ರೈಲ್ವೇ ಇಲಾಖೆ ಹುದ್ದೆಗಳ ರದ್ಧತಿ ವಾಪಸಾತಿಗೆ ಆಗ್ರಹ; ಪ್ರತಿಭಟನೆ
ರಾಯಚೂರು, ಜುಲೈ 15: ದೇಶದೆಲ್ಲೆಡೆ ನಿರುದ್ಯೋಗ ಭೀಕರವಾಗಿ ಹೆಚ್ಚುತ್ತಿದೆ. ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆಯೂ ದೊಡ್ಡ ಪ್ರಮಾಣದಲ್ಲಿ ಹೆಚ್ಚಿದೆ ಇಂತಹ ಸಂದರ್ಭದಲ್ಲಿ ರೈಲ್ವೇ ಇಲಾಖೆಯಲ್ಲಿ 90,000 ಹುದ್ದೆಗಳನ್ನು ರದ್ದುಪಡಿಸುವ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಇದ್ದನ್ನು ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿ ಹಲವೆಡೆ ಪ್ರತಿಭಟನೆ ನಡೆಸಲಾಗಿದೆ.
ರೈಲ್ವೇ ಇಲಾಖೆಯಲ್ಲಿ 90,000 ಹುದ್ದೆಗಳನ್ನು ರದ್ದುಪಡಿಸುವ ನಿರ್ಧಾರ ತಕ್ಷಣವೇ ಹಿಂಪಡೆಯಬೇಕು. ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಬೇಕು ಹಾಗೂ ರೈಲ್ವೇ ಖಾಸಗೀಕರಣ ಕೈಬಿಡಬೇಕು ಎಂದು ಆಗ್ರಹಿಸಿ ಅಖಿಲ ಭಾರತ ನಿರುದ್ಯೋಗಿ ಯುವಜನರ ಸಮಿತಿಯ ಕಾರ್ಯಕರ್ತರು ಜಿಲ್ಲಾ ರೈಲು ನಿಲ್ದಾಣಗಳ ಬಳಿ ಪ್ರತಿಭಟನಾ ದಿನವನ್ನು ಆಚರಿಸಿ, ರೈಲ್ವೇ ಸಚಿವರಿಗೆ ಬರೆದ ಮನವಿಯನ್ನು ಆಯಾ ಸ್ಟೇಷನ್ ಮಾಸ್ಟರ್ ಅವರಿಗೆ ಸಲ್ಲಿಸಲಾಗಿದೆ.
ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗುತ್ತಿದ್ದು, ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆಯೂ ದೊಡ್ಡ ಪ್ರಮಾಣದಲ್ಲಿದೆ. ತಾಂತ್ರಿಕ ಶಿಕ್ಷಣ ಪಡೆದು ರೈಲ್ವೇಗೆ ತಯಾರಿ ನಡೆಸುತ್ತಿರುವ ಈ ವಿದ್ಯಾವಂತ ನಿರುದ್ಯೋಗಿ ಯುವಕರ ಪಾಲಿಗೆ ಕೇಂದ್ರ ಸರಕಾರದ ಈ ನಿರ್ಧಾರ ದೊಡ್ಡ ಹೊಡೆತ ನೀಡಿದೆ.

ಹಿಂದಿನ ವರ್ಷಗಳಲ್ಲಿಯೂ ಸರಕಾರ ರೈಲ್ವೇ ನೌಕರರ ಸಂಖ್ಯೆಯನ್ನು ಕಡಿತಗೊಳಿಸಿದೆ . ಇದಲ್ಲದೇ ರೈಲ್ವೆ ಇಲಾಖೆ ಪ್ರತಿ ವರ್ಷ ಸರಕಾರಕ್ಕೆ ಆದಾಯವನ್ನು ನೀಡುತ್ತಿದೆ, ಆದರೆ ಸರಕಾರ ದೇಶಿ ಮತ್ತು ವಿದೇಶಿ ಕಂಪನಿಗಳಿಗೆ ಲಾಭ ಮಾಡಿಕೊಡಲು ರೈಲ್ವೆಯನ್ನು ಖಾಸಗೀಕರಣ ಮಾಡಲು ಹೊರಟಿದೆ. ಇದರಿಂದಾಗಿ ಬಡವರಿಗೆ ರೈಲಿನಲ್ಲಿ ಪ್ರಯಾಣ ಮಾಡುವುದು ತುಂಬಾ ದುಬಾರಿಯಾಗಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಾಸಗೀಕರಣವು ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶಗಳನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ರೈಲ್ವೇ ಇಲಾಖೆಯಲ್ಲಿ 90,000 ಹುದ್ದೆಗಳನ್ನು ರದ್ದುಗೊಳಿಸುವ ನಿರ್ಧಾರವನ್ನು ತಕ್ಷಣವೇ ಹಿಂಪಡೆಯಬೇಕು. ರೈಲ್ವೇ ಇಲಾಖೆಯಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳಿಗೆ ತಕ್ಷಣ ನೇಮಕಾತಿ ಮಾಡಿ ಎಂದು ಒತ್ತಾಯಿಸಲಾಗಿದೆ.

ರೈಲ್ವೇ ಖಾಸಗೀಕರಣ ನಿಲ್ಲಿಸಿ ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಅಳವಡಿಸಿಕೊಂಡು ನಿಗದಿತ ಸಮಯದೊಳಗೆ ಮತ್ತು ನ್ಯಾಯೋಚಿತ ರೀತಿಯಲ್ಲಿ ನಡೆಸಬೇಕು ಎಂಬ ಬೇಡಿಕೆಗಳಿರುವ ಹಕ್ಕೋತ್ತಾಯ ಪತ್ರವನ್ನು ಜಿಲ್ಲಾ ಕೇಂದ್ರಗಳ ರೈಲು ನಿಲ್ದಾಣಗಳ ಸ್ಟೇಷನ್ ಮಾಸ್ಟರ್ ಮೂಲಕ ಕೇಂದ್ರ ರೈಲ್ವೇ ಸಚಿವರಿಗೆ ಸಲ್ಲಿಸಲಾಗಿದೆ.












Click it and Unblock the Notifications