾನ್ಯ ಮೀಸಲು ಕ್ಷೇತ್ರಗಳಿವೆ. ಈ ಬಾರಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರಗಳನ್ನು ಹೊರತುಪಡಿಸಿ ಇನ್ನುಳಿದ ಕ್ಷೇತ್ರಗಳಲ್ಲಿ ಜನರು ಬದಲಾವಣೆಯತ್ತ ಚಿತ್ತ ಹರಿಸಿರುವುದು ಸ್ಪಷ್ಟ.
2013 ಮತ್ತು 2018 ರ ವಿಧಾನಸಭೆ ಚುನಾವಣಾ ಫಲಿತಾಂಶಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಮೂರು ಪಕ್ಷಗಳು ಗೆಲುವಿನಲ್ಲಿ ಸ್ಥಾನ ಪಡೆದಿವೆ. ಮಸ್ಕಿಯೊಂದನ್ನು ಹೊರತುಪಡಿಸಿ ಇನ್ನುಳಿದ ಕಡೆಗಳಲ್ಲಿ ಹಿಂದೆ ಜಯ ಸಾಧಿಸಿದ ಪಕ್ಷವನ್ನು ಜನರು ಬದಲಿಸಿ ಮತ ನೀಡಿದ್ದಾರೆ. ಪ್ರತಿ ಚುನಾವಣೆಯಲ್ಲಿ ಜೆಡಿಎಸ್ ಎರಡು ಕಡೆ ಗೆಲುವು ಉಳಿಸಿಕೊಂಡು ಬಂದಿರುವುದು ವಿಶೇಷ. ಈ ಬಾರಿಯೂ ಜೆಡಿಎಸ್ ಅಭ್ಯರ್ಥಿಗಳು ಕೆಲವು ಕಡೆ ಭಾರಿ ಪ್ರಭಾವ ಹೊಂದಿದ್ದು, ತ್ರಿಕೋನ ಸ್ಪರ್ಧೆ ಏರ್ಪಡುವುದಕ್ಕೆ ಕಾರಣರಾಗಿದ್ದಾರೆ.

ರಾಯಚೂರು ನಗರ ಕ್ಷೇತ್ರದಲ್ಲಿ ಶಾಸಕ ಡಾ.ಶಿವರಾಜ ಪಾಟೀಲ ಮತ್ತೆ ಬಿಜೆಪಿಯಿಂದ ಸ್ಪರ್ಧಿಸಿದ್ದು ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳು ಮತ್ತು ಕ್ಷೇತ್ರದಲ್ಲಿ 10 ವರ್ಷಗಳಿಂದ ಮಾಡಿರುವ ಅಭಿವೃದ್ಧಿ ಮತ್ತು ಮಾಡಬೇಕಾದ ಅಭಿವೃದ್ಧಿ ವಿಷಯಗಳನ್ನು ಜನರ ಮುಂದಿಡುತ್ತಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಮೊಹ್ಮದ್ ಶಾಲಂ ಸಾಮಾನ್ಯ ಕಾರ್ಯಕರ್ತರಾಗಿದ್ದರು. ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜ ಮತ್ತು ಯುವ ಮುಖಂಡ ರವಿ ಬೋಸರಾಜ ಕಾಂಗ್ರೆಸ್ ಅಭ್ಯರ್ಥಿಗೆ ಬೆನ್ನುಲುಬಾಗಿ ಪ್ರಚಾರ ನಡೆಸುತ್ತಿದ್ದಾರೆ. ಜೆಡಿಎಸ್ ಅಭ್ಯರ್ಥಿ ವಿನಯಕುಮಾರ್ ಕೂಡಾ ತೀವ್ರ ಪೈಪೋಟಿ ನೀಡುತ್ತಿದ್ದು, ಪಂಚರತ್ನ ಯೋಜನೆಗಳು ಮತ್ತು ನಗರಸಭೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಮೂಲಕ ಮತಯಾಚನೆ ಮಾಡುತ್ತಿದ್ದಾರೆ. ಕಣದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಶಾಸಕ ಬಸನಗೌಡ ದದ್ದಲ್ ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಐದು ವರ್ಷಗಳಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸಗಳನ್ನು ಮತ್ತು ಕಾಂಗ್ರೆಸ್ ಗ್ಯಾರಂಟಿಗಳನ್ನು ಜನರ ಮುಂದಿಟ್ಟು ಮತಯಾಚಿಸುತ್ತಿದ್ದಾರೆ. ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಮತ್ತೆ ಬಿಜೆಪಿ ಅಭ್ಯರ್ಥಿಯಾಗಿದ್ದು, ಹಿಂದೆ ಮಾಡಿದ ತಪ್ಪು ತಿದ್ದಿಕೊಂಡಿದ್ದು ಅಭಿವೃದ್ಧಿಗಾಗಿ ಆಶೀರ್ವಾದ ಮಾಡಿ ಎಂದು ಕೋರುತ್ತಿದ್ದಾರೆ. ಇಬ್ಬರ ನಡುವೆ ನೇರ ಸ್ಪರ್ಧೆ ನಡೆಯುತ್ತಿದೆ.

ದೇವದುರ್ಗದಲ್ಲಿ ಶಾಸಕ ಕೆ.ಶಿವನಗೌಡ ನಾಯಕ ಮತ್ತೆ ಬಿಜೆಪಿ ಅಭ್ಯರ್ಥಿಯಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನೂರಾರು ಕೋಟಿ ಅನುದಾನ ಮಂಜೂರಿ ಮಾಡಿಸಿ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿಯನ್ನು ಪ್ರಸ್ತಾಪಿಸಿ ಮತ ಕೇಳುತ್ತಿದ್ದಾರೆ. ಇವರಿಗೆ ಜೆಡಿಎಸ್ ಅಭ್ಯರ್ಥಿ ಕರಿಯಮ್ಮ ಜಿ. ಪ್ರಬಲವಾದ ಪೈಪೋಟಿ ನೀಡುತ್ತಿದ್ದು, ಎಲ್ಲ ಕಡೆ ಜನರು ಇವರೊಂದಿಗೆ ಭಾರಿ ಸಂಖ್ಯೆಯಲ್ಲಿ ಕಾಣಿಸುತ್ತಿದ್ದಾರೆ. ಬದಲಾವಣೆಗಾಗಿ ಮತ ಕೊಡಿ ಎಂದು ಕರೆಮ್ಮ ಕೇಳುತ್ತಿದ್ದಾರೆ. ಕಾಂಗ್ರೆಸ್‌ನಿಂದಲೂ ಶ್ರೀದೇವಿ ರಾಜಶೇಖರ್ ನಾಯಕ ಪ್ರಭಾವಿ ಅಭ್ಯರ್ಥಿಯಾಗಿ ಗಮನ ಸೆಳೆಯುತ್ತಿದ್ದಾರೆ. ಚುನಾವಣಾ ಕಣದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಕಾಂಗ್ರೆಸ್ ಕೋಟೆಯಾಗಿದ್ದ ಮಾನ್ವಿ ಕ್ಷೇತ್ರವು ಕಳೆದ ಚುನಾವಣೆಯಲ್ಲಿ ಜೆಡಿಎಸ್ ಪಾಲಾಗಿದೆ. ಶಾಸಕ ರಾಜಾ ವೆಂಕಟಪ್ಪ ನಾಯಕ ಮತ್ತೆ ಜೆಡಿಎಸ್ ಅಭ್ಯರ್ಥಿಯಾಗಿದ್ದು, ಮಾಡಿರುವ ಕೆಲಸಗಳನ್ನು ಮುಂದಿಟ್ಟು ಮತಯಾಚನೆ ನಡೆಸಿದ್ದಾರೆ. ಮಾಜಿ ಶಾಸಕ ಹಂಪಯ್ಯ ನಾಯಕ ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಬದಲಾವಣೆಗಾಗಿ ಜನರು ತಮ್ಮನ್ನು ಮತ್ತೆ ಗೆಲ್ಲಿಸುತ್ತಾರೆ ಎನ್ನುವ ವಿಶ್ವಾಸದಲ್ಲಿದ್ದಾರೆ. ಇಬ್ಬರಿಗೂ ಪ್ರಬಲ ಸ್ಪರ್ಧೆವೊಡ್ಡಿರುವ ಬಿಜೆಪಿ ಅಭ್ಯರ್ಥಿ ಮಾಜಿ ಸಂಸದ ಬಿ.ವಿ.ನಾಯಕ ಅವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತೊರೆದು ಪಕ್ಷಾಂತರಗೊಂಡು ಬಂದಿದ್ದಾರೆ. ಸ್ಪರ್ಧಾ ಕಣ ರಂಗೇರಿದ್ದು, ತ್ರಿಕೋನ ಪೈಪೋಟಿಯಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದು ಕುತೂಹಲ ಕೆರಳಿಸಿದೆ.
ಲಿಂಗಸುಗೂರು ಕ್ಷೇತ್ರದಲ್ಲಿ ಶಾಸಕ ಡಿ.ಎಸ್.ಹೂಲಗೇರಿ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ತಾವು ಮಾಡಿದ ಅಭಿವೃದ್ಧಿಗಾಗಿ ಮತ ನೀಡುವಂತೆ ಜನರ ಮುಂದೆ ಹೋಗುತ್ತಿದ್ದಾರೆ. ಈ ಹಿಂದೆ ಎರಡು ಬಾರಿ ಸೋಲು ಅನುಭವಿಸಿರುವ ಸಿದ್ದು ಬಂಡಿ ಮತ್ತೊಮ್ಮೆ ಜೆಡಿಎಸ್ ಅಭ್ಯರ್ಥಿಯಾಗಿರುವುದು ಜನರಲ್ಲಿ ಸ್ವಲ್ಪಮಟ್ಟಿನ ಅನುಕಂಪಕ್ಕೆ ಕಾರಣರಾಗಿದ್ದಾರೆ. ಮಾಜಿ ಶಾಸಕ ಮಾನಪ್ಪ ವಜ್ಜಲ್ ಬಿಜೆಪಿ ಅಭ್ಯರ್ಥಿಯಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆಯನ್ನು ಮುಂದಿಟ್ಟು ಮತ ಕೇಳುತ್ತಿದ್ದಾರೆ. ಕ್ಷೇತ್ರದಲ್ಲಿ ಮೂವರು ಪ್ರಬಲರಾಗಿದ್ದು, ತ್ರಿಕೋನ ಸ್ಪರ್ಧೆ ಸ್ಪಷ್ಟವಾಗಿ ಕಾಣುತ್ತಿದೆ.
ಪ್ರತಿ ಚುನಾವಣೆಯಲ್ಲಿ ಹಾಲಿ ಶಾಸಕರ ವಿರುದ್ಧ ಮತನೀಡುವ ಸಿಂಧನೂರು ಕ್ಷೇತ್ರದಲ್ಲಿ ಶಾಸಕ ವೆಂಕಟರಾವ್ ನಾಡಗೌಡ ಮತ್ತೊಮ್ಮೆ ಜೆಡಿಎಸ್ ಅಭ್ಯರ್ಥಿಯಾಗಿದ್ದು, ಗೆಲುವಿಗಾಗಿ ನಿರಂತರ ಪ್ರಚಾರದಲ್ಲಿ ತೊಡಗಿದ್ದಾರೆ. ಪಂಚರತ್ನ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡುತ್ತಿದ್ದಾರೆ. ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದು, ಬಿರುಸಿನ ಪ್ರಚಾರದಲ್ಲಿದ್ದಾರೆ. ಕಾಂಗ್ರೆಸ್ ತೊರೆದಿರುವ ಕರಿಯಪ್ಪ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ತ್ರಿಕೋನ ಸ್ಪರ್ಧೆ ಏರ್ಪಡಲು ಕಾರಣರಾಗಿದ್ದಾರೆ. ಮೂವರು ಪ್ರಭಾವಿಗಳಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.
2008ರಲ್ಲಿ ಹೊಸದಾಗಿ ರಚನೆಯಾದ ಮಸ್ಕಿ ವಿಧಾನಸಭೆ ಕ್ಷೇತ್ರದಲ್ಲಿ ಪ್ರತಾಪಗೌಡ ಪಾಟೀಲ ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. 2021ರಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗಿ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಶಾಸಕ ಬಸನಗೌಡ ತುರ್ವಿಹಾಳ ಪ್ರತಿಸ್ಪರ್ಧಿಯಾಗಿದ್ದು, ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ನೇರಾನೇರ ಪೈಪೋಟಿ ನಡೆಯುತ್ತಿದೆ.
ಜಿಲ್ಲೆಯ ಚುನಾವಣೆ ಕಣದಲ್ಲಿ ಒಟ್ಟು 61 ಅಭ್ಯರ್ಥಿಗಳಿದ್ದಾರೆ. ರಾಯಚೂರು ನಗರ 18, ರಾಯಚೂರು ಗ್ರಾಮೀಣ 8, ಮಾನ್ವಿ 6, ದೇವದುರ್ಗ 5, ಲಿಂಗಸುಗೂರು 7, ಸಿಂಧನೂರು 10 ಹಾಗೂ ಮಸ್ಕಿ ಕ್ಷೇತ್ರದಲ್ಲಿ 7 ಅಭ್ಯರ್ಥಿಗಳಿದ್ದಾರೆ. ಜಿಲ್ಲೆಯು ಪ್ರಮುಖವಾಗಿ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಯಾವುದೇ ಒಂದು ಪಕ್ಷದ ಹಿಡಿತದಲ್ಲಿ ಇಲ್ಲ. ಪಕ್ಷಕ್ಕಿಂತ ವ್ಯಕ್ತಿ ಪ್ರಭಾವಕ್ಕೆ ಎಲ್ಲ ಕ್ಷೇತ್ರದಲ್ಲೂ ಜನರು ಮನ್ನಣೆ ಕೊಡುತ್ತಾ ಬಂದಿರುವುದು ಇದುವರೆಗೂ ನಡೆದ ಚುನಾವಣಾ ಫಲಿತಾಂಶಗಳೇ ನಿದರ್ಶನ. ಈ ಬಾರಿಯೂ ಪಕ್ಷಕ್ಕಿಂತ ಅಭ್ಯರ್ಥಿಗಳು ಜನರಲ್ಲಿ ಬೀರಿದ ಪ್ರಭಾವವು ಫಲಿತಾಂಶವನ್ನು ನಿರ್ಧರಿಸಲಿದೆ. ಪ್ರಭಾವ ಉಳಿಸಿಕೊಂಡವರು ಪಕ್ಷ ಬದಲಿಸಿದರೂ ಜನರು ಅವರನ್ನು ಬದಲಿಸಿಲ್ಲ ಎನ್ನುವುದು ಕೂಡಾ ಗಮನಾರ್ಹವಾಗಿದೆ.












Click it and Unblock the Notifications