ರಾಯಚೂರು: 'ಗಾಂಧಿ ಗ್ರಾಮ' ಪುರಸ್ಕಾರ ಪಡೆದ ಊರಿನಲ್ಲಿ ಅವ್ಯವಸ್ಥೆಯದ್ದೇ ಮೇಲುಗೈ
ರಾಯಚೂರು, ಅಕ್ಟೋಬರ್ 09: ಇಲ್ಲಿ ಕುಡಿಯುವ ನೀರು ಪೂರೈಕೆ ಸಂಪೂರ್ಣ ವ್ಯತ್ಯಯ, ವಿದ್ಯುತ್ ಕಡಿತ, ಚರಂಡಿ ಅವ್ಯವಸ್ಥೆ, ರಸ್ತೆಯಲ್ಲಿ ಕೊಳಚೆ ನೀರು ಸಂಗ್ರಹ, ರಸ್ತೆಯಂತೂ ಕೇಳಲೇ ಬೇಡಿ, ಹೆಜ್ಜೆ ಹೆಜ್ಜೆಗೂ ಗುಂಡಿಗಳು. ಇದು ಯಾವುದೋ ಕುಗ್ರಾಮದ ಚಿತ್ರಣವಲ್ಲ, ಎರಡನೇ ಬಾರಿ 'ಗಾಂಧಿ ಗ್ರಾಮ' ಪುರಸ್ಕಾರ ಲಭಿಸಿದ ನೀರು ಮಸ್ಕಿ ತಾಲೂಕಿನ ಪಾಮನಕಲ್ಲೂರು ಗ್ರಾಮದ ವಾಸ್ತವದ ಚಿತ್ರಣವಾಗಿದೆ.
ಗ್ರಾಮದ ಅವ್ಯವಸ್ಥೆಗೆ ಜನ ರೋಸಿ ಹೋಗಿದ್ದು, ಅಶುದ್ಧ ನೀರು ಪೂರೈಕೆ, ಸ್ವಚ್ಚತೆ ಇಲ್ಲದೇ ನಿವಾಸಿಗಳು ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿದ್ದಾರೆ. ಹೀಗಾಗಿ ಗ್ರಾಮ ಪಂಚಾಯತಿ ಹಾಗೂ ಅಧಿಕಾರಿಗಳ ವಿರುದ್ಧ ಸ್ಥಳೀಯರು ಅಸಮಾಧಾನ ಹೊರಹಾಕಿದ್ದು, ಕೂಡಲೇ ಗ್ರಾಮದ ಅವ್ಯವಸ್ಥೆಗೆ ಬ್ರೇಕ್ ಹಾಕುವಂತೆ ಮನವಿ ಮಾಡಿದ್ದಾರೆ.

ಪಾಮನಕಲ್ಲೂರು ಗ್ರಾಮದಲ್ಲಿ ಜಲ ನಿರ್ಮಲ ಯೋಜನೆಯಡಿ ನಲ್ಲಿಗಳನ್ನು ಅಳವಡಿಸಿದ್ದರೂ ನೀರು ಬರುತ್ತಿಲ್ಲ. ಪೈಪ್ ಹಾಕಲು ರಸ್ತೆ ಅಗೆದ ಗುತ್ತಿಗೆದಾರರು ಮತ್ತೆ ಸರಿಪಡಿಸುವ ಗೋಜಿಗೆ ಹೋಗಿಲ್ಲ. ಹೀಗಾಗಿ ಕೊಳಚೆ ನೀರು ಸಂಗ್ರಹವಾಗಿ ಸೊಳ್ಳೆಗಳ ಕಾಟ ಹೆಚ್ಚಿದೆಎನ್ನುವುದು ಜನತಾ ಕಾಲೋನಿ ನಿವಾಸಿಗಳ ಆರೋಪವಾಗಿದೆ.
'ಇರಕಲ್ ಕೆರೆಯಿಂದ ವಾರಕ್ಕೊಮ್ಮೆ ಕಲುಷಿತ ಕೆರೆ ನೀರು ಪೂರೈಕೆ, ಅಸಮರ್ಪಕ ಚರಂಡಿ ವ್ಯವಸ್ಥೆ, ರಸ್ತೆ ಉದ್ದಕ್ಕೂ ಬಯಲು ಶೌಚಾಲಯ, ನಿರುಪಯುಕ್ತ ಸಾರ್ವಜನಿಕ ಶೌಚಾಲಯದ ಸುತ್ತಮುತ್ತ ಗಿಡಗಳು ಬೆಳೆದು ಗಲೀಜು ನೀರು ಸಂಗ್ರಹವಾಗಿ ಇಡೀ ವಾತಾವರಣ ಗಬ್ಬೆದ್ದು ನಾರುತ್ತಿದ, ಸ್ವಚ್ಚತೆ ಬಗ್ಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ' ಎಂದು ಕರವೇ ಹೋಬಳಿ ಘಟಕದ ಅಧ್ಯಕ್ಷ ರಮೇಶ ಗಂಟ್ಲ ಆರೋಪಿಸಿದರು.
'ರಸ್ತೆ, ಮನೆ ಸುತ್ತಮುತ್ತ ಗಲೀಜು ನೀರು ಸಂಗ್ರಹವಾಗಿ ಸ್ವಚ್ಚತೆ ಕೊರತೆ ಉಂಟಾಗಿದೆ, ಓಣಿಗಳ ಸಣ್ಣ ಸಣ್ಣ ರಸ್ತೆಗಳಲ್ಲೂ ಸರಾಗವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ' ಎಂದು ನವ ಜೀವನ ಮಹಿಳಾ ಒಕ್ಕೂಟದ ಕಾರ್ಯಕರ್ತೆ ಶಾಂಭವಿ ದೂರಿದರು.

ಚರಂಡಿ ವ್ಯವಸ್ಥೆ ಸರಿಪಡಿಸಿ ಸ್ವಚ್ಚತೆ ಕಾಪಾಡಬೇಕು, ಪ್ರತಿದಿನ ಸಮರ್ಪಕ ನೀರು ಹಾಗೂ ನಿರಂತರ ವಿದ್ಯುತ್ ಪೂರೈಕೆ, ರಸ್ತೆ ಬದಿ ಮುಳ್ಳು ಗಿಡಗಳನ್ನು ತೆರವುಗೊಳಿಸಿ ದುರಸ್ತಿ, ಮುಖ್ಯರಸ್ತೆ ಬದಿ ಹಾಕಿದ ತಿಪ್ಪೆ, ಕಸ ವಿಲೇವಾರಿ ಮಾಡುವುದು ಮತ್ತು ಜಲ ಜೀವನ ಮಿಷನ್ ಯೋಜನೆಯಡಿ ಪೈಪ್ ಹಾಕಲು ಅಗೆದ ರಸ್ತೆಗಳನ್ನು ದುರಸ್ತಿ ಮಾಡಬೇಕು ಎನ್ನುವುದು ಗ್ರಾಮಸ್ಥರ ಒತ್ತಾಯವಾಗಿದೆ.
ಮೂಲಸೌಕರ್ಯ ಕೊರತೆ ಎದುರಿಸುತ್ತಿರುವ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ ನೀಡಿ ಬೆನ್ನುತಟ್ಟಿಕೊಳ್ಳುತ್ತಿರುವುದು ವಿಪರ್ಯಾಸ ಎಂದು ಕರವೇ ತಾಲೂಕು ಘಟಕದ ಅಧ್ಯಕ್ಷ ವೆಂಕಟೇಶ ಶಂಕ್ರಿ ದೇವತಗಲ್ ಲೇವಡಿ ಮಾಡಿದ್ದಾರೆ. ಜೆಜೆಎಂ ಕಾಮಗಾರಿ ನಿಮಿತ್ತ ಅಗೆದ ರಸ್ತೆ ದುರಸ್ತಿ ಮಾಡಬೇಕು. ಸ್ವಚ್ಚತೆ ಕಾಪಾಡಿ ಸೊಳ್ಳೆ ನಿಯಂತ್ರಿಸಬೇಕು ಎಂದು ಸ್ಥಳೀಯ ನಿವಾಸಿ ಶಾಂಭವಿ ಅವರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಗ್ರಾಮ ಪಂಚಾಯತಿ ಸದಸ್ಯರು ಕೂಡ ಮಾತನಾಡಿದ್ದು,'ಗಾಂಧಿ ಗ್ರಾಮ ಪುರಸ್ಕಾರದಿಂದ ಜವಾಬ್ದಾರಿ ಹೆಚ್ಚಿದ್ದು ಕುಡಿಯುವ ನೀರು ಸ್ವಚ್ಚತೆ ಸೇರಿದಂತೆ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ . ಜಲ ಜೀವನ್ ಮಿಷನ್ ಕಾಮಗಾರಿ ಗುತ್ತಿಗೆದಾರರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಮತ್ತು ರಸ್ತೆ ದುರಸ್ತಿ ಸೇರಿ ಮೂಲ ಸೌಕರ್ಯ ಒದಗಿಸಲಾಗುವುದು' ಎಂದು ಭರವಸೆ ನೀಡಿದ್ದಾರೆ.












Click it and Unblock the Notifications