ಉದ್ಯೋಗಿಗಳಿಗೆ 3 ಹೊತ್ತು ಊಟ, ಪೆಟ್ರೋಲ್ ಫ್ರೀ: 5 ದಿನ ಕಡ್ಡಾಯ ಆಫೀಸ್‌ಗೆ ಬನ್ನಿ ಎಂದ ಸ್ಟಾರ್ಟ್ಅಪ್‌ ಫೌಂಡರ್

ಕೋವಿಡ್ ನಂತರ ವರ್ಕ್ ಫ್ರಮ್ ಹೋಮ್ ಬಹುತೇಕ ಕಡೆ ಸಾಮಾನ್ಯವಾಗಿದೆ. ಆದರೆ, ಕೆಲವು ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಮತ್ತೆ ಕಚೇರಿಗೆ ಅಂದರೆ ವರ್ಕ್ ಫ್ರಮ್ ಆಫೀಸ್‌ಗೆ ಕರೆತರಲು ನಾನಾ ಕಸರತ್ತುಗಳನ್ನು ಮಾಡುತ್ತಿವೆ. ಇದೀಗ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಸ್ಟಾರ್ಟ್ಅಪ್ ಕಂಪನಿಯೊಂದರ ಸಹ-ಸಂಸ್ಥಾಪಕಿ ತಮ್ಮ ಉದ್ಯೋಗಿಗಳು ವಾರದಲ್ಲಿ 5 ದಿನ ಕಡ್ಡಾಯವಾಗಿ ಆಫೀಸ್‌ನಿಂದ ಕೆಲಸ ಮಾಡಬೇಕು ಎಂಬ ನಿಯಮ ಜಾರಿಗೆ ತಂದಿದ್ದಾರೆ. ಕೇವಲ ನಿಯಮ ತರುವುದು ಮಾತ್ರವಲ್ಲದೆ, ಕಚೇರಿಗೆ ಬರಲು ಉದ್ಯೋಗಿಗಳಿಗೆ ತಗುಲುವ ಪೆಟ್ರೋಲ್ ಅಥವಾ ಡೀಸೆಲ್ ಖರ್ಚು, ಪ್ರಯಾಣದ ವೆಚ್ಚ ಹಾಗೂ ಮೂರು ಹೊತ್ತಿನ ಊಟವನ್ನು ಕಂಪನಿಯೇ ಭರಿಸುತ್ತಿದೆ. ಈ ವಿಚಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಉದ್ಯೋಗಿಗಳಿಗೆ ಉಚಿತ ಪೆಟ್ರೋಲ್ ಮತ್ತು ಕ್ಯಾಬ್ ವ್ಯವಸ್ಥೆ

ರಿಕಲ್.ಎಐ ಎಂಬ ಸ್ಟಾರ್ಟ್ಅಪ್ ಕಂಪನಿಯ ಸಹ-ಸಂಸ್ಥಾಪಕಿ ಅಮಂಡಾ ಝು ಈ ಹೊಸ ಆಫರ್ ನೀಡಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಪ್ರಯಾಣದ ವೆಚ್ಚ ಬಹಳ ದುಬಾರಿಯಾಗಿದೆ. ಒಂದು ಗ್ಯಾಲನ್ ಗ್ಯಾಸ್ ಅಥವಾ ಪೆಟ್ರೋಲ್ ಬೆಲೆ 6 ರಿಂದ 7 ಡಾಲರ್ (ಅಂದಾಜು ಲೀಟರ್‌ಗೆ 155 ರೂ.) ಇದೆ. ಉದ್ಯೋಗಿಗಳಿಗೆ ಈ ಆರ್ಥಿಕ ಹೊರೆ ಆಗಬಾರದು ಮತ್ತು ಅವರು ಯಾವುದೇ ಅಡೆತಡೆಗಳಿಲ್ಲದೆ ಸುಲಭವಾಗಿ ಕಚೇರಿಗೆ ಬರಬೇಕು ಎನ್ನುವ ಕಾರಣಕ್ಕೆ ಈ ಉಚಿತ ಪೆಟ್ರೋಲ್ ವ್ಯವಸ್ಥೆ ಮಾಡಲಾಗಿದೆ.

Recall ai Founder

ಇದಕ್ಕಾಗಿ ಉದ್ಯೋಗಿಗಳಿಗೆ ಕಂಪನಿಯ ಕ್ರೆಡಿಟ್ ಕಾರ್ಡ್ ನೀಡಲಾಗಿದೆ. ಇಷ್ಟೇ ಅಲ್ಲದೆ, ಕಾರು ಪಾರ್ಕಿಂಗ್ ಶುಲ್ಕ, ವೇಮೋನಂತಹ ಕ್ಯಾಬ್ ಸೇವೆಗಳು, ಮತ್ತು ಕಚೇರಿಯಲ್ಲಿ ಉದ್ಯೋಗಿಗಳಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ, ರಾತ್ರಿಯ ಊಟ ಹಾಗೂ ಸ್ನ್ಯಾಕ್ಸ್ ಅನ್ನು ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತಿದೆ. "ನನ್ನ ಉದ್ಯೋಗಿಗಳು ಪ್ರತಿದಿನ ಕಚೇರಿಯಲ್ಲಿ ಇರಬೇಕು ಎಂದು ನಾನು ಬಯಸಿದರೆ, ಮನೆಯಿಂದ ಕೆಲಸ ಮಾಡುವುದಕ್ಕಿಂತ ಕಚೇರಿಯಲ್ಲಿ ಕೆಲಸ ಮಾಡುವುದು ಸುಲಭವಾಗಿರಬೇಕು" ಎಂದು ಅಮಂಡಾ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಕಚೇರಿ ಸಂಸ್ಕೃತಿ ಮತ್ತು ಅಮಂಡಾ ಝು ಅವರ ಗುರಿ

ರಿಕಲ್.ಎಐ ಕಂಪನಿಯು ಪ್ರಮುಖವಾಗಿ ರಿಮೋಟ್-ಆಕ್ಸೆಸ್ ತಂತ್ರಜ್ಞಾನವನ್ನು ನಿರ್ಮಿಸುತ್ತದೆ. ಅಂದರೆ, ಇಂಟರ್ನೆಟ್ ಮೂಲಕ ದೂರದಿಂದಲೇ ಸೇವೆಗಳನ್ನು ಒದಗಿಸುವ ಸಾಧನಗಳನ್ನು ಅಭಿವೃದ್ಧಿಪಡಿಸುವ ಕಂಪನಿಯಿದು. ಇಂತಹ ಕಂಪನಿಯೇ ತನ್ನ ಉದ್ಯೋಗಿಗಳು ಕಚೇರಿಯಲ್ಲೇ ಕುಳಿತು ಕೆಲಸ ಮಾಡಬೇಕು ಎಂದು ಒತ್ತಾಯಿಸುತ್ತಿರುವುದು ವಿಶೇಷವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮಂಡಾ ಝು, "ಉದ್ಯೋಗಿಗಳಿಗೆ ಪ್ರಯಾಣದ ಬಗ್ಗೆ ಯಾವುದೇ ತಲೆಬಿಸಿ ಇರಬಾರದು. ಅವರು ಕೇವಲ ಒಂದೇ ಒಂದು ಗುರಿಯತ್ತ ಗಮನಹರಿಸಬೇಕು, ಅದು ಗೆಲ್ಲುವುದು. ಅದಕ್ಕಾಗಿ ನಾನು ಈ ಕಚೇರಿ ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತಿದ್ದೇನೆ" ಎಂದಿದ್ದಾರೆ.

ಹಣದಿಂದ ಸಮಯ ಖರೀದಿಸಲು ಸಾಧ್ಯವಿಲ್ಲ ಎಂದ ಟೀಕಾಕಾರರು

ಅಮಂಡಾ ಝು ಅವರ ಈ ನಿರ್ಧಾರಕ್ಕೆ ಲಿಂಕ್ಡ್‌ಇನ್ ಸೇರಿದಂತೆ ಹಲವು ಕಡೆ ಪರ-ವಿರೋಧ ಚರ್ಚೆಗಳು ಆರಂಭವಾಗಿವೆ.

"ನನಗೆ ವಾರಕ್ಕೆ 15 ಗಂಟೆಗಳ ಸಮಯವನ್ನು ಮರಳಿ ನೀಡಲು ಯಾವುದೇ ಉಚಿತ ಪೆಟ್ರೋಲ್‌ನಿಂದ ಸಾಧ್ಯವಿಲ್ಲ. ನನ್ನ ಸಮಯ ಮತ್ತು ಶ್ರಮವನ್ನು ಗೌರವಿಸುವ ಕಂಪನಿಗಾಗಿ ನಾನು ಕೆಲಸ ಮಾಡುತ್ತೇನೆ ಮತ್ತು ಅಲ್ಲೂ ಗೆಲ್ಲುತ್ತೇನೆ" ಎಂದು ಒಬ್ಬ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು, "ನೀವು ರಿಮೋಟ್ ಆಕ್ಸೆಸ್ ಸಾಫ್ಟ್‌ವೇರ್ ಕಂಪನಿಯನ್ನು ನಡೆಸುತ್ತಿದ್ದೀರಿ. ಆದರೆ ನಿಮ್ಮ ಉದ್ಯೋಗಿಗಳಿಗೆ ಮಾತ್ರ ಕಚೇರಿಗೆ ಬರಲು ಹೇಳುತ್ತಿದ್ದೀರಿ, ಇದು ನಿಜಕ್ಕೂ ವಿಪರ್ಯಾಸ" ಎಂದು ವ್ಯಂಗ್ಯವಾಡಿದ್ದಾರೆ.

ಒಂದೆಡೆ ಟೀಕೆಗಳಿದ್ದರೆ, ಸ್ಟಾರ್ಟ್ಅಪ್‌ನ ಹಲವರು ಅಮಂಡಾ ಝು ಅವರ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಉದ್ಯಮಿ ಟೋಬಿ ಎಗ್ಬುನಾ ಪ್ರತಿಕ್ರಿಯಿಸಿ, "ತಮಗೆ ಬೇಕಾದಂತಹ ಕಂಪನಿ ಮತ್ತು ಸಂಸ್ಕೃತಿಯನ್ನು ಕಟ್ಟುವ ಹಕ್ಕು ಸಂಸ್ಥಾಪಕರಿಗೆ ಇರುತ್ತದೆ. ಪ್ರತಿದಿನ ಕಚೇರಿಗೆ ಬರುವ ಉದ್ಯೋಗಿಗಳನ್ನು ಅಮಂಡಾ ಆಯ್ಕೆ ಮಾಡಿಕೊಂಡಿದ್ದಾರೆ. ಕಚೇರಿಗೆ ಬರುವಾಗ ಆಗುವ ತ್ರಾಸವನ್ನು ತಪ್ಪಿಸಲು ಅವರು ಹಣ ಪಾವತಿಸಲು ಸಿದ್ಧರಿದ್ದಾರೆ. ಇದು ಅವರ ಆಯ್ಕೆ" ಎಂದಿದ್ದಾರೆ.

ಈ ನಡುವೆ ಮತ್ತೊಬ್ಬ ಬಳಕೆದಾರರು ತಮಾಷೆಯಾಗಿ, "ನಾನು ಬ್ಯುಸಿನೆಸ್ ಕ್ಯಾಶುಯಲ್ ಬಟ್ಟೆ ಹಾಕಿಕೊಂಡು ಗೆಲ್ಲುವುದಕ್ಕಿಂತ, ನನ್ನ ಪೈಜಾಮಾದಲ್ಲೇ ಇದ್ದುಕೊಂಡು ಗೆಲ್ಲಲು ಇಷ್ಟಪಡುತ್ತೇನೆ" ಎಂದು ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವರ್ಕ್ ಫ್ರಮ್ ಆಫೀಸ್ ವಿಚಾರ ಈಗ ಟೆಕ್ ವಲಯದಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+