ರಾಯಚೂರು ಜಿಲ್ಲೆಯ ಸರ್ಕಾರಿ ಕಚೇರಿಗಳಲ್ಲಿ ಇದುವರೆಗೂ ಸಂಗ್ರಹವಾದ ದಂಡದ ಮೊತ್ತ ಎಷ್ಟು?
ರಾಯಚೂರು ಜಿಲ್ಲೆಯ ಬಹುತೇಕ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ದಿನವಿಡೀ ಕೆಲಸದಲ್ಲಿ ಮಗ್ನರಾಗಿರುವುದನ್ನು ಕಾಣಬಹುದು. ಹಾಗೆಯೇ ಇದುವರೆಗೂ ಸರ್ಕಾರಿ ಕಚೇರಿಗಳಲ್ಲಿ ಸಂಗ್ರಹವಾದ ದಂಡದ ವಿವರ ಇಲ್ಲಿದೆ ತಿಳಿಯಿರಿ.
ರಾಯಚೂರು, ಮಾರ್ಚ್, 07: ಜಿಲ್ಲೆಯ ಬಹುತೇಕ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ದಿನವಿಡೀ ಕೆಲಸದಲ್ಲಿ ಮಗ್ನರಾಗಿರುವುದನ್ನು ಕಾಣಬಹುದು. 2022-23ನೇ ಹಣಕಾಸು ವರ್ಷದ ಕೊನೆಯ ತಿಂಗಳು ಮಾರ್ಚ್‌ನಲ್ಲಿ ಎಲ್ಲ ಲೆಕ್ಕಾಚಾರಗಳನ್ನು ಸರಿಪಡಿಸುವುದು ಮತ್ತು ಅನುದಾನವನ್ನು ಪೂರ್ಣ ಬಳಕೆ ಮಾಡುವ ಒತ್ತಡದಲ್ಲಿ ಎಲ್ಲರೂ ಇದ್ದಾರೆ. ಹಾಗೆಯೇ ರಾಯಚೂರು ಜಿಲ್ಲೆಯಲ್ಲಿ ಇದುವರೆಗೂ ಆದ ಕಾಮಗಾರಿಗಳೆಷ್ಟು ಅನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ ಕಚೇರಿ, ಉಪನೋಂದಣಾಧಿಕಾರಿ ಕಚೇರಿ, ಕೃಷಿ ಇಲಾಖೆ, ಲೋಕೋಪಯೋಗಿ ಇಲಾಖೆ, ಪಂಚಾಯತರಾಜ್ ಮತ್ತು ಗ್ರಾಮೀಣಾ ಭಿವೃದ್ಧಿ ಇಲಾಖೆಗಳಲ್ಲಿ ಜನದಟ್ಟಣೆ ಎದ್ದು ಕಾಣುತ್ತಿದೆ. ಬಾಕಿ ಬಿಲ್ ಬಿಡುಗಡೆ ಮಾಡಿಸಿಕೊಳ್ಳಲು ಗುತ್ತಿಗೆದಾರರು ಠಿಕಾಣಿ ಹೂಡಿದ್ದಾರೆ. ಅಲ್ಲದೆ, ಬಾಕಿ ಅನುದಾನ ಬಳಕೆಗಾಗಿ ಹೊಸದಾಗಿ ಕಾರ್ಯಾದೇಶ ನೀಡುವ ಪ್ರಕ್ರಿಯೆಗಳು ಕೂಡ ನಡೆಯುತ್ತಿವೆ.

ಜಿಲ್ಲಾಡಳಿತದಡಿ ಕಾರ್ಯ ನಿರ್ವಹಿಸುವ ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ (ಆರ್‌ಟಿಒ), ಜಿಲ್ಲಾ ಪೊಲೀಸ್, ಉಪನೋಂದಣಿ ಇಲಾಖೆ, ಅಬಕಾರಿ ಇಲಾಖೆ, ಖಜಾನೆ ಇಲಾಖೆ ಸೇರಿ ಅನೇಕ ಇಲಾಖೆಗಳಲ್ಲೂ ವರ್ಷಾಂತ್ಯದ ಗಡಿಬಿಡಿ ಇದೆ. ಶುಲ್ಕ ಸಂಗ್ರಹ, ದಂಡ ಸಂಗ್ರಹದ ವಾರ್ಷಿಕ ಗುರಿ ತಲುಪಲು ಎಲ್ಲಾ ಅಧಿಕಾರಿಗಳು ತಮ್ಮ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಸಂಗ್ರಹವಾದ ದಂಡದ ವಿವರ
ಹಾಗೆಯೇ ರಾಯಚೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿಗೆ 2022-23ನೇ ಸಾಲಿನಲ್ಲಿ ₹80 ಕೋಟಿ ನೋಂದಣಿ ಮತ್ತು ದಂಡ ಸಂಗ್ರಹ ಗುರಿ ನಿಗದಿಪಡಿಸಲಾಗಿತ್ತು. ಬಹುತೇಕ ಗುರಿ ಸಾಧನೆಯಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳ ಉಪಗನೋಂದಣಾಧಿಕಾರಿ ಕಚೇರಿಗಳಿಂದ ಒಟ್ಟು ₹120 ಕೋಟಿ ನೋಂದಣಿ ಶುಲ್ಕ ಸಂಗ್ರಹ ಮಾಡುವ ಮೂಲಕ ಗುರಿ ಸಾಧಿಸಲಾಗಿದೆ. ಇನ್ನು ಗುರಿ ಮೀರಿ ಶುಲ್ಕ ಸಂಗ್ರಹವಾಗುವ ನಿರೀಕ್ಷೆಯಿದೆ. ಪೊಲೀಸ್ ಇಲಾಖೆಯೂ ದಂಡ ಸಂಗ್ರಹ ಗುರಿ ಸಾಧಿಸುತ್ತಲೇ ಇದೆ.

ಇಲಾಖೆವಾರು ಅನುದಾನ ಬಳಕೆ
ಸರ್ಕಾರದಿಂದ ಬರುವ ಗರಿಷ್ಠ ಅನುದಾನ ಬಳಕೆ ಮಾಡುವ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ 30ಕ್ಕೂ ಹೆಚ್ಚು ಇಲಾಖೆಗಳು ಜಿಲ್ಲಾ ಪಂಚಾಯಿತಿ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ವಿವಿಧ ಕಾಮಗಾರಿಗಳಿಗೆ ಕ್ರಿಯಾಯೋಜನೆ ಸಿದ್ಧಪಡಿಸುವುದು ಮತ್ತು ಬಿಡುಗಡೆಯಾದ ಅನುದಾನ ಬಳಕೆ ಮಾಡಿದ ವರದಿಯನ್ನು ಅಂತಿಮವಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ನೀಡಬೇಕಾಗುತ್ತದೆ.
ಅನುದಾನ ಬಳಕೆ ವಿಷಯವಾಗಿ ಈಗಾಗಲೇ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್ ಅವರು ಈಚೆಗೆ ವಿವಿಧ ಇಲಾಖೆಗಳ ಸಭೆ ನಡೆಸಿದ್ದಾರೆ. ಇದೇ ಮಾರ್ಚ್ 10ರ ಒಳಗಾಗಿ ಪೂರ್ಣ ಅನುದಾನ ಬಳಕೆಗೆ ಕ್ರಮವಹಿಸುವಂತೆ ಸೂಚಿಸಿದ್ದಾರೆ.
ಬಳಕೆಯಾಗದ ಕೆಕೆಆರ್‌ಡಿಬಿ ಅನುದಾನ
2022-23ನೇ ಸಾಲಿನಲ್ಲಿ ರಾಯಚೂರು ಜಿಲ್ಲೆಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯು (ಕೆಕೆಆರ್‌ಡಿಬಿ) ಒಟ್ಟು 584 ಕಾಮಗಾರಿಗಳಿಗಾಗಿ ಒಟ್ಟು ₹551.35 ಕೋಟಿ ಅನುದಾನ ಹಂಚಿಕೆ ಮಾಡಿದೆ. ಅದರಲ್ಲಿ ಇದುವರೆಗೂ ಶೇಕಡಾ 12ರಷ್ಟು (₹68 ಕೋಟಿ) ಮಾತ್ರ ವೆಚ್ಚ ಮಾಡಲಾಗಿದೆ. 584 ಕಾಮಗಾರಿಗಳ ಪೈಕಿ 12 ಕಾಮಗಾರಿಗಳು ಪೂರ್ಣಗೊಂಡಿದ್ದು, 335 ಕಾಮಗಾರಿಗಳು ಪ್ರಗತಿಯಲ್ಲಿವೆ. 237 ಕಾಮಗಾರಿಗಳು ಇನ್ನೂ ಆರಂಭವೇ ಆಗಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications