ರಾಯಚೂರು ಹಳ್ಳಿಗಳಲ್ಲಿ ನೂರಾರು ಸಮಸ್ಯೆ: ಮೂಲ ಸೌಕರ್ಯಗಳಿಲ್ಲದೆ ಜನರ ಪರದಾಟ
ರಾಯಚೂರಿನಲ್ಲಿ ಬೇಸಿಗೆ ಪ್ರಾರಂಭವಾದರೆ ಸಾಕು ಕುಡಿಯುವ ನೀರಿಗಾಗಿ ಪರದಾಡುವ ಜನರ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕ್ಷೇತ್ರದ ಸುಮಾರು 188 ಹಳ್ಳಿಗಳ ಪೈಕಿ ಸುಮಾರು ಅರ್ಧದಷ್ಟು ಗ್ರಾಮಗಳಲ್ಲಿ ಇಂದಿಗೂ ಈ ಪರಿಸ್ಥಿತಿ ಮುಂದುವರಿದಿದೆ.
ರಾಯಚೂರು, ಮಾರ್ಚ್ 13: ರಾಯಚೂರು ವಿಶ್ವವಿದ್ಯಾಲಯ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬೇಕು. ಗುಂಜಳ್ಳಿ , ಬಂಗಾರಪ್ಪನ ಕೆರೆ ತುಂಬಿಸುವ ಯೋಜನೆಗಳು ಅನುಷ್ಠಾನಗೊಳಿಸಬೇಕು. ಗ್ರಾಮೀಣ ಭಾಗದಲ್ಲಿ ಸುವ್ಯವಸ್ಥಿತ ರಸ್ತೆ ನಿರ್ಮಾಣವಾಗಬೇಕು. ಇವು ರಾಯಚೂರು ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಜನರ ಪ್ರಮುಖ ಬೇಡಿಕೆಗಳಾಗಿವೆ.
ಸಂಪೂರ್ಣ ನೀರಾವರಿ ಹಾಗೂ ಕುಡಿಯುವ ನೀರಿಗಾಗಿ ನಿರಂತರ ಹೋರಾಟ ಮಾಡುವ ಪರಿಪಾಠ ತಪ್ಪಬೇಕಿದೆ. ಬೇಸಿಗೆ ಪ್ರಾರಂಭವಾದರೆ ಸಾಕು ಕುಡಿಯುವ ನೀರಿಗಾಗಿ ಪರದಾಡುವ ಜನರ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕ್ಷೇತ್ರದ ಸುಮಾರು 188 ಹಳ್ಳಿಗಳ ಪೈಕಿ ಸುಮಾರು ಅರ್ಧದಷ್ಟು ಗ್ರಾಮಗಳಲ್ಲಿ ಇಂದಿಗೂ ಈ ಪರಿಸ್ಥಿತಿ ಮುಂದುವರಿದಿದೆ.

ಜಾಗೀರ್ ವೆಂಕಟಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಇಂದಿಗೂ ಕುಡಿಯುವ ನೀರಿನ ಸಮಸ್ಯೆ ಇದ್ದು , ಗಬ್ಬೂರು ಸಮೀಪದ ಸುಲ್ತಾನಪುರ ಗ್ರಾಮದಿಂದ ನೀರು ಬಂದರೆ ಮಾತ್ರ ಜನರಿಗೆ ಕುಡಿಯುವ ನೀರು ದೊರೆಯುತ್ತದೆ. ಇಲ್ಲವಾದಲ್ಲಿ ಉಪ್ಪು ನೀರೇ ಗತಿಯಾಗಿದೆ. ಜಿಲ್ಲಾ ಕೇಂದ್ರಕ್ಕೆ ದೂರದಲ್ಲಿರುವ ಅರಳಪ್ಪನ ಹುಡಾ ಗ್ರಾಮದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ.
ರಸ್ತೆ ದುರಸ್ತಿ , ಕುಡಿಯುವ ನೀರು ಸೌಲಭ್ಯ ಮತ್ತು ಶಾಲೆ ಅಭಿವೃದ್ಧಿಯ ಕನಸು ಮುಂದಿನ ಚುನಾವಣೆ ನಂತರವಾದರೂ ನನಸಾಗಲಿ. ನೀರಾವರಿ ಸಮಸ್ಯೆ ಶಾಶ್ವತವಾಗಿ ಪರಿಹರಿಸಿಲು ರಾಯಚೂರು ತಾಲ್ಲೂಕಿನ ಚಿಕ್ಕಮಂಚಾಲಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣವಾಗಬೇಕಿದೆ. ಈ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣವಾದರೆ ಸುಮಾರು 5 ಟಿಎಂಸಿ ನೀರು ಶೇಖರಣೆ ಆಗುತ್ತದೆ. ರಾಯಚೂರು ಗ್ರಾಮೀಣ ಪ್ರದೇಶದಲ್ಲಿ ಒಂದು ಬಾರಿ ಬರಗಾಲ ಬಂದರೂ ನೀರಿನ ಸಮಸ್ಯೆ ಎದುರಾಗುವುದಿಲ್ಲ.
ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಜನ ರೈತರು ಹತ್ತಿ ಬೆಳೆಯನ್ನು ಬೆಳೆಯುತ್ತಾರೆ. ಆದರೆ ಈ ಬಾರಿ ಮಾರುಕಟ್ಟೆ ದರ ಕುಸಿತದಿಂದ ರೈತರಿಗೆ ಸಂಕಷ್ಟ ಎದುರಾಗಿದೆ. ತುಂಗಭದ್ರಾ ಎಡದಂಡೆ ನಾಲೆಯಿಂದ ಕಳೆದ 20 ವರ್ಷಗಳಿಂದ ಕೆಳಭಾಗದ ರೈತರಿಗೆ ನೀರು ತಲುಪುತ್ತಿಲ್ಲ.ಈ ಕುರಿತು ರೈತರು ಸಾಕಷ್ಟು ಬಾರಿ ಹೋರಾಟ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ರಾಯಚೂರು ವಿಶ್ವವಿದ್ಯಾಲಯಕ್ಕೆ ಅನುದಾನ ನೀಡಬೇಕು. ಸಂಪೂರ್ಣ ನೀರಾವರಿ ಯೋಜನೆ ಜಾರಿಯಾಗಬೇಕು. ಬಡಮಕ್ಕಳಿಗಾಗಿ ಗ್ರಾಮೀಣ ಮಟ್ಟದಲ್ಲಿ ಪದವಿ ಕಾಲೇಜು ಸ್ಥಾಪಿಸಬೇಕು. ತಾಲ್ಲೂಕಿನ ಕುರ್ವಕುಲ ನಡುಗಡ್ಡೆ ಗ್ರಾಮಸ್ಥರಿಗಾಗಿ ಬ್ರಿಜ್ ನಿರ್ಮಿಸಬೇಕು. ಕೆಪಿಸಿಎಲ್ ದತ್ತು ಗ್ರಾಮಗಳ ಸಿಎಸ್ ಆರ್ ಅನುದಾನ ಬಿಡುಗಡೆ ಮಾಡಬೇಕು. ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಗ್ರಾಮೀಣ ಕ್ಷೇತ್ರದ 18 ರಿಂದ 20 ಗ್ರಾಮಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸಬೇಕಾಗಿದೆ.
"ನಾವಂತೂ ಈ ಎಂಎಲ್ಎ ಸಾಹೇಬರಿಂದ ಯಾವ ಕೆಲಸ ಮಾಡಿದ್ದೂ ನೋಡಿಲ್ಲ. ನನಗೆ ಇರಾಕ ಮನಿ ಕೊಟ್ಟಿಲ್ಲ. ಕುಡ್ಯಕ ನೀರಿಲ್ಲ. ಈಗ ಬ್ಯಾಸಗಿ ಬಂದಾದ. ಇವಾಗದ ನೀರು ಕೊಡಲಿ" ಎಂದು ಗೋನಾಳ ಗ್ರಾಮಸ್ಥೆ ತಿಮ್ಮವ್ವ ಮನವಿ ಮಾಡಿದರು.
"ನಮ್ಮ ಗ್ರಾಮದ ಶಾಲೆಗೆ ಶಿಕ್ಷಕರು ಇಲ್ಲ. ನಾನು ಸಾಕಷ್ಟು ಸಲ ಈ ಬಗ್ಗೆ ಗಮನ ಸೆಳೆದಿದ್ದೇನೆ. ಆದರೆ ಯಾರೂ ಬಂದು ಏನು ಕೆಲಸ ಮಾಡುತ್ತಿಲ್ಲ. ಈ ಬಾರಿ ನಮ್ಮ ಶಾಲೆಗೆ ಶಿಕ್ಷಕರನ್ನು ನಿಯೋಜಿಸಬೇಕು. ಇಲ್ಲವಾದಲ್ಲಿ ಮತ ಚಲಾಯಿಸುವುದಿಲ್ಲ" ಎಂದು ಅರಳಪ್ಪನ ಹುಡಾ ಗ್ರಾಮದ ಗ್ರಾಮಸ್ಥ ಸೈಯ್ಯದ್ ಹುಸೇನ್ ತಮ್ಮ ಶಾಸಕರ ವಿರುದ್ಧ ಅಸಮಧಾನ ಹೊರಹಾಕಿದರು.












Click it and Unblock the Notifications