ITR ಫೈಲ್ ಮಾಡುವ ಮೊದಲು ಈ ದಾಖಲೆಗಳು ಸಿದ್ಧವಿದೆಯೇ? ಒಂದು ತಪ್ಪು ಮಾಡಿದರೂ ಟ್ಯಾಕ್ಸ್ ನೋಟಿಸ್ ಗ್ಯಾರಂಟಿ!
ನೀವು ಸಂಬಳ ಪಡೆಯುವ ಉದ್ಯೋಗಿ ಆಗಿದ್ದರೆ, ಉದ್ಯಮಿ ಆಗಿದ್ದರೆ, ಕೃಷಿ ಹೊರತುಪಡಿಸಿ ಇನ್ಯಾವುದೇ ಆದಾಯ ಮೂಲದಿಂದ ಅದಾಯ ಬರುತ್ತಿದ್ದರೆ, ಆದಾಯ ತೆರಿಗೆ ಸಲ್ಲಿಸುವುದು ಕಡ್ಡಾಯ. ಆದಾಯ ತೆರಿಗೆ ವಿನಾಯಿತಿಗೆ ಒಳಪಡುವವರಾದರೆ, ತೆರಿಗೆ ಕಟ್ಟದೇ ಹೋದರೂ, ಟ್ಯಾಕ್ಸ್ ರಿಟರ್ನ್ ಫೈಲಿಂಗ್ ಮಾಡುವುದು ಕಡ್ಡಾಯ. ಆದಾಯ ತೆರಿಗೆ ರಿಟರ್ನ್ (Income Tax Return - ITR) ಸಲ್ಲಿಸುವುದು ಪ್ರತಿಯೊಬ್ಬ ತೆರಿಗೆದಾರನ ಪ್ರಮುಖ ಜವಾಬ್ದಾರಿ. 2025-26 ಹಣಕಾಸು ವರ್ಷದ (FY 2025-26) ಐಟಿಆರ್ ಸಲ್ಲಿಸಲು ನೀವು ಸಿದ್ಧತೆ ಮಾಡಿಕೊಳ್ಳುತ್ತಿದ್ದರೆ, ಮೊದಲು ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು ಅತ್ಯಂತ ಮುಖ್ಯ. ಒಂದು ಸಣ್ಣ ತಪ್ಪು ಅಥವಾ ದಾಖಲೆಗಳ ಕೊರತೆ ನಿಮ್ಮ ತೆರಿಗೆ ಮರುಪಾವತಿ (ರಿಫಂಡ್) ವಿಳಂಬವಾಗಲು, ತೆರಿಗೆ ವಿನಾಯಿತಿಗಳು ಕೈತಪ್ಪಲು ಅಥವಾ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬರಲು ಕಾರಣವಾಗಬಹುದು.
ಇಲ್ಲಿ ಯಾವ ಯಾವ ದಾಖಲೆಗಳು ಬೇಕಾಗುತ್ತವೆ ಎಂಬುದನ್ನು ಸರಳವಾಗಿ ತಿಳಿಯೋಣ.
1. ಪಾನ್ ಮತ್ತು ಆಧಾರ್
ಐಟಿಆರ್ ಸಲ್ಲಿಸಲು ಪಾನ್ (Permanent Account Number) ಅತ್ಯಗತ್ಯ. ಜೊತೆಗೆ ಪಾನ್ ಮತ್ತು ಆಧಾರ್ ಪರಸ್ಪರ ಲಿಂಕ್ ಆಗಿರಬೇಕು. ಲಿಂಕ್ ಆಗಿಲ್ಲದಿದ್ದರೆ ಐಟಿಆರ್ ಸಲ್ಲಿಸುವಲ್ಲಿ ತೊಂದರೆ ಉಂಟಾಗಬಹುದು. ಗಮನಿಸಿ- ಪಾನ್ ಕಾರ್ಡ್‌ನಲ್ಲಿರುವ ಹೆಸರು ಮತ್ತು ಆಧಾರ್‌ನಲ್ಲಿರುವ ಹೆಸರು ಒಂದೇ ರೀತಿಯಾಗಿರಬೇಕು. ಹಾಗೂ ಮೊಬೈಲ್ ಸಂಖ್ಯೆ ಆಧಾರ್‌ಗೆ ಲಿಂಕ್ ಆಗಿರಬೇಕು.

2. ಫಾರ್ಮ್ 26ಎಎಸ್, ಎಐಎಸ್ ಮತ್ತು ಟಿಐಎಸ್ ಪರಿಶೀಲಿಸಿ
ಐಟಿಆರ್ ಫೈಲ್ ಮಾಡುವ ಮೊದಲು ಈ ಮೂರು ದಾಖಲೆಗಳನ್ನು ಪರಿಶೀಲಿಸುವುದು ಬಹಳ ಮುಖ್ಯ.
ಫಾರ್ಮ್ 26AS : ನಿಮ್ಮ ಆದಾಯದ ಮೇಲೆ ಕಟ್ ಆಗಿರುವ ಟಿಡಿಎಸ್ (Tax Deducted at Source), ಟಿಸಿಎಸ್ ಮತ್ತು ಇತರೆ ತೆರಿಗೆ ಮಾಹಿತಿಗಳು ಇಲ್ಲಿ ಕಾಣಿಸುತ್ತವೆ.
ಎಐಎಸ್ (Annual Information Statement) : ನಿಮ್ಮ ಬ್ಯಾಂಕ್ ವ್ಯವಹಾರಗಳು, ಷೇರು ಖರೀದಿ-ಮಾರಾಟ, ಬಡ್ಡಿ ಆದಾಯ ಸೇರಿದಂತೆ ಹಲವು ಹಣಕಾಸು ಮಾಹಿತಿಗಳನ್ನು ಎಐಎಸ್ ತೋರಿಸುತ್ತದೆ.
ಟಿಐಎಸ್ (Taxpayer Information Summary) : ಎಐಎಸ್‌ನಲ್ಲಿರುವ ಮಾಹಿತಿಯ ಸಂಕ್ಷಿಪ್ತ ರೂಪವೇ ಟಿಐಎಸ್. ಈ ಮೂರು ದಾಖಲೆಗಳಲ್ಲಿರುವ ಮಾಹಿತಿ ಮತ್ತು ನೀವು ನೀಡುವ ಮಾಹಿತಿ ಒಂದೇ ರೀತಿಯಲ್ಲಿರಬೇಕು.
3. ಸಂಬಳದ ಉದ್ಯೋಗಿಗಳಿಗೆ ಫಾರ್ಮ್ 16
ನೀವು ಉದ್ಯೋಗಿಯಾಗಿದ್ದರೆ ನಿಮ್ಮ ಕಂಪನಿ ನೀಡುವ ಫಾರಮ್ 16 ಅತ್ಯಂತ ಮುಖ್ಯ ದಾಖಲೆ. ಇದರಲ್ಲಿ ವಾರ್ಷಿಕ ಸಂಬಳ, ಟಿಡಿಎಸ್ ವಿವರ, ತೆರಿಗೆ ವಿನಾಯಿತಿಗಳ ಮಾಹಿತಿ ಇರುತ್ತದೆ. ಫಾರ್ಮ್ 16 ಆಧರಿಸಿ ಐಟಿಆರ್ ಸಲ್ಲಿಸುವುದು ಸುಲಭವಾಗುತ್ತದೆ.
4. ಹಳೆಯ ತೆರಿಗೆ ಪದ್ಧತಿ ಅಥವಾ ಹೊಸ ತೆರಿಗೆ ಪದ್ಧತಿ?
ಐಟಿಆರ್ ಸಲ್ಲಿಸುವಾಗ ನೀವು ಯಾವ ತೆರಿಗೆ ವ್ಯವಸ್ಥೆಯನ್ನು ಆಯ್ಕೆ ಮಾಡಿದ್ದೀರಿ ಎಂಬುದು ಸ್ಪಷ್ಟವಾಗಿರಬೇಕು. ಹಳೆಯ ತೆರಿಗೆ ಪದ್ಧತಿ (Old Tax Regime) ಯಲ್ಲಿ ವಿವಿಧ ತೆರಿಗೆ ವಿನಾಯಿತಿಗಳನ್ನು ಪಡೆಯಬಹುದು. ಹೊಸ ತೆರಿಗೆ ಪದ್ಧತಿ (New Tax Regime) ಯಲ್ಲಿ ತೆರಿಗೆ ದರಗಳು ಕಡಿಮೆ ಇರುತ್ತವೆ. ಆದರೆ ಹೆಚ್ಚಿನ ವಿನಾಯಿತಿಗಳು ಲಭ್ಯವಿರುವುದಿಲ್ಲ. ಯಾವುದು ನಿಮಗೆ ಹೆಚ್ಚು ಲಾಭದಾಯಕ ಎಂಬುದನ್ನು ಲೆಕ್ಕ ಹಾಕಿ ಆಯ್ಕೆ ಮಾಡಬೇಕು.
5. ಸೆಕ್ಷನ್ 80C, 80D ಮತ್ತು NPS ದಾಖಲೆಗಳು
ಹಳೆಯ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಂಡಿದ್ದರೆ ಕೆಳಗಿನ ದಾಖಲೆಗಳು ಅಗತ್ಯ.
ಸೆಕ್ಷನ್ 80C : ಪಿಪಿಎಫ್ ಹೂಡಿಕೆ, ಇಎಲ್‌ಎಸ್‌ಎಸ್ ಮ್ಯೂಚುವಲ್ ಫಂಡ್, ಜೀವನ ವಿಮೆ ಪ್ರೀಮಿಯಂ, ಮಕ್ಕಳ ಶಿಕ್ಷಣ ಶುಲ್ಕ, ಇಪಿಎಫ್ ಕೊಡುಗೆ.
ಸೆಕ್ಷನ್ 80D : ಆರೋಗ್ಯ ವಿಮೆ (Health Insurance) ಪ್ರೀಮಿಯಂ ರಸೀದಿಗಳು
ಎನ್‌ಪಿಎಸ್ : ನ್ಯಾಷನಲ್ ಪೆನ್ಷನ್ ಸಿಸ್ಟಮ್‌ಗೆ ಮಾಡಿದ ಹೂಡಿಕೆ ದಾಖಲೆಗಳು- ಇವುಗಳ ಮೂಲಕ ತೆರಿಗೆ ಉಳಿತಾಯ ಮಾಡಬಹುದು.
6. ಷೇರು ಮತ್ತು ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ
ನೀವು ಷೇರುಗಳು ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ದರೆ ಕ್ಯಾಪಿಟಲ್ ಗೇನ್ಸ್ ವರದಿ ಮಾಡುವುದು ಕಡ್ಡಾಯ. ಅದಕ್ಕಾಗಿ, ಬ್ರೋಕರ್‌ಗಳಿಂದ ದೊರೆಯುವ ಕ್ಯಾಪಿಟಲ್ ಗೇನ್ಸ್ ಸ್ಟೇಟ್‌ಮೆಂಟ್, ಮ್ಯೂಚುವಲ್ ಫಂಡ್‌ಗಳ ಕ್ಯಾಪಿಟಲ್ ಗೇನ್ಸ್ ರಿಪೋರ್ಟ್, ಖರೀದಿ ಮತ್ತು ಮಾರಾಟದ ವಿವರಗಳು ಸಿದ್ಧವಾಗಿರಬೇಕು. ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇಯ್ನ್ (STCG) ಮತ್ತು ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ (LTCG) ಎರಡನ್ನೂ ಸರಿಯಾಗಿ ನಮೂದಿಸಬೇಕು.
7. ಮನೆ ಮಾರಾಟ ಅಥವಾ ಬಾಡಿಗೆ ಆದಾಯ ಇದ್ದರೆ
ಆಸ್ತಿ ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಮನೆ ಮಾರಾಟ ಮಾಡಿದ್ದರೆ ಸೇಲ್ ಡೀಡ್, ಪರ್ಚೇಸ್ ಡೀಡ್, ನೋಂದಣಿ ದಾಖಲೆಗಳು, ಸುಧಾರಣೆ ವೆಚ್ಚದ ದಾಖಲೆಗಳು ಇರಬೇಕು. ಬಾಡಿಗೆ ಆದಾಯ ಇದ್ದರೆ ರೆಂಟ್ ಅಗ್ರಿಮೆಂಟ್, ಬಾಡಿಗೆ ಸ್ವೀಕೃತಿ ದಾಖಲೆಗಳು, ಆಸ್ತಿ ತೆರಿಗೆ ಪಾವತಿ ರಸೀದಿಗಳು ಅಗತ್ಯ.
8. ಹೋಂ ಲೋನ್ ದಾಖಲೆಗಳು
ಗೃಹ ಸಾಲ ಪಡೆದಿದ್ದರೆ ಬ್ಯಾಂಕ್ ನೀಡುವ ಇಂಟರೆಸ್ಟ್ ಸರ್ಟಿಫಿಕೇಟ್ ಮತ್ತು ಪ್ರಿನ್ಸಿಪಲ್ ರಿಪೇಮೆಂಟ್ ವಿವರಗಳನ್ನು ಸಂಗ್ರಹಿಸಬೇಕು. ಇದರ ಮೂಲಕ ತೆರಿಗೆ ವಿನಾಯಿತಿ ಪಡೆಯಲು ಸಾಧ್ಯವಾಗುತ್ತದೆ.
9. ಬ್ಯಾಂಕ್ ಖಾತೆ ಪರಿಶೀಲನೆ
ಆದಾಯ ತೆರಿಗೆ ಮರುಪಾವತಿ ಪಡೆಯಲು ಬ್ಯಾಂಕ್ ಖಾತೆ ಸರಿಯಾಗಿ ವ್ಯಾಲಿಡೇಟೆಡ್ ಆಗಿರಬೇಕು. ಪರಿಶೀಲಿಸಬೇಕಾದ ವಿಷಯಗಳು- ಬ್ಯಾಂಕ್ ಖಾತೆ ಸಂಖ್ಯೆ, ಐಎಫ್‌ಎಸ್‌ಸಿ ಕೋಡ್, ಪ್ಯಾನ್ ಲಿಂಕ್ ಆಗಿದೆಯೇ, ರಿಫಂಡ್ ಪಡೆಯುವ ಖಾತೆ ಸಕ್ರಿಯವಾಗಿದೆಯೇ?
10. ಫ್ರೀಲಾನ್ಸರ್‌ಗಳು ಮತ್ತು ಸ್ವಯಂ ಉದ್ಯೋಗಿಗಳಿಗೆ
ಫ್ರೀಲಾನ್ಸರ್‌ಗಳು ಮತ್ತು ಸ್ವಯಂ ಉದ್ಯೋಗಿ ಆಗಿದ್ದರೆ ಹೆಚ್ಚುವರಿ ದಾಖಲೆಗಳು ಅಗತ್ಯ.
ಆದಾಯ ದಾಖಲೆಗಳು : ಇನ್‌ವಾಯ್ಸ್‌ಗಳು, ಪಾವತಿ ರಸೀದಿಗಳು, ಬ್ಯಾಂಕ್ ಸ್ಟೇಟ್‌ಮೆಂಟ್
ವೆಚ್ಚ ದಾಖಲೆಗಳು : ಕಚೇರಿ ವೆಚ್ಚ, ಇಂಟರ್ನೆಟ್ ಬಿಲ್, ಸಾಫ್ಟ್‌ವೇರ್ ಚಂದಾದಾರಿಕೆ, ಪ್ರಯಾಣ ವೆಚ್ಚ ಇವುಗಳನ್ನು ಸರಿಯಾಗಿ ನಿರ್ವಹಿಸಬೇಕು.
11.ಅಡ್ವಾನ್ಸ್ ಟ್ಯಾಕ್ಸ್ ಪಾವತಿ ದಾಖಲೆಗಳು
ವ್ಯಾಪಾರಿಗಳು, ವೃತ್ತಿಪರರು ಮತ್ತು ಹೆಚ್ಚಿನ ಆದಾಯ ಹೊಂದಿರುವವರು ಅಡ್ವಾನ್ಸ್ ಟ್ಯಾಕ್ಸ್ ಪಾವತಿಸಿದ್ದರೆ ಅದರ ಚಲನ್‌ಗಳು ಮತ್ತು ರಸೀದಿಗಳನ್ನು ಸಂಗ್ರಹಿಸಬೇಕು. ಇವುಗಳನ್ನು ಐಟಿಆರ್‌ನಲ್ಲಿ ನಮೂದಿಸುವುದು ಕಡ್ಡಾಯ.
ಐಟಿಆರ್ ಸಲ್ಲಿಸುವ ಕೊನೆಯ ದಿನಾಂಕ
2025-26 ಹಣಕಾಸು ವರ್ಷದ ಐಟಿಆರ್ ಸಲ್ಲಿಸಲು ಜುಲೈ 31, 2026 ಕೊನೆಯ ದಿನಾಂಕವಾಗಿದೆ. ಕೊನೆಯ ಕ್ಷಣದವರೆಗೆ ಕಾಯದೆ ಮುಂಚಿತವಾಗಿಯೇ ದಾಖಲೆಗಳನ್ನು ಸಿದ್ಧಪಡಿಸಿ ಐಟಿಆರ್ ಸಲ್ಲಿಸುವುದು ಉತ್ತಮ.
ಐಟಿಆರ್ ಫೈಲಿಂಗ್ ಕೇವಲ ಒಂದು ಆನ್‌ಲೈನ್ ಪ್ರಕ್ರಿಯೆಯಲ್ಲ. ಸರಿಯಾದ ದಾಖಲೆಗಳನ್ನು ಸಂಗ್ರಹಿಸಿ, ಆದಾಯ ಮತ್ತು ಹೂಡಿಕೆ ವಿವರಗಳನ್ನು ನಿಖರವಾಗಿ ಪರಿಶೀಲಿಸಿ ಸಲ್ಲಿಸಿದರೆ ಮಾತ್ರ ತೆರಿಗೆ ನೋಟಿಸ್, ದಂಡ ಮತ್ತು ರಿಫಂಡ್ ವಿಳಂಬದಂತಹ ಸಮಸ್ಯೆಗಳನ್ನು ತಪ್ಪಿಸಬಹುದು. ಆದ್ದರಿಂದ ಪಾನ್, ಆಧಾರ್ ಫಾರ್ಮ್ 16, ಎಐಎಸ್, 26ಎಎಸ್, ಹೂಡಿಕೆ ದಾಖಲೆಗಳು, ಬ್ಯಾಂಕ್ ವಿವರಗಳು ಮತ್ತು ಇತರೆ ಅಗತ್ಯ ದಾಖಲೆಗಳನ್ನು ಮೊದಲೇ ಸಿದ್ಧಪಡಿಸಿ, ನಂತರ ಐಟಿಆರ್ ಸಲ್ಲಿಸಿ. ಇದು ನಿಮ್ಮ ತೆರಿಗೆ ಪ್ರಕ್ರಿಯೆಯನ್ನು ಸುಲಭ, ಸುರಕ್ಷಿತ ಮತ್ತು ತೊಂದರೆರಹಿತವಾಗಿಸುತ್ತದೆ.
(ಬರಹ: ಭವಾನಿ ಭಟ್)














Click it and Unblock the Notifications