ರಾಯಚೂರು: ಬಿಜೆಪಿ, ಜೆಡಿಎಸ್ ಮೈತ್ರಿ ವಿಚಾರ: ಕೋರ್ ಕಮಿಟಿ ಸಭೆಯತ್ತ ಎಲ್ಲರ ಚಿತ್ತ
ರಾಯಚೂರು, ಸೆಪ್ಟೆಂಬರ್, 22: ರಾಜ್ಯದಲ್ಲಿ ಮುಂದಿನ ಲೋಕಸಭೆ ಚುನಾವಣೆ ಜಂಟಿಯಾಗಿ ಎದುರಿಸಲು ಬಿಜೆಪಿ -ಜೆಡಿಎಸ್ ಮೈತ್ರಿ ಬಹುತೇಕ ನಿಶ್ಚಿತವಾಗಿರುವ ಬೆನ್ನಲ್ಲೇ ರಾಯಚೂರು ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿ ಬೇಗುದಿಗೆ ಸೆಪ್ಟೆಂಬರ್ 22ರ ಕೋರ್ ಕಮಿಟಿ ಸಭೆಯತ್ತ ಗಮನ ಹರಿದಿದೆ.
ಕೇವಲ 120 ದಿನಗಳ ಹಿಂದೆಯಷ್ಟೇ ಮುಗಿದ ವಿಧಾನಸಭೆ ಚುನಾವಣೆಯಲ್ಲಿ ಇದೇ ಬಿಜೆಪಿಯವರನ್ನು ವೇದಿಕೆಯಲ್ಲಿ ಹಿಗ್ಗಾ ಮುಗ್ಗಾ ತರಾಟೆ, ವೈಯಕ್ತಿಕ ನಿಂದನೆ , ಜಾತ್ಯಾತೀತ ನಿಲುವು ಎಂದೆಲ್ಲ ಉದ್ದುದ್ದ ಭಾಷಣ ಮಾಡಿ ಟೀಕೆಗಳ ಸುರಿಮಳೆಗೈದ ಸ್ಪರ್ಧಿಸಿದ ಅಭ್ಯರ್ಥಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಜೆಡಿಎಸ್ ವರಿಷ್ಠರ ನಡೆ ಬಾಯಲ್ಲಿ ಬಿಸಿ ತುಪ್ಪ ಹಾಕಿಕೊಂಡಂತೆ ತೊಳಲಾಟ ಶುರುವಾಗಿದೆ.

ಈಗಾಗಲೇ ಬೆಂಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಪದಾಧಿಕಾರಿಗಳ, ಹಾಲಿ ಮಾಜಿ ಶಾಸಕ ಸಭೆಯಲ್ಲಿ ಬಿಜೆಪಿ ಜೊತೆ ಲೋಕಸಭೆ ಚುನಾವಣೆಗೆ ತೆರಳುವುದು ಖಚಿತವಾಗಿದ್ದು, ಇನ್ನಷ್ಟೇ ಸೀಟುಗಳ ಹೊಂದಾಣಿಕೆಯಾಗುವುದು ಬಾಕಿ ಇದೆಯಂತೆ. ಈ ಬಗ್ಗೆ ಪದಾಧಿಕಾರಿಗಳ, ಶಾಸಕರ ಮನವೊಲಿಸುವ ಕಸರತ್ತು ವರಿಷ್ಠರು ಪರೋಕ್ಷವಾಗಿ ಮಾಡಿದ್ದಾರಂತೆ. ಆದರೆ ವಿಧಾನಸಭಾ ಕ್ಷೇತ್ರದಲ್ಲಿನ ಕಾರ್ಯಕರ್ತರ 2ನೇ ಹಂತದ ನಾಯಕರ ಮನಸು ತಿಳಿಯುವ ಸಾಹಸಕ್ಕೆ ಕೈ ಹಾಕಿರುವುದಾಗಿ ಗೊತ್ತಾಗಿದೆ.
ಅದರಲ್ಲೂ ರಾಯಚೂರು ನಗರ, ದೇವದುರ್ಗ, ಲಿಂಗಸೂಗೂರು ಕ್ಷೇತ್ರಗಳಲ್ಲಿ ಬಿಜೆಪಿಯವರನ್ನೇ ಪ್ರಬಲ ಎದುರಾಳಿಗಳಂತೆ ಬಿಂಬಿಸಿ ಟೀಕೆಗಳನ್ನು ಮಾಡಿದ್ದು, ಅವರ ಜೊತೆಗೆ ಸ್ನೇಹ ಬೆಳೆಸುವುದು ಜೆಡಿಎಸ್‌ನಲ್ಲಿ ಒಳಗೊಳಗೆ ಬೇಗುದಿ ಆರಂಭವಾಗಿದೆ.
ರಾಯಚೂರು ನಗರದಲ್ಲಿ ಬಿಜೆಪಿ ಶಾಸಕ ಡಾ.ಶಿವರಾಜ ಪಾಟೀಲ ಮತ್ತು ದೇವದುರ್ಗ ಕ್ಷೇತ್ರದಲ್ಲಿನ ಬಿಜೆಪಿಯ ಶಾಸಕರಾಗಿದ್ದ ಕೆ.ಶಿವನಗೌಡ ನಾಯಕರ ವಿರುದ್ಧ ಜಿಲಾಧ್ಯಕ್ಷ ವಿರುಪಾಕ್ಷಿ , ದೇವದುರ್ಗ ಶಾಸಕಿ ಕರೆಮ್ಮ ನಾಯಕ , ಅಲ್ಲಿನ ತಾಲೂಕು ಅಧ್ಯಕ್ಷ ಬುಡ್ಡನಗೌಡ ಪಾಟೀಲರು, ಲಿಂಗಸೂಗೂರು ಕ್ಷೇತ್ರದಲ್ಲಿ ಮಾನಪ್ಪ ವಜ್ಜಲ್ ವಿರುದ್ಧ ಸಿದ್ದು ಬಂಡಿ ಮಾಡಿದ ವಾಗ್ದಾಳಿ, ಕಾರ್ಯಕರ್ತರು ಪಕ್ಷಕ್ಕೆ ಹಗಲಿರುಳು ದುಡಿದ ಪರಿ ಈ ಮೈತ್ರಿಯಾದರೆ ಸಾಮಾನ್ಯ ಜನರಿಗೆ ಜಾತ್ಯಾತೀತರು ನಾವು ಮುಖ ತೋರಿಸುವುದಾದರೂ ಹೇಗೆ ಎನ್ನುವುದಕ್ಕೆ ಉತ್ತರಿಸಲೇಬೇಕಾಗುತ್ತದೆ ಎನ್ನುವ ಅಳುಕು ಎದುರಾಗಿದೆ.
ಆದರೆ ವರಿಷ್ಠರ ನಿರ್ಧಾರಕ್ಕೆ ಚಕಾರ ಎತ್ತಲೂ ಆಗದೆ ಇತ್ತ ಲೋಕಸಭೆಗೆ ಪಕ್ಷದಿಂದ ಅಭ್ಯರ್ಥಿ ಸ್ಪರ್ಧಿಸಿದರೆ ಗೆಲ್ಲಿಸಿ ಕೊಡುತ್ತೇವೆ ಎಂದು ಎದೆ ತಟ್ಟಿ ಹೇಳುವ ಸ್ಥಿತಿಯಲ್ಲಿಲ್ಲದೆ ಜಿಲ್ಲೆಯ ಜೆಡಿಎಸ್ ಹಾಲಿ, ಮಾಜಿ ಶಾಸಕರು, ಮುಖಂಡರು ಕೈ ಹಿಸುಕಿಕೊಳ್ಮ್ಳತ್ತಿದ್ದಾರಂತೆ. ಸಿಂಧನೂರು, ಮಾನ್ವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸಾಂಪ್ರದಾಯಕ ಎದುರಾಳಿ ಹಾಗಂತ ಸಮಸ್ಯೆಯಾಗದು ಎಂದು ಹೇಳಲಾಗದು ಸ್ವಲ್ಪ ಮಟ್ಟಿಗೆ ಸಮಸ್ಯೆಯಾಗಬಹುದು.
ಮಸ್ಕಿ, ರಾಯಚೂರು ಗ್ರಾಮಾಂತರದಲ್ಲಿ ಯಾವ ಕಡೆ ಒಲವು, ಗೆಲುವು ಎಂದು ಹೇಳದ ಸ್ಥಿತಿ ಜೆಡಿಎಸ್ ಪಕ್ಷದಲ್ಲಿದ್ದು, ಅಲ್ಲಿ ಪ್ರಮುಖ ಮುಖಂಡರೇ ಇಲ್ಲ. ಗಾಳಿ ಬಂದ ಕಡೆ ತೂರಿಕೊಳ್ಳುವವರೇ ಹೆಚ್ಚಿದ್ದಾರೆ. ಕಳೆದ ಚುನಾವಣೆಯಲ್ಲಿ ದೇವದುರ್ಗ ಕ್ಷೇತ್ರ ಅಕ್ಷರಶಃ ಬಿಜೆಪಿ- ಜೆಡಿಎಸ್ ಮಧ್ಯೆ ರಣಾಂಗಣವಾಗಿತ್ತು . ಬಿಜೆಪಿಯ ಅಂದಿನ ಶಾಸಕರಾಗಿದ್ದ ಶಿವನಗೌಡ ನಾಯಕರ ವಿರುದ್ಧ ದಾಖಲೆ ಹಿಡಿದು ಅಕ್ರಮದ ಬಗ್ಗೆ ಆರೋಪ ಮಾಡಿದ್ದು, ಹೆದರಿಕೆಯ ಆಡಿಯೋ ಬಿಡುಗಡೆ ಕಾರ್ಯಕರ್ತರ ಮೇಲೆ ಹಲ್ಲೆ ದೂರು, ಪ್ರತಿ ದೂರುಗಳು ಹಾಕಿಸಿಕೊಂಡ ಕಾರ್ಯಕರ್ತರ, ಮುಖಂಡರಿಗೆ ಈ ಮೈತ್ರಿಯಿಂದ ವರಿಷ್ಠರು, ಗೆದ್ದ ಶಾಸಕರು, ಸೋತವರು, ಜಿಲ್ಲೆಯ ಮುಖಂಡರು ಯಾವ ರೀತಿ ಉತ್ತರ ನೀಡುವರು ಎನ್ನುವ ಪ್ರಶ್ನೆಯಂತೂ ಕಾಡಲಾರಂಭಿಸಿದೆ.
ಕೆಳ ಹಂತದ ಕಾರ್ಯಕರ್ತರಿಗೆ ಬಿಜೆಪಿ ಜೊತೆ ಮೈತ್ರಿಯಾದರೆ ದೇವದುರ್ಗ, ಲಿಂಗಸೂಗೂರು, ಮಾನ್ವಿ, ರಾಯಚೂರು ನಗರ ಕ್ಷೇತ್ರದಲ್ಲಿ ಅವರ ಜೊತೆ ವೇದಿಕೆ ಹಂಚಿಕೊಂಡು ಬೆಂಬಲಿಸಿ ಮಾತನಾಡುವುದು ಹೇಗೆ? ಮಾತನಾಡಿದರೆ ಆಗುವ ನಷ್ಟವೇನು? ಮುಜುಗರ ತಪ್ಪಿಸಿಕೊಳ್ಳಲು ಏನು ಮಾಡುವುದು? ಯಾರ ವಿರುದ್ಧ ಜಾತಿ, ಧರ್ಮ, ಭ್ರಷ್ಟರು ಎಂದೇಳಿ ಭಾಷಣ ಮಾಡಿ ಮತ ಯಾಚಿಸಿದ್ದವು. ಈಗ ಯಾವ ದಾಟಿ ಭಾಷಣ ಮಾಡಿ ಲೋಕಸಭೆಯಲ್ಲಿ ಅಭ್ಯರ್ಥಿ ಗೆಲ್ಲಿಸಲು ಕೋರಬೇಕು. ಒಂದೊಮ್ಮೆ ಜೆಡಿಎಸ್ ಅಭ್ಯರ್ಥಿಗೆ ರಾಯಚೂರು, ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ಸಿಗದಿದ್ದರೆ ಬಿಜೆಪಿಯವರು ಯಾವ ಅಭ್ಯರ್ಥಿ ಕಣಕ್ಕಿಳಿಸಲಿದ್ದಾರೆ ಎನ್ನುವ ಸಾಲು ಸಾಲು ಪ್ರಶ್ನೆ ಜೆಡಿಎಸ್ ನಾಯಕರಲ್ಲಿ ಆರಂಭವಾಗಿದೆ.
ಈ ಮಧ್ಯೆ ಜಿ.ಟಿ.ದೇವೇಗೌಡ ಅಧ್ಯಕ್ಷತೆ, ವೈ.ಎಸ್.ವಿ.ದತ್ತಾ ಸಂಚಾಲಕ ನೇತೃತ್ವದ ಕೋರ್ ಕಮಿಟಿ ಲೋಕಸಭೆ ಚುನಾವಣೆಯ ಮೈತ್ರಿ ಪಕ್ಷ ಗೆಲ್ಲುವ ಸಾಧ್ಯತೆ ಕುರಿತು ಜಿಲ್ಲೆಯಲ್ಲಿ ಜೆಡಿಎಸ್ ಹಾಲಿ, ಮಾಜಿ ಶಾಸಕರು, ಜಿಲ್ಲಾ, ತಾಲೂಕು ಮಟ್ಟದ ಪದಾಧಿಕಾರಿಗಳ ಸಭೆ ನಡೆಸಲು ಮುಂದಾಗಿದೆ.
ಸೆಪ್ಟೆಂಬರ್ 22ರಂದು ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಕೋರ್ ಕಮಿಟಿ ಸಭೆ ನಿಗದಿಯಾಗಿದ್ದು, ಅಲ್ಲಿ ವರಿಷ್ಠರ ಸಂದೇಶ ಹೊತ್ತು ತಂದ ಸಮಿತಿಗೆ ಮುಖಂಡರು , ಶಾಸಕರು, ಪದಾಧಿಕಾರಿಗಳ ಅಭಿಪ್ರಾಯದ ಮೇಲೆ ಮುಂದಿನ ಮೈತ್ರಿ ನಿರ್ಧಾರ ಆಗುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ ಜಿಲ್ಲೆಯ ಜೆಡಿಎಸ್ ಮುಖಂಡರು. ಆದರೆ ಮೈತ್ರಿ ಸಾಧ್ಯವೇ ಇಲ್ಲ ಎಂದು ಹೇಳಲು ಮಾತ್ರ ಯಾವೊಬ್ಬ ಮುಖಂಡ ಮುಂದೆ ಬರುತ್ತಿಲ್ಲ. ಒಟ್ಟಾರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ರಾಯಚೂರು ಜಿಲ್ಲೆಯ ಮಟ್ಟಿಗೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವುದನ್ನು ಕಾದುನೋಡಬೇಕಿದೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆ ಇನ್ನೂ ಅಂತಿಮವಾಗಿ ಹೇಳಲಾಗದು. ಮೈತ್ರಿ ಬಗ್ಗೆ ಸಿಂಧನೂರಿನಲ್ಲಿ ನಡೆಯುವ ಕೋರ್ ಕಮಿಟಿ ಸಭೆಯಲ್ಲಿ ಈ ಚರ್ಚೆಯಾಗಲಿದೆ. ಜಿಲ್ಲೆಯಲ್ಲಿ ಪಕ್ಷದ ಸಮಾನ ಮನಸ್ಕರ ಸಭೆ ಮಾಡಿ ಈ ಬಗ್ಗೆ ಅಭಿಪ್ರಾಯ ಪಡೆಯುವೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮಾತನಾಡಿದ್ದು ನಿಜ. ದೇವದುರ್ಗ, ರಾಯಚೂರು ನಗರದಲ್ಲಿ ಆ ಪಕ್ಷದ ಶಾಸಕ ವಿರುದ್ಧವೇ ನಮ್ಮ ಆಕ್ರೋಶವಿತ್ತು. ಈಗ ಮೈತ್ರಿ ಮಾಡಿಕೊಂಡರೆ ಆಗುವ ಪರಿಣಾಮದ ಬಗ್ಗೆಯೂ ವರಿಷ್ಠರ ಗಮನಕ್ಕೆ ತರುತ್ತೇನೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ಹೇಳಿದರು.












Click it and Unblock the Notifications