ಕೆಲಸವಿಲ್ಲದೇ ಜೀವನ ನಡೆಸಲು ಪರದಾಡುತ್ತಿರುವ ಗೃಹರಕ್ಷಕರು
ರಾಯಚೂರು, ಡಿ.2: ಯಾವುದೇ ತುರ್ತು ಪರಿಸ್ಥಿತಿಯಿದ್ದರೂ ಅಲ್ಲಿ ಗೃಹ ರಕ್ಷಕದಳದ ಹಾಜರಿಯಿರುತ್ತದೆ. ತುರ್ತು ಪರಿಸ್ಥಿತಿಯಲ್ಲಿ ಗೃಹರಕ್ಷಕರ ಪಾತ್ರ ಮಹತ್ವದ್ದಾಗಿದೆ. ಆದರೆ, ಈಗ ಗೃಹರಕ್ಷಕ ದಳ ಸಿಬ್ಬಂದಿಗೆ ಕೆಲಸವಿಲ್ಲದೇ ಜೀವನ ಸಾಗಿಸುವುದು ಕಷ್ಟಕರವಾಗಿದ್ದು ದಾರಿ ಕಾಣದೇ ಕಂಗೆಟ್ಟಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಗೃಹರಕ್ಷಕರು, ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಿಸಿಕೊಂಡು ತೊಂದರೆಯಲ್ಲಿರುವ ಜನರ ಸಂಕಷ್ಟದಲ್ಲಿ ಅಥವಾ ಪೊಲೀಸ್ ಸಿಬ್ಬಂದಿ ಕಡಿಮೆ ಇದ್ದಾಗ ಇಲಾಕೆ ಜೊತೆಗೆ ಕೈ ಜೋಡಿಸಿ ಅಚ್ಚುಕಟ್ಟಾಗಿ ಎಚ್ಚರಿಕೆಯಿಂದ ಕೆಲಸ ಮಾಡಿದ್ದಾರೆ. ಆರ್‌ಟಿಒ, ಪ್ರವಾಸೋದ್ಯಮ ಇಲಾಖೆ ಸೇರಿದಂತೆ ಕೋವಿಡ್ ಸಂದರ್ಭದಲ್ಲೂ ಪ್ರಾಣದ ಹಂಗು ತೊರೆದು ವಾರಿಯರ್‌ಗಳಾಗಿ ಕೆಲಸ ಮಾಡಿದ್ದಾರೆ.
ಸರ್ಕಾರಿ ಶಿಕ್ಷಕಿ ಕೆಲಸ ಪಡೆದ ರಾಯಚೂರಿನ ಪೂಜಾ ಮಂಗಳಮುಖಿಯರಿಗೆ ಮಾದರಿ
ಸರ್ಕಾರದ ಅಧೀನದಲ್ಲಿ ಗೃಹ ರಕ್ಷದ ದಳದ ಸಿಬ್ಬಂದಿ ಶಿಸ್ತು ಬದ್ಧ ಸೇವೆ ನೀಡುತ್ತಿದ್ದಾರೆ. ಪೊಲೀಸ್ ಇಲಾಖೆಗೆ ಪೂರಕವಾಗಿ ಕೆಲಸ ಮಾಡುವುದು, ಪ್ರಾಕೃತಿಕ ವಿಪತ್ತು ನಿರ್ವಹಣೆ, ಬೆಂಕಿ ಅನಾಹುತ, ವೈಮಾನಿಕ ದಾಳಿ, ಸುನಾಮಿ, ಭೂಕಂಪ, ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಕೆಲಸಕ್ಕೆ ನಿಯೋಜಿಸಲಾಗುತ್ತಿತ್ತು.
ಸಂಕಷ್ಟದ ದಿನಗಳಲ್ಲಿ ತಮ್ಮ ಪ್ರಾಣದ ಹಂಗುನ್ನು ತೊರೆದು ಗೃಹರಕ್ಷಕರು ಹಗಲಿರುಳು ಕರ್ತವ್ಯ ನಿರ್ವಹಿಸಿದ್ದರೂ, ಸರ್ಕಾರ ತದ ನಂತರದ ದಿನಗಳಲ್ಲಿ ಗೃಹರಕ್ಷಕರನ್ನು ಪ್ರೋತ್ಸಾಹಿಸುವ ಬದಲಿಗೆ ಹಂತ ಹಂತವಾಗಿ ಇದ್ದ ಕರ್ತವ್ಯವನ್ನೂ ಕಡಿಮೆಗೊಳಿಸುತ್ತಾ, ಕೆಲಸದಿಂದ ವಂಚಿತರನ್ನಾಗಿಸಿದೆ. ಸರ್ಕಾರದ ಈ ಕ್ರಮ ವಿಷಾದನೀಯ ಸಂಗತಿಯಾಗಿದೆ ಎಂದು ಗೃಹರಕ್ಷಕದ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.
ಹಲವು ವರ್ಷಗಳಿಂದ ಸಾಕಷ್ಟು ಗೃಹರಕ್ಷಕರು ಸರ್ಕಾರ ನೀಡುತ್ತಿದ್ದ ಕರ್ತವವನ್ನೇ ಜೀವನೋಪಾಯಕ್ಕೆ ನಂಬಿಕೊಂಡಿದರು. ಈಗ ಕರ್ತವ್ಯ ವಂಚಿತರಾಗಿರುವ ಗೃಹರಕ್ಷಕರು ಕೆಲಸವಿಲ್ಲದೇ ಜೀವನ ಸಾಗಿಸುವುದು ಕಷ್ಟಕರವಾಗಿದ್ದು ಅಸಹಾಯಕತೆ ಸ್ಥಿತಿಗೆ ತಲುಪಿದ್ದಾರೆ.
ಸರ್ಕಾರ ನೀಡುತ್ತಿದ್ದ ಕರ್ತವ್ಯ ನಂಬಿಕೊಂಡಿದ್ದ ಗೃಹರಕ್ಷಕರು ತಮ್ಮ ಮುಂದಿನ ಜೀವನಕ್ಕೆ ದಾರಿ ಕಾಣದಂತಾಗಿ ಕಂಗಾಲಾಗಿದ್ದಾರೆ ಎಂದು ಶಕ್ತಿನಗರ ಗೃಹರಕ್ಷಕ ದಳ ಘಟಕದ ಅಧಿಕಾರಿ ಮೌನ ಕೊರ್ತಕುಂದಾ ಅವರು ಹೇಳಿದ್ದಾರೆ.

ಕರ್ನಾಟಕ ಗೃಹರಕ್ಷಕ ದಳ ಸಿಬ್ಬಂದಿಗೆ 365 ದಿನ, ತೆಲಂಗಾಣ ಮಾದರಿಯಲ್ಲಿ ಕೆಲಸ ನೀಡಲು ಕೋರಿದೆ. ಸರ್ಕಾರದಿಂದ ನೀಡುತ್ತಿರುವ ಗೌರವಧನ 380 ರಿಂದ 750 ರ ವರೆಗೆ ಇದೆ. ರಾಜ್ಯದ ಎಲ್ಲಾ ಗೃಹರಕ್ಷಕರಿಗೆ ಸಮಾನವಾದ ಗೌರವಧನ ನೀಡಬೇಕು. ಮೂಲಭೂತ ಸೌಕರ್ಯಗಳಾದ ಕೌಟುಂಬಿಕ ಆರೋಗ್ಯ ವಿಮೆ ನೀಡಬೇಕು. ಮಹಿಳಾ ಗೃಹರಕ್ಷಕಿಯರ ಸಿಬ್ಬಂದಿಗೆ ಕರ್ತವ್ಯದ ಅವಧಿಯಲ್ಲಿ ಸೂಕ್ತ ಸೌಲಭ್ಯ ಒದಗಿಸಬೇಕು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಲು ಅವರು ಒತ್ತಾಯಿಸಿದ್ದಾರೆ.
ಕರ್ತವ್ಯ ವಂಚಿತರಾಗಿರುವ ಗೃಹರಕ್ಷಕರು ಕೆಲಸವಿಲ್ಲದೇ ಜೀವನ ಸಾಗಿಸುವುದು ಕಷ್ಟಕರವಾಗಿದ್ದು ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಮಟ್ಟದಲ್ಲಿ ಒತ್ತಾಯ ಮಾಡುವಂತೆ ಶಾಸಕ ಬಸನಗೌಡ ದದ್ದಲ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ಕುಮಾರ್ ಕಟೀಲ್ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಮೌನ ಕೊರ್ತಕುಂದಾ ಮಾಹಿತಿ ನೀಡಿದ್ದಾರೆ.