'9ನೇ ತರಗತಿಯಿಂದಲೇ ಮದ್ಯ ಸೇವನೆ ಶುರು ಮಾಡಿದೆ...ʼ – ಮಕ್ಕಳ ಚಟಗಳ ಬಗ್ಗೆ ಪ್ರೇಮಾನಂದ ಮಹಾರಾಜ್ ಸಲಹೆ ಇಲ್ಲಿದೆ

ತಮ್ಮ ಮುಕ್ತ, ಕಾಳಜಿಭರಿತ ಬೋಧನೆಗಳಿಂದ ಇತ್ತೀಚೆಗೆ ಜನಪ್ರಿಯರಾಗಿದ್ದಾರೆ ಸಾಧು, ಆಧ್ಯಾತ್ಮಿಕ ಗುರು ಪ್ರೇಮಾನಂದ ಮಹಾರಾಜ್‌. ಸಾಮಾಜಿಕ, ಸಾಂಸಾರಿಕ ವಿಷಯಗಳಲ್ಲಿ ಭಕ್ತರು ಇವರ ಬಳಿ ಸಮಸ್ಯೆ ಹಂಚಿಕೊಳ್ಳುತ್ತಾರೆ. ಮಹಾರಾಜ್‌ ಇವರ ಸಮಸ್ಯೆ ಆಲಿಸಿ ಪರಿಹಾರಗಳನ್ನು ಉಪದೇಶದ ರೂಪದಲ್ಲಿ ನೀಡುತ್ತಾರೆ. ಇತ್ತೀಚೆಗೆ ಪ್ರೇಮಾನಂದ ಮಹಾರಾಜ್ ಅವರೊಂದಿಗೆ ಮಾತನಾಡಿದ ಒಬ್ಬ ಯುವಕ ತನ್ನ ನೋವನ್ನು ಹಂಚಿಕೊಂಡಿದ್ದ.

"ಸಾಧು ಮಹಾರಾಜ್‌, ನಾನು 9ನೇ ತರಗತಿಯಲ್ಲಿದ್ದಾಗಲೇ ಮದ್ಯಪಾನದ ಚಟಕ್ಕೆ ಬಿದ್ದೆ. ಈಗ 12ನೇ ತರಗತಿಯಲ್ಲಿ ಓದುತ್ತಿದ್ದೇನೆ. ಕೆಲವೊಮ್ಮೆ ನನ್ನನ್ನೇ ನಾಶ ಮಾಡಿಕೊಳ್ಳಬೇಕೆನ್ನಿಸುವಷ್ಟು ಬೇಸರವಾಗುತ್ತದೆ, ನನಗೆ ಪರಿಹಾರ ಸೂಚಿಸಿ" ಎಂದು ಆತ ಹೇಳಿದ್ದಾನೆ. ಈ ಮಾತು ಕೇಳಿದ ಪ್ರೇಮಾನಂದ ಮಹಾರಾಜ್, "ಇದು ಒಬ್ಬ ಹುಡುಗನ ಕಥೆ ಮಾತ್ರವಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಾವಿರಾರು ಮಕ್ಕಳು ಇದ್ದಾರೆ" ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

Premanand Maharaj

ಇಂದಿನ ದಿನಗಳಲ್ಲಿ ಪೋಷಕರನ್ನು ಹೆಚ್ಚು ಕಾಡುತ್ತಿರುವ ಪ್ರಶ್ನೆ- "ಮಕ್ಕಳನ್ನು ಕೆಟ್ಟ ಚಟಗಳಿಂದ ಹೇಗೆ ದೂರವಿಡುವುದು?". ಮದ್ಯಪಾನ, ಧೂಮಪಾನ, ಮೊಬೈಲ್ ವ್ಯಸನ, ಕೆಟ್ಟ ಸ್ನೇಹ ಬಳಗ, ಅಸಭ್ಯ ವರ್ತನೆ - ಇಂತಹ ಸಮಸ್ಯೆಗಳು ದಿನೇ ದಿನೇ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರೇಮಾನಂದ ಮಹಾರಾಜ್ ನೀಡಿರುವ ಸಂದೇಶ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಮಕ್ಕಳು ಕೆಟ್ಟ ಚಟಗಳಿಗೆ ಬೀಳುತ್ತಿರುವುದು ಏಕೆ?

ಪ್ರೇಮಾನಂದ ಮಹಾರಾಜ್ ಅವರ ಅಭಿಪ್ರಾಯದ ಪ್ರಕಾರ, ಮನೆಗಳಲ್ಲಿ ಮೌಲ್ಯ ಶಿಕ್ಷಣ ಕಡಿಮೆಯಾಗುತ್ತಿರುವುದು ಇದಕ್ಕೆ ಪ್ರಮುಖ ಕಾರಣ. ಪೋಷಕರಿಗೇ ಮೌಲ್ಯಗಳ ಅರಿವು ಇಲ್ಲದಿದ್ದರೆ ಅವರು ಮಕ್ಕಳಿಗೆ ಏನು ಕಲಿಸುತ್ತಾರೆ? ಒಳ್ಳೆಯದು-ಕೆಟ್ಟದ್ದರ ಅರಿವು, ಆತ್ಮಸಂಯಮ, ಇತರರ ಬಗ್ಗೆ ಗೌರವ, ಜವಾಬ್ದಾರಿಯುತ ವರ್ತನೆ ಇಂತಹ ಮೂಲಭೂತ ಮೌಲ್ಯಗಳನ್ನು ಮೊದಲು ಪೋಷಕರು ಪಾಲಿಸಬೇಕು. ಮೊಬೈಲ್, ಸಾಮಾಜಿಕ ಜಾಲತಾಣಗಳು ಮತ್ತು ಸ್ನೇಹಿತರ ಒತ್ತಡದ ನಡುವೆ ಈ ಮೌಲ್ಯಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಯೋಗ: ಆರೋಗ್ಯಕರ ಮತ್ತು ಸಮತೋಲಿತ ಭವಿಷ್ಯಕ್ಕೆ ಭಾರತದ ಶಾಶ್ವತ ಕೊಡುಗೆ
ಯೋಗ: ಆರೋಗ್ಯಕರ ಮತ್ತು ಸಮತೋಲಿತ ಭವಿಷ್ಯಕ್ಕೆ ಭಾರತದ ಶಾಶ್ವತ ಕೊಡುಗೆ

ಶಿಸ್ತು ಕಲಿಸುವುದೇ ತಪ್ಪೇ?

ಇನ್ನೊಂದು ಮಹತ್ವದ ವಿಷಯವನ್ನು ಪ್ರೇಮಾನಂದ ಮಹಾರಾಜ್ ಪ್ರಸ್ತಾಪಿಸಿದ್ದಾರೆ. ಇಂದು ಶಿಕ್ಷಕರು ಮಕ್ಕಳಿಗೆ ಶಿಸ್ತು ಕಲಿಸಲು ಪ್ರಯತ್ನಿಸಿದರೆ, ಅನೇಕ ಪೋಷಕರು ಶಿಕ್ಷಕರನ್ನೇ ವಿರೋಧಿಸುತ್ತಾರೆ. ಮಕ್ಕಳಿಗೆ ಪ್ರೀತಿ ಅಗತ್ಯ. ಆದರೆ ಅದರ ಜೊತೆಗೆ ಗಡಿ ಮತ್ತು ಶಿಸ್ತು ಕೂಡ ಬೇಕು. ಪ್ರತಿಯೊಂದು ತಿದ್ದುಪಡಿಯನ್ನೂ ಟೀಕೆ ಎಂದು ಭಾವಿಸಿದರೆ, ಮಕ್ಕಳು ತಮ್ಮ ತಪ್ಪುಗಳ ಜವಾಬ್ದಾರಿಯನ್ನು ಕಲಿಯುವುದಿಲ್ಲ.

ಪೋಷಕರಿಗೆ ಗೌರವ ಕಡಿಮೆಯಾಗುತ್ತಿದೆಯೇ?

ಇತ್ತೀಚಿನ ದಿನಗಳಲ್ಲಿ ಅನೇಕ ಮಕ್ಕಳು ತಮ್ಮ ತಂದೆ-ತಾಯಿಯರೊಂದಿಗೆ ಅಸಭ್ಯವಾಗಿ ಮಾತನಾಡುತ್ತಿರುವುದನ್ನು ಅವರು ಗಮನಿಸಿದ್ದಾರೆ. ಒಮ್ಮೊಮ್ಮೆ ವಾದವಾಗುವುದು ಸಹಜ. ಆದರೆ ಹಿರಿಯರನ್ನು ನಿರ್ಲಕ್ಷ್ಯದಿಂದ ಕಾಣುವುದು ಅಥವಾ ಅವಮಾನಕರವಾಗಿ ಮಾತನಾಡುವುದು ಒಂದು ಅಭ್ಯಾಸವಾಗಿಬಿಟ್ಟರೆ ಅದು ಆಳವಾದ ಸಮಸ್ಯೆಯ ಸೂಚನೆ ಆಗಿರಬಹುದು.

ಎದ್ದ ಕೂಡಲೇ ಮೊಬೈಲ್ ನೋಡಿದ್ರೇ ಸ್ಟ್ರೆಸ್ ಹೆಚ್ಚಾಗಿ ಹುಚ್ಚರಾದಂತಾಗಬಹುದು! ಹುಷಾರು
ಎದ್ದ ಕೂಡಲೇ ಮೊಬೈಲ್ ನೋಡಿದ್ರೇ ಸ್ಟ್ರೆಸ್ ಹೆಚ್ಚಾಗಿ ಹುಚ್ಚರಾದಂತಾಗಬಹುದು! ಹುಷಾರು

ಮಕ್ಕಳನ್ನು ಕಾಪಾಡುವ ಏಕೈಕ ಮಾರ್ಗ ಯಾವುದು?

ಪ್ರೇಮಾನಂದ ಮಹಾರಾಜ್ ಅವರ ಪ್ರಕಾರ, ಈ ಸಮಸ್ಯೆಗೆ ಮುಖ್ಯ ಪರಿಹಾರ "ಆಧ್ಯಾತ್ಮಿಕತೆ". ಇಂದಿನ ಸಮಾಜ ಮತ್ತು ಯುವಜನತೆ ಆಧ್ಯಾತ್ಮಿಕತೆಯಿಂದ ದೂರವಾಗುತ್ತಿರುವ ಕಾರಣ ಪರಿಸ್ಥಿತಿ ಹದಗೆಡುತ್ತಿದೆ. ಇದನ್ನು ಸರಿಪಡಿಸುವುದು ಕೂಡ ಆಧ್ಯಾತ್ಮಿಕತೆಯ ಮೂಲಕವೇ ಸಾಧ್ಯ. ಆದರೆ ಆಧ್ಯಾತ್ಮಿಕತೆ ಎಂದರೆ ಕೇವಲ ದೇವಸ್ಥಾನಕ್ಕೆ ಹೋಗುವುದು ಅಥವಾ ಪೂಜೆ ಮಾಡುವುದು ಎಂದಲ್ಲ. ಕೃತಜ್ಞತೆ, ಪ್ರಾಮಾಣಿಕತೆ, ಕರುಣೆ, ಆತ್ಮನಿಯಂತ್ರಣ, ತಪ್ಪು ಮಾಡುವ ಮುನ್ನ ಯೋಚಿಸುವ ಗುಣ ಇಂತಹ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸುವುದು ಕೂಡ ಅಧ್ಯಾತ್ಮವೇ.

ಮಕ್ಕಳಿಗೆ ಅಂಕಗಳಷ್ಟೇ ಸಾಕಾಗುವುದಿಲ್ಲ

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪೋಷಕರು ಮಕ್ಕಳ ಅಂಕಗಳು, ಉದ್ಯೋಗ ಮತ್ತು ಭವಿಷ್ಯದ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಆದರೆ ಮಕ್ಕಳಿಗೆ ಉತ್ತಮ ಅಂಕಗಳ ಜೊತೆಗೆ ಉತ್ತಮ ಮೌಲ್ಯಗಳೂ ಅಗತ್ಯ. ಪೋಷಕರು ತಮ್ಮ ಮಕ್ಕಳೊಂದಿಗೆ ಸಮಯ ಕಳೆಯಬೇಕು. ಅವರ ಸಮಸ್ಯೆಗಳನ್ನು ಕೇಳಬೇಕು. ಮಾರ್ಗದರ್ಶನ ನೀಡಬೇಕು. ಉತ್ತಮ ಮಾದರಿಯಾಗಬೇಕು.

ಮಕ್ಕಳ ಒತ್ತಡವನ್ನು ಅರ್ಥಮಾಡಿಕೊಳ್ಳಿ

ಮಕ್ಕಳು ಕೆಟ್ಟ ಚಟಗಳಿಗೆ ಬೀಳಲು ಕೇವಲ ಕೆಟ್ಟ ಸ್ನೇಹಿತರೇ ಕಾರಣವಲ್ಲ. ಅನೇಕ ಮಕ್ಕಳು ಈ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ- ಓದಿನ ಒತ್ತಡ, ಒಂಟಿತನ, ಆತ್ಮವಿಶ್ವಾಸದ ಕೊರತೆ, ಕುಟುಂಬದ ಕಲಹಗಳು, ಸ್ನೇಹಿತರ ನಡುವೆ ಹೊಂದಿಕೊಳ್ಳುವ ಒತ್ತಡ ಇತ್ಯಾದಿ. ಇಂತಹ ಭಾವನೆಗಳನ್ನು ಹಂಚಿಕೊಳ್ಳಲು ಅವಕಾಶ ಸಿಗದಿದ್ದಾಗ, ಕೆಲವರು ಮದ್ಯಪಾನ, ಧೂಮಪಾನ ಅಥವಾ ಮೊಬೈಲ್ ವ್ಯಸನದಂತಹ ತಪ್ಪು ಮಾರ್ಗಗಳನ್ನು ಆಯ್ಕೆ ಮಾಡಬಹುದು.

ಮಕ್ಕಳಿಗೆ ಮಾತಿಗಿಂತ ಮಾದರಿ ಮುಖ್ಯ

ಮಕ್ಕಳು ಉಪದೇಶಗಳನ್ನು ಕೇಳಿ ಮಾತ್ರ ಕಲಿಯುವುದಿಲ್ಲ. ಅವರು ತಮ್ಮ ಸುತ್ತಲಿನ ದೊಡ್ಡವರನ್ನು ನೋಡಿ ಹೆಚ್ಚು ಕಲಿಯುತ್ತಾರೆ. ಪೋಷಕರು ತಾವು ಪಾಲಿಸುವ ಮೌಲ್ಯಗಳನ್ನೇ ಮಕ್ಕಳಿಂದ ನಿರೀಕ್ಷಿಸಿದರೆ, ಮಕ್ಕಳು ಸಹ ಅದನ್ನೇ ಜೀವನದಲ್ಲಿ ಅಳವಡಿಸಿಕೊಳ್ಳುವ ಸಾಧ್ಯತೆ ಹೆಚ್ಚು.

ಮಕ್ಕಳನ್ನು ಕೆಟ್ಟ ಚಟಗಳಿಂದ ದೂರವಿಡುವುದು ಎಂದರೆ ಅವರನ್ನು ಸದಾ ನಿಯಂತ್ರಿಸುವುದಲ್ಲ. ಬದಲಾಗಿ, ಸರಿಯಾದ ಮೌಲ್ಯಗಳು, ಆತ್ಮವಿಶ್ವಾಸ ಮತ್ತು ವಿವೇಚನೆಯೊಂದಿಗೆ ಅವರು ಸ್ವತಃ ತಪ್ಪು ದಾರಿಯಿಂದ ದೂರ ಉಳಿಯುವ ಶಕ್ತಿಯನ್ನು ಬೆಳೆಸುವುದು. ಪ್ರೀತಿ, ಶಿಸ್ತು, ಗೌರವ ಮತ್ತು ಮೌಲ್ಯಗಳ ಸಮತೋಲನವೇ ಉತ್ತಮ ಪೋಷಕತ್ವದ ನಿಜವಾದ ಅರ್ಥ ಎನ್ನುತ್ತಾರೆ ಪ್ರೇಮಾನಂದ ಮಹಾರಾಜ್.

(ಬರಹ: ಭವಾನಿ ಭಟ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+