Puttur Elections: 'ಪುತ್ತೂರ್ದ ಮುತ್ತು' ಈ ಬಾರಿ ಕಾಂಗ್ರೆಸ್ಸಿಗೋ, ಬಿಜೆಪಿಗೋ
ಮೈಸೂರು - ಮಂಗಳೂರು ಹೆದ್ದಾರಿಯ ನಡುವಿನ ಕರಾವಳಿ ಮತ್ತು ಪಶ್ಚಿಮ ಘಟ್ಟದ ನಡುವಿರುವ ಸುಂದರವಾದ ನಗರವೇ ಪುತ್ತೂರು. ಜಿಲ್ಲಾಕೇಂದ್ರದಿಂದ ಸುಮಾರು ಐವತ್ತು ಕಿಲೋಮೀಟರ್ ದೂರದಲ್ಲಿರುವ ಇಲ್ಲಿ ಕೃಷಿಯೇ ಪ್ರಮುಖ ಆರ್ಥಿಕ ಮೂಲ. ಬತ್ತ, ಅಡಿಕೆ, ತೆಂಗು, ಗೋಡಂಬಿ, ರಬ್ಬರ್, ಕೋಕೋ ಬೀಜ, ಮೆಣಸಿನಕಾಯಿ, ವೆನಿಲಾ, ಮೆಣಸು, ಬಾಳೆ, ಹೈನುಗಾರಿಕೆ, ರೇಷ್ಮೆ ವ್ಯವಸಾಯ ಮತ್ತು ತೋಟಗಾರಿಕೆ ಇಲ್ಲಿನ ಪ್ರಮುಖ ಚಟುವಟಿಕೆಗಳು.
ಪುತ್ತೂರಿಗೆ ಈ ಹೆಸರು ಬರಲು ಇಲ್ಲಿರುವ ಪ್ರಮುಖ ದೇವಾಲಯ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನಕ್ಕೂ ನಂಟಿದೆ ಎನ್ನುವುದು ದಾಖಲಾಗಿದೆ. ಪುತ್ತೂರು ಹೆಸರು ಹಿಂದೆ ಮುತ್ತೂರು ಎಂದಾಗಿತ್ತು, ನಂತರ ನಿಧಾನವಾಗಿ ಇದು ಪುತ್ತೂರು ಎಂಬ ಹೆಸರಾಗಿ ಪ್ರಚಲಿತಕ್ಕೆ ಬಂತು.

ಶತಮಾನಗಳ ಹಿಂದೆ ಅನಾವೃಷ್ಟಿಯ ವೇಳೆ ಅರ್ಚಕರಿಗೆ ಮಹಾಲಿಂಗೇಶ್ವರ ದೇಗುಲದ ಪುಷ್ಕರಣಿಯಲ್ಲಿ ಅಕ್ಕಿಯು ಪ್ರಸಾದ ರೂಪದಲ್ಲಿ ದೊರಕಿತ್ತು ಮತ್ತು ಇದಕ್ಕಿದ್ದಂತೆ ಎಲ್ಲಾ ಮೂಲೆಯಿಂದ ನೀರು ಬರಲು ಆರಂಭಿಸಿ ಈ ಅಕ್ಕಿ ಮುತ್ತಾಗಿ ಪರಿವರ್ತನೆಯಾಯಿತು ಎನ್ನುವುದು ನಂಬಿಕೆ.
ದಕ್ಷಿಣ ಕನ್ನಡ ಜಿಲ್ಲೆಯ ಎರಡನೇ ಪ್ರಮುಖ ಪಟ್ಟಣವಾಗಿರುವ ಪುತ್ತೂರು, ಅಕ್ಕಪಕ್ಕದ ವಿಟ್ಲ, ಬಂಟ್ವಾಳ, ಸುಳ್ಯ ಮತ್ತು ಬೆಳ್ತಂಗಡಿಗೆ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಏಷ್ಯಾ ಖಂಡದಲ್ಲೇ ಅತಿದೊಡ್ಡ ಕ್ಯಾಂಪ್ಕೊ ಚಾಕೊಲೇಟ್ ಕಾರ್ಖಾನೆಯನ್ನು ಹೊಂದಿರುವ ಇಲ್ಲಿ, ಸುಮಾರು ಹತ್ತು ಶತಮಾನಗಳ ಹಿಂದಿನ ಮಹಾಲಿಂಗೇಶ್ವರ ದೇವಾಲಯ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಜುಮಾ ಮಸೀದಿ ಕಲ್ಲೇಗ,ಡೀಯುಸ್, ಮರೀಲ್ ಚರ್ಚ್, ಈಶ್ವರಮಂಗಲ ಪಂಚಮುಖಿ ದೇವಸ್ಥಾನ ಪ್ರಮುಖ ಪ್ರೇಕ್ಷಣೀಯ ಸ್ಥಳವಾಗಿದೆ.

ಇನ್ನು ಇಲ್ಲಿನ ರಾಜಕೀಯ ಚಿತ್ರಣದ ಮೇಲೆ ಹೇಳುವುದಾದರೆ, ಇದುವರೆಗೆ ಹದಿನಾಲ್ಕು ಚುನಾವಣೆಗಳು ನಡೆದಿವೆ. ಇಲ್ಲಿ ಏನಿದ್ದರು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಫೈಟ್. ಏಳು ಬಾರಿ ಕಾಂಗ್ರೆಸ್ ಮತ್ತು ಆರು ಬಾರಿ ಕಾಂಗ್ರೆಸ್ ಬಿಜೆಪಿ ಮತ್ತು ಒಮ್ಮೆ ಜೆ.ಎನ್.ಪಿ ಪಕ್ಷ ಗೆಲುವು ಸಾಧಿಸಿತ್ತು. 2004ರಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿದ್ದ ಶಕುಂತಲಾ ಶೆಟ್ಟಿ, 2013 ಮತ್ತು 2018ರಲ್ಲಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದರು. ಒಮ್ಮೆ ಗೆದ್ದು ಇನ್ನೊಮ್ಮೆ ಶಕುಂತಲಾ ಸೋಲುಂಡಿದ್ದರು.
ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ವಿನಯ್ ಕುಮಾರ್ ಸೊರಕೆ ಇಲ್ಲಿ 1985 ಮತ್ತು 1989ರಲ್ಲಿ ಗೆಲುವು ಸಾಧಿಸಿದ್ದರು. ನಂತರ ಮತ್ತೆ ಪುತ್ತೂರು ನಿಧಾನವಾಗಿ ಬಿಜೆಪಿಯತ್ತ ವಾಲಿತು. 1994 - 2018ರ ವರೆಗಿನ ಆರು ಚುನಾವಣೆಯಲ್ಲಿ ಐದರಲ್ಲಿ ಬಿಜೆಪಿ ಗೆಲುವನ್ನು ಸಾಧಿಸಿತ್ತು. ಪ್ರಮುಖ ಹಿಂದೂ ಪ್ರತಿಪಾದಕರಾಗಿದ್ದ ಇತ್ತೀಚೆಗೆ ನಿಧನರಾದ ಉರಿಮಜಲು ರಾಮಭಟ್ ಕೂಡಾ ಇಲ್ಲಿಂದ ಚುನಾಯಿತರಾಗಿದ್ದರು.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ 1994, 1999ರಲ್ಲಿ ಇಲ್ಲಿಂದ ಗೆಲುವು ಸಾಧಿಸಿದ್ದರು. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಸಂಜೀವ ಮಠಂದೂರು ಅವರು ಕಾಂಗ್ರೆಸ್ಸಿನ ಶಕುಂತಲಾ ಶೆಟ್ಟಿಯವರನ್ನು 19,477 ಮತಗಳ ಅಂತರದಿಂದ ಸೋಲಿಸಿದ್ದರು. ಸದ್ಯ ಪುತ್ತೂರಿನಲ್ಲಿ ಶಕುಂತಳಾ ಶೆಟ್ಟಿ ಸಾಕಷ್ಟು ಹಿಡಿತ ಹೊಂದಿದ್ದರೂ ಅವರಿಗೆ ಟಿಕೆಟ್ ಸಿಗುವ ವಿಚಾರದಲ್ಲಿ ಇನ್ನೂ ಖಾತ್ರಿಯಿಲ್ಲ.
ಏಳು ವಿಧಾನಸಭಾ ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿ
ಕಳೆದ ಬಾರಿ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಏಳು ವಿಧಾನಸಭಾ ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿಗೆ ಈ ಬಾರಿಯೂ ಅಂತದ್ದೇ ಅನುಕೂಲಕರ ಪರಿಸ್ಥಿತಿಯಿದೆಯೇ ಎನ್ನುವ ಪ್ರಶ್ನೆ ಎದುರಾದಾಗ ಇಲ್ಲ ಎನ್ನುವುದು ಸದ್ಯದ ವಾಸ್ತವ ಚಿತ್ರಣ. ಪುತ್ತೂರು ಕ್ಷೇತ್ರದಲ್ಲಿ ಶಿಸ್ತಿನ ಪಕ್ಷ ಬಿಜೆಪಿಯಲ್ಲಿ ಟಿಕೆಟ್ ವಿಚಾರದಲ್ಲಿ ಗೊಂದಲ/ಮನಸ್ತಾಪವಿರುವುದು ಕಾಂಗ್ರೆಸ್ಸಿಗೆ ವರದಾನವಾಗುವ ಸಾಧ್ಯತೆಯಿಲ್ಲದಿಲ್ಲ.
ಹಾಲೀ ಶಾಸಕ ಸಂಜೀವ ಮಠಂದೂರು
ಹಾಲೀ ಶಾಸಕ ಸಂಜೀವ ಮಠಂದೂರು ಜೊತೆಗೆ ಸ್ಥಳೀಯ ಮುಖಂಡರಾದ ಆರ್.ಸಿ ನಾರಾಯಣ್, ಅರುಣ್ ಕುಮಾರ್ ಪುತ್ತಿಲ ಹೆಸರೂ ಕಾರ್ಯಕರ್ತರ ವಲಯದಲ್ಲಿದೆ. ಇದರಲ್ಲಿ ಪುತ್ತಿನ ಮತ್ತು ಮಠಂದೂರು ಬೆಂಬಲಿಗರ ನಡುವೆ ದೊಡ್ಡಮಟ್ಟದ ಮನಸ್ತಾಪವೇ ನಡೆದಿತ್ತು. ಕಾಂಗ್ರೆಸ್ಸಿನಿಂದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕಾವು ಹೇಮನಾಥ ಶೆಟ್ಟಿ, ದಿವ್ಯಪ್ರಭಾ ಗೌಡ ಚಿಲ್ತಡ್ಕ, ಅಶೋಕ್ ಕುಮಾರ್ ರೈ ಕೋಡಿಂಬಾಡಿ ಹೆಸರೂ ಅಭ್ಯರ್ಥಿ ಸ್ಥಾನಕ್ಕೆ ಚಾಲ್ತಿಯಲ್ಲಿದೆ.
2018ರ ಚುನಾವಣೆಯ ಪ್ರಕಾರ ಮತದಾರ ಸಂಖ್ಯೆ:
| ಪುರುಷರು | 1,00,683 |
| ಮಹಿಳೆಯರು | 1,01,265 |
| ಒಟ್ಟು | 2,01,948 |












Click it and Unblock the Notifications