ಬರಿಗಾಲಲ್ಲೇ ಶಾಲೆಗೆ ಹೋಗ್ತಿದ್ದ ಬಾಲಕಿಗೆ ಬೆಳಕಾದ ಯುವಕರು.. ಕಣ್ಣೀರಿಟ್ಟ ನೆಟ್ಟಿಗರು!
ಸೋಶಿಯಲ್ ಮೀಡಿಯಾದಲ್ಲಿ ಈಗೆಲ್ಲ ತಳುಕು ಬಳುಕು ವಿಡಿಯೋಗಳೇ ಹೆಚ್ಚು. ಕೆಲವರಂತೂ ವ್ಯೂಸ್ ಬಂದ್ರೆ ಸಾಕಪ್ಪಾ ಎಂದು ಏನೇನೋ ವಿಡಿಯೋ ಮಾಡಿ ಎಲ್ಲರ ಕೈಲಿ ಉಗಿಸಿಕೊಳ್ಳೋದು ಉಂಟು. ಇಂತಹವರ ನಡುವೆ ಅಲ್ಲಿಲ್ಲೊಬ್ಬರು ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಮಾದರಿಯೂ ಆಗುತ್ತಾರೆ. ಇಂತದ್ದೇ ಒಂದು ಕಣ್ಣೀರಿನ ಕಥೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ಸಾಮಾನ್ಯವಾಗಿ ಗ್ರಾಮೀಣ ಭಾಗದ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣದ ವ್ಯವಸ್ಥೆ ಇದ್ದರೂ ಮೂಲ ಸೌಕರ್ಯಗಳು ಇನ್ನೂ ಮರೀಚಿಕೆ. ಕೆಲವರಿಗೆ ಇನ್ನೂ ಶಾಲೆಗಳನ್ನು ತಲುಪಲು ಸೂಕ್ತ ವ್ಯವಸ್ಥೆಗಳಿಲ್ಲ ಎಂದು ಆಗಾಗ ಮಾಧ್ಯಮಗಳಲ್ಲಿ ವರದಿಯಾಗುತ್ತಲೇ. ಇನ್ನೂ ಕೆಲ ಮಕ್ಕಳು ದೂರದಲ್ಲಿರುವ ಶಾಲೆಗಳಿಗೆ ನಡೆದೇ ಹೋಗಬೇಕಾದ ಅನಿವಾರ್ಯತೆಯೂ ಇದೆ.

ಇನ್ನು ರಾಯಚೂರು ಜಿಲ್ಲೆಯು ರಾಜ್ಯದ ಹಿಂದುಳಿದ ಜಿಲ್ಲೆಗಳ ಪೈಕಿ ಒಂದು. ಈ ಭಾಗದಲ್ಲಿ ಬಡತನ ಸಾಕಷ್ಟಿದೆ. ಈಗ ವಿಚಾರವೆಂದರೆ.. ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಣ ಪಡೆಯುತ್ತಿರುವ ಬಾಲಕಿಯೊಬ್ಬಳು ಬರಿಗಾಲಲ್ಲೇ ಶಾಲೆಗೆ ಹೋಗಿ ಬರುವ ವಿಚಾರ ಕೆಲ ಯುವಕರ ಗಮನಕ್ಕೆ ಬಂದಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಯುವಕರು ಎಲ್ಲರಿಗೂ ಮಾದರಿಯಾಗುವ ಕೆಲಸವೊಂದನ್ನು ಮಾಡಿ ಬೇಷ್ ಎನಿಸಿಕೊಂಡಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಈ ಬಾಲಕಿಯೂ ತೀರಾ ಬಡತನದ ಹಿನ್ನೆಲೆವುಳ್ಳ ಕಾರಣ ಕಾಲಿಗೆ ಚಪ್ಪಲಿಯೂ ಇಲ್ಲದೆ ಪ್ರತಿದಿನ ಶಾಲೆಗೆ ಬರಿಗಾಲಿನಲ್ಲೇ ನಡೆದುಕೊಂಡು ಹೋಗಿ ಬರುತ್ತಿದ್ದಳು ಎನ್ನಲಾಗಿದೆ. ಇದನ್ನು ಗಮನಿಸಿದ ಯುವಕರು ಆ ಬಾಲಕಿ ವಿಳಾಸವನ್ನು ಪತ್ತೆ ಹಚ್ಚಿ, ಮಾನವೀಯ ಕೆಲಸಕ್ಕೆ ಮುಂದಾಗಿದ್ದಾರೆ.
ಸೀದಾ ಬಾಲಕಿಯನ್ನು ಹಿಂಬಾಲಿಸಿಕೊಂಡು ಅವರ ಮನೆ ವಿಳಾಸ ತಿಳಿದುಕೊಂಡ ಯುವಕರ ಗುಂಪು, ಬಾಲಕಿಗೆ ಬದುಕಲ್ಲಿ ಬದಲಾವಣೆಗೆ ಕಾರಣರಾಗಿದ್ದಾರೆ. ಮೊದಲಿಗೆ ಆ ಬಾಲಕಿಗೆ ಒಂದು ಚೊಕ್ಕದಾದ ಪಾದರಕ್ಷೆಗಳನ್ನು ತಂದು ಕಾಲಿಗೆ ತೊಡಿಸಿದ್ದಾರೆ. ಇದನ್ನು ಕಂಡು ಆ ಬಾಲಕಿ ಹಾಗೂ ಅವರ ತಾಯಿ ಭಾವುಕರೂ ಆಗಿದ್ದಾರೆ.
ಇಷ್ಟೇ ಅಲ್ಲದೆ, ಯುವಕರು ಸೀದಾ ಪಟ್ಟಣಕ್ಕೆ ತೆರಳಿ, ಆ ಬಾಲಕಿಗೆ ಒಂದು ಸೈಕಲ್ ಕೂಡ ಖರೀದಿಸಿ ತಂದಿದ್ದಾರೆ. ಈಗಿನ ಟ್ರೆಂಡ್ ಅಂತೆ ಸೈಕಲ್‌ಗೆ ಕವರ್ ಮುಚ್ಚಿ, ಅದನ್ನು ತೆರೆಯುವಂತೆ ಬಾಲಕಿಗೆ ಹೇಳಿದ್ದಾರೆ. ಬಾಲಕಿ ಕುತೂಹಲದಿಂದ ಕವರ್ ತೆರೆದಾಗ ಒಳಗೆ ಸೈಕಲ್ ಇದ್ದಿದ್ದನ್ನು ಕಂಡು ಕಣ್ಣೀರು ಕೂಡ ಹಾಕಿದ್ದಾನೆ. ಆನಂದಬಾಷ್ಪದಿಂದ ಸೈಕಲ್ ಏರಿ ಒಂದು ರೌಂಡ್ ಕೂಡ ಹೋಗಿ ಬಂದಿದ್ದಾಳೆ.
ಆ ಆನಂದದಲ್ಲಿ ಆಕೆಗೆ ಏನು ಮಾತನಾಡುವುದೋ ಗೊತ್ತಿಲ್ಲದೆ ಸ್ತಬ್ಧಳಾಗಿದ್ದು, ಅಲ್ಲಿದ್ದ ಯುವಕರೆಲ್ಲ ಬಾಲಕಿಗೆ ದಾರಿದೀಪವಾಗಿದ್ದಾರೆ. ನಾಳೆಯಿಂದ ಶಾಲೆಗೆ ಸೈಕಲ್‌ನಲ್ಲಿ ಆರಾಮವಾಗಿ ಹೋಗಬಹುದಲ್ಲಾ ಎನ್ನುವ ನೆಮ್ಮದಿ ಬಾಲಕಿಯ ಮೊಗದಲ್ಲಿ ಕಂಡು, ಯುವಕರು ಕೂಡ ಅಲ್ಲಿಂದ ಖುಷಿಯಾಗಿ ಮರಳಿದ್ದಾರೆ. ಬಳಿಕ ಈ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವಿಡಿಯೋ ಕಂಡ ಹಲವರು, ನಮ್ಮ ಬಾಲ್ಯವೂ ಹೀಗೆಯೇ ಇತ್ತು ಎಂದು ನೆನೆದಿದ್ದಾರೆ. ನೀವು ಮಾಡಿರುವ ಒಂದು ಸಹಾಯದಿಂದ ಆಕೆಯ ಬದುಕು ಬದಲಾಗಿದೆ. ನಿಮ್ಮ ಈ ಆಲೋಚನೆಗೊಂದು ಸಲಾಂ ಎಂದು ತಲೆಬಾಗಿದ್ದಾರೆ. ಮಾನವೀಯತೆ ಇನ್ನೂ ಜೀವಂತ ಎಂದು ಹಲವರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಮಾಡುವ ಸಹಾಯವನ್ನು ಈ ರೀತಿ ವಿಡಿಯೋ ಮಾಡಿ ಪ್ರಚಾರ ತಗೊಳ್ಳೋ ಗಿಮಿಕ್ ಅಲ್ಲಾ ತಾನೇ? ಎಂದು ಕುಹಕವಾಡಿದ್ದಾರೆ.
ಇನ್ನೂ ಕೆಲವರು ನೀವು ಪ್ರಚಾರಕ್ಕೆ ಮಾಡಿದ್ರೂ ಸರಿ..ಇಂತ ಕೆಲಸಗಳನ್ನು ಮಾಡುತ್ತಲೇ ಇರಿ ಎಂದೂ ಯುವಕರ ಬೆನ್ನುತಟ್ಟಿದ್ದಾರೆ. ಇನ್ನು ಸೈಕಲ್ ಗಿಫ್ಟ್ ಕೊಟ್ಟಿರುವ ಯುವಕರು ಹಾಗೂ ಆ ಬಾಲಕಿಯ ವಿವರಗಳು ಅಷ್ಟೇನೂ ಲಭ್ಯವಾಗಿಲ್ಲ.












Click it and Unblock the Notifications