ದೇವದುರ್ಗದಲ್ಲಿ ಕರ್ತವ್ಯನಿರತ ಹೆಡ್ ಕಾನ್‌ಸ್ಟೆಬಲ್ ಮೇಲೆ ಜೆಡಿಎಸ್ ಶಾಸಕಿ ಪುತ್ರನಿಂದ ಹಲ್ಲೆ!
ರಾಯಚೂರು ಫೆಬ್ರವರಿ 12: ಕರ್ತವ್ಯನಿರತ ಹೆಡ್ ಕಾನ್‌ಸ್ಟೆಬಲ್ ಮೇಲೆ ಜೆಡಿಎಸ್ ಶಾಸಕಿ ಪುತ್ರ ಹಲ್ಲೆ ಮಾಡಿದ ಆರೋಪ ದೇವದುರ್ಗದಲ್ಲಿ ಕೇಳಿ ಬಂದಿದೆ. ಜೆಡಿಎಸ್ ಶಾಸಕಿ ಕರೆಮ್ಮ ಜೆ. ನಾಯಕ ಪುತ್ರ ಸಂತೋಷ, ಸಹೋದರ ತಿಮ್ಮರಡ್ಡಿ ಹಾಗೂ ಆಪ್ತ ಸಹಾಯಕ ಇಲಿಯಾಸ್ ಸೇರಿ 15ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಕರ್ತವ್ಯನಿರತ ಹೆಡ್ ಕಾನ್‌ಸ್ಟೆಬಲ್ ಮೇಲೆ ಹಲ್ಲೆ ಮಾಡಿದ್ದಾರೆಂದು ದೂರಲಾಗಿದೆ.
ದೇವದುರ್ಗ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆಂದು ಹೆಡ್ ಕಾನ್‌ಸ್ಟೆಬಲ್ ಹನುಮಂತರಾಯ ಆರೋಪಿಸಿದ್ದಾರೆ. ಹನುಮಂತರಾಯ ಅವರು ತಾವು ಕರ್ತವ್ಯದಲ್ಲಿ ಇದ್ದಾಗಲೇ ಜೆಡಿಎಸ್ ಶಾಸಕಿ ಪುತ್ರ ತಮ್ಮ ಹಲ್ಲೆ ಮಾಡಿದ್ದಾರೆ ಎಂದು ದೂರಿದ್ದಾರೆ.

ಸದ್ಯ ಹನುಮಂತರಾಯ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ತಾಲ್ಲೂಕಿನ ದೊಂಡಂಬಳಿ ಗ್ರಾಮದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಜೆಡಿಎಸ್ ಕಾರ್ಯಕರ್ತರ ಟ್ರ್ಯಾಕ್ಟರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಭಾನುವಾರ ಶಾಸಕಿ ಕರೆಮ್ಮ ಅವರ ಪುತ್ರ ಹಾಗೂ ಆಪ್ತ ಸಹಾಯಕ ಪ್ರವಾಸಿ ಮಂದಿರಕ್ಕೆ ಬರುವಂತೆ ಕರೆ ಮಾಡಿದ್ದರಿಂದ ಪ್ರವಾಸಿ ಮಂದಿರಕ್ಕೆ ಹೋದೆ ಎಂದು ಹಲ್ಲೆಗೊಳಗಾದ ಹನುಮಂತರಾಯ ತಿಳಿಸಿದ್ದಾರೆ.
ದೊಂಡಂಬಳಿ ಗ್ರಾಮದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿರುವ ಬಗ್ಗೆ ಬೀಟ್‌ನಲ್ಲಿದ್ದ ಪೊಲೀಸ್ ಸಿಬ್ಬಂದಿ ಪ್ರೇಮಾ ಹಾಗೂ ಅಲ್ಲಾಬಕ್ಷ್ ಪೊಲೀಸ್ ಠಾಣೆಗೆ ಮಾಹಿತಿ ನೀಡದೆ ಇರುವುದು ಘಟನೆಗೆ ಕಾರಣ ಎನ್ನುವ ಮಾತು ಪೊಲೀಸ್ ವಲಯದಲ್ಲಿ ಕೇಳಿ ಬರುತ್ತಿದೆ.
ಆಸ್ಪತ್ರೆಗೆ ಭೇಟಿ ನೀಡಿದ ಕೆಲ ಬಿಜೆಪಿ ಮುಖಂಡರು, 'ಪೊಲೀಸರಿಗೆ ಈ ಪರಿಸ್ಥಿತಿ ಬಂದಿದೆ. ತಾಲ್ಲೂಕಿನ ಜನ ಭಯದಲ್ಲಿ ಜೀವನ ನಡೆಸುತ್ತಿದ್ದಾರೆ' ಎಂದು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಘಟನೆಯ ಬಗ್ಗೆ ಪ್ರತಿಕ್ರಿಯಿಸಲು ಪೊಲೀಸ್ ಇನ್‌ಸ್ಪೆಕ್ಟರ್ ಅಶೋಕ ಸದಲಗಿ ನಿರಾಕರಿಸಿದರು.
ಠಾಣೆ ಮುಂದೆ ಪೊಲೀಸರ ವಿರುದ್ಧ ಕಿಡಿಕಾರಿದ ಶಾಸಕಿ ಕರೆಮ್ಮ ನಾಯಕ್..?
ದೇವದುರ್ಗ ಪೇದೆ ಮೇಲೆ ಹಲ್ಲೆ ಪ್ರಕರಣಕ್ಕೆ ವಿಚಾರಕ್ಕೆ ಪೊಲೀಸರು ಸುಳ್ಳು ಕೇಸ್ ದಾಖಲಿಸಿಕೊಂಡು ನನ್ನ ಹೆಸರು ಕೆಡಿಸಲು ಹುನ್ನಾರ ಮಾಡಿದ್ದಾರೆ ಎಂದು ಪುತ್ರ, ಆಪ್ತ ಸಹಾಯಕನ ಪರ ರಾತ್ರಿಯಿಡೀ ಪೊಲೀಸ್ ಠಾಣೆ ಮುಂದೆ ಕೂತು ಪ್ರತಿಭಟನೆ ಮಾಡಿ, ಪೊಲೀಸರ ವಿರುದ್ದ ಶಾಸಕಿ ಕರೆಮ್ಮ ಅವರು ಅಸಮಧಾನ ಹೊರಹಾಕಿದ್ದಾರೆ.
ರಾಯಚೂರು ಜಿಲ್ಲೆಯ ದೇವದುರ್ಗ ಪ್ರವಾಸಿ ಮಂದಿರದಲ್ಲಿ ಹಲ್ಲೆ ಘಟನೆ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೇದೆ ದೂರು ದಾಖಲಿಸಿದ್ದಾರೆ. ಶಾಸಕಿ ಪುತ್ರ ಸಂತೋಷ್, ಸಹೋದರ ತಿಮ್ಮಾರೆಡ್ಡಿ, ಆಪ್ತ ಕಾರ್ಯದರ್ಶಿ ಇಲಿಯಾಸ್, ರಫೀಕ್ ಸೇರಿ 8 ಜನ ವಿರುದ್ದ ಕೇಸ್ ದಾಖಲಾಗಿದೆ. ದೂರು ದಾಖಲಾಗುತ್ತಿದ್ದಂತೆ ದೇವದುರ್ಗ ಶಾಸಕಿ ಕರೆಮ್ಮ ನಾಯಕ್ ಪೊಲೀಸ್ ಠಾಣೆ ಮುಂದೆ, ಪುತ್ರ, ಸಹೋದರ ಹಾಗೂ ಆಪ್ತ ಕಾರ್ಯದರ್ಶಿ ಪರವಹಿಸಿ ಪ್ರತಿಭಟನೆ ಮಾಡಿ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪೂರ್ವಾಪರ ಪರಿಶೀಲನೆ , ತನಿಖೆ ಮಾಡದೆ ಪಿ.ಎ ಗಳ ಮೇಲೆ ಜಾತಿ ನಿಂದನೆ ಕೇಸ್ ದಾಖಲಿಸಿದ್ದಕ್ಕೆ ಆಕ್ರೋಶ ಹೊರಹಾಕಿದ್ದಾರೆ. ಪೇದೆ ಕುಡಿದಿದ್ದಾನೆ ಅವನ ಮಾತು ನಂಬಿ ಜಾತಿನಿಂದನೆ ಕೇಸ್ ಹೇಗೆ ಹಾಕಿದ್ರಿ, ನಾವೂ ಸಹ ಅಟ್ರಾಸಿಟಿ ದಾಖಲಿಸುತ್ತೇವೆ ಎಂದು ಶಾಸಕಿ ಪಟ್ಟು ಹಿಡಿದಾಗ ದೂರು ತೆಗೆದುಕೊಳ್ಳಲು ದೇವದುರ್ಗ ಪೊಲೀಸರು ನಿರಾಕರಿಸಿದ್ದಾರೆ.












Click it and Unblock the Notifications