ಛೋಟಾ ರಾಜನ್ ಸೋದರನಿಗೆ ಕೈ ತಪ್ಪಿದ ಮಹಾ ಚುನಾವಣೆ ಟಿಕೆಟ್
ಪುಣೆ, ಅಕ್ಟೋಬರ್ 04: ಭೂಗತ ಪಾತಕಿ ಛೋಟಾ ರಾಜನ್ ಅವರ ಸೋದರ ದೀಪಕ್ ನಿಕ್ಲಾಜೆಗೆ ವಿಧಾನಸಭೆಗೆ ಸ್ಪರ್ಧಿಸಲು ಟಿಕೆಟ್ ನೀಡಿದ್ದ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ(ಅಠಾವಳೆ) ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಅಕ್ಟೋಬರ್ 21ರ ಚುನಾವಣೆಗಾಗಿ ಗುರುವಾರದಂದು ಈ ಹಿಂದೆ ಹೆಸರಿಸಿದ್ದ ಪಟ್ಟಿಯನ್ನು ಪರಿಷ್ಕರಿಸಿದೆ.
"ಛೋಟಾ ರಾಜನ್ ಸೋದರ ದೀಪಕ್ ಅವರಿಗೆ ಸತಾರಾ ಜಿಲ್ಲೆಯ ಫಲ್ಟಾನ್ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದ್ದು, ಆದರೆ ಈ ಬಗ್ಗೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಪಟ್ಟಿ ಪ್ರಕಟಗೊಂಡ ಒಂದು ದಿನದಲ್ಲೇ ಹೊಸ ಅಭ್ಯರ್ಥಿಯನ್ನು ಹೆಸರಿಸಲಾಗಿದೆ. ದೀಪಕ್ ಸ್ಥಾನಕ್ಕೆ ಸ್ಥಳೀಯ ಮುಖಂಡ ದಿಗಂಬರ್ ಅಗವಾನೆ ಅವರಿಗೆ ಟಿಕೆಟ್ ನೀಡಲಾಗಿದೆ" ಎಂದು ಹಿರಿಯ ಆರ್ ಪಿಐ ನಾಯಕ ಹಾಗೂ ಮಹಾರಾಷ್ಟ್ರ ಸಚಿವ ಅವಿನಾಶ್ ಮಹಟೇಕರ್ ಹೇಳಿದ್ದಾರೆ.

ಭಾರತೀಯ ಜನತಾ ಪಕ್ಷ(ಬಿಜೆಪಿ) ಯ ಮಿತ್ರ ಪಕ್ಷವಾಗಿರುವ ಆರ್ ಪಿಐ (ಎ) ಕೇಂದ್ರ ಸಚಿವ ರಾಮದಾಸ್ ಅಠಾವಳೆ ಅವರ ನೇತೃತ್ವದ ಪಕ್ಷವಾಗಿದೆ. ಬಿಜೆಪಿ -ಶಿವಸೇನಾ ಹಾಗೂ ಆರ್ ಪಿಐ ನಡುವೆ ಸೀಟು ಹಂಚಿಕೆಯಾಗಿದೆ. ಆರ್ ಪಿಐಗೆ 6ಕ್ಷೇತ್ರಗಳನ್ನು ಬಿಟ್ಟುಕೊಡಲಾಗಿದೆ.
"ದೀಪಕ್ ನಿಕ್ಲಾಜೆ ಅವರು ಫಲ್ಟಾನ್ ಪ್ರದೇಶಕ್ಕೆ ಸೇರಿದವರಾದರೂ ಅಲ್ಲಿ ನೆಲೆಸಿಲ್ಲ, ಅಗಾವನೆ ಅವರು ಸ್ಥಳೀಯ ಆರ್ ಪಿಐ ಮುಖಂಡರಾಗಿದ್ದಾರೆ. ಹೀಗಾಗಿ, ಕಾರ್ಯಕರ್ತರ ಆಗ್ರಹಕ್ಕೆ ಮಣಿದು ಆರ್ ಪಿಐ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ. ಆದರೆ ಅಗಾವನೆ ಅವರು ಬಿಜೆಪಿ ಚಿಹ್ನೆಯಡಿಯಲ್ಲೇ ಚುನಾವಣೆ ಎದುರಿಸಲಿದ್ದಾರೆ" ಎಂದು ಅವಿನಾಶ್ ಹೇಳಿದರು.












Click it and Unblock the Notifications